Monday 2 October 2017

ಸಂವಾದದ ಹಿರಿಮೆಯನ್ನು ಎತ್ತಿಹಿಡಿದ ಸಮುದಾಯದ ಸೂರ್ಯನ ನೆರಳು




   ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುವ ತಿಂಗಳ ಕಥಾ ಓದು ಕಾರ್ಯಕ್ರಮ ಮತ್ತು ಸಂವಾದದ ಹಿರಿಮೆಯನ್ನು ಎತ್ತಿ ಹಿಡಿಯುವ ಸೂರ್ಯನ ನೆರಳು ನಾಟಕಗಳನ್ನು ಒಟ್ಟಿಗೆ ಗಾಂಧಿ ಜಯಂತಿಯಂದು ಹಮ್ಮಿಕೊಳ್ಳುವ ಮೂಲಕ ಕುಂದಾಪುರ ಸಮುದಾಯವು ಗಾಂಧಿಯನ್ನು ಮತ್ತೊಮ್ಮೆ ಚರ್ಚೆಯ ತೆಕ್ಕೆಗೆ ತೆಗೆದುಕೊಂಡಿತು.
   ಬೋಳುವಾರರ ಪಾಪು ಗಾಂಧಿ ಬಾಪೂ ಗಾಂಧಿ ಆದ ಕತೆಯಲ್ಲಿನ ಗಾಂಧಿಯ ಬದುಕಿನ ಮೂರು ಮುಖ್ಯ ಕಾಲಘಟ್ಟವನ್ನು ಪ್ರತಿನಿಧಿಸುವ ಕತೆಗಳನ್ನು ಡಾ. ರಶ್ಮಿ ಕುಂದಾಪುರ ರವರು ಫ್ಲಿಫ್ ಚಾರ್ಟಗಳ ನೆರವಿನಿಂದ ಸೊಗಸಾಗಿ ವಾಚಿಸಿದರು. ವೈದ್ಯ ವೃತ್ತಿಯಲ್ಲಿರುವವರು ಕೆಲವು ಸೂಕ್ಷ್ಮ ವಿಷಯಗಳನ್ನು ಜನರಿಗೆ ಮನದಟ್ಟು ಮಾಡುವಾಗ ಫ್ಲಿಫ್ ಚಾರ್ಟುಗಳನ್ನು ಬಳಸುತ್ತೇವೆ. ಸದ್ಯಕ್ಕೆ, ಗಾಂಧಿಯೂ ಸೂಕ್ಷ್ಮ ಸಂಗತಿಯೇ ಎನ್ನುತ್ತಾ ಆರಂಭಿಸಿದ ಡಾ. ರಶ್ಮಿಯವರು ಕತೆಯ ನಂತರವೂ ಗಾಂಧಿಯ ಈ ಕತೆಯನ್ನು ಓದಲು ಆರಂಭಿಸಿದ ಮೇಲೆ ತನ್ನ ಬದುಕು ಭಾವಗಳ ಮರುಸಂಘಟನೆಗೆ ಹೇಗೆ ಕಾರಣವಾಯಿತು ಎಂಬುದನ್ನೂ ಹಂಚಿಕೊಂಡರು. ಕಥಾ ಓದಿಗೆ ಡಾ. ಹಯವದನ ಮೂಡುಸಗ್ರಿ, ರಾಘವೇಂದ್ರ ಬೈಂದೂರು ಇನ್ನಿತರರು ಪ್ರತಿಕ್ರಿಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಘಟಕದ ಅಧ್ಯಕ್ಷರಾದ ಅಶೋಕ ತೆಕ್ಕಟ್ಟೆ ಡಾ. ರಶ್ಮಿಯವರಿಗೆ ಹೂ ನೀಡಿ ಗೌರವಿಸಿದರು.
   ಕಥಾ ಓದಿನ ನಂತರ ವಾಸುದೇವ ಗಂಗೇರ ನಿರ್ದೇಶನದಲ್ಲಿ ಸಮುದಾಯದ ಕಲಾವಿದರು `ಸೂರ್ಯನ ನೆರಳು’ ನಾಟಕವನ್ನು ಪ್ರದರ್ಶಿಸಲಾಯಿತು. ಉದಯ ಗಾಂವಕಾರ ರಚಿಸಿದ ಈ ಪುಟ್ಟ ನಾಟಕ ಸಂವಾದದ ಸಂಸ್ಕøತಿಯು ಭಾರತದ ಜ್ಞಾನಪರಂಪರೆಯನ್ನು ಹೇಗೆ ಬೆಳೆಸಿತು ಎಂಬ ಸಂಗತಿಗಳನ್ನು ಮನದಟ್ಟು ಮಾಡಿಸುತ್ತಲೇ ಈ ನೆಲದ ಮೂಲನೆಲೆಯಾದ ಮಾತುಕತೆ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯಿಂದ ನಾವು ದೂರಸರಿಯುತ್ತಿರುವ ಆತಂಕವನ್ನು ಪ್ರೇಕ್ಷರೆದುರು ಹಿಡಿಯಿತು. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ ಎಂಬುದನ್ನು ಚರಿತ್ರೆಯ ಪುಟಗಳಿಂದ ಪಡೆದ ಪುಟ್ಟ ಪುಟ್ಟ ಸಂವಾದದ ತುಣುಕುಗಳನ್ನು ಪೋಣಿಸಿ ನಿರೂಪಿಸಲಾಯಿತು.
   ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆ ನಡೆದಿದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳಿಗೆ ಪ್ರಶ್ನೆಗಳನ್ನೆಸದಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಶಿವಾನಂದ, ಸಚಿನ್, ಪ್ರಾರ್ಥನಾ, ಸ್ಮಿತಾ, ಅಜಾದ್, ಅನುಷಾ, ಹಿತೇಶ್, ಲಂಕೇಶ್, ನಾಗಶ್ರೀ, ರಶ್ಮಿ, ರಮ್ಯಾ, ಸಂದೇಶ, ಸಂಧ್ಯಾ ನಾಯಕ, ಸುಕನ್ಯಾ ನಾಟಕದುದ್ದಕ್ಕೂ ಲವಲವಿಕೆಯ ಅಭಿನಯ ನೀಡಿದರು.  ಈ ನಾಟಕಕ್ಕೆ ಮೂರು ದಿನಗಳಲ್ಲಿ  ಧ್ವನಿ, ಚಲನೆ ಮತ್ತು ಉಸಿರನ್ನು ನೀಡಿ ಜೀವಂತವಾಗಿಸಿದ ನಿರ್ದೇಶಕ ವಾಸುದೇವ ಗಂಗೇರ ಅವರ ಶ್ರಮ ಮತ್ತು ಸೃಜನಶೀಲತೆ ಪ್ರಶಂಸೆಗೆ ಪಾತ್ರವಾಯಿತು. ನಾಟಕದ ವಿನ್ಯಾಸ, ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿದ ಚಿನ್ನಾ ವಾಸುದೇವ್, ಸದಾನಂದ ಬೈಂದೂರು, ವಿಕ್ರಂ, ಬಾಲಕೃಷ್ಣ ಎಮ್, ಶಂಕರ ಆನಗಳ್ಳಿ ಇವರೆಲ್ಲರ ಶ್ರಮವೂ ನಾಟಕದಲ್ಲಿ ಪ್ರತಿಫಲಿತವಾಗಿತ್ತು.
    ನಾಟಕದ ನಂತರದ ಸಂವಾದದಲ್ಲಿ ಢಾ. ದಿನೇಶ ಹೆಗ್ಡೆ, ಸುಧಾ ಆಡುಕಳ ಮುಂತಾದವರು ಪ್ರತಿಕ್ರಿಯೆ ನೀಡಿದರು. ರಿಸರ್ವೇಷನ್ ಸಿನೇಮಾ ಖ್ಯಾತಿಯ ಶ್ರೀ ಯಾಕೂಬ್ ಖಾದರ್ ಗುಲ್ವಾಡಿ, ಕಿನಾರೆ ಮತ್ತು ಕನ್ನಡ ಶಾಲೆ ಸಿನೆಮಾ ತಂಡದ ಸದಸ್ಯರು ನಾಟಕವನ್ನು ವೀಕ್ಷಿಸಿದರು. ಕೊನೆಯಲ್ಲಿ ಜಿ.ವಿ.ಕಾರಂತರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

Sunday 1 October 2017

ಗಾಂಧಿ ಜಯಂತಿಯಂದು ನೆನಪಾಗುವ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ...



ಸೂರ್ಯನ ನೆರಳು

ನಿರ್ದೇಶನ: ವಾಸುದೇವ ಗಂಗೇರ
ರಚನೆ: ಉದಯ ಗಾಂವಕಾರ
ಸಂಗೀತ ನಿರ್ವಹಣೆ: ಸದಾನಂದ ಬೈಂದೂರು, ವಿಕ್ರಂ 
ವಸ್ತ್ರ ವಿನ್ಯಾಸ: ಚಿನ್ನಾ ವಾಸುದೇವ್
ರಂಗ ವಿನ್ಯಾಸ: ಬಾಲಕೃಷ್ಣ ಎಂ
ನಿರ್ವಹಣೆ: ಜಿ.ವಿ.ಕಾರಂತ, ಶಂಕರ ಆನಗಳ್ಳಿ
ಅನುಷಾ
ಅಜಾದ್ ಬೈಂದೂರು
ಹಿತೇಶ್
ಲಂಕೇಶ್
ನಾಗಶ್ರೀ
ಪಾರ್ಥನಾ ಗಾಂವಕಾರ
ರಶ್ಮಿ
ರಮ್ಯಾ
ಸಚಿನ್
ಸ್ಮಿತಾ
ಸಂದೇಶ
ಸಂಧ್ಯಾ ನಾಯಕ
ಶಿವಾನಂದ
ಸುಕನ್ಯಾ


ಅಕ್ಟೋಬರ್ 2, 2017: ಸಂಜೆ 4.00 ಕ್ಕೆ
ಎಚ್ ಎಮ್ ಎಮ್ ಶಾಲೆಯ ಹಳೆಯ ಕಟ್ಟಡ, ಕುಂದೇಶ್ವರ ರಸ್ತೆ, ಕುಂದಾಪುರ

  ಮನುಷ್ಯನ ಚರಿತ್ರೆಯನ್ನು ವಿಚಾರಗಳ ಸಾಹಸ ಎಂದು ಕರೆಯಲಾಗುತ್ತದೆ.  ಪ್ರಶ್ನೆ ಹುಟ್ಟಿಕೊಂಡ ಮರುಗಳಿಗೆಯಲ್ಲೇ ಮನುಷ್ಯ ಹುಟ್ಟಿಕೊಂಡ. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, ಮನುಷ್ಯನ ಮಟ್ಟಿಗಂತೂ ಜೀವಂತಿಕೆಯ ಲಕ್ಷಣ ಇದೊಂದೆ! ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ. ಸಂವಾದ ಸಂಸ್ಕøತಿಯಿಂದಲೇ ಮನುಷ್ಯ ಸಮಾಜವು ಇಲ್ಲಿಯವರೆಗೂ ಬರೆಲು ಸಾಧ್ಯವಾಗಿದೆ. ದೂರದ ಗಮ್ಯಕ್ಕೂ ಇದೇ ದಾರಿ. ಬುದ್ಧ, ಬಸವ,  ಗಾಂಧಿ, ಅಂಬೇಡ್ಕರ್ ರನ್ನೂ ಒಳಗೊಂಡಂತೆ ಮಾನವ ಇತಿಹಾಸದಲ್ಲಿ ಮಿಂಚಿ ಮರೆಯಾದ ಮಹಾ ಚೇತನಗಳೆಲ್ಲ ಸಂವಾಧದ ಸಮುದ್ರ-ಮಥನದಿಂದ ಉದ್ಭವಿಸಿದವರೇ! ಇಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಒಬ್ಬರು ಇನ್ನಬ್ಬರನ್ನುಆವಿರ್ಭವಿಸಿಕೊಂಡು ಹೊಸ ಹುಟ್ಟನ್ನು ಪಡೆಯುತ್ತಾರೆ.  ಸೂರ್ಯನಿಗಿಂತ ಪಖರವಾದ ಬೆಳಕಿನ ಹಿನ್ನೆಯಲ್ಲಿ ಮಾತ್ರ ಸೂರ್ಯನ ನೆರಳು ಸಾಧ್ಯ.
ಗಾಂಧಿ ತನ್ನ ಜೀವಿತದ ಪ್ರತಿ ಘಟ್ಟದಲ್ಲೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅನೇಕ ಪ್ರಶ್ನೆಗಳನ್ನು ಎದುರಿಸುತ್ತಾರೆ. ಅವರ ಸಾವೂ ಅವರು ಕೇಳಿದ ಪ್ರಶ್ನೆಯೇ!
ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆಯೂ ಇದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳನ್ನು ಪ್ರಶ್ನೆಗಳ ಮೂಲಕ ಎದುರಿಸಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಗಾಂಧಿ ಜಯಂತಿಯ ಸಮಯದಲ್ಲಿ ಬೇಡವೆಂದರೂ ನೆನಪಾಗಬಹುದಾದ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ ಈ ನಾಟಕ ಹುಟ್ಟಿಕೊಂಡಿದೆಯೆಂಬುದನ್ನು ಒಪ್ಪುತ್ತಲೇ ನಾಟಕವನ್ನು ನೋಡಲು ನಿಮ್ಮನ್ನು ಪ್ರೀತಿಯಿಂದ ಒತ್ತಾಯಿಸುತ್ತದೆ ಸಮುದಾಯ.

Tuesday 29 August 2017

ವಿದ್ಯಾರ್ಥಿಗಳ ಮನಸೂರೆಗೊಂಡ ಸಮುದಾಯದ ಕಾವ್ಯರಂಗ














ಯುವಕ-ಯುವತಿಯರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಉದ್ಧೇಶದಿಂದ ಸಮುದಾಯ ಕರ್ನಾಟಕ ರೆಪರ್ಟರಿ ರೂಪಿಸಿದ ಕಾವ್ಯರಂಗ ಪ್ರಯೋಗ ಕುಂದಾಪುರದ ಆಸುಪಾಸಿನ ಐದು ಕಾಲೇಜುಗಳಲ್ಲಿ  ಪ್ರದರ್ಶನ ಗೊಂಡು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕುಂದಾಪುರ ಸಮುದಾಯದ ಸಂಯೋಜನೆಯಲ್ಲಿ ಎರಡು ದಿನಗಳಲ್ಲಿ ಸುಮಾರು ಮೂರುಸಾವಿರ ವಿದ್ಯಾರ್ಥಿಗಳನ್ನು ತಲುಪಿದ ಈ ಪ್ರಯೋಗವು ಕನ್ನಡದ ನಾಡು-ನುಡಿ ರೂಢಿಸಿಕೊಂಡುಬಂದ ಸಾಮರಸ್ಯ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕಥನ-ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ರಂಗದ ಸಶಕ್ತ ಭಾಷೆಯ ಮೂಲಕ ತಲುಪಿಸುವಲ್ಲಿ ಯಶಸ್ವಿಯಾಯಿತು. ಕವಿರಾಜ ಮಾರ್ಗಕಾರ ನೃಪತುಂಗನಿಂದ ನಾವು ಹುಡುಗಿಯರೇ ಹೀಗೆ ಎಂದ ಪ್ರತಿಭಾ ನಂದಕುಮಾರರವರೆಗೆ, ಭಾರತವನ್ನು ಕನ್ನಡದ ಕಣ್ಣಿನಲ್ಲಿ ಕಂಡ ಪಂಪನಿಂದ ರಾಮಾಯಣವನ್ನು ವೈಚಾರಿಕ ನೆಲೆಯಲ್ಲಿ ಮರುಲೇಖಿಸಿದ ಕುವೆಂಪುವರೆಗೆ, ಮಣ್ಣಿನ ಸಂಗಾತವನ್ನು ಹಪಹಪಿಸಿದ ಕಾರಂತರ ಚೋಮನಿಂದ ವ್ಯವಸ್ಥೆಯ ಕ್ರೌರ್ಯವನ್ನು ವ್ಯಂಗ್ಯದಲ್ಲಿ ತೆರೆದಿಡುವ ದೇವನೂರರ ಸಾಕವ್ವನವರೆಗೆ, ವಚನಕಾರರಿಂದ ತತ್ವಪದಕಾರರವರೆಗೆ ಹೀಗೆ ಕನ್ನಡ ಪರಂಪರೆಯ ಪ್ರಾತಿನಿಧಿಕ ಕೃತಿಗಳ ತುಣುಕುಗಳನ್ನು ಸಂಬಂಧ ಪರಿಕಲ್ಪನೆಯಲ್ಲಿ ಜೋಡಿಸಿ ರಂಗ ನಿರ್ದೇಶಕ ಡಾ ಶ್ರೀಪಾದ ಭಟ್ ನಿರ್ದೇಶಿಸಿದ ಈ ಪ್ರಯೋಗಕ್ಕೆ ಜೀವತುಂಬಿದವರು ಧಾರವಾಡ ಸಮುದಾಯದ ನಟ-ನಟಿಯರು.

 ಬೈಂದೂರು ಪದವಿಪೂರ್ವ ಕಾಲೇಜು, ಬಸ್ರೂರಿನ ಶಾರದಾ ಕಾಲೇಜು, ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜು, ಕುಂದಾಪುರದ ಡಾ. ಬಿ. ಬಿ .ಹೆಗ್ಡೆ ಕಾಲೇಜು ಮತ್ತು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆದ ಈ ಪ್ರಯೋಗಗಳ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ಏರ್ಪಡಿಸಲಾಯಿತು. ಯುವಕ-ಯುವತಿಯರು ಮತ್ತೆ ಪುಸ್ತಕಗಳಿಗೆ, ಕಾವ್ಯದ ಕಂಪಿಗೆ ಮರು ಪ್ರಯಾಣ ನಡೆಸಲು ಈ ಪ್ರದರ್ಶನ ಸ್ಪೂರ್ತಿಯಾಗುತ್ತದೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಈ ಪ್ರದರ್ಶನಕ್ಕೆ ಬೆಂಬಲ ನೀಡಿದ ವಿವಿಧ ಕಾಲೇಜುಗಳ ಆಡಳಿತ ವೃಂದ, ಕುಂದಾಪುರದ ರೋಟರಿ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಹೋಬಳಿ ಘಟಕ ಮತ್ತು ಉಡುಪಿ ಜಿಲ್ಲೆಯ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಮತ್ತು ಸಾವಿರ ಸಾವಿರ ಸಂಖ್ಯೆಯ ಸಹೃದಯರಿಗೆ ಕೃತಜ್ಙತೆಗಳು

Monday 10 July 2017

ಇಫ್ತಾರ್‌ ಕೂಟ, ಪ್ರಜಾತಾಂತ್ರಿಕ ಮೌಲ್ಯ ಮತ್ತು ಚರಿತ್ರೆಯ ಭಾರ



ಸಂವಾದಗಳು ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ ಆಮ್ಲಜನಕವಿದ್ದಂತೆ. ವಿಭಿನ್ನ ದೃಷ್ಟಿಕೋನ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ನಾವು ಸಂಯಮದಿಂದ ಮತ್ತು ತುಂಬು ಗೌರವದಿಂದ ಆಲಿಸುವುದನ್ನು ಕಲಿಯಬೇಕಿದೆ. ಪೇಜಾವರ ಶ್ರೀಗಳು ಆಯೋಜಿಸಿದ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ವಿಭಿನ್ನ ಅನಿಸಿಕೆಗಳು ಇಲ್ಲಿವೆ.












________________________________________________________________________

ಸಂಗತ

ಉಡುಪಿಯ ‘ಇಫ್ತಾರ್’ ಸ್ತುತ್ಯರ್ಹ

ಎಸ್.ಆರ್. ವಿಜಯಶಂಕರ

29 Jun, 2017




ನೂರಾರು ವರ್ಷಗಳಿಂದ ಉಡುಪಿಯಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು ಸಹಬಾಳ್ವೆ ನಡೆಸಿದ್ದಾರೆ. ಆ ಊರಿನ ನಿಜವಾದ ಚರಿತ್ರೆಯನ್ನು ಸ್ವಾಮೀಜಿ ನೆನಪಿಸಿಕೊಟ್ಟಿದ್ದಾರೆ...ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಮುಸ್ಲಿಮರನ್ನು ಆಹ್ವಾನಿಸಿ ಆತಿಥ್ಯ ನೀಡಿದ್ದನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ವಿರೋಧಿಸಿದ ವರದಿ ಓದಿ ದುಃಖವಾಯಿತು (ಪ್ರ.ವಾ. ಜೂನ್‌ 27).

‘ನನ್ನ ಧರ್ಮ ಪಾಲಿಸಿದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದ ಪೇಜಾವರ ಸ್ವಾಮೀಜಿ ಸ್ತುತ್ಯರ್ಹ ಕೆಲಸ ಮಾಡಿದ್ದಾರೆ. ಅವರು ಇಫ್ತಾರ್ ಕೂಟ ನಡೆಸಿರುವುದು ಯಾಕೆ ಸರಿ ಎಂಬುದಕ್ಕೆ ನನಗೆ ಅನಿಸಿದ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.ವಿ

ಭಜನಾಪೂರ್ವ ದಕ್ಷಿಣ ಕನ್ನಡ, ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಜಿಲ್ಲೆಯಾಗಿತ್ತು. ಈಚಿನ ಕೆಲವು ವರ್ಷಗಳಲ್ಲಿ ಆ ಸೌಹಾರ್ದವನ್ನು ಉದ್ದೇಶಪೂರ್ವಕ ಕಲಕಲಾಗಿದೆ. ಉಳ್ಳಾಲದ ಮುಸ್ಲಿಮರ ದರ್ಗಾಕ್ಕೆ ಹಿಂದೂಗಳೂ ಹರಕೆ ಹೇಳುವುದು ಅಲ್ಲಿಂದ ನಲವತ್ತು ಮೈಲು ದೂರದ ನನ್ನ ವಿಟ್ಲ ಪಡ್ಕೂರು ಗ್ರಾಮದಲ್ಲಿ 1970ರ ದಶಕದಲ್ಲಿ ಸಾಮಾನ್ಯ ವಿಚಾರವಾಗಿತ್ತು. ದನಕರುಗಳ ಆರೋಗ್ಯಕ್ಕಾಗಿ ಕುಂಬಳೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹರಕೆ ಹೊತ್ತಂತೆ ಉಳ್ಳಾಲದ ದರ್ಗಾಕ್ಕೂ ಹರಕೆ ಹೊರುತ್ತಿದ್ದರು.

ನಾನು ಉಡುಪಿಯಲ್ಲಿದ್ದಾಗ 1980ರಲ್ಲಿ ನಡೆದ ಒಂದು ಘಟನೆ; ಸಾಮಾಜಿಕ ಕಾರ್ಯಕರ್ತ ಯು.ಆರ್. ಜಯವಂತರ ಬಳಿ ಕೌಟುಂಬಿಕ ದೂರು ಕೊಡುವುದಕ್ಕಾಗಿ ಬಂದಿದ್ದ ವೃದ್ಧೆಯೊಬ್ಬಳು ತುಳುವಿನಲ್ಲಿ ‘ಯಾನು ಸಾಯಿಬ್ಬರೆ ಪಡಿಗು ಉಂತುದಾಂಡಲ ಜೀವನ ಕಳೆವೆ (ನಾನು ಸಾಯಿಬ್ಬರು ಎಲ್ಲರಿಗೂ ನೀಡುವ ಉಚಿತ ಅಕ್ಕಿ ಪಡೆದಾದರೂ ಜೀವನ ಕಳೆದೇನು) ಎಂದಳು.

ಸಾಯಿಬ್ಬರ ಪಡಿ ಎನ್ನುವುದು ಅಲ್ಲಿ ಬಳಕೆ ಮಾತು. ಹಾಜಿ ಅಬ್ದುಲ್ಲ ಸಾಹೇಬರು ಜಾತಿ, ಧರ್ಮಗಳ ಭೇದವಿಲ್ಲದೆ ಬಡವರಿಗೆ ಧರ್ಮಾರ್ಥವಾಗಿ ಊಟಕ್ಕೆ ಅಕ್ಕಿಯನ್ನು (ಪಡಿ) ಪ್ರತಿದಿನ ನೀಡುತ್ತಿದ್ದರು. ಇದೇ ಹಾಜಿ ಅಬ್ದುಲ್ಲ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಜಾಗ, ಹಣ ಎರಡನ್ನೂ ದಾನ ಮಾಡಿದರು.




ಉಡುಪಿಯ ಹಿಂದೂ ಧಾರ್ಮಿಕ ಸಂಸ್ಥೆಗಳು ಕಷ್ಟದಲ್ಲಿದ್ದಾಗ ಸಾಲ ನೀಡಿದ ಮುಸ್ಲಿಮರಿದ್ದರು. ಉಡುಪಿಯ ಹಳೆ ಭೂಮಿ ದಾಖಲೆಗಳಲ್ಲಿ ಮಠದ ಹತ್ತಿರದ ಜಾಗಗಳು ನವಾಯತ (ಮುಸ್ಲಿಂ) ಕೇರಿಗಳೆಂದು ದಾಖಲಾಗಿದೆ. ಇದರ ಅರ್ಥ ನೂರಾರು ವರ್ಷಗಳ ಕಾಲ ಉಡುಪಿಯಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು, ಬ್ರಾಹ್ಮಣರು ಸಹ ಬಾಳ್ವೆ ನಡೆಸಿದ್ದಾರೆ. 800 ವರ್ಷಗಳ ಹಿಂದೆ ರಾಘವೇಂದ್ರ ಮಠ ಸ್ಥಾಪನೆಗೆ ಮುಸ್ಲಿಂ ಸುಲ್ತಾನರು ಜಾಗ ನೀಡಿದ್ದಾರೆ. ‘ತಮ್ಮ ಗುರುಗಳು ಹಾಜಿ ಅಬ್ದುಲ್ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ’ ಎಂದು ಪೇಜಾವರ ಸ್ವಾಮಿಗಳು ಹೇಳಿದ ಮಾತುಗಳನ್ನು ನಾವು ಗೌರವಿಸಬೇಕಾಗಿದೆ.

ಇದೇ ರೀತಿ ಮುಸ್ಲಿಮರು ಕೂಡಾ ಅನೇಕ ಹಿಂದೂ ಸಂಸ್ಥೆ, ದೇವಾಲಯಗಳಿಗೆ ಹರಕೆ ಹೇಳುತ್ತಿದ್ದರು. ನಾನಿದ್ದ ಹಳ್ಳಿಯಲ್ಲಿ ಅನೇಕ ಮುಸ್ಲಿಂ ಮನೆಗಳಿದ್ದವು. ಊರ ಭೂತಕೋಲ ನಡೆಯುವಾಗ ಮುಸ್ಲಿಮರು ಹಾಗೂ ಮುಸ್ಲಿಂ ಹೆಂಗಸರು ಕಾಣಿಕೆ ನೀಡುತ್ತಿದ್ದರು. ಯಾರಾದರೂ ಹಿಂದೂಗಳ ಕೈಯಲ್ಲಿ ಸ್ವಲ್ಪ ಹಣ ಕೊಟ್ಟು ಅದನ್ನು ಕಾಣಿಕೆ ಹಾಕಲು ಹೇಳುತ್ತಿದ್ದರು. ನಮ್ಮ ಊರಿನ ಮುಸ್ಲಿಮರು ಧರ್ಮಸ್ಥಳದ ದೇವರಿಗೂ ಕಾಣಿಕೆ ಹಾಕುತ್ತಿದ್ದುದು ಇದೆ. ಆ ಹಣವನ್ನು ಹೆಚ್ಚಾಗಿ ಹಿಂದೂಗಳ ಕೈಯಲ್ಲಿ ಕೊಟ್ಟು ದೇವರ ಹುಂಡಿಗೆ ಹಾಕಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣೆ ಕಾನೂನು ಬಂದಾಗ ಲಕ್ಷಾಂತರ ಮಂದಿ ಭೂ ಮಾಲೀಕರಾದರು. ಆಗ ಟ್ರಿಬ್ಯೂನಲ್‌ಗಳಲ್ಲಿ, ಕೋರ್ಟ್‌ ಕಚೇರಿಗಳಲ್ಲಿ ಒಕ್ಕಲು ಮಸೂದೆಯ ಹಕ್ಕಿಗಾಗಿ ಮುಸ್ಲಿಮರು ಹಾಗೂ ಹಿಂದೂಗಳು ಒಂದಾಗಿ ಹೋರಾಡುತ್ತಿದ್ದರು. ಮುಸ್ಲಿಮರು ಸಂಪೂರ್ಣ ನಂಬಿಕೆಯಿಂದ ಹಿಂದೂ ವಕೀಲರುಗಳನ್ನು ನೇಮಿಸಿಕೊಳ್ಳುತ್ತಿದ್ದರು. ಐದು ಸೆಂಟ್ಸ್ ಭೂಮಿಗಾಗಿ ನಮ್ಮ ಊರಿನ ಮುಸ್ಲಿಮನೊಬ್ಬ ತನ್ನ ಹೆಂಡತಿಯ ಚಿನ್ನ ಮಾರಿ ಸಾಲ ಮಾಡಿ ಹೈಕೋರ್ಟಿನಲ್ಲಿ ಭೂಮಾಲೀಕರ ವಿರುದ್ಧ ಹೋರಾಡಿದ. ತಾನು ಭೂಮಿಯನ್ನು ಪ್ರೀತಿಸುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?
ಮಧ್ವ ಪರಂಪರೆಯ ಯತಿಗಳು ಮುಸ್ಲಿಮರ ಜತೆ ಮೊದಲಿನಿಂದಲೂ ಉತ್ತಮ ಸ್ನೇಹ, ಸೌಹಾರ್ದ ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳುವುದರ ಮೂಲಕ ಪೇಜಾವರ ಸ್ವಾಮಿಗಳು ಆ ಊರಿನ ನಿಜವಾದ ಚರಿತ್ರೆಯನ್ನು ಜ್ಞಾಪಿಸಿ ಕೊಟ್ಟಿದ್ದಾರೆ. ಅಜೆಂಡಾ ಒಂದನ್ನೇ ಹಿಡಿದುಕೊಂಡು ಇನ್ನೊಂದು ಊರಿನಿಂದ ಬರುವವರಿಗೆ ಆ ಊರಿನ ಸೌಹಾರ್ದದ ಚರಿತ್ರೆ ತಿಳಿದಿರುವುದಿಲ್ಲ. ಉಡುಪಿಯ ಕೋಮು ಸೌಹಾರ್ದವನ್ನು ಇಫ್ತಾರ್ ಕೂಟದ ಮೂಲಕ ನೆನಪಿಸಿ ಪೇಜಾವರ ಸ್ವಾಮೀಜಿ ದೇವರು ಮೆಚ್ಚುವ ಮಾನವ ಪ್ರೀತಿಯ ಕೆಲಸ ಮಾಡಿದ್ದಾರೆ. ಈ ಉತ್ತಮ ಕೆಲಸಕ್ಕೆ ಗೋಪಾಲಕನಾದ ಶ್ರೀ ಕೃಷ್ಣ ಪರಮಾತ್ಮನೂ ಆಶೀರ್ವದಿಸುತ್ತಾನೆ ಎಂಬ ನಂಬುಗೆ ನನ್ನದು.
________________________________
ನಾಡಿಗೇ ಮಾದರಿ
–ವೈದೇಹಿ, ಮಣಿಪಾಲ
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರು ಮುಸ್ಲಿಂ ಬಾಂಧವರನ್ನು ಇಫ್ತಾರ್ ಸ್ನೇಹಕೂಟಕ್ಕೆ ಆಹ್ವಾನಿಸಿರುವುದು ನಿಜಕ್ಕೂ ಒಂದು ದೊಡ್ಡ ಹೆಜ್ಜೆ. ಇದರಿಂದಾಗಿ ತಾನು ಎದುರಿಸಬೇಕಾದ ವಿರೋಧಗಳ ಎಲ್ಲ ಅರಿವಿದ್ದೂ ತನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡ ಅವರ ರೀತಿ ನಾಡಿಗೇ ಒಂದು ಮಾದರಿ.
ಸ್ವಾಮೀಜಿಯವರು ತನ್ನ ಪ್ರೀತಿಯ ಕೈಚಾಚಿ ಅವರನ್ನು ಮಠದೊಳಗೆ ಬರಮಾಡಿಕೊಂಡದ್ದಷ್ಟೇ ಅಲ್ಲ, ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಲಾಗಾಯ್ತಿನಿಂದ ಇದ್ದ ನಂಟಿನ ಪರಂಪರೆಯನ್ನು ನೆನಪಿಸಿಕೊಂಡಿದ್ದಾರೆ. ಮಠದ ಈ ಸಮಾರಂಭದ ಚಿತ್ರದಲ್ಲಿ ಅತಿಥಿಗಳನ್ನು ನಿಷ್ಕಲ್ಮಶ ಕಿರುನಗೆಯಿಂದ ಕೂಡಿ ಮಾಗಿದ ವಾತ್ಸಲ್ಯಭರಿತ ಅಜ್ಜಿಯಂತೆ ಉಪಚರಿಸುವ ಪೇಜಾವರರ ಚಿತ್ರ ಒಂದು ಅರ್ಥಪೂರ್ಣ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ.




ಸ್ವಾಮೀಜಿಯ ಕರೆಯ ಮೇರೆಗೆ ಮುಸ್ಲಿಂ ಬಾಂಧವರೂ ಬಂದರು, ಉಪಾಹಾರ ಸೇವಿಸಿದರು. ಭಕ್ತಿಯಿಂದ ನಮಾಜು ಮಾಡಿದರು. ಇದೂ ದೊಡ್ಡದೇ. ಪ್ರೀತಿ ಸ್ನೇಹದ ಬೆಲೆ ಅರಿತು, ಯಾವ ಕಹಿಯಿಲ್ಲದೆ ಬಂದ ಈ ಅತಿಥಿಗಳದೂ ಕೂಡ ದೊಡ್ಡ ಮಾದರಿಯೇ.

ಸಾಮಾಜಿಕ ಸ್ನೇಹ ಸೌಹಾರ್ದದ ಬಾಳುವೆಗಾಗಿ ನಡೆದ ಈ ಹೊಸ ಪರಿಯ ಪೀಠಿಕೆ ಕಂಡು ಅದನ್ನು ಹಂಬಲಿಸುವ ಎಲ್ಲರ ಮನ ತುಂಬಿದೆ. ಕಣ್ಣು ಕಂಬನಿಗೂಡಿದೆ.

ಹಾಜಿ ಅಬ್ದುಲ್ಲಾ ಸಾಹೇಬ್ ಅವರಂತಹ ಉದಾರದಾನಿ ಧೀಮಂತರು ಮಠದ ಇತಿಹಾಸವಷ್ಟೇ ಅಲ್ಲ, ಉಡುಪಿಯ ಇತಿಹಾಸದೊಂದಿಗೇ ಬೆರೆತು ಹೋಗಿದ್ದಾರೆ. ಬದುಕಿದ್ದಾಗಲೇ ದಂತಕತೆಯಂತಿದ್ದ ಅವರು ಅಕ್ಷರಶಃ ಸ್ವಚ್ಛ ಸಮಾಜದ ಹರಿಕಾರರಾಗಿ ನಮ್ಮ ಸ್ಮೃತಿಯಲ್ಲಿ ಇವತ್ತಿಗೂ ಅಚ್ಚಳಿಯದೆ ಇದ್ದಾರೆ. ಸಮಾಜವನ್ನು ನಡೆಸುತ್ತಿರುವುದು ಎಲ್ಲ ಸಮುದಾಯಗಳ ಪರಸ್ಪರ ಅವಲಂಬನೆ ಹೊಂದಾಣಿಕೆ ಪ್ರೀತಿ ಸ್ನೇಹಗಳೇ ಹೊರತು ಅವಿವೇಕಿ ಜಗಳ ದೊಂಬಿಗಳಲ್ಲವಷ್ಟೆ?

ಇವತ್ತು ಸಾಮಾಜಿಕ ಮನೋಸ್ವಾಸ್ಥ್ಯಕ್ಕಾಗಿ ದುಡಿಯುವಲ್ಲಿ, ಜನರ ಮನ ಒಲಿಸಿ ಒಂದಾಗಿಸುವಲ್ಲಿ ಎಲ್ಲಾ ಮತಗಳ ಧರ್ಮಗುರುಗಳು ಪಾತ್ರ/ಹೊಣೆ ವಹಿಸಲೇಬೇಕಾದ ಪರಿಸ್ಥಿತಿ ಇದೆ. ಮತಗಳ ಮೂಲ ಧ್ಯೇಯವೇ ಪ್ರೀತಿ ಸೌಹಾರ್ದ ಕಾರುಣ್ಯವಲ್ಲವೆ?
ಅದೃಷ್ಟವಶಾತ್ ಮುಸ್ಲಿಂ ಧರ್ಮಗುರುಗಳು ಯಾರೂ ತಮ್ಮ ಸಮುದಾಯದವರು ಮಠಕ್ಕೆ ತೆರಳಿ ನಮಾಜು ಮಾಡಿದ್ದನ್ನು ವಿರೋಧಿಸಿಲ್ಲ. ಪೇಜಾವರರ ನಡೆಯನ್ನು ವಿರೋಧಿಸುವವರ ಹೇಳಿಕೆಗಳು ದಿಗ್ಭ್ರಮೆಗೊಳಿಸುತ್ತಿವೆ. ಇದು - ‘ವಿರೋಧವು ಅಳಿಯಲೇ ಬಾರದು, ಸದಾಕಾಲ ಜಾರಿಯಲ್ಲಿರಬೇಕು’ ಎಂಬ ಜೀವವಿರೋಧಿ ಆಕಾಂಕ್ಷೆಯೆ?ಶಾಂತಿಯುತ ಸಹಬಾಳ್ವೆಯ ಹಂಬಲವಿದ್ದವರಾರೂ ಸ್ವಾಮೀಜಿಯ ಈ ಕಾರ್ಯವನ್ನು ವಿರೋಧಿಸಲಾರರು.
___________________________________________________________

ಎಂ.ಅಬ್ದುಲ್ ರೆಹಮಾನ್ ಪಾಷ

30 Jun, 2017

ನಿಮಗೆ ಭಾರತದಲ್ಲಿ ಕೋಮು ಸೌಹಾರ್ದ ಬೇಕೇ? ಹಾಗಾದರೆ ದಯವಿಟ್ಟು ಅದಕ್ಕಾಗಿ ಏನೂ ಮಾಡಲು ಹೋಗಬೇಡಿ...


ಅರೇಬಿಕ್ ಭಾಷೆಯಲ್ಲಿ ‘ಇಫ್ತಾರ್‌’ ಎಂದರೆ (ಬ್ರೇಕ್‌ಫಾಸ್ಟ್‌) ಉಪವಾಸವನ್ನು ಮುರಿಯುವುದು ಎಂದರ್ಥ. ನಿತ್ಯ ಮುಂಜಾನೆ ಉಪಾಹಾರ ತೆಗೆದುಕೊಳ್ಳುವುದಕ್ಕೂ ‘ಇಫ್ತಾರ್‌’ ಎನ್ನಬಹುದು. ಆದರೆ, ರಂಜಾನ್ ತಿಂಗಳ ಸಂದರ್ಭದಲ್ಲಿ ಇಫ್ತಾರ್‌ ಎಂದರೆ ಇಡೀ ದಿನ ವಿಧಿಬದ್ಧವಾಗಿ ಅನುಸರಿಸಿದ ಕಠಿಣ ಉಪವಾಸವನ್ನು ಅಷ್ಟೇ ವಿಧಿಬದ್ಧವಾಗಿ ಮುಕ್ತಾಯಗೊಳಿಸಿ ಲಘು ಉಪಾಹಾರವನ್ನು ಸೇವಿಸುವ ಕ್ರಿಯೆ.

ಇದನ್ನು ಮಗ್ರಿಬ್ (ಸೂರ್ಯಾಸ್ತದ ನಂತರದ) ನಮಾಜಿಗಿಂತ ಸ್ವಲ್ಪ ಮುಂಚೆ, ನಮಾಜಿಗೆ ಹೋಗುವ ಶುದ್ಧತೆಯ ಸಿದ್ಧತೆಯೊಂದಿಗೆ ಮಾಡಲಾಗುತ್ತದೆ. ಸಮುದಾಯದವರು ಸಂಜೆ ಹೊತ್ತು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿನಿಸು, ಹಣ್ಣುಹಂಪಲ, ದ್ರಾಕ್ಷಿ ಇತ್ಯಾದಿಗಳನ್ನು ಇಫ್ತಾರ್‌ಗಾಗಿ ಮಸೀದಿಗೆ ಕಳಿಸಿಕೊಡುತ್ತಾರೆ. ಅಲ್ಲಿ ರೋಜ್‌ದಾರರು (ರೋಜಾ ಇರುವವರು) ಇದನ್ನು ಸೇವಿಸಿ ಇಫ್ತಾರ್‌ ಮುಗಿಸುತ್ತಾರೆ.

ನಾವು ಚಿಕ್ಕವರಿದ್ದಾಗ ಕೆಲವರು ರಂಜಾನ್ ತಿಂಗಳಲ್ಲಿ ರೋಜ್‌ದಾರರನ್ನು ಊಟಕ್ಕೆ ಕರೆಯುವುದು ಪುಣ್ಯದ ಕೆಲಸ ಎಂದು ಭಾವಿಸುತ್ತಿದ್ದರು. ಮಸೀದಿಗೆ ಹೋಗಿ ಅಲ್ಲಿ ಇರುವವರಿಗೆಲ್ಲ (ಎಲ್ಲರೂ ಸಾಮಾನ್ಯವಾಗಿ ರೋಜಾ ಇದ್ದವರು) ಊಟಕ್ಕೆ ಬರುವಂತೆ ಔತಣ ನೀಡುತ್ತಿದ್ದರು. ಕರೆದವರ ಮನೆಗೇ ಹೋಗಿ ರೋಜ್‌ದಾರರು ಊಟ ಸೇವನೆ ಮಾಡುತ್ತಿದ್ದರು.

ಮನೆ ಚಿಕ್ಕದೋ ದೊಡ್ಡದೋ ಅಲ್ಲಿಯೇ ಮಾಡಿದ ಅಡುಗೆಯನ್ನು ಇದ್ದಷ್ಟು ಜಾಗದಲ್ಲಿ ವಿವಿಧ ಪಂಕ್ತಿಗಳಲ್ಲಿ ಕುಳಿತು ಊಟ ಮಾಡಿ ಮನೆಯವರನ್ನು ಹರಸುವುದು ಒಂದು ಬಗೆಯ ಸಂಭ್ರಮದ ಸಂಗತಿಯಾಗಿತ್ತು. ಇದನ್ನು ‘ಇಫ್ತಾರ್‌ ಔತಣಕೂಟ’ ಎಂದು ಕರೆಯಬಹುದು. ಇದು ಮೂಲಭೂತವಾಗಿ ಧಾರ್ಮಿಕ ಆಚರಣೆ.

ಈಗ, ಮಸೀದಿಯ ಬಳಿಯಲ್ಲಿಯೇ ಅಡುಗೆ, ಊಟದ ವ್ಯವಸ್ಥೆ ಮಾಡುತ್ತಿದ್ದು, ಅಪೇಕ್ಷೆ ಇರುವವರು ಹಣ ಕೊಟ್ಟರೆ ಸಾಕು ಎಲ್ಲವೂ ‘ವ್ಯವಸ್ಥೆ’ ಮಾಡಲಾಗುತ್ತದೆ. ಇದರಿಂದ ಮೊದಲಿದ್ದ ಭ್ರಾತೃತ್ವ ಕಡಿಮೆಯಾಗಿ ಇದೊಂದು ‘ಇವೆಂಟ್’ ಆಗಿ ಪರಿಣಮಿಸಿದೆ.

ಬರಬರುತ್ತಾ ಇಫ್ತಾರ್‌ ಕೂಟ ಎನ್ನುವುದು ಹೆಚ್ಚು ಸಾರ್ವತ್ರಿಕ ಇವೆಂಟ್ ಆಗುತ್ತಿರುವುದನ್ನು ನಾವು ಕಾಣುತ್ತೇವೆ. ಮುಸ್ಲಿಮ್ ರಾಜಕೀಯ ನಾಯಕರು ತಮ್ಮ ಪಕ್ಷಬಾಂಧವರನ್ನು ಆಹ್ವಾನಿಸಿ ‘ಇಫ್ತಾರ್‌ ಕೂಟ’ದ ಹೆಸರಿನಲ್ಲಿ ಔತಣ ಕೂಟಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ಬರುವ ಅನ್ಯ ಮತಸ್ಥರು ತಲೆಗೊಂದು ಟೋಪಿ, ಹೆಗಲ ಮೇಲೆ ಸ್ಕಾರ್ಫ್‌ ಹಾಕಿಕೊಳ್ಳುತ್ತಾರೆ. ಇವರು ಮುಸ್ಲಿಮರಾಗಬೇಕಾಗಿಲ್ಲ. ರೋಜ್‌ದಾರ್ ಕೂಡ ಆಗಿರಬೇಕಾಗಿಲ್ಲ. ಆದರೂ ಇದು ‘ಇಫ್ತಾರ್‌ ಕೂಟ’!


ಮುಸ್ಲಿಮ್ ನಾಯಕರೊಬ್ಬರು ತನ್ನ ಪ್ರತಿಷ್ಠೆಗಾಗಿ ರಂಜಾನ್ ತಿಂಗಳ ಸಂದರ್ಭವನ್ನು ಬಳಸಿಕೊಳ್ಳುತ್ತಿರಬಹುದು. ಆದರೆ ಜಾತ್ಯತೀತ ಸರ್ಕಾರದ ಪ್ರತಿನಿಧಿಗಳಾದ ಮುಖ್ಯಮಂತ್ರಿಗಳು, ರಾಜ್ಯಪಾಲರು, ರಾಷ್ಟ್ರಪತಿಯೂ ಅಧಿಕೃತವಾಗಿ ‘ಇಫ್ತಾರ್‌ ಕೂಟ’ಗಳನ್ನು ನಡೆಸುವುದು ನನಗೆ ಅರ್ಥವಾಗುವ ಸಂಗತಿಯಲ್ಲ!

ನನಗೆ ಇನ್ನೂ ಆಶ್ಚರ್ಯವಾಗುವ ಸಂಗತಿಯೆಂದರೆ, ಈದ್ ದಿನ ಈದ್ಗಾ ಮೈದಾನದಲ್ಲಿ ಮುಸ್ಲಿಮ್ ಸಮುದಾಯದ ಪುರುಷರು ಸಾಮೂಹಿಕ ನಮಾಜ್ ಮಾಡುವಾಗಲೂ ಮುಸ್ಲಿಮೇತರ ನಾಯಕರು ಟೋಪಿ ಹಾಕಿಕೊಂಡು ಅವರೊಂದಿಗೆ ನಮಾಜ್ ಮಾಡುವುದು! ನಮಾಜ್ ಮಾಡುವಾಗ ಆರಂಭದಲ್ಲಿಯೇ ಉಚ್ಚರಿಸಲಾಗುವ ಶ್ಲೋಕಗಳಲ್ಲಿ ಒಂದು ಪ್ರಮುಖವಾದ ಅರೇಬಿಕ್ ಶ್ಲೋಕದ ಅರ್ಥ, ‘ಅಲ್ಲಾಹ್‌ನ ಹೊರತು ಅನ್ಯ ಆರಾಧ್ಯರಿಲ್ಲ, ಹಜರತ್‌ ಮುಹಮ್ಮದರು ಅಲ್ಲಾಹನ ಪ್ರವಾದಿಗಳು’ ಎಂಬುದು. ಮೂರ್ತಿ ಪೂಜೆ ಮಾಡುವ ಇವರು ಇಸ್ಲಾಮ್ ಧರ್ಮದ ಈ ಮೂಲ ತತ್ವವನ್ನು ಒಪ್ಪಿಕೊಳ್ಳುವರೇ? ಇಲ್ಲವಾದರೆ ಇವರ ‘ನಮಾಜ್’ ಹೇಗೆ ಸಿಂಧುವಾಗುತ್ತದೆ? ಇಂಥ ನಂಬಿಕೆ ಇಲ್ಲದವರೊಂದಿಗೆ ಮಾಡುವ ಇತರರ ನಮಾಜೂ ಕೂಡ ಸಿಂಧುವಾಗುವುದೇ? ಎಲ್ಲವೂ ರಾಜಕೀಯ.


ಇತ್ತೀಚೆಗೆ, ಮೊದಲ ಬಾರಿಗೆ, ಉಡುಪಿಯ ಮಠದ ಶ್ರೀಗಳು ಮುಸಲ್ಮಾನರನ್ನು ‘ಇಫ್ತಾರ್‌ ಕೂಟ’ಕ್ಕೆ ಕರೆದರು. ತಾವೇ ಸ್ವತಃ ಫಲಾಹಾರವನ್ನು ಬಡಿಸಿದರು. ಅಲ್ಲಿ ಆಹ್ವಾನಿತರಾದವರು ತಮ್ಮ ಧರ್ಮದ ಒಂದು ಕ್ರಮವಾಗಿ ಅಲ್ಲಿದ್ದ ಒಂದು ಖಾಲಿ ಜಾಗದಲ್ಲಿ ನಮಾಜೂ ಮಾಡಿದ್ದಾರೆ. ಇದೆಲ್ಲವೂ ಹಲವು ಬಗೆಯ ಪರ–ವಿರೋಧ ವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಅದೇ ರೀತಿಯಲ್ಲಿ ರಾಜಕೀಯ ನಾಯಕರು ಗ್ರಾಮ ಸಂದರ್ಶನಕ್ಕೆ ಹೋಗಿ ದಲಿತರ ಮನೆಯಲ್ಲಿ ಉಪಾಹಾರವನ್ನು ಸೇವಿಸುವುದನ್ನೂ ದೊಡ್ಡ ಸಾಧನೆ, ದೊಡ್ಡ ಆದರ್ಶ ಎಂಬಂತೆ ಬಿಂಬಿಸಲು ಹೋಗಿ ವಿವಾದಕ್ಕೆ, ಅಪಹಾಸ್ಯಕ್ಕೆ ಒಳಗಾಗಿದ್ದಾರೆ.

ಇವು ಯಾವುವೂ ಭ್ರಾತೃತ್ವದ, ಕೋಮುಸೌಹಾರ್ದದ ನಡೆಗಳಲ್ಲ. ಎಲ್ಲವೂ ಕ್ಷುಲ್ಲಕ ರಾಜಕಾರಣ. ನಮ್ಮ ದೇಶದಲ್ಲಿ ಅನೇಕ ಜಾತಿ, ಮತ ಮತ್ತು ಧರ್ಮಗಳಿವೆ. ಒಂದೈವತ್ತು ವರ್ಷಗಳ ಹಿಂದೆ, (ಈಗಲೂ ಕೆಲವು ಕಡೆ ಅಪರೂಪಕ್ಕೆ) ಹಿಂದೂಗಳು ಮುಸ್ಲಿಮರೊಂದಿಗೆ ಮೊಹರಂಅನ್ನು, ಉರುಸುಗಳನ್ನು ಆಚರಿಸಿದರೆ, ಮುಸಲ್ಮಾನರು ಊರಮ್ಮನ ಹಬ್ಬ, ಗಣೇಶನ ಹಬ್ಬದ ಆಚರಣೆಯಲ್ಲಿ ಸೇರಿಕೊಳ್ಳುತ್ತಿದ್ದರು. ಈಗ ಕೋಮು ರಾಜಕೀಯ ಗೆದ್ದಲಿನಂತೆ ಸಮಾಜದಲ್ಲಿ ಹೊಕ್ಕು ಜಾತ್ಯತೀತ ಕಟ್ಟಡವನ್ನು ಒಳಗೊಳಗೇ ಸರ್ವನಾಶ ಮಾಡಿದೆ.
ಮುಸ್ಲಿಮರಲ್ಲೂ ಪುರೋಹಿತಶಾಹಿ ಪ್ರಬಲವಾಗಿ ಬೆಳೆದಿದೆ. ಧರ್ಮವನ್ನು ತಮಗೆ ಸರಿ ತೋರಿದ ರೀತಿಯಲ್ಲಿ ಅರ್ಥೈಸುತ್ತಾ, ಅದರ ಕುರಿತು ಪ್ರಾಥಮಿಕ ಅರಿವೂ ಇಲ್ಲದ ದುಡಿಯುವ, ಸಾಮಾನ್ಯ ಜನರ ತಲೆ ಕೆಡಿಸಿ, ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಪುರೋಹಿತಶಾಹಿ ಇದನ್ನು ಧರ್ಮದ ಹೆಸರಿನಲ್ಲಿ ಮಾಡಿದರೆ ರಾಜಕೀಯ ನಾಯಕರು ಮತಗಳಿಕೆಯ ಸಾಧನವಾಗಿ ಸಮಾಜವನ್ನು ಹೆಚ್ಚು ಹೆಚ್ಚು ಜಾತಿ, ಉಪಜಾತಿಗಳಾಗಿ ವಿಂಗಡಿಸಿ, ನೀವು ಉಳಿದವರಿಗಿಂತ ಬೇರೆ ಎನ್ನುವ ವಿಷಬೀಜವನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಇಷ್ಟೆಲ್ಲಾ ಮಾಡಿ ಆಗೀಗ ‘ಕೋಮುಸೌಹಾರ್ದ’ದ ಪ್ರಹಸನಗಳನ್ನು ನಡೆಸಿದರೆ ಏನೂ ಪ್ರಯೋಜನವಿಲ್ಲ.
ನಿಜವೆಂದರೆ, ಸಂವಿಧಾನದಲ್ಲಿರುವ ‘ಜಾತ್ಯತೀತ’ ಎಂಬ ಪದವನ್ನು ‘ಸರ್ವಧರ್ಮ ಸಮಭಾವದ’ ಎಂದು ಅರ್ಥ ಮಾಡಿಕೊಳ್ಳುವ ಬದಲಿಗೆ ‘ಧರ್ಮನಿರಪೇಕ್ಷ’ ಎಂದು ಅರ್ಥ ಮಾಡಿಕೊಂಡು ಅನುಸರಿಸಬೇಕಾಗಿತ್ತು. ಎಂದರೆ ಸರ್ಕಾರಕ್ಕೂ ಯಾವುದೇ ಧರ್ಮ ಅಥವಾ ಧಾರ್ಮಿಕ ಆಚರಣೆಗೂ ಸಂಬಂಧವಿಲ್ಲ.
ಸರ್ಕಾರ ಎಲ್ಲರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭ್ಯುದಯವನ್ನಷ್ಟೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತದೆ. ಧಾರ್ಮಿಕ, ಪಾರಮಾರ್ಥಿಕ ಗುರಿಗಳು ಆಯಾ ವ್ಯಕ್ತಿ ಮತ್ತು ಸಮುದಾಯಗಳಿಗೆ ಸೇರಿದ್ದು. ಇನ್ನೊಂದು ವ್ಯಕ್ತಿ ಮತ್ತು ಸಮುದಾಯದ ಸ್ವಂತ ಹಕ್ಕುಗಳಿಗೆ ಧಕ್ಕೆ ಬಾರದ ಹಾಗೆ ಅವರು ಅದನ್ನು ಅನುಸರಿಸುವ ಅವಕಾಶ ಹೇಗೂ ಸಂವಿಧಾನದಲ್ಲಿದೆ.

ನಿಮಗೆ ಭಾರತದಲ್ಲಿ ಕೋಮು ಸೌಹಾರ್ದ ಬೇಕೇ? ಹಾಗಾದರೆ ದಯವಿಟ್ಟು ಅದಕ್ಕಾಗಿ ಏನೂ ಮಾಡಲು ಹೋಗಬೇಡಿ. ಊಟಕ್ಕೆ ಕರೆಯಿರಿ, ಆದರೆ ಹಬ್ಬಗಳನ್ನು ಬಿಟ್ಟು ಕರೆಯಿರಿ. ಅವರಿಗೆ ಬೇಕಾದ ಹಬ್ಬವನ್ನು ಆಚರಿಸಲು, ಅವರಿಗೆ ಬೇಕಾದ ಆಹಾರವನ್ನು ಸೇವಿಸಲು ಬಿಟ್ಟು ಬಿಡಿ. ಒಂದು ದಶಕದ ಕಾಲ ಇದನ್ನು ಸಂವಿಧಾನದ ಮೇಲೆ ಆಣೆಯಿಟ್ಟು ಎಲ್ಲರೂ ಮಾಡಿ. ನೋಡಿ, ಅದರ ನಂತರ ನಮ್ಮ ಸಮಾಜದ ಮುಖವೇ ಬದಲಾಗಿರುತ್ತದೆ. ನಮ್ಮದು ನಿಜವಾದ ಜಾತ್ಯತೀತ ರಾಷ್ಟ್ರವಾಗಿರುತ್ತದೆ.
__________________________________________________________________________


ಚರ್ಚೆ
ಇಫ್ತಾರ್ ಕೂಟ ಮತ್ತು ಮತಸೌಹಾರ್ದ
ಡಾ ರಾಜಾರಾಮ ಹೆಗಡೆ

1 Jul, 2017


ಮುಸ್ಲಿಂ ಸಮುದಾಯದವರಿಗೆ ಉಡುಪಿಯ ಕೃಷ್ಣ ಮಠದಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದು ಹಾಗೂ ಆ ಸಂದರ್ಭದಲ್ಲಿ ಮಠದೊಳಗೆ ನಮಾಜ್‌ ಮಾಡಲು ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಅದನ್ನು ವಿರೋಧಿಸುವ ಬಣಗಳಲ್ಲಿ ಎರಡು ಪ್ರಕಾರದವರಿದ್ದಾರೆ: 1. ಹಿಂದುತ್ವ ಪ್ರತಿಪಾದಕರು. 2. ಕಟ್ಟಾ ಸಂಪ್ರದಾಯಸ್ಥರು. ಇವರಿಬ್ಬರೂ ಬೇರೆ ಬೇರೆ ಕಾರಣಗಳನ್ನಿಟ್ಟುಕೊಂಡು ಖಂಡಿಸಿದ್ದರೂ ಇವರು ಪರಸ್ಪರ ವಿರೋಧಿಗಳೇನಲ್ಲ ಹಾಗೂ ಈ ಗುಂಪುಗಳ ವಿರೋಧದ ಕುರಿತು ಆಶ್ಚರ್ಯವೇನೂ ಇಲ್ಲ.

ಆದರೆ ಅದನ್ನು ಬೆಂಬಲಿಸುವ ಗುಂಪಿನೊಳಗೆ ಎರಡು ಪರಸ್ಪರ ವಿರೋಧಿ ರಾಜಕೀಯ ಗುಂಪುಗಳು ಸೇರಿಕೊಂಡಿವೆ ಎಂಬುದು ವಿಲಕ್ಷಣವಾಗಿದೆ: 1. ಹಿಂದುತ್ವ ಬಣದವರು. 2. ಸೆಕ್ಯುಲರ್ ಪ್ರಗತಿಪರರು. ಸೆಕ್ಯುಲರ್ ಪ್ರಗತಿಪರರು ಸ್ವಾಭಾವಿಕವಾಗಿಯೇ ಈ ನಡೆಯನ್ನು ಸ್ವಾಗತಿಸಿದ್ದಾರೆ, ಅದರಲ್ಲೇನೂ ಆಶ್ಚರ್ಯವಿಲ್ಲ. ಅವರ ಮಾನದಂಡಗಳು ಸ್ಪಷ್ಟವಾಗಿವೆ. ಅದರಲ್ಲೂ ಹಿಂದುತ್ವವಾದಿಗಳಿಂದ ವಿರೋಧ ಬಂದದ್ದಂತೂ ಈ ವಿಚಾರದಲ್ಲಿ ಸೆಕ್ಯುಲರ್‌ವಾದಿಗಳು ಯಾರ ಪರ ನಿಲ್ಲಬೇಕೆಂಬುದನ್ನು ಸರಳಗೊಳಿಸಿದೆ.
ಆದರೆ ಹಿಂದುತ್ವವಾದಿಗಳು ಹಾಗೂ ಸಂಪ್ರದಾಯಸ್ಥರಲ್ಲೇ ಬಹುಸಂಖ್ಯಾತರು ಪೇಜಾವರ ಸ್ವಾಮೀಜಿ ಜೊತೆಗೇ ಇರುವಂತಿದೆ. ಇದು ಈ ಪ್ರಸಂಗದ ವಿಶೇಷ. ಸ್ವತಃ ಪೇಜಾವರ ಶ್ರೀಗಳೇ ಹಿಂದುತ್ವ ಚಳವಳಿಯ ನಾಯಕರಲ್ಲೊಬ್ಬರು. ಇಂಥವರ ನಡೆಯನ್ನು ಹೇಗೆ ಅರ್ಥೈಸುವುದು?
ಸೆಕ್ಯುಲರ್‌ವಾದಿಗಳ ಮತಸಹಿಷ್ಣುತೆಯ ಮಂತ್ರವನ್ನು ಈ ಹಿಂದುತ್ವವಾದಿಗಳೂ ಒಪ್ಪಿಕೊಂಡಂತಿದೆ ಹಾಗೂ ಸೆಕ್ಯುಲರ್ ರಾಜಕಾರಣದ ತಂತ್ರಗಳನ್ನು ಹಿಂದುತ್ವದವರೂ ಕಾಪಿ ಮಾಡಿದಂತಿದೆ! ಇದು, ಇವರೆಲ್ಲ ಸೆಕ್ಯುಲರ್ ರಾಜಕೀಯವನ್ನು ಅಪ್ಪಿಕೊಂಡ ಲಕ್ಷಣವೇ?

ಇಲ್ಲ ಹೊಸದೊಂದು ರಾಜಕೀಯ ಪ್ರಹಸನ ಮೊದಲಾಗಿದೆಯೇ ಎಂಬ ಗೊಂದಲ ಹುಟ್ಟುವುದು ಸಹಜ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಸ್ತುತ ಭಾರತೀಯ ರಾಜಕೀಯದ ಗೊಂದಲ ಕೂಡಾ. ಒಟ್ಟಾರೆಯಾಗಿ ಹಿಂದುತ್ವವಾದಿಗಳ ನಡೆ ತುಂಬ ಸಂಕೀರ್ಣವಾಗಿರುವಂತಿದೆ.


ಅವರೊಳಗೆ ತಮ್ಮ ಆಚರಣೆಯ ಕುರಿತು ಆಂತರಿಕ ವೈರುಧ್ಯ ಹಾಗೂ ಗೊಂದಲವಿರುವಂತಿದೆ. ಏನೇ ಆದರೂ ಈ ವಿದ್ಯಮಾನ ಸನಾತನವಾದಿ ಹಿಂದೂಗಳನ್ನು ಕೂಡಾ ಬೆಚ್ಚಿಬೀಳಿಸಿಲ್ಲ ಎಂಬುದು ಗಮನಿಸಬೇಕಾದ ವಿಷಯ.

ನನ್ನ ಅಭಿಪ್ರಾಯವೆಂದರೆ ಒಟ್ಟಾರೆಯಾಗಿ ಭಾರತೀಯ ಸಾಂಪ್ರದಾಯಿಕ ಪರಿಸರವೇ ಇಂಥ ಕ್ರಿಯೆಗಳನ್ನು ಪೋಷಿಸುವ ಧೋರಣೆಯನ್ನು ಬೆಳೆಸುವಂಥದ್ದು. ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವವರೇ ಭಾರತೀಯ ಸಂಪ್ರದಾಯಗಳ ಜೊತೆಗೆ ಸಂಬಂಧವನ್ನು ಕಡಿದುಕೊಂಡವರಂತೆ ಕಾಣುತ್ತಾರೆ.

ಅದು ಅವರಿಗೆ ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳಲು ಇದು ಸಕಾಲ. ಈ ಸಂದರ್ಭದಲ್ಲಿ ಪ್ರಗತಿಪರ ಸೆಕ್ಯುಲರ್‌ವಾದಿ ಹಿಂದೂಗಳಿಗೆ ಕೂಡ ಅವರು ಹಿಂದೂಗಳಾಗಿರುವ ಕಾರಣದಿಂದಲೇ ಈ ಅನುಕಂಪ ಶ್ಲಾಘನೀಯವಾಗಿ ಕಂಡಿದ್ದರೂ ಆಶ್ಚರ್ಯವಿಲ್ಲ. ಅದು ಅವರಿಗೆ ಗೊತ್ತಿಲ್ಲದಿದ್ದರೆ ಅದನ್ನು ಗೊತ್ತುಮಾಡಿಕೊಳ್ಳಲಿಕ್ಕೂ ಇದು ಸಕಾಲ.

ಈ ಹೇಳಿಕೆಯ ಮಹತ್ವವನ್ನು ಅರ್ಥೈಸಿಕೊಳ್ಳಬೇಕಾದರೆ ನಮ್ಮ ಮತಸಂಪ್ರದಾಯಗಳ ಸಹಬಾಳ್ವೆಯ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಭಾರತವು ವೈವಿಧ್ಯಪೂರ್ಣ ಮತಗಳು ಒಟ್ಟಾಗಿ ಬದುಕಿದ ಒಂದು ಅಪರೂಪದ ನೆಲ. ಭಾರತದಲ್ಲಿ ಸಾಂಪ್ರದಾಯಿಕ ಸಹಬಾಳ್ವೆ ಎಂದಾಕ್ಷಣ ಉರಿದುಬಿದ್ದು ಆಕ್ಷೇಪಿಸುವವರೂ ಇದ್ದಾರೆ.

‘ಹಾಗಾದರೆ ಕರ್ನಾಟಕದ ಇತಿಹಾಸದಲ್ಲಿ ಶೈವ– ವೈಷ್ಣವರ, ಶೈವ– ಜೈನರ ಹೊಡೆದಾಟದ ಇತಿಹಾಸ ಸುಳ್ಳೆನ್ನುತ್ತೀರಾ, ಹಿಂದೂ ರಾಜರು ಪರಮತಗಳ ದೇವಾಲಯಗಳನ್ನು ಹಾಳುಮಾಡಿದ್ದು ಸುಳ್ಳೆನ್ನುತ್ತೀರಾ’ ಎಂಬ ಪ್ರಶ್ನೆಗಳನ್ನು ಹಾಗೆ ಹೇಳಿದವರ ಕಿವಿ ತೂತಾಗುವವರೆಗೂ ಕೇಳುತ್ತಾರೆ. ಅಂದರೆ ನಾವು ಮಧ್ಯಪ್ರಾಚ್ಯದ ರಿಲಿಜಿಯಸ್ ಯುದ್ಧಗಳನ್ನು ನಮ್ಮ ಮತಗಳ ನಡುವಿನ ಹೊಡೆದಾಟಗಳಿಗೆ ಆರೋಪಿಸುತ್ತೇವೆ. ಆದರೆ ಹಾಗೆ ಆರೋಪಿಸಲು ಹಿಂದೂ ಸಂಪ್ರದಾಯಗಳು ರಿಲಿಜನ್‌ಗಳೂ ಅಲ್ಲ, ಅವುಗಳ ನಡುವೆ ಸತ್ಯ-ಸುಳ್ಳುಗಳ ವೈರತ್ವವೂ ಇಲ್ಲ. ಹಾಗಾದರೆ ಅವುಗಳು ಪರಸ್ಪರ ಕಾದಾಡಿಲ್ಲವೇ, ಸಂಘರ್ಷಿಸಿಲ್ಲವೇ ಎಂದರೆ ಅದೂ ನಿಜ. ಆದರೆ ಈ ಸಂಘರ್ಷಗಳ ಸ್ವರೂಪ ಬೇರೆಯೇ ಆಗಿದೆ.

ಸಹಬಾಳ್ವೆ ಎಂದರೆ ಎರಡು ಸಮುದಾಯಗಳು ಸದಾ ನಗುನಗುತ್ತ ಕೈಕೈ ಹಿಡಿದುಕೊಂಡು ಇರುವುದು ಎಂಬ ಅರ್ಥವಲ್ಲ. ಅದೊಂದು ರಮ್ಯ ಕಲ್ಪನೆ ಹಾಗೂ ಅವಾಸ್ತವ! ಬದುಕೆಂಬುದು ಸದಾ ಸಂಘರ್ಷಗಳನ್ನು, ಪೈಪೋಟಿಗಳನ್ನು ಹುಟ್ಟುಹಾಕುತ್ತಲೇ ಇರುವ ಒಂದು ಕಾರ್ಖಾನೆಯಂತೆ ಇದೆ. ಆದರೆ ಇಂಥ ಸಂಘರ್ಷಗಳನ್ನು ನೀಗಿಕೊಂಡು ಸಂಬಂಧವನ್ನು ಉಳಿಸಿಕೊಳ್ಳುವ ಕಲೆಯನ್ನು ಕಲಿಯುವುದೇ ಸಹಬಾಳ್ವೆ ಎನಿಸಿಕೊಳ್ಳುತ್ತದೆ.

ವೈರತ್ವವನ್ನು ಸಾಧಿಸುವ ಬದಲು ಅದನ್ನು ಶಮನ ಮಾಡುವ ಉಪಾಯಗಳನ್ನು ಹುಡುಕುವುದು ಸಹಬಾಳ್ವೆಗೆ ಅತ್ಯಗತ್ಯವಾದ ಒಂದು ಗುಣ. ನಮ್ಮ ಮತಸಂಪ್ರದಾಯಗಳು ಈ ಗುಣವನ್ನು ಮೈಗೂಡಿಸಿಕೊಂಡಿವೆ. ಹಾಗಾಗಿಯೇ ಭಾರತವು ವೈವಿಧ್ಯಪೂರ್ಣವಾದ ಸಮಾಜವಾಗಿ ಮುಂದುವರೆದುಕೊಂಡು ಬಂದಿದೆ.

ಇಂಥ ಮತೀಯ ಸಮುದಾಯಗಳ ವಾಸ್ತವಿಕ ಬದುಕಿನಲ್ಲಿ ವಿಭಿನ್ನ ಐತಿಹಾಸಿಕ ಸನ್ನಿವೇಶಗಳಿಂದಾಗಿ ಸಂಘರ್ಷಗಳು ಉದಿಸಿವೆ. ಆದರೆ ಅವು ವೈರಿಮತಗಳಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸುವ ಬದಲು ಸಹಬಾಳ್ವೆಗೆ ಒತ್ತುಕೊಟ್ಟಿವೆ ಹಾಗೂ ಈ ಧೋರಣೆಯೇ ಶ್ರೇಯಸ್ಕರ ಎಂಬುದನ್ನು ತಮ್ಮ ವಿಪುಲ ಆಚರಣೆ ಹಾಗೂ ಸಾಹಿತ್ಯ ಸೃಷ್ಟಿಯ ಮೂಲಕ ಅನುಯಾಯಿಗಳಲ್ಲಿ ರೂಢಿಸಿವೆ. ಹಾಗಾಗಿ ಹಿಂದೂಗಳಲ್ಲಿ ಯಾವುದೇ ಸಂಪ್ರದಾಯಕ್ಕೆ ಸೇರಿದವರಿರಬಹುದು, ಅವರೊಳಗೆ ಪರಮತಗಳೊಂದಿಗೆ ಸಹಬಾಳ್ವೆಯೇ ಶ್ರೇಯಸ್ಕರ ಎಂಬ ಧೋರಣೆ ಸಹಜವಾಗಿರುತ್ತದೆ.

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಅಬ್ಬಲೂರಿನಲ್ಲಿ ನಡೆದ ಶೈವರು–ಜೈನರ ಸಂಘರ್ಷ ಮತ್ತು ಹೊಂದಾಣಿಕೆಯನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಒಟ್ಟಾಗಿ ಬಾಳಿಕೊಂಡು ಬಂದಿದ್ದ ಶೈವ– ಜೈನ ಸಮುದಾಯಗಳು ಪರಸ್ಪರ ಸಂಘರ್ಷಕ್ಕಿಳಿದು ಜಿನದೇವಾಲಯಗಳ ನಾಶವಾದದ್ದು ಒಂದು ಸತ್ಯವಾದರೆ, ಈ ಹೊಸ ಐತಿಹಾಸಿಕ ಸನ್ನಿವೇಶದಿಂದ ಎಚ್ಚೆತ್ತು, ಬಿಗಡಾಯಿಸುತ್ತಿದ್ದ ತಮ್ಮ ಸಂಬಂಧವನ್ನು ಸರಿಪಡಿಸುವ ಪ್ರಯತ್ನ ಕೂಡ ಅವೇ ಸಮುದಾಯಗಳಿಂದ ಯಶಸ್ವಿಯಾಗಿ ನಡೆಯಿತು ಎಂಬುದು ಮತ್ತೊಂದು ಸತ್ಯ.
ಶೈವ ಸಂಪ್ರದಾಯಗಳು ತಮ್ಮ ಅನುಯಾಯಿಗಳಲ್ಲಿ ಶಿವಪ್ರಾಧಾನ್ಯಕ್ಕೆ ಧಕ್ಕೆ ಬರದಂತೆ ಪಾಪಭೀತಿ ಹಾಗೂ ಜಿನ ಭಕ್ತಿಯನ್ನು ಪ್ರೇರೇಪಿಸುವ ಮೂಲಕ ತಮ್ಮ ಮುಂದೆ ಅವತರಿಸಿದ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಿದ್ದು ಸ್ಪಷ್ಟ ಹಾಗೂ ಅಂದಿನ ದಿನಗಳಲ್ಲಿ ಹಳ್ಳಿ ಮತ್ತು ಪಟ್ಟಣಗಳ ಜನರ ಬದುಕಿನಲ್ಲಿ ಶೈವ– ಜೈನ ಸಮುದಾಯಗಳ ವೃತ್ತಿಗಳು ಪರಸ್ಪರ ಅವಲಂಬನೆಯಲ್ಲಿ ಹೆಣೆದುಕೊಂಡಿದ್ದವು ಎಂಬುದು ನಮಗೆ ಶಾಸನಗಳನ್ನು ಅಧ್ಯಯನ ಮಾಡಿದರೆ ವಿದಿತವಾಗುತ್ತದೆ.
ಶೈವರು ತಾವು ಗೆದ್ದೆವೆಂಬ ಹುಮ್ಮಸ್ಸಿನಲ್ಲಿ ಅಳಿದುಳಿದ ಜಿನಾಲಯಗಳನ್ನು ಹಾಳುಮಾಡುವ ಗೋಜಿಗೆ ಹೋಗದೇ, ವಾಸ್ತವವನ್ನರಿತು ತಮ್ಮ ನಡುವಿನ ಬಿಕ್ಕಟ್ಟನ್ನು ಶಮನ ಮಾಡಿಕೊಳ್ಳುವ ತಂತ್ರವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಮುಖ್ಯವಾಗಬೇಕು. ಈ ಕೆಲಸವೇ ಇಂದು ನಡೆದರೆ ನಮಗೆ ನೂರಕ್ಕೆ ನೂರರಷ್ಟು ಸೆಕ್ಯುಲರ್ ತಂತ್ರವಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ. ಆದರೆ 12ನೆಯ ಶತಮಾನದಲ್ಲಿ ಶೈವ ಮುನಿಗಳು ನಡೆಸಿದ ಈ ಕೆಲಸ ನಮ್ಮ ಸಂಪ್ರದಾಯಗಳ ಸಹಬಾಳ್ವೆಯ ಆಯಾಮಗಳ ಕುರಿತು ಸಾಕಷ್ಟು ತಿಳಿಸಬಲ್ಲದು. ಆದರೆ ಇದೇ ಸೆಕ್ಯುಲರ್‌ವಾದಿಗಳೇ ಅದು ಕೇವಲ ಒಂದು ರಿಲಿಜಿಯಸ್ ಯುದ್ಧವೆಂದು ಬಣ್ಣಿಸಿ ಆ ತಿಳಿವಳಿಕೆಯ ಬಾಗಿಲನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.
ಪೇಜಾವರರ ಇಫ್ತಾರ್ ಕೂಟವನ್ನು ಸೆಕ್ಯುಲರ್ ತಂತ್ರವಾಗಿ ನೋಡದೇ ಈ ತರಹದ ಸಾಂಪ್ರದಾಯಿಕ ತಂತ್ರದ ಮುಂದುವರಿಕೆಯಾಗಿ ಕೂಡ ನೋಡಬಹುದು. ಹಿಂದೂ ಸಂಪ್ರದಾಯಗಳನ್ನು ಬದುಕುತ್ತಿರುವ ಯತಿಗಳೊಬ್ಬರಿಗೆ ಅವರ ಪರಂಪರೆ ಬೇರೆ ಯಾವುದೋ ಪ್ರೇರಣೆಯನ್ನು ನೀಡುತ್ತಿರುವಂತಿದೆ. ಹಾಗಾಗಿಯೇ ಅವರಿಗೆ ತಮ್ಮ ಕ್ರಿಯೆಯಲ್ಲಿ ಅಸಹಜವಾದುದೇನೂ ಕಾಣುವುದಿಲ್ಲ.
ಆ ಪ್ರೇರಣೆ ಮುತಾಲಿಕ್ ಬಣದ ಹಿಂದುತ್ವವಾದಿಗಳಲ್ಲಿ ನಶಿಸಿಹೋಗಿದ್ದರೆ ಆಶ್ಚರ್ಯವೂ ಇಲ್ಲ. ಅವರು ಹೋರಾಡುತ್ತಿರುವುದು ನಮ್ಮ ಸಂಪ್ರದಾಯಗಳನ್ನು ರಿಲಿಜನ್ನಾಗಿ ಪರಿವರ್ತಿಸುವುದಕ್ಕೆ! ಹಾಗಾಗಿ ಅವರ ಹೋರಾಟದ ಪ್ರೇರಣೆಗಳು ನಮ್ಮ ಸಂಪ್ರದಾಯದೊಳಗಿನಿಂದ ಹುಟ್ಟಿದಂಥವಲ್ಲ ಹಾಗೂ ಅವರಿಗೆ ಈ ಕ್ರಿಯೆಯ ಕುರಿತು ವಿರೋಧ ಹುಟ್ಟಿದರೂ ಆಶ್ಚರ್ಯವಿಲ್ಲ.
____________________________________________________________

ಇಫ್ತಾರ್‌: ಕಣ್ಣು ತೆರೆಸುವ ಕೆಲಸ
ಡಾ. ಆರ್. ಲಕ್ಷ್ಮೀನಾರಾಯಣ
3 Jul, 2017

ಪೇಜಾವರ ಶ್ರೀಗಳ ಈಗಿನ ನಡೆ ಒಂದು ಹನುಮ ನೆಗೆತವೇ ಸರಿ! ಅವರ ಈ ಕಾರ್ಯವನ್ನು ಮುಕ್ತವಾಗಿ ಸ್ವಾಗತಿಸುವ ಔದಾರ್ಯ ತೋರಬೇಕಿದೆ

ಮುಸ್ಲಿಮರಿಗೆ ಪೇಜಾವರ ಮಠದ ವಿಶ್ವೇಶ ತೀರ್ಥರು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದುದರ ಪರ-ವಿರೋಧ ಚರ್ಚೆಗಳಾಗುತ್ತಿವೆ. ಇಫ್ತಾರ್ ಕೂಟದಲ್ಲಿ ಯತಿಯೊಬ್ಬರು ಮಠದ ಆವರಣದಲ್ಲಿ ಮುಸ್ಲಿಮರಿಗೆ ತಾವೇ ನೇತೃತ್ವ ವಹಿಸಿ ಉಣಬಡಿಸಿರುವುದಕ್ಕೇ ಕೆಲವು ಕಟ್ಟರ್ ಪಂಥೀಯ ಹಿಂದೂ ಮಿತ್ರರು ಇಷ್ಟು ಬಲವಾದ ವಿರೋಧ ವ್ಯಕ್ತಪಡಿಸುತ್ತಿರಬೇಕಾದರೆ ಇನ್ನು ಮುಸ್ಲಿಮರೊಬ್ಬರು ಹಿಂದೂ ಯತಿಯೊಬ್ಬರನ್ನು ತನ್ನ ಮನೆಗೆ ಆಹ್ವಾನಿಸಿ ಭೋಜನ ನೀಡಿದರೆಂಬ ವಿಷಯ ತಿಳಿದರೆ ಆ ಯತಿಯ ಬಗ್ಗೆ ಈ ಕಟ್ಟರ್ ಪಂಥೀಯರು ಏನು ಹೇಳುತ್ತಾರೋ ತಿಳಿಯದು!

ಆ ಯತಿ ಬೇರಾರೂ ಅಲ್ಲ. ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಧ್ವಜವನ್ನು ಎತ್ತಿಹಿಡಿದ ಅಪ್ರತಿಮ ದೇಶಭಕ್ತ, ಸನ್ಯಾಸಿ ಸ್ವಾಮಿ ವಿವೇಕಾನಂದರು. ಅವರು ಷಿಕಾಗೊಕ್ಕೆ ಹೋಗುವ ಮುನ್ನ ಇಡೀ ದೇಶದ ಪರಿಚಯ ಮಾಡಿಕೊಳ್ಳಬೇಕೆಂದು ಸಂಚರಿಸುತ್ತಿದ್ದಾಗ ಖೇತ್ರಿ ಮಹಾರಾಜರ ಅತಿಥಿಯಾಗಿದ್ದಾಗಲೋ ಏನೋ ಅವರು ದಿನವೂ ನೀಡುತ್ತಿದ್ದ ಉಪನ್ಯಾಸಗಳಿಗೆ ತಪ್ಪದೆ ಹಾಜರಾಗುತ್ತಿದ್ದ ಒಬ್ಬ ಬಡ ಮುಸ್ಲಿಂ ವೃದ್ಧರಿಗೆ ವಿವೇಕಾನಂದರನ್ನು ಮನೆಗೆ ಆಹ್ವಾನಿಸಿ ಭೋಜನ ನೀಡಬೇಕೆಂಬ ಪ್ರಬಲವಾದ ಬಯಕೆ ಉಂಟಾಗುತ್ತದೆ.

ಆದರೆ ತನ್ನಂಥ ಅನ್ಯ ಧರ್ಮೀಯ ನೀಡುವ ಆಹಾರವನ್ನು ಸ್ವಾಮೀಜಿ ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಅನುಮಾನವೂ ಇರುತ್ತದೆ. ಇದನ್ನು ಸುಳ್ಳು ಮಾಡಿದ ವಿವೇಕಾನಂದರು, ಅವರು ನೀಡಿದ ಭೋಜನವನ್ನು ಸಂತೋಷದಿಂದ ಸ್ವೀಕರಿಸಿ, ಅವರ ಆಸೆ ಈಡೇರಿಸುತ್ತಾರೆ (ಸ್ವಾಮಿ ವಿವೇಕಾನಂದ- ಕುವೆಂಪು).

ಮಠಾಧೀಶರೂ ಸೇರಿದಂತೆ ಎಲ್ಲ ಬ್ರಾಹ್ಮಣರೂ ಸನ್ಯಾಸ ಸ್ವೀಕರಿಸುವ ಮುಂಚೆ ಶಿಖೆ ಮತ್ತು ಯಜ್ಞೋಪವೀತಗಳನ್ನು ತ್ಯಜಿಸುತ್ತಾರೆ. ಅದರ ಅರ್ಥ ಸ್ಪಷ್ಟವಿದೆ. ಸನ್ಯಾಸಿಗೆ ಜಾತಿ– ಮತ– ಪಂಥಗಳ ಭೇದವಿಲ್ಲ. ಯಾರ ಮನೆಯಲ್ಲಾದರೂ ಭಿಕ್ಷೆ ಬೇಡಿ ಭುಂಜಿಸಬೇಕೆಂಬುದು ಪರಿವ್ರಾಜಕ ಸನ್ಯಾಸಿಯಾದವರ ಒಂದು ಧರ್ಮ.




ಆದರೆ ಮಠ ಪರಂಪರೆಯಲ್ಲಿ ಬಂದ ಮಠಾಧೀಶರು ಜುಟ್ಟು- ಜನಿವಾರ ತ್ಯಜಿಸುವುದು ಕೇವಲ ಸಾಂಕೇತಿಕವಾಗಿದೆ. ಜಾತಿಭೇದ ಪೂರ್ತಿ ತೊರೆದ ಮಠಾಧೀಶರು ಯಾವ ಕಾಲದಲ್ಲೂ ಇರಲಿಲ್ಲ (ಬಸವಣ್ಣನವರು ಮತ್ತು ರಾಮಾನುಜರು ಅಪವಾದವೆನಿಸುತ್ತದೆ). ಬಹುತೇಕರು ಭಿಕ್ಷೆ (ಭೋಜನ) ಸ್ವೀಕರಿಸುವುದು ಏನಿದ್ದರೂ ತಮ್ಮ ಪಂಗಡದ ಭಕ್ತರ ಮನೆಗಳಲ್ಲಿಯೇ. ಅದಕ್ಕೆ ಕೊಡುವ ಕಾರಣ ಬಹುಶಃ ಸ್ಪಷ್ಟವಿದೆ. ಅವರು ಕೇವಲ ಸನ್ಯಾಸಿಗಳಲ್ಲ; ಮಠದ ಸಂಪ್ರದಾಯ, ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಹೊಣೆಗಾರಿಕೆ ಹೊತ್ತವರು. ಅಂಥದ್ದರಲ್ಲಿ ಈ ಕರ್ಮಠ ಪರಂಪರೆಯಲ್ಲೇ ಬಂದ ಪೇಜಾವರರ ಈಗಿನ ನಡೆ ಒಂದು ಹನುಮ ನೆಗೆತವೇ ಸರಿ!

ಪೇಜಾವರರು ದಲಿತರ ಕೇರಿಗೆ ಹೋದಾಗಲೆಲ್ಲ ಅವರನ್ನು ‘ಡೋಂಗಿ ಸ್ವಾಮಿ’ ಎಂದೇ ಟೀಕಿಸುತ್ತಿದ್ದ ಕೆಲವರೂ ಅವರನ್ನು ಮನಸಾರೆ ಮೆಚ್ಚುವಷ್ಟು ಔದಾರ್ಯ ತೋರಿರುವುದೇ ಅವರದು ಸರಿಯಾದ ನಡೆ ಎನ್ನುವುದಕ್ಕೆ ಒಂದು ಪ್ರಬಲವಾದ ಸಾಕ್ಷಿಯೆನ್ನೋಣವೇ?
ಹಿಂದೂ ಧರ್ಮ ಮೊದಲಿನಿಂದಲೂ ಸಾಗುತ್ತ ಬಂದಿರುವ ಹಾದಿಯನ್ನು ಗಮನಿಸಿದವರಿಗೆ ಇದೇನೂ ಅಂಥ ವಿಶೇಷವೆನಿಸಲಾರದು. ಅಲ್ಲಾಹುವಿನ ಹೊರತು ಅನ್ಯ ದೈವಕ್ಕೆ ನಮಿಸದಿರುವುದು, ಅವರ ಮಸೀದಿಗಳೊಳಕ್ಕೆ ಇತರೆ ಧರ್ಮೀಯರನ್ನು ಸೇರಿಸಿಕೊಳ್ಳದಿರುವುದು ಇಸ್ಲಾಂ ಧರ್ಮ ಹುಟ್ಟಿದಾಗಿನಿಂದಲೂ ಅನುಸರಿಸಿಕೊಂಡು ಬಂದಿರುವ ಮುಸ್ಲಿಮರ ನಂಬಿಕೆ ಮತ್ತು ಪದ್ಧತಿಯೇ ಆಗಿದೆ. ಅದನ್ನು ಹಿಂದೂಗಳು ಮೊದಲುಗೊಂಡು ಉಳಿದವರೆಲ್ಲರೂ ಗೌರವಿಸಬೇಕು.
ಆದರೆ ಪರದೈವವೊಲ್ಲೆನೆಂಬ ಛಲ ಹಿಂದೂ ಧರ್ಮಕ್ಕೆ ಯಾವ ಕಾಲಕ್ಕೂ ಇರಲಿಲ್ಲ. ಅದಕ್ಕೆ ನಮ್ಮಲ್ಲಿರುವ ಬಹುದೇವತಾ ಆರಾಧನೆಯೇ ಸಾಕ್ಷಿ. ಅಲ್ಲಾಹು ಅಥವಾ ಏಸುಕ್ರಿಸ್ತನನ್ನೂ ದೈವವೆಂದು ಒಪ್ಪಿಕೊಳ್ಳಲು ಮತ್ತು ನಮಿಸಲು ನಮ್ಮ ಧರ್ಮ ಅಡ್ಡ ಬರುವುದಿಲ್ಲ. ನಮ್ಮ ದೇವಸ್ಥಾನಗಳಿಗೆ ಯಾರು ಬೇಕಾದರೂ ಬರಬಹುದು. ದಲಿತರನ್ನು ಗಾಂಧೀಜಿ ಬರುವವರೆಗೂ ದೇವಸ್ಥಾನದೊಳಕ್ಕೆ ಬಿಡದಿದ್ದರೆ ಅದಕ್ಕೆ ನಮ್ಮವರ ಮೌಢ್ಯ ಕಾರಣವೇ ಹೊರತು ಇನ್ನೇನಲ್ಲ.

ಅನ್ಯ ಧರ್ಮೀಯರಿಗೆ ಹಿಂದೂ ರಾಜರು ಎಲ್ಲ ಕಾಲದಲ್ಲೂ ಉದಾರವಾದ ಆಶ್ರಯ ನೀಡಿರುವುದಕ್ಕೆ ಇತಿಹಾಸ ಜ್ವಲಂತ ಸಾಕ್ಷಿಯಾಗಿದೆ.
ಹೀಗಿರುವಾಗ ನಾವು ಅನ್ಯ ಧರ್ಮೀಯರನ್ನು ನಮ್ಮ ಮಠ– ದೇವಸ್ಥಾನದೊಳಕ್ಕೆ ಆಹ್ವಾನಿಸಿದರೆ ಅದು ನಮ್ಮ ಧರ್ಮಕ್ಕೆ ಹೇಗೆ ವಿರೋಧವಾಗುತ್ತದೆ? ಬದಲಿಗೆ ನಮ್ಮ ಎಂದಿನ ಧಾರ್ಮಿಕ ಔದಾರ್ಯಕ್ಕೆ ಮತ್ತೊಂದು ನಿದರ್ಶನವಾಗುತ್ತದೆ ಅಷ್ಟೆ. ‘ಮಸೀದಿಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆಯೇ, ಅವರು ಗೋಮಾಂಸ ಭಕ್ಷಕರಲ್ಲವೇ’ ಎಂದೆಲ್ಲ ಅವರ ಧಾರ್ಮಿಕ ನಂಬಿಕೆ ಮತ್ತು ಆಹಾರ ಪದ್ಧತಿಯನ್ನು ಪ್ರಶ್ನಿಸುತ್ತ ಹೋದರೆ ನಾವು ಒಂದು ಇಂಚೂ ಮುಂದೆ ಹೋಗಲಾಗುವುದಿಲ್ಲ. ಅದು ಅಲ್ಲಿಗೇ ನಿಲ್ಲುತ್ತದೆ.

ನಮ್ಮದು ವ್ಯವಸಾಯ ಪ್ರಧಾನವಾದ ದೇಶವಾದ ಕಾರಣ ಹಸು, ಎತ್ತುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದವು, ಈಗಲೂ ಆಗಿವೆ. ರೈತನ ಜೀವನಾಡಿಯೇ ಅವು. ಅಲ್ಲದೆ ನಮ್ಮ ಮಕ್ಕಳು, ಮೊಮ್ಮಕ್ಕಳು ಅದರ ಹಾಲು, ಮೊಸರು, ತುಪ್ಪಗಳನ್ನು ತಿಂದು ಬೆಳೆಯುತ್ತಾರೆ. ಪೋಷಣೆ ಹೊಂದುತ್ತಾರೆ. ಈ ಕಾರಣಕ್ಕಾಗಿ ನಮಗೆ ಅದರ ಬಗ್ಗೆ ಮೊದಲಿಗೆ ಇರುವುದು ಎಲ್ಲಿಲ್ಲದ ಕೃತಜ್ಞತೆಯ ಭಾವನೆ.

‘ಬಸವಣ್ಣ ನಿನ್ನ ಕಸವ ಹೊಡೆದ ಕೈ ಕಸ್ತೂರಿ ಗೊನಿನಾತ, ಎಸಳ ಯಾಲಕ್ಕಿ ಗೊನಿನಾತ’ ಎಂಬ ಕನ್ನಡ ಜನಪದ ಗೀತೆಯಲ್ಲಿ ನಮ್ಮ ನಾಡಿನವರ ಕೃತಜ್ಞತೆಯ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಆ ಕಾರಣಕ್ಕಾಗಿಯೇ ಗೋವಧೆ ಮಹಾ ಪಾಪವೆಂದು ಹೇಳಿರಬೇಕು. ಗೋವಿನ ಬಗ್ಗೆ ಪಾವಿತ್ರ್ಯದ ಭಾವನೆ ಆನಂತರ ಬಂದದ್ದಿರಬೇಕು. ಕಾರಣ ವೈದಿಕ ಋಷಿಗಳು ಗೋಮಾಂಸ ಭಕ್ಷಿಸುತ್ತಿದ್ದುದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಬಹುಶಃ ಹೀಗೆ ಪವಿತ್ರವೆಂದು ಧಾರ್ಮಿಕತೆಯನ್ನು ಆರೋಪಿಸಿದರಾದರೂ ಅದರ ವಧೆ ಮಾಡದೆ ಇರಲಿ ಎಂಬುದು ಅದರ ಹಿಂದಿನ ಉದ್ದೇಶವಾಗಿರಬೇಕು.

ಆದರೆ ಅಲ್ಲಿಂದ ನಾವು ಬಹಳ ಮುಂದೆ ಬಂದಿದ್ದೇವೆ. ವೈದಿಕರೂ ಸೇರಿದಂತೆ ಯಾವುದೇ ಮಠಾಧೀಶರು ಗೋಮಾಂಸವಿರಲಿ, ಮಾಂಸವನ್ನೇ ತ್ಯಜಿಸಿ ಸಹಸ್ರಾರು ವರ್ಷಗಳೇ ಸಂದುಹೋಗಿವೆ. ಹಸು–ಎತ್ತುಗಳು ಮುದಿಯಾದಾಗ ಸಂಕಟದಿಂದಲಾದರೂ ಅವನ್ನು ಕಟುಕರಿಗೆ ಕೊಡುವುದು ನಮ್ಮಲ್ಲಿ ಇದ್ದೇ ಇದೆ. ಆರ್ಥಿಕತೆ, ವ್ಯಾವಹಾರಿಕತೆ ಅದರೊಂದಿಗೆ ತಳಕು ಹಾಕಿಕೊಂಡಿರುವುದೇನೂ ಸುಳ್ಳಲ್ಲ. ಗೋವು ನಮಗೆ ಮುಖ್ಯ. ಆದರೆ ಅದಕ್ಕಿಂತಲೂ ಜನರು ಮುಖ್ಯ.
ಒಮ್ಮೆ ಬಂಗಾಳದಲ್ಲಿ ಭೀಕರ ಕ್ಷಾಮವಾಗಿದ್ದಾಗ ಎಲ್ಲೆಲ್ಲೂ ಪರಿಹಾರ ಕೇಂದ್ರಗಳು ನಡೆದಿದ್ದಾಗ ಕೆಲವರು ಗೋರಕ್ಷಕರೆನ್ನುವವರು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಅವರೊಂದಿಗೆ ಮಾತಾಡುತ್ತ ವಿವೇಕಾನಂದರು- ‘ಗೋ ರಕ್ಷಣೆಯ ನಿಮ್ಮ ಧ್ಯೇಯ ಶ್ಲಾಘನೀಯ. ಆದರೆ ಸುತ್ತ ಆನ್ನಾಹಾರವಿಲ್ಲದೆ ಜನ ಸಾಯುತ್ತಿದ್ದಾರಲ್ಲ ಅವರ ಬಗ್ಗೆ ಏನು ಕಾರ್ಯಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಅವರು ‘ಅದರ ಗೊಡವೆ ನಮಗಿಲ್ಲ. ನಮ್ಮದೇನಿದ್ದರೂ ಗೋರಕ್ಷಣೆ. ಗೋವು ನಮಗೆ ಮಾತೆಯಲ್ಲವೇ? ಅದಕ್ಕೆ ಮೇವು ಆಹಾರ ಒದಗಿಸಿ ರಕ್ಷಿಸುವುದೇ ನಮ್ಮ ಧ್ಯೇಯ’ ಎಂದಾಗ ಸ್ವಾಮೀಜಿ ಕನಲಿ ಕೆಂಡವಾಗಿ- ‘ಆಹಾ! ಎಂಥ ಮೇಧಾವಿಗಳು ನೀವು. ಅತ್ತ ಹಸಿವಿನಿಂದ ಕಂಗಾಲಾಗಿರುವ ಜನರ ಸಂಕಷ್ಟಕ್ಕೆ ಕರಗದೆ ಗೋವಿನ ರಕ್ಷಣೆಗೆ ಮುಂದಾಗುವ ನೀವೆಂಥ ಜನ? ಗೋವೇ ನಿಮ್ಮ ಮಾತೆ! ಆಕೆ ನಿಮ್ಮಂಥ ಅವಿವೇಕಿಗಳನ್ನಲ್ಲದೆ ಇನ್ನೆಂಥವರನ್ನು ಹೆತ್ತಾಳು!’ ಎಂದು ವ್ಯಂಗ್ಯವಾಡುತ್ತಾರೆ(ಸ್ವಾಮಿ ವಿವೇಕಾನಂದ-ಕುವೆಂಪು).

ಸ್ವಾಮಿ ವಿವೇಕಾನಂದರನ್ನು ಮೀರಿಸಿದ ಹಿಂದೂ ಧರ್ಮದ ಭಕ್ತರು ಇದ್ದಾರೆಂದು ಅನಿಸುತ್ತಿಲ್ಲ. ಅದರೆ ಸದಾ ತಮ್ಮ ವಿಚಾರವಂತಿಕೆ ಮತ್ತು ವಿವೇಕವನ್ನು ಜಾಗೃತವನ್ನಾಗಿಟ್ಟುಕೊಂಡ ಆ ದೇಶಭಕ್ತ ಸ್ವಾಮೀಜಿ ನಡೆ ಎಲ್ಲ ಕಾಲಕ್ಕೂ ನಮಗೆ ನಮ್ಮ ಬೆನ್ನ ಹಿಂದಿನ ಬೆಳಕಾಗಬೇಕಲ್ಲವೇ?

ಪೇಜಾವರರ ನಡೆಯನ್ನು ಟೀಕಿಸುವುದು, ಲೇವಡಿ ಮಾಡುವುದು ಸುಲಭ. ಆದರೆ ಅವರ ನಡೆ ಸಮಾಜದ ಕಣ್ಣನ್ನು ಕಿಂಚಿತ್ತಾದರೂ ತೆರೆಸುವಂಥದ್ದು. ಅದನ್ನು ಮುಕ್ತವಾಗಿ ಸ್ವಾಗತಿಸುವ ಔದಾರ್ಯ ತೋರಬೇಕಿದೆ.

ತಮ್ಮ ಮೂಗಿನ ನೇರದ ಅಂಕು-ಡೊಂಕಿನ ನೈತಿಕತೆಯನ್ನೇ ಒಪ್ಪಿಕೊಳ್ಳಬೇಕೆಂಬ ಆಗ್ರಹ ಸರಿಯಲ್ಲ

_____________________________________________________


ಪ್ರಜಾತಾಂತ್ರಿಕ ಮೌಲ್ಯಗಳ ಸಂಕೇತ
5 Jul, 2017

ಭಾರತ ಒಂದು ಪ್ರಜಾತಾಂತ್ರಿಕ ಸಮಾಜವಾಗಿ ಉಳಿದು ಬರಬೇಕೆಂಬುದು ಅನೇಕರ ಬಯಕೆ. ಪ್ರಜಾತಂತ್ರದಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದರ ಕುರಿತು ವೈಚಾರಿಕತೆಯ ವಿವೇಕದಲ್ಲಿ ನಿಷ್ಕರ್ಷಿಸುವ ಅಧಿಕಾರ ನಮಗಿದೆ.

ಪ್ರೊ. ರಾಜಾರಾಮ ತೋಳ್ಪಾಡಿ

ಪ್ರೊ. ನಿತ್ಯಾನಂದ ಬಿ. ಶೆಟ್ಟಿ


ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ದೊಡ್ಡ ವಿವಾದವಾಗಿರುವುದನ್ನು ಗಮನಿಸಿ ಈ ಬರಹಬರೆಯಲಾಗಿದೆ. ಹೊರನೋಟಕ್ಕೆ ಪರ–ವಿರೋಧಗಳ ಒಂದು ಸ್ಥಳೀಯವಾದ ಆಗು-ಹೋಗು ಎಂದು ಇದು ಕಾಣಿಸಿದರೂ ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಪ್ರಕ್ಷುಬ್ಧತೆಯ ಕಿಡಿಗಳು ಈ ವಿದ್ಯಮಾನದಲ್ಲಿವೆ. ಇದನ್ನೊಂದು ಸ್ಥಳೀಯ ಘಟನೆಯಾಗಿ ನೋಡದೆ ಜಾಗತಿಕ ವಿದ್ಯಮಾನದ ಭಾಗವಾಗಿ ಗ್ರಹಿಸುವ ಪ್ರಯತ್ನ ಈ ಬರಹದ ಉದ್ದೇಶ.

ಭಾರತ ಒಂದು ಪ್ರಜಾತಾಂತ್ರಿಕ ಸಮಾಜವಾಗಿ ಉಳಿದು ಬರಬೇಕೆಂಬುದು ಅನೇಕರ ಬಯಕೆ. ಪ್ರಜಾತಂತ್ರದಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದರ ಕುರಿತು ವೈಚಾರಿಕತೆಯ ವಿವೇಕದಲ್ಲಿ ನಿಷ್ಕರ್ಷಿಸುವ ಅಧಿಕಾರ ನಮಗಿದೆ. ಈ ನಿಷ್ಕರ್ಷೆಯಲ್ಲಿ ಮೂಡಿಬಂದ ನಿಲುವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅಧಿಕಾರವೂ ನಮಗಿದೆ.

ಪ್ರಜಾತಂತ್ರದ ಜೀವಂತಿಕೆಗೆ ಅತ್ಯವಶ್ಯವಾದ ಈ ವೈಚಾರಿಕ ಸ್ವಾತಂತ್ರ್ಯವನ್ನು ವ್ಯಕ್ತಿ ಮತ್ತು ಸಮುದಾಯಗಳು ಕಾನೂನಿನ ಚೌಕಟ್ಟು ಮತ್ತು ಸಾರ್ವಜನಿಕ ಸಭ್ಯತೆಯ ಇತಿಮಿತಿಗಳಲ್ಲಿ ನಿರ್ವಹಿಸಬೇಕು. ಈ ಅರ್ಥದಲ್ಲಿ ಪೇಜಾವರ ಶ್ರೀಗಳು ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂದು ವಿಮರ್ಶಿಸುವ ಹಾಗೂ ವಿವೇಕಯುಕ್ತವಾದ ಸಂಯಮದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಜಾತಾಂತ್ರಿಕ ಅಧಿಕಾರ ನಮಗಿದೆ.

ಆದರೆ, ಉಡುಪಿಯ ಈ ವಿವಾದವನ್ನು ಕೇವಲ ಪ್ರಜಾತಾಂತ್ರಿಕ ಚೌಕಟ್ಟಿನಲ್ಲಷ್ಟೇ ಗ್ರಹಿಸಲು ಸಾಧ್ಯವಿಲ್ಲ. ಇದನ್ನು ಜಗತ್ತಿನ ಉದ್ದಗಲಕ್ಕೂ ಹಬ್ಬಿರುವ, ಕಳೆದ ಮೂರು ದಶಕಗಳಿಂದ ಆಕ್ರಮಣಶೀಲವಾಗಿ ಪ್ರಕಟಗೊಳ್ಳುತ್ತಿರುವ ಸಾಂಸ್ಕೃತಿಕ ವಿದ್ಯಮಾನದ ಪರಿಪ್ರೇಕ್ಷ್ಯದಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಘಟನೆಯಿಂದ ವ್ಯಕ್ತಿ-ಸಮುದಾಯ-ಧಾರ್ಮಿಕ ಪರಂಪರೆಗಳ ಸ್ವಾಯತ್ತತೆ, ಸ್ವಾತಂತ್ರ್ಯಕ್ಕೆ ಮಾನ್ಯತೆ ಇಲ್ಲ ಎಂಬ ಸಂದೇಶ ರವಾನೆಯಾಗಿದೆ.
ಪೇಜಾವರ ಶ್ರೀಗಳ ವಿರುದ್ಧ ಹೂಂಕರಿಸುತ್ತಿರುವ ನಾಯಕರು, ಶ್ರೀಗಳನ್ನು ಒಂದು ಧಾರ್ಮಿಕ ಪರಂಪರೆಯ ಪ್ರತಿನಿಧಿಯೆಂದೂ ಭಾವಿಸಿಲ್ಲ. ಶ್ರೀಗಳು ಸಮುದಾಯಗಳ ಹಿತದೃಷ್ಟಿಯಿಂದ ತಮ್ಮ ಪರಂಪರೆಯ ಆಚಾರ ವಿಚಾರಗಳಿಗೆ ಕುಂದು ಬರದ ರೀತಿಯಲ್ಲಿ ಯಥೋಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲರು ಹಾಗೂ ತಮ್ಮ ಧಾರ್ಮಿಕ ವಿವೇಚನೆಯಲ್ಲಿ ಸೂಕ್ತವಾದ ಹೆಜ್ಜೆಗಳನ್ನು ಇಡಬಲ್ಲರು ಎಂಬುದನ್ನೂ ತಿಳಿದುಕೊಳ್ಳುವುದಿಲ್ಲ.
ಜನಾಂಗೀಯ ರಾಷ್ಟ್ರೀಯವಾದದಿಂದ ಉನ್ಮತ್ತಗೊಂಡ ರಾಜಕೀಯ ಹಿಂದುತ್ವದ ನಶೆ ಏರಿಸಿಕೊಂಡ ಈ ಸಂಘಟನೆಗಳಿಗೆ ಈ ದೇಶದಲ್ಲಿ ಶತಮಾನಗಳಿಂದ ಜೀವಂತವಾಗಿರುವ ಧಾರ್ಮಿಕ ಸಮುದಾಯಗಳ ಮತ್ತು ಪರಂಪರೆಗಳ ಬಗ್ಗೆ ಲವಲೇಶ ಪರಿಚಯವೂ ಇದ್ದಂತೆ ಕಾಣುವುದಿಲ್ಲ.
20ನೆಯ ಶತಮಾನದ ಉತ್ತರಾರ್ಧದಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಗಳು; ಹಿಂದೂ ಧರ್ಮವೆಂದರೆ ತಾವು ವ್ಯಾಖ್ಯಾನಿಸಿದಂತೆ ಮತ್ತು ತಾವು ಯಾವುದನ್ನು ಭಾರತೀಯ ಸಂಸ್ಕೃತಿ ಎಂದು ನಿರ್ವಚಿಸುತ್ತೇವೆಯೋ ಅದಕ್ಕನುಗುಣವಾಗುವ ರೀತಿಯಲ್ಲಿ ಭಾರತದ ಅಸಂಖ್ಯಾತ ಧಾರ್ಮಿಕ ಪರಂಪರೆ ಹಾಗೂ ಮಠ ಮಾನ್ಯಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಬರುವ ವ್ಯಕ್ತಿಗಳೂ ತಾವು ಕೊಡುವ ತುತ್ತೂರಿಗಳನ್ನೇ ಊದಬೇಕೆಂದು ತಿಳಿದುಕೊಂಡಿರುವಂತೆ ಕಾಣುತ್ತದೆ.
ಪೇಜಾವರ ಶ್ರೀಗಳು ವಿಶ್ವ ಹಿಂದೂ ಪರಿಷತ್ತಿನ ನಾಯಕರಲ್ಲಿ ಒಬ್ಬರು ಅನ್ನುವುದು ನಿಜ. ಅವರಿಗೆ ಆರ್‌ಎಸ್‌ಎಸ್ ಕುರಿತು ಒಲವು ಇದೆ ಎನ್ನುವುದೂ ನಿಜ. ಅವರ ನೀತಿ-ನಿಲುವುಗಳ ಕುರಿತು ನಮ್ಮ ವಿಚಾರ-ವಿಮರ್ಶೆಗಳನ್ನು, ಸಹಮತ-ಭಿನ್ನಮತಗಳನ್ನು ನಾವು ನಿರಂತರವಾಗಿ ಪ್ರಜಾತಾಂತ್ರಿಕ ಸಂಯಮದಲ್ಲಿ ವ್ಯಕ್ತಪಡಿಸುತ್ತಲೂ ಇರಬೇಕು. ಆದರೆ ಇಂದು ಪ್ರಶ್ನೆ ಅದಲ್ಲ.
ಸುದೀರ್ಘವಾದ ಒಂದು ಪರಂಪರೆಯ ಧರ್ಮಗುರುಗಳಾದ, ವ್ಯಾಪಕವಾದ ಜನ ನಂಬುಗೆಯ ಮಠದ ಪೀಠಾಧಿಪತಿಗಳಾದ ಅವರ ಮುಂದೆ ತೋರುಬೆರಳ ಸನ್ನೆ ಮಾಡಿ ‘ನೀವು ಇದನ್ನು ಮಾಡಬೇಡಿ, ನೀವು ಮಾಡುವುದೇ ಆದಲ್ಲಿ ನಮ್ಮನ್ನು ಕೇಳಿ ಮಾಡಿ. ನೀವು ಹೀಗೆ ಮಾಡಿರುವುದು ಹಿಂದೂ ಧರ್ಮಕ್ಕೆ ಆದ ಅವಮಾನ. ನೀವು ಪೀಠತ್ಯಾಗ ಮಾಡಿ ಪೀಠವನ್ನು ಕಿರಿಯ ಸ್ವಾಮಿಗಳಿಗೆ ವಹಿಸಿ’ ಎಂದೆಲ್ಲ ತಾಕೀತು ಮಾಡುವ ಅಧಿಕಾರ ಯಾರಿಗೂ ಇಲ್ಲ.

ಧಾರ್ಮಿಕ ಪರಂಪರೆಯ ಕುರಿತು ಆಳವಾದ ಜ್ಞಾನ ಮತ್ತು ಮಠಾಧಿಪತಿಗಳಾಗಿ ಸುದೀರ್ಘವಾದ ಅನುಭವ ಪೇಜಾವರ ಶ್ರೀಗಳಿಗಿದೆ. ಧರ್ಮ ಸೂಕ್ಷ್ಮಗಳನ್ನು ಅವರಿಗೆ ಹೇಳಿಕೊಡಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಪ್ರಶ್ನಾತೀತರು ಎಂದೂ ನಾವು ಹೇಳುತ್ತಿಲ್ಲ. ಅವರ ನಡೆ-ನುಡಿ ಕುರಿತು ನಾಗರಿಕ ಸಮಾಜದಲ್ಲಿ ವಿಚಾರ ವಿಮರ್ಶೆ ನಡೆಯುತ್ತಲೇ ಇರಬೇಕು. ಆದರೆ ಈ ಅನೈತಿಕ ಪೊಲೀಸರಿಗೆ ನಾಗರಿಕ ಪ್ರಜಾತಾಂತ್ರಿಕ ಕ್ರಿಯಾಚರಣೆಯಲ್ಲಿ ಯಾವತ್ತೂ ನಂಬಿಕೆ ಇಲ್ಲ. ಅವರು ತಾವು ನಂಬಿದ ಅಥವಾ ತಮ್ಮ ಮೂಗಿನ ನೇರದ ಅಂಕು-ಡೊಂಕಿನ ನೈತಿಕತೆಯನ್ನೇ ಪೇಜಾವರರೂ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಅಪ್ರಜಾತಾಂತ್ರಿಕವಾದ ಕೃತ್ಯ.

ನಮ್ಮ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಮೂಡಿಬಂದ ಹಲವು ಮತಗಳು ತೀವ್ರವಾದ ಮತಭೇದವನ್ನು ತಮ್ಮೊಳಗೆ ಹೊಂದಿವೆ. ಭಾರತೀಯ ಸಂತ ಪರಂಪರೆ ಟೀಕಿಸದೆ ಇರುವ ಯಾವ ಮತವೂ ಭಾರತೀಯ ಸಂದರ್ಭದಲ್ಲಿ ಇಲ್ಲ. ಹಾಗೆಯೇ ಯಾವ ಭಾರತೀಯ ಸಂತನನ್ನೂ ವಿಮರ್ಶಿಸದೆ ಒಪ್ಪಿಕೊಂಡ ಯಾವ ಮತಸಂಪ್ರದಾಯವೂ ನಮ್ಮಲ್ಲಿಲ್ಲ.
ಭಾರತದ ಸಂದರ್ಭದಲ್ಲಿ ನಡೆದಷ್ಟು ತೀಕ್ಷ್ಣವಾದ ಆಧ್ಯಾತ್ಮಿಕ ವಾಗ್ವಾದಗಳನ್ನು ಜಗತ್ತಿನ ಬೇರೆಡೆ ನಾವು ಕಾಣಲಾರೆವು. ಇದು ನಮ್ಮ ಹೆಮ್ಮೆಗೆ ಕಾರಣವಾಗಬೇಕು. ಆದರೆ ಆಧುನಿಕ ರಾಜಕೀಯದ ಪೋಷಾಕನ್ನು ಒಳಗೆ ಧರಿಸಿ ಹೊರಗೆ ಹುಸಿ ಧಾರ್ಮಿಕತೆಯ ಮುಖವಾಡ ಹಾಕಿರುವ ಮತೀಯ ಸಂಘಟನೆಗಳಿಗೆ ನೈಜ ಧಾರ್ಮಿಕರು–ಅನುಭಾವಿಗಳು ಯಾವುದನ್ನು ಹೆಮ್ಮೆಯಾಗಿ ಸಂಭ್ರಮದಿಂದ ಕಾಣುತ್ತಾರೋ ಅದೊಂದು ಸಂಕೋಚದ ಮತ್ತು ನಾಚಿಕೆಯ ವಿಷಯ.

ಜೈನ- ಬೌದ್ಧ- ಪಾರ್ಸಿ- ಇಸ್ಲಾಂ-ಕ್ರಿಶ್ಚಿಯನ್- ಸೂಫಿ ಇತ್ಯಾದಿ ಮತಸಂಪ್ರದಾಯಗಳು- ಅನುಭಾವಿ ಪಂಥಗಳು ಭಾರತವನ್ನು ಶ್ರೀಮಂತಗೊಳಿಸಿದಷ್ಟು ಬೇರಾವ ದೇಶವನ್ನೂ ಶ್ರೀಮಂತಗೊಳಿಸಿಲ್ಲ. ಆದರೆ ಈ ಶ್ರೀಮಂತಿಕೆ ನಮ್ಮ ಮಾನವೀಯ ಅನುಕಂಪವನ್ನು ವಿಶಾಲಗೊಳಿಸಿವೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಾಗಿಲ್ಲ ಎಂಬುದನ್ನು ಉಡುಪಿಯ ಈ ಘಟನೆಗಳು ಹೇಳುತ್ತಿವೆ

ಪೇಜಾವರರು ತಾವು ಪ್ರತಿಪಾದಿಸುವ ಹಿಂದೂ ಮತದ ಅಂಕು-ಡೊಂಕುಗಳನ್ನು ಕಾಣಬಲ್ಲವರಾಗಿದ್ದಾರೆ. ಪ್ರಕ್ಷುಬ್ಧತೆಯನ್ನು ಒಳಗೊಂಡ ಈ ಸಮಾಜದಲ್ಲಿ ಸಣ್ಣಪುಟ್ಟ ಹೊಂದಾಣಿಕೆಯಾದರೂ ಸಾಧ್ಯವೇ ಎಂಬುದನ್ನು ಅವರು ಅಲ್ಲಿ-ಇಲ್ಲಿ ಪರಿಶೀಲಿಸುತ್ತಿದ್ದಾರೆ. ಅವರು ಮೂಲತಃ ಓರ್ವ ಮಠಾಧೀಶರು. ಅವರು ಈ ಲೋಕದ ನಿಗೂಢಗಳಿಗೆ ಸ್ಪಂದಿಸುವ ಸಂತರಲ್ಲ. ಬದಲಿಗೆ ಈ ಲೋಕದ ಆತಂಕಕ್ಕೆ ಸ್ಪಂದಿಸುವ ಧಾರ್ಮಿಕ ಗುರು. ಅವರು ಧಾರ್ಮಿಕ ಗುರುವಾಗಿರುವುದರಿಂದಲೇ ಭಿನ್ನ-ಭಿನ್ನ ಸಮುದಾಯಗಳ ನಡುವೆ ಸಾಮರಸ್ಯದ ಮತ್ತು ಸಹಜೀವನದ ರಾಜಕೀಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನು ಸಹಾನುಭೂತಿಯಿಂದ ನೋಡಬೇಕಾಗಿದೆ.
‘ಯಾವ ದೇವರನ್ನು ಪೂಜಿಸಿದರೂ ಅದು ಕೇಶವನನ್ನು ತಲುಪುತ್ತದೆ’ ಎಂಬ ಶ್ರದ್ಧೆಯನ್ನು ಹೊಂದಿರುವ ನೈಜ ಹಿಂದೂವಿನ ನಂಬಿಕೆಗೆ ಈ ವಿವಾದ ಮರ್ಮಾಘಾತ ನೀಡಿದೆ. ನಾರಾಯಣ ಗುರುವಿನಂತಹ ಅದ್ವೈತವಾದಿ ನಾಲ್ಕು ವೇದಗಳನ್ನು ಒಗ್ಗೂಡಿಸಿ ಒಂದು ವೇದವನ್ನಾಗಿಯೂ ಬೈಬಲ್, ಕುರ್‌ಆನ್ ಮತ್ತು ಬೌದ್ಧಗ್ರಂಥಗಳನ್ನು ಇನ್ನುಳಿದ ಮೂರು ವೇದಗಳಾಗಿಯೂ ಪರಿಗಣಿಸಬೇಕು ಎಂಬ ಸಲಹೆಯನ್ನು ನೀಡಿದ್ದರಂತೆ. ಆಧುನಿಕ ಹಿಂದುತ್ವವಾದಿಗಳಲ್ಲಿ ನಾರಾಯಣ ಗುರು; ಶಿಶುನಾಳ ಷರೀಫರಂತಹವರಿಗೆ ದೀಕ್ಷೆ ನೀಡಿದ ಗುರು ಗೋವಿಂದ ಭಟ್ಟರ ತತ್ವಗಳಿಗೆ ಬೆಲೆ ಇಲ್ಲ.

ಪೇಜಾವರ ಶ್ರೀಗಳು ಕರಾವಳಿ ಪ್ರದೇಶದ ಸಾಮಾಜಿಕ ಸಹಜೀವನದ ನೆನಪುಗಳನ್ನು ಇಟ್ಟುಕೊಂಡವರು. ಈ ವಿವಾದದ ಸಂದರ್ಭದಲ್ಲೂ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಆತ್ಮೀಯವಾದ ಅನೇಕ ಚಾರಿತ್ರಿಕ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಅವರ ವ್ಯಕ್ತಿತ್ವದಲ್ಲಿರುವ ಮಾನವೀಯ ಕಳಕಳಿ ಈ ಬಗೆಯ ಸೌಹಾರ್ದ ಕೂಟವನ್ನು ಏರ್ಪಡಿಸುವಂತೆ ಪ್ರಚೋದಿಸಿದೆ.
ನಮ್ಮ ದೃಷ್ಟಿಯಲ್ಲಿ ಈ ಸೌಹಾರ್ದ ಕೂಟ ಒಂದು ಪ್ರಜಾತಾಂತ್ರಿಕ ಸಂಕೇತ. ಈ ಸಂಕೇತವನ್ನು ಗೌರವಿಸಿ ಅದರ ಕಳಕಳಿಗೆ ಮಣಿಯಬೇಕೇ ಹೊರತು ಕ್ಷುಲ್ಲಕರಂತೆ ವರ್ತಿಸಬಾರದು. ಈ ವಿದ್ಯಮಾನವು ಬಿಗಡಾಯಿಸುತ್ತಿರುವ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ನಾವು ಕಳೆದುಕೊಳ್ಳುತ್ತಿರುವ ಪ್ರಜಾತಾಂತ್ರಿಕ ಮೌಲ್ಯಗಳ ಕುರಿತು ನಮ್ಮನ್ನು ಎಬ್ಬಿಸುವ ಮುನ್ನೆಚ್ಚರಿಕೆಯ ಕರೆಗಂಟೆಯೂ ಹೌದು.

_________________________________________________________________

ಚರ್ಚೆ

ಅಪ್ರಾಮಾಣಿಕತೆ ಪ್ರಜಾತಾಂತ್ರಿಕ ಮೌಲ್ಯ ಅಲ್ಲ

7 Jul, 2017


ಸಂಘ ಪರಿವಾರ ಹುಸಿ ವಾಗ್ವಾದವೊಂದನ್ನು ಹುಟ್ಟುಹಾಕುವ ಮೂಲಕ ಒಡ್ಡಿರುವ ಖೆಡ್ಡಾಕ್ಕೆ ಒಬ್ಬೊಬ್ಬರೇ ಬೀಳುತ್ತಿರುವುದು ಕಳವಳಕಾರಿ...

* ದಿನೇಶ್‌ ಅಮಿನ್‌ ಮಟ್ಟು

ಪೇಜಾವರ ಸ್ವಾಮಿಗಳ ‘ಇಫ್ತಾರ್ ಕೂಟ’ದ ನಡೆಯನ್ನು ‘ಅವರೊಳಗಿನ ಮಾನವೀಯ ಕಳಕಳಿಯ ಪ್ರಚೋದನೆ’ ಎಂದು ಸಾರಿದ ಪ್ರೊ. ರಾಜಾರಾಮ ತೋಳ್ಪಾಡಿ ಮತ್ತು ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಅಭಿಪ್ರಾಯ (ಪ್ರ.ವಾ., ಚರ್ಚೆ, ಜುಲೈ 5) ಅಚ್ಚರಿ ಉಂಟುಮಾಡಿದೆ.
ಪೇಜಾವರ ಶ್ರೀಗಳ ನಡೆಯಿಂದ ಭಾವೋದ್ವೇಗಕ್ಕೆ ಒಳಗಾದಂತೆ ಕಾಣುತ್ತಿರುವ ಲೇಖಕರು, ಸಂಘ ಪರಿವಾರದೊಳಗಿನ ಬಂಡುಕೋರ ಪ್ರಮೋದ ಮುತಾಲಿಕ್ ಅವರ ವಿರೋಧಕ್ಕೆ ಪ್ರತಿಕ್ರಿಯೆ ನೀಡುವ ಆವೇಶದಲ್ಲಿ ಶ್ರೀಗಳನ್ನು ನಾರಾಯಣ ಗುರುಗಳಿಗೆ ಹೋಲಿಸುವ ಮಟ್ಟಕ್ಕೆ ಮುನ್ನುಗ್ಗಿರುವುದು ವಿಷಾದನೀಯ.
ಹಾಗಿದ್ದರೆ ಸ್ವಾಮೀಜಿ ನಿಗೂಢ ನಡೆಯ ಉದ್ದೇಶಗಳಾದರೂ ಏನು? ಮೊದಲನೆಯದಾಗಿ, ಇದೊಂದು ಸಂಘ ಪರಿವಾರದ ಹಳೆಯ ಕಾರ್ಯತಂತ್ರ. ಸೌಮ್ಯವಾದಿ- ಉಗ್ರವಾದಿ ನಾಯಕರನ್ನು ಹಾಗೂ ಅಂತಹವರನ್ನು ಪೋಷಿಸುವ ಸಂಘಟನೆಗಳನ್ನು ತಮ್ಮೊಳಗೆ ಹುಟ್ಟುಹಾಕಿ ಪರ-ವಿರೋಧದ ಲಾಭಗಳೆರಡೂ ತಮ್ಮ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶ.
ಇಲ್ಲಿಯೂ ಮುತಾಲಿಕ್ ಬೆಂಬಲಿಗರು ಮತ್ತು ಪೇಜಾವರರ ಭಕ್ತರು ಚುನಾವಣೆ ಎದುರಾದಾಗ ಯಾರಿಗೆ ಮತ ಹಾಕುತ್ತಾರೆಂದು ತಿಳಿದುಕೊಳ್ಳಲು ಮತಪೆಟ್ಟಿಗೆ ಒಡೆದು ನೋಡಬೇಕಾಗಿಲ್ಲ. ಆದರೆ ಸಂಘ ಪರಿವಾರ ಇಂತಹದ್ದೊಂದು ಹುಸಿ ವಾಗ್ವಾದವನ್ನು ಹುಟ್ಟುಹಾಕುವ ಮೂಲಕ ಒಡ್ಡಿರುವ ಖೆಡ್ಡಾಕ್ಕೆ ಒಬ್ಬೊಬ್ಬರೇ ಬೀಳುತ್ತಿರುವುದು ಮಾತ್ರ ಕಳವಳಕಾರಿಯಾದುದು.
ಎರಡನೆಯದಾಗಿ, ಇದು ಪೇಜಾವರ ಸ್ವಾಮಿಗಳ ‘Image building’ ಕಸರತ್ತು ಇರಬಹುದೇನೋ ಎಂಬ ಸಂಶಯವೂ ಇದೆ. ಹೋಲಿಕೆಗಾಗಿ ಪ್ರಮೋದ ಮುತಾಲಿಕ್ ಎಂಬ ಪ್ರತಿನಾಯಕನನ್ನು ಎದುರು ನಿಲ್ಲಿಸಿದರೆ ವಿರೋಧಿಗಳ ದೃಷ್ಟಿಯಲ್ಲಿಯೂ ಪೇಜಾವರರು ಇನ್ನಷ್ಟು ಎತ್ತರಕ್ಕೆ ಹೋಗಿಯೇ ಹೋಗುತ್ತಾರೆ. ‘ಸ್ವಾಮಿ ವಿವೇಕಾನಂದರ ನಂತರ ನಮಗೊಬ್ಬ ಹಿಂದೂ ಸ್ವಾಮಿ ಇಲ್ಲ. ಪೇಜಾವರರು ಮಠದಿಂದ ಹೊರಬಂದು ಹಿಂದೂ ಸ್ವಾಮಿಯಾಗಿ ಧರ್ಮಜಾಗೃತಿ ಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ’ ಎಂದು Image building ಕಸರತ್ತಿನಲ್ಲಿ ಸಕ್ರಿಯರಾಗಿದ್ದ ಆರ್‌ಎಸ್‌ಎಸ್‌ನ ಪ್ರಮುಖ ಕಾರ್ಯಕರ್ತರೊಬ್ಬರು ಹಿಂದೊಮ್ಮೆ ನನ್ನೊಡನೆ ಹೇಳಿದ್ದು ನೆನಪಾಗುತ್ತಿದೆ.
ಮೂರನೆಯದಾಗಿ, ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಮತದಿಂದ ಸಹಕರಿಸುವಂತೆ ಮಾಡುವ ಪ್ರಯತ್ನವನ್ನು ಸಂಘ ಪರಿವಾರ ದೇಶದಾದ್ಯಂತ ಬೇರೆಬೇರೆ ಕಾರ್ಯತಂತ್ರಗಳ ಮೂಲಕ ಪ್ರಾರಂಭಿಸಿದೆ. ಬಿಜೆಪಿ ಇಫ್ತಾರ್ ಕೂಟ ಕೂಡಾ ಆ ಕಾರ್ಯತಂತ್ರಗಳಲ್ಲೊಂದು ಎಂದು ಹೇಳಲಾಗುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳ ನಡೆಯ ಹಿಂದಿನ ಪ್ರಾಮಾಣಿಕತೆಯನ್ನು ನೋಡಬೇಕಾಗಿದೆ. ‘ಜನಾಂಗೀಯ ರಾಷ್ಟ್ರೀಯವಾದದಿಂದ ಉನ್ಮತ್ತಗೊಂಡ ರಾಜಕೀಯದ ಹಿಂದುತ್ವದ ನಶೆ ಏರಿಸಿಕೊಂಡ ಸಂಘಟನೆಗಳು’ ಎಂದು ಪೇಜಾವರರ ವಿರೋಧಿ ಹಿಂದೂ ಸಂಘಟನೆಗಳನ್ನು ಟೀಕಿಸಿರುವ ಲೇಖಕರು, ಪೇಜಾವರರು ಅವುಗಳಿಂದ ಹೊರಗೆ ಬಂದಿದ್ದಾರೆ ಎನ್ನುವ ಅರ್ಥದಲ್ಲಿ ವಿಶ್ಲೇಷಿಸಿದ್ದಾರೆ.
‘ಹಿಂದುತ್ವದ ನಶೆಯೇರಿಸಿಕೊಂಡ ಸಂಘಟನೆ’ಗಳಲ್ಲಿ ಮುಂಚೂಣಿಯಲ್ಲಿರುವ ಆರ್‌ಎಸ್‌ಎಸ್ ಬಗ್ಗೆ ಪೇಜಾವರರು ಒಂದು ಸಣ್ಣ ಭಿನ್ನಾಭಿಪ್ರಾಯವನ್ನೂ ಇಲ್ಲಿಯವರೆಗೆ ಹೊರಹಾಕಿಲ್ಲ. ಈಗಲೂ ಸ್ವಾಮೀಜಿ ಬೆಂಬಲಕ್ಕೆ ನಿಂತಿರುವುದು ಆರ್‌ಎಸ್‌ಎಸ್, ವಿಎಚ್‌ಪಿ ಮೊದಲಾದ ಸಂಘಟನೆಗಳಲ್ಲವೇ?

ಪ್ರತಿಯೊಬ್ಬ ವ್ಯಕ್ತಿಯೂ ತಾನು ಮಾಡುತ್ತಿರುವ ವೃತ್ತಿಯನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಸಮಾಜಸೇವೆ ಬೇರೆ ಇಲ್ಲ. ಶಿಕ್ಷಕನೊಬ್ಬ ಊರಿನ ರಸ್ತೆ-ನೀರಿಗಾಗಿ ಹೋರಾಟ ನಡೆಸಿದರೆ ತಪ್ಪಲ್ಲ, ಆದರೆ ಆ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿ ಹೊರಗೆ ಬಂದು ಸಮಾಜಸೇವೆ ನಡೆಸುವುದು ಜನದ್ರೋಹದ ಕೆಲಸ.

ಅದೇ ರೀತಿ ಹಿಂದೂ ಧರ್ಮದ ಸ್ವಾಮೀಜಿಗಳ ಮೊದಲ ಆದ್ಯತೆ ಹಿಂದೂ ಧರ್ಮದ ಸುಧಾರಣೆ. ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು ಕೋಮು ಸೌಹಾರ್ದಕ್ಕಾಗಿ ಹೋರಾಟ ನಡೆಸಲಿಲ್ಲ. ಅವರು ಮೊದಲು ತಮ್ಮ ಮನೆಯೊಳಗಿನ ಹೊಲಸು ತೊಳೆಯುವ ಕೆಲಸ ನಡೆಸಿದರು. ಹಿಂದೂ ಧರ್ಮ ಈಗಲೂ ದೇಶದ ಬಹುಜನರ ನಂಬಿಕೆಯಾಗಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ಧಾರ್ಮಿಕ ಚಳವಳಿಗೆ ಇದಿರಾಗಿ ಅದರೊಳಗೆಯೇ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳು ಕಾರಣ ಎನ್ನುವುದನ್ನು ನಿರಾಕರಿಸಲಾದೀತೇ?
ಹಿಂದೂ ಧರ್ಮ ಎಷ್ಟೊಂದು ಜಡ್ಡುಗಟ್ಟಿ ಹೋಗಿದೆಯೆಂದರೆ ಅದನ್ನು ‘ದಲಿತರ ಕೇರಿಗೆ ಭೇಟಿ’, ‘ದಲಿತರಿಗೊಬ್ಬರು ಸ್ವಾಮೀಜಿ ನೇಮಕ’ ಮೊದಲಾದ ‘ಮೈ ಚಿವುಟುವಂತಹ’ ಕ್ರಮಗಳಿಂದ ಸುಧಾರಿಸಲಾಗದು. ಬದಲಾವಣೆಯಾಗಬೇಕಾದರೆ ಅದಕ್ಕೆ ‘ಶಾಕ್ ಟ್ರೀಟ್‌ಮೆಂಟ್’ ಬೇಕು. ಬಸವಣ್ಣನವರು ಸಮಗಾರ ಹರಳಯ್ಯನ ಮಗನಿಗೆ, ಬ್ರಾಹ್ಮಣ ಸಮುದಾಯದ ಮಧುವರಸನ ಮಗಳನ್ನು ಮದುವೆ ಮಾಡಿದಾಗ, ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದೊಳಗಿನ ಪುರೋಹಿತಶಾಹಿಯನ್ನು ಪ್ರಶ್ನಿಸಿದಾಗ, ನಾರಾಯಣ ಗುರುಗಳು ಲಿಂಗ ಸ್ಥಾಪನೆ ಮಾಡಿ ಇದು ‘ಈಳವರ ಶಿವ’ ಎಂದು ವಿರೋಧಿಗಳ ಬಾಯಿ ಮುಚ್ಚಿಸಿದಾಗ, ಹಿಂದೂ ಧರ್ಮ ಅಂತಹದ್ದೊಂದು ಶಾಕ್ ಟ್ರೀಟ್‌ಮೆಂಟ್‌ಗೆ ಬೆಚ್ಚಿಬಿದ್ದಿತ್ತು.ಅಂತಹ ಧೈರ್ಯ ಪೇಜಾವರ ಶ್ರೀಗಳಿಗೆ ಇದೆಯೇ?
ಎಂಟನೇ ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದ ಸ್ವಾಮೀಜಿ ತಮ್ಮ 80 ವರ್ಷದ ಸನ್ಯಾಸಿ ಜೀವನದಲ್ಲಿ ಇಲ್ಲಿಯವರೆಗೆ ಜಾತೀಯತೆ, ಅಸ್ಪೃಶ್ಯತೆ, ಕೋಮುವಾದ ಇತ್ಯಾದಿ ವಿಷಯಗಳ ಬಗ್ಗೆ ಸಾಮಾನ್ಯ ವೈದಿಕ ಸ್ವಾಮಿಯವರಂತೆ ನಡೆದುಕೊಂಡಿದ್ದಾರೆಯೇ ಹೊರತು ಎಂದೂ ಸಂಪ್ರದಾಯದ ಗೆರೆಯನ್ನು ದಾಟಿರಲಿಲ್ಲ. ವಿದೇಶಕ್ಕೆ ಹೋಗಿಬಂದರೆಂಬ ಕಾರಣಕ್ಕೆ ತನ್ನ ಉತ್ತರಾಧಿಕಾರಿಯನ್ನು ಮನೆಗೆ ಕಳುಹಿಸಿದ ನಿಲುವಿನಿಂದ ಹಿಡಿದು ‘ಉಡುಪಿ ಚಲೋ’ ಕಾರ್ಯಕ್ರಮದಲ್ಲಿ ದಲಿತ-ದಮನಿತರು ಬಂದು ಬೀದಿಯಲ್ಲಿ ಅಡ್ಡಾಡಿದರೆಂಬ ಕಾರಣಕ್ಕೆ ಮಠ ಶುದ್ಧೀಕರಿಸುವವರೆಗೆ ಎಲ್ಲವೂ ಒಬ್ಬ ಕಟ್ಟಾ ಸಂಪ್ರದಾಯವಾದಿ ಸ್ವಾಮಿಗಳ ರೀತಿಯಲ್ಲಿಯೇ ಅವರು ವರ್ತಿಸುತ್ತಾ ಬಂದಿದ್ದಾರೆ.

ಈ ನಡುವೆ ಆಗಾಗ ದಲಿತರ ಕೇರಿಗೆ ಭೇಟಿ ನೀಡಿ ಸುದ್ದಿ ಮಾಡುವುದನ್ನು ಹೊರತುಪಡಿಸಿದರೆ ಅವರೆಂದೂ ಹಿಂದೂ ಧರ್ಮದ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಎನ್ನುವುದಕ್ಕೆ ನಂಬಲರ್ಹ ಪುರಾವೆಗಳು ಸಿಗುವುದಿಲ್ಲ.
ರಾಮಜನ್ಮ ಚಳವಳಿಯ ಮುಂಚೂಣಿಯಲ್ಲಿದ್ದದ್ದು ವಿಶ್ವ ಹಿಂದೂ ಪರಿಷತ್. ಆ ಚಳವಳಿಯು ಬಾಬರಿ ಮಸೀದಿ ಧ್ವಂಸದಲ್ಲಿ ಕೊನೆಗೊಂಡಾಗ ವಿಎಚ್‌ಪಿ ಉಪಾಧ್ಯಕ್ಷರಾಗಿದ್ದವರು ಪೇಜಾವರ ಸ್ವಾಮೀಜಿ. ದೇಶದಲ್ಲಿ ಕೋಮುವಾದದ ಕರಾಳ ಯುಗಕ್ಕೆ ನಾಂದಿ ಹಾಡಿದ ಆ ಘಟನೆ ನಡೆದಾಗ ಮೌನವಾಗಿದ್ದ ಸ್ವಾಮಿಗಳು ಈಗ ‘ಅದನ್ನು ತಡೆಯಲು ಪ್ರಯತ್ನಿಸಿದ್ದೆ’ ಎಂಬ ಹೇಳಿಕೆ ನೀಡಿ ಜಾರಿಕೊಳ್ಳುತ್ತಾರೆ. ‘ಹಿಂದೂ-ಮುಸ್ಲಿಂ ಘರ್ಷಣೆಯ ಕಾಲದಲ್ಲಿ ಸ್ವಾಮೀಜಿ ನಮ್ಮೊಳಗೆ ಕೋಮುದ್ವೇಷದ ವಿಷಬೀಜ ಬಿತ್ತುವ ಬದಲಿಗೆ ಸೌಹಾರ್ದದ ಬಗ್ಗೆ ಯಾಕೆ ಮಾತನಾಡಿಲ್ಲ?’ ಎಂಬ ಶ್ರೀರಾಮ ಸೇನೆಯ ನಾಯಕನ ಪ್ರಶ್ನೆಗೆ ಸ್ವಾಮೀಜಿ ಇನ್ನೂ ಉತ್ತರಿಸಿಲ್ಲ.
ಪೇಜಾವರ ಶ್ರೀಗಳನ್ನು ನಾರಾಯಣ ಗುರುಗಳ ಜತೆ ಹೋಲಿಸಲು ಹೊರಟವರಿಗೆ ವಿನಮ್ರದಿಂದ ಸಣ್ಣದೊಂದು ಸವಾಲು. ‘ನಾರಾಯಣ ಗುರುಗಳ ತತ್ವವನ್ನು ಒಪ್ಪುತ್ತೇನೆ’ ಎಂದು ಪೇಜಾವರ ಸ್ವಾಮೀಜಿ ಬಾಯಿಯಿಂದ ಒಮ್ಮೆ ಹೇಳಿಸಿಬಿಡಿ. ಸವಾಲು ಸರಳವಾದುದು ನಿಜ, ಆದರೆ ನಾರಾಯಣ ಗುರುಗಳನ್ನು ಒಪ್ಪುವುದೆಂದರೆ ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವುದು. ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವುದೆಂದರೆ ಪೂಜೆ ಮಾಡುವ ಹಕ್ಕನ್ನು ಶೂದ್ರರು-ದಲಿತರು ಸೇರಿದಂತೆ ಎಲ್ಲರಿಗೂ ನೀಡುವುದು ಎನ್ನುವುದನ್ನು ಮೊದಲೇ ಅವರಿಗೆ ತಿಳಿಸಿಬಿಡಿ.

ಮಠದೊಳಗೆ ಸಹಪಂಕ್ತಿ ಭೋಜನದಂತಹ ಸಣ್ಣ ಸುಧಾರಣೆಯನ್ನು ತರಲು ನಿರಾಕರಿಸುವ, ಸಂಪ್ರದಾಯ ಮುರಿದು ಬ್ರಾಹ್ಮಣರ ಜತೆಯಲ್ಲಿ ಊಟಕ್ಕೆ ಕೂತಿದ್ದ ಬಂಟ ಮಹಿಳೆಯನ್ನು ಎಬ್ಬಿಸಿ ಹೊರಗೆ ಕಳುಹಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಸ್ವಾಮಿಗಳು ಬಿಜೆಪಿಯ ಮುಸ್ಲಿಂ ಘಟಕದ ಪದಾಧಿಕಾರಿಗಳ ಜತೆಗೂಡಿ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ ಕೂಡಲೇ ಅವರು ‘ಲೋಕದ ಆತಂಕಕ್ಕೆ ಸ್ಪಂದಿಸಲು ಹೊರಟಿದ್ದಾರೆ’ ಎಂದೆಲ್ಲಾ ವ್ಯಾಖ್ಯಾನಿಸುವುದು ಅವಸರದ್ದು ಮಾತ್ರವಲ್ಲ ಅಪಾಯಕಾರಿ ನಿಲುವು ಕೂಡಾ ಆಗಿದೆ.
___________________________________________________________

ಚರಿತ್ರೆಯ ಭಾರ ಹೊರಬೇಕಿಲ್ಲ

10 Jul, 2017
ಪೇಜಾವರ ಶ್ರೀಗಳ ಸೌಹಾರ್ದ ಕೂಟಕ್ಕೆ ಸಂಬಂಧಿಸಿದ ನಮ್ಮ ಲೇಖನಕ್ಕೆ (ಪ್ರ.ವಾ., ಚರ್ಚೆ, ಜುಲೈ 5) ದಿನೇಶ್ ಅಮಿನ್‌ ಮಟ್ಟು ಅವರ ಪ್ರತಿಕ್ರಿಯೆಯನ್ನು (ಪ್ರ.ವಾ., ಚರ್ಚೆ, ಜುಲೈ 7) ಗಮನಿಸಿ ಈ ಲೇಖನ ಬರೆಯಲಾಗಿದೆ.

-ಪ್ರೊ. ರಾಜಾರಾಮ ತೋಳ್ಪಾಡಿ

-ಪ್ರೊ. ನಿತ್ಯಾನಂದ ಬಿ. ಶೆಟ್ಟಿ

ಪೇಜಾವರ ಶ್ರೀಗಳ ಸೌಹಾರ್ದ ಕೂಟಕ್ಕೆ ಸಂಬಂಧಿಸಿದ ನಮ್ಮ ಲೇಖನಕ್ಕೆ (ಪ್ರ.ವಾ., ಚರ್ಚೆ, ಜುಲೈ 5) ದಿನೇಶ್ ಅಮಿನ್‌ ಮಟ್ಟು ಅವರ ಪ್ರತಿಕ್ರಿಯೆಯನ್ನು (ಪ್ರ.ವಾ., ಚರ್ಚೆ, ಜುಲೈ 7) ಗಮನಿಸಿ ಈ ಲೇಖನ ಬರೆಯಲಾಗಿದೆ.
ನಾವು ನಮ್ಮ ಬರಹದಲ್ಲಿ ಹೇಳಿದ್ದಿಷ್ಟು: ಶ್ರೀಗಳು ಇಫ್ತಾರ್ ನೆಪದಲ್ಲಿ ಸೌಹಾರ್ದಕೂಟ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಶೆ ನಮ್ಮದಲ್ಲ. ಸೌಹಾರ್ದಕೂಟ ಏರ್ಪಡಿಸುವ ನೈತಿಕ ಅರ್ಹತೆ ಅವರಿಗಿದೆಯೋ ಇಲ್ಲವೋ ಎಂಬ ಪರಿಶೀಲನೆಯೂ ನಮ್ಮದಲ್ಲ. ಭಾರತೀಯ ಧಾರ್ಮಿಕ ಪರಂಪರೆಗಳಲ್ಲಿ ಒಂದು ಧಾರೆಯ ಗುರುವಾಗಿರುವ ಅವರಿಗೆ ಇಂತಹ ಸಮಾರಂಭ ಹಮ್ಮಿಕೊಳ್ಳುವುದಕ್ಕಿದ್ದ ಸ್ವಾಯತ್ತತೆಯನ್ನು ಪ್ರಶ್ನಿಸಿದ ಹಿಂದೂ ಸಂಘಟನೆಗಳಿಗೆ ಧರ್ಮವೂ ಗೊತ್ತಿಲ್ಲ; ಪ್ರಜಾಪ್ರಭುತ್ವವೂ ಗೊತ್ತಿಲ್ಲ. ವ್ಯಕ್ತಿ ಮತ್ತು ಸಂಸ್ಥೆಗಳಿಗಿರುವ ಪ್ರಜಾಸತ್ತಾತ್ಮಕವಾದ ಹಕ್ಕನ್ನು ನಿರಾಕರಿಸುವ ಈ ಬಗೆಯ ದುಂಡಾವರ್ತಿಗಳು ಪ್ರಪಂಚದೆಲ್ಲೆಡೆ ಕಂಡು ಬರುತ್ತಿರುವುದರಿಂದ, ನಮ್ಮ ಲೇಖನದ ಕಟುಟೀಕೆ ಒಬ್ಬನ ನೀತಿ-ನಡವಳಿಕೆಯನ್ನು ಇನ್ನೊಬ್ಬ ನಿಯಂತ್ರಿಸುವ ಮತ್ತು ನಿರ್ದೇಶಿಸುವ ಈ ಜಾಗತಿಕ ವಿದ್ಯಮಾನದ ವಿರುದ್ಧ ಇದೆ.
ಪೇಜಾವರ ಶ್ರೀಗಳು ಹಿಂದುತ್ವದ ಪ್ರತಿಪಾದಕರು ಎನ್ನುವುದರ ಕುರಿತು ನಮಗೆ ಯಾವ ಅನುಮಾನವೂ ಇಲ್ಲ. ಇದಕ್ಕಾಗಿ ಅವರ ಜೊತೆ ನಮಗೆ ಆಳವಾದ ತಾತ್ವಿಕ ಭಿನ್ನಾಭಿಪ್ರಾಯವಿದೆ. ಅವರು ನಡೆಸುವ ಅನೇಕ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಂಜಸತೆಯ ಬಗೆಗೆ ಅನುಮಾನ ಮತ್ತು ಅಸಮಾಧಾನ ನಮಗೂ ಇದೆ. 1992ರ ಬಾಬರಿ ಮಸೀದಿ ಧ್ವಂಸದ ಕೃತ್ಯವನ್ನು ಮತ್ತು ಅದರಲ್ಲಿ ಅವರ ಭಾಗವಹಿಸುವಿಕೆಯನ್ನು ಖಂಡಿಸಿ ಅವರಿಗೆ ಬಹಿರಂಗ ಪತ್ರವನ್ನೂ ಬರೆದಿದ್ದೆವು. ಆದ್ದರಿಂದ ನಾವು ಪೇಜಾವರರನ್ನು ಸಮರ್ಥಿಸುತ್ತಿದ್ದೇವೆ ಎಂಬ ಮಾತಿನಲ್ಲಿ ಹುರುಳಿಲ್ಲ.

ಶ್ರೀಗಳ ನಡೆ-ನುಡಿಗಳ ಕುರಿತು ಚಾರಿತ್ರಿಕ ಎಚ್ಚರ ನಮಗಿರಬೇಕೇ ಹೊರತು ಆ ಚರಿತ್ರೆಯ ಭಾರವನ್ನು ನಾವೀಗ ಹೊರಬೇಕಾಗಿಲ್ಲ. ಚಾರಿತ್ರಿಕ ವಿದ್ಯಮಾನಗಳು ಒಂದು ಹಿನ್ನೆಲೆಯಾಗಿ, ನೆನಪಾಗಿ ನಮ್ಮ ದೃಷ್ಟಿಕೋನಗಳನ್ನು ರೂಪಿಸಬೇಕು. ಆದರೆ ಅದೇ ಭೂತಾಕಾರವಾಗಿ ಆವರಿಸಿಕೊಂಡು ನಮ್ಮ ದೃಷ್ಟಿಯನ್ನು ಮಂದಗೊಳಿಸಬಾರದು. ಚರಿತ್ರೆಯ ಭಾರದಿಂದ ಉಂಟಾಗುವ ದೃಷ್ಟಿದೋಷ ವರ್ತಮಾನದ ಪ್ರಸ್ತುತವನ್ನು ಸ್ಪಷ್ಟವಾಗಿ ಕಾಣದಂತೆ ಮಾಡೀತು. ಅಲ್ಪಸಂಖ್ಯಾತರ ಬಗ್ಗೆ ಹಿಂದುತ್ವವಾದಿಗಳ ದೃಷ್ಟಿಯನ್ನು ಮಸುಕುಗೊಳಿಸಿರುವುದೂ ಇದೇ ಬಗೆಯ ಚರಿತ್ರೆಯ ಭಾರ ಎನ್ನುವುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬೇಕು.

ಹಿಂದುತ್ವದ ಪ್ರತಿಪಾದಕರಾಗಿರುವ ಶ್ರೀಗಳ ಕೆಲಸಗಳನ್ನು ವಿಮರ್ಶಿಸುವ ಜೊತೆಜೊತೆಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದದ ಕುರಿತು ಅವರು ನಡೆಸುತ್ತಿರುವ ಪ್ರಯತ್ನಗಳನ್ನು ಗುರುತಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ. ಹಾಗೆ ಮಾಡದಿದ್ದಲ್ಲಿ ಮನುಷ್ಯ ಕಾಲ-ಸಂದರ್ಭಗಳಲ್ಲಿ ಬದಲಾಗುತ್ತಾನೆ ಮತ್ತು ಆತನ ಚಿಂತನೆ-ಧೋರಣೆಗಳು ಸ್ಥಿರವಾಗಿರದೆ ಚಲನಶೀಲವಾಗಿರುತ್ತವೆ ಎನ್ನುವ ಮಾನವ ಜೀವಂತಿಕೆಯನ್ನು ನಾವು ನಿರಾಕರಿಸಿದಂತೆ ಆಗುತ್ತದೆ. ನಮ್ಮ ಎಲ್ಲ ಸಾಂಸ್ಕೃತಿಕ ನಾಯಕರು, ಸಾಧುಸಂತರು, ರಾಜಕಾರಣಿಗಳು ಏಕರೂಪದ ಘನವಸ್ತುಗಳಲ್ಲ. ಮಾನವಪರವಾದ ಹೆಜ್ಜೆಗಳನ್ನು ಯಾರು ಯಾವ ಹೊತ್ತಿನಲ್ಲಿಡುತ್ತಾರೋ ಅದನ್ನು ಗುರುತಿಸುವ ಸಂವೇದನಾಶೀಲತೆಯನ್ನು ನಾವು ಹೊಂದಿರಬೇಕಾಗುತ್ತದೆ.

ಒಂದು ಕಾಲಕ್ಕೆ ಉಗ್ರ ಹಿಂದುತ್ವವಾದಿಯಂತೆ ಕಾಣಿಸುತ್ತಿದ್ದ ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಲ್.ಕೆ. ಅಡ್ವಾಣಿಯವರು ಇಂದು ಮೆದುವಾಗಿರುವುದನ್ನು, ಭಾರತೀಯ ಪ್ರಜಾಪ್ರಭುತ್ವದ ಕುರಿತು ತೀವ್ರವಾದ ಕಳಕಳಿ ಮತ್ತು ಕಳವಳವನ್ನು ವ್ಯಕ್ತಪಡಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಈ ಅರ್ಥದಲ್ಲಿ ಪೇಜಾವರರ ಪೂರ್ವಚರಿತ್ರೆ ಏನೇ ಇದ್ದರೂ ಅವರಿಟ್ಟ ವರ್ತಮಾನದ ಈ ಕಿರುಹೆಜ್ಜೆಯನ್ನು ನಾವು ಗುರುತಿಸಬೇಕಾಗಿದೆ.

ನಮ್ಮ ಲೇಖನದಲ್ಲಿ ಪೇಜಾವರರನ್ನು ನಾರಾಯಣ ಗುರುಗಳಿಗೆ ಹೋಲಿಸಿಲ್ಲ. ದಿನೇಶ್ ಅವರು ನಮ್ಮ ಲೇಖನದ ಆಶಯವನ್ನು ಸರಿಯಾಗಿ ಗ್ರಹಿಸಿಲ್ಲ. ಇದು ‘ಪಠ್ಯ’ವನ್ನು ಗ್ರಹಿಸುವ ನಮ್ಮ ಸಮಕಾಲೀನ ಓದಿನಲ್ಲಿರುವ ತೊಡಕು ಎಂದು ನಾವು ಭಾವಿಸುತ್ತೇವೆ. ಪೇಜಾವರ ಶ್ರೀಗಳಿಗೆ ಹಿಂದೂ ಧರ್ಮದ ಪಾಠ ಮಾಡಲು ಹೊರಟಿರುವ ಹಿಂದುತ್ವವಾದಿಗಳು ನಾರಾಯಣ ಗುರುಗಳಂಥವರ ಉದಾಹರಣೆಗಳನ್ನು ಮರೆಯಬಾರದು. ಹಿಂದೂ ಎಂದು ನಾವಿಂದು ಕರೆಯುವ ಧಾರ್ಮಿಕ ಸಂಪ್ರದಾಯಗಳ ಕೂಡುಕಟ್ಟಿನ ಬಹುತ್ವವನ್ನು ಹಾಗೂ ಪ್ರಾಚೀನ ಹಿಂದೂ ಪರಂಪರೆಗಳ ಔದಾರ್ಯದ ಚರಿತ್ರೆಯನ್ನು ಮರುನೆನಪಿಸುವ ಉದ್ದೇಶದಿಂದ ನಾರಾಯಣ ಗುರುಗಳ, ಗೋವಿಂದ ಭಟ್ಟರ ನಿದರ್ಶನವನ್ನು ನಾವು ಕೊಟ್ಟಿದ್ದೇವೆ. ಆದ್ದರಿಂದ, ನಾವು ಪೇಜಾವರರನ್ನು ನಾರಾಯಣ ಗುರುಗಳಿಗೆ ಹೋಲಿಸಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು

ಇನ್ನು, ‘ನಾರಾಯಣ ಗುರುಗಳ ತತ್ವಗಳನ್ನು ಒಪ್ಪಿದ್ದೇನೆಂದು ಪೇಜಾವರರ ಬಾಯಲ್ಲಿ ಹೇಳಿಸಿ’ ಎನ್ನುವ ಸವಾಲು. ಇಂತಹ ಪ್ರಕ್ಷುಬ್ಧ ಕಾಲದಲ್ಲೂ ಪಂಥಾಹ್ವಾನಗಳ ಮೂಲಕ ನಾವು ತಲುಪುವ ಗಮ್ಯ ಸ್ಥಾನವಾದರೂ ಯಾವುದು? ಅದ್ವೈತ ಸಿದ್ಧಾಂತಗಳನ್ನು ತಾತ್ವಿಕವಾಗಿ ಪ್ರತಿನಿಧಿಸುವ ಮತ್ತು ಭಾರತೀಯ ಸಂತ ಪರಂಪರೆಯಲ್ಲೇ ಕೊನೆಯವರಾದ ನಾರಾಯಣ ಗುರುಗಳ ಚಿಂತನೆಗಳಿಗೆ, ತಾತ್ವಿಕವಾಗಿ ದ್ವೈತ ಸಂಪ್ರದಾಯಕ್ಕೆ ಸೇರಿದ ಓರ್ವ ಮಠಾಧೀಶರನ್ನು ಒಪ್ಪಿಸುವ ಸವಾಲಿಗೂ; ಪ್ರಮೋದ ಮುತಾಲಿಕ್, ‘ಮಸೀದಿಯಲ್ಲಿ ಗಣೇಶ ಹಬ್ಬ ಮಾಡಿಸಿ, ಹನುಮಾನ್ ಚಾಲೀಸ ಓದಿಸಿ’ ಎಂದು ಪೇಜಾವರ ಶ್ರೀಗಳಿಗೆ ಒಡ್ಡಿದ ಸವಾಲಿಗೂ ಯಾವ ವ್ಯತ್ಯಾಸವಾದರೂ ಇದೆಯೇ? ಅಷ್ಟಾಗಿ ಪೇಜಾವರರ ಬಾಯಿಯಲ್ಲಿ ನಮಗೆ ಬೇಕಾದುದನ್ನು ಅಥವಾ ಇನ್ನೊಬ್ಬರಿಗೆ ಬೇಕಾದುದನ್ನು ಹೊರಡಿಸಲು ನಾವು ಅವರ ಗಿಂಡಿಮಾಣಿಗಳೂ ಅಲ್ಲ ಅಥವಾ ಪರ್ಯಾಯ ಪೇಜಾವರ ಮಠದ ಸಾರ್ವಜನಿಕ ವಕ್ತಾರರೂ ಅಲ್ಲ.

ಪೇಜಾವರರು ಆಯೋಜಿಸಿದ ಸೌಹಾರ್ದ ಕೂಟವನ್ನು ಹಿಂದುತ್ವ ಪುರೋಭಿವೃದ್ಧಿಗಾಗಿ ಹೆಣೆದ ರಾಜಕೀಯ ತಂತ್ರ ಎಂದಾಗಲೀ ಅಥವಾ ಪೇಜಾವರರು ತಮ್ಮ ಜನಪ್ರಿಯತೆಗಾಗಿ ನಡೆಸಿದ ಮಸಲತ್ತು ಎಂದಾಗಲೀ ನಾವು ಭಾವಿಸಿಲ್ಲ. ದೇಶ-ರಾಜ್ಯ, ದೇವರು-ಧರ್ಮ ಇತ್ಯಾದಿಗಳಿಗಿಂತ ನನ್ನ ಕುಟುಂಬ-ಸಂಸಾರ ದೊಡ್ಡದು ಎಂದು ನಂಬಿರುವ ಸಾಮಾನ್ಯ ಸಂಸಾರಸ್ಥರಾದ ನಮ್ಮೆಲ್ಲರ ಜನಜೀವನದಲ್ಲಿ, ಕ್ಷೀಣಿಸುತ್ತಿರುವ ಪರಸ್ಪರ ನಂಬಿಕೆ-ವಿಶ್ವಾಸಗಳನ್ನು ಮರಳಿ ತರುವ ಪ್ರಯತ್ನವನ್ನು ಯಾರು ಮಾಡುತ್ತಾರೋ ಅವರನ್ನು ತತ್ಕಾಲದ ಸನ್ನಿವೇಶದಲ್ಲಿ ಮೆಚ್ಚುವ ಒಂದು ಸಂಕೇತವನ್ನಾದರೂ ತೋರಿಸದೇ ಇದ್ದರೆ ಸಾಮಾನ್ಯ ಜನರ ಬದುಕು ದುರ್ಭರವಾಗುತ್ತದೆ.

ಸಮುದಾಯಗಳ ನಡುವೆ ಬಂಧುತ್ವ ವೃದ್ಧಿಸುವ ಕೆಲಸವನ್ನು ಮಾಡಹೊರಟವರು ಅದನ್ನು ಪ್ರಾಮಾಣಿಕವಾಗಿ ಮಾಡದಿದ್ದರೆ ಅದು ಅವರ ಸಮಸ್ಯೆಯೇ ಹೊರತು ನಮ್ಮದಲ್ಲ. ಕರಾವಳಿಯಲ್ಲಿ ಈಗ ನಡೆಯುತ್ತಿರುವ ಸಂಘರ್ಷದಿಂದ ನಿಜಕ್ಕೂ ಅನಾಥರಾಗಿರುವವರು ಮಡಿವಾಳ, ಕುಂಬಾರ, ಕೊಟ್ಟಾರಿ, ಮೊಗವೀರ, ಬಿಲ್ಲವ ಇತ್ಯಾದಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಜನರು. ದುಡಿಯುವ ಎರಡೂ ಕೈಗಳನ್ನು ನಂಬಿ ಜೀವ ಹಿಡಿದು ನಿಂತಿರುವ ಅಮ್ಮ, ಅಪ್ಪ, ಅಕ್ಕ, ತಮ್ಮ, ತಂಗಿಗಳೆಂಬ ಐದಾರು ಬಾಯಿಗಳು. ಮುಸ್ಲಿಮರಲ್ಲಿ ಮೀನುಮಾರುವ, ರಿಕ್ಷಾ ಓಡಿಸುವ ಮತ್ತು ಗುಜರಿ ಹೆಕ್ಕುವ ಕುಟುಂಬದವರು. ಸೌಹಾರ್ದಕೂಟವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬಯಸುತ್ತೇವೆ. ಸ್ನಾನದ ನೀರಿನ ಜೊತೆ ಶಿಶುವನ್ನೂ ಎಸೆಯುವವರು ನಾವು ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ.

ವ್ಯಕ್ತಿಗಳ, ಸಮುದಾಯಗಳ ಚಿಂತನೆಗಳು ಮತ್ತು ಕ್ರಿಯಾಚರಣೆಗಳು ನಿರಂತರವಾದ ವಿಮರ್ಶೆಗೆ ಒಳಗಾಗಿ ಎಲ್ಲರ ಒಳಿತನ್ನು ಸಾಧಿಸಬೇಕು. ಪ್ರಗತಿಶೀಲತೆ, ಎಡಪಂಥೀಯತೆ, ಸೆಕ್ಯುಲರ್‌ವಾದಗಳು ನಾವು ಹಾಕಿಕೊಳ್ಳುವ ಬಣ್ಣದ ಗಾಜುಗಳಾಗದೆ, ನಮ್ಮ ಚಿಂತನೆ- ಕ್ರಿಯಾಚರಣೆಗಳಿಗೆ ತಡೆಗೋಡೆಗಳಾಗದೆ ತಾತ್ವಿಕ ನಿಷ್ಕರ್ಷೆಯ ದಾರಿದೀಪಗಳಾಗಬೇಕು ಎಂದು ನಾವು ವಿನಮ್ರವಾಗಿ ತಿಳಿಯುತ್ತೇವೆ.

We bleed...



ಸ್ಯಾನಿಟರಿ ಪ್ಯಾಡುಗಳ ಮೇಲೆ ದುಬಾರಿ ಜಿ.ಎಸ್.ಟಿ ಹೇರಿರುವ ಕ್ರಮದ ಬೆನ್ನಲ್ಲೇ ಬಂದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.








Gayathri HN

July 1 at 1:25pm


·
We bleed blood, not money. Dear government, Take back tax on sanitary pads

****************************************************************


ಆ ಮೂರು ದಿನದ ಚಿಂತಿ' - ಡಾ . ಎಚ್ ಎಸ್ ಅನುಪಮಾ


ಮನುಷ್ಯ ಸೃಷ್ಟಿ, ಹೆಣ್ತನದ ಸಕಲ ಆಗುಹೋಗುಗಳ ಮೂಲವಾದ ಕ್ರಿಯೆ ಋತುಸ್ರಾವ. ಆದರೆ ಆ ಮೂರು ದಿನಗಳ ಕುರಿತು ಮಾನವ ಸಮಾಜಕ್ಕಿರುವ ಅಜ್ಞಾನ, ಅಸಡ್ಡೆ ಹೇಳಲಸಾಧ್ಯ. ಆ ಕುರಿತು ಹೆಣ್ಮಕ್ಕಳೂ ಮನಬಿಚ್ಚಿ ಮಾತಾಡುವುದಿಲ್ಲ. ಮುಟ್ಟು ಎಂದು ಹೇಳುವುದೇ ಮರ್ಯಾದೆಯ ಪ್ರಶ್ನೆ, ಅದೂ ಗಂಡಸರ ಎದುರಿಗಂತೂ ಆ ಮಾತು ಎತ್ತುವುದೇ ನಿರ್ಲಜ್ಜತನ ಎಂಬ ಭಾವನೆ ಎಷ್ಟುಮಟ್ಟಿಗೆ ಬೇರೂರಿದೆಯೆಂದರೆ ಸ್ವತಃ ಮುಟ್ಟಿನ ದಿನಗಳಲ್ಲಿ ನೋಯುವ, ಬೇಯುವ, ಆ ಕಾರಣಕ್ಕಾಗೆ ನಿರ್ಲಕ್ಷ್ಯಕ್ಕೆ ಗುರಿಯಾಗಿ ‘ಹೊರಗಿರುವ ಹೆಣ್ಮಕ್ಕಳು ಅದನ್ನೊಂದು ಅತ್ಯಂತ ಖಾಸಗಿ ವಿಷಯವಾಗಿಸಿಕೊಂಡಿದ್ದಾರೆ. ಸಮಸ್ಯೆಗಳನ್ನು ವೈದ್ಯರ ಬಳಿಯೂ ಹೇಳುವುದಿಲ್ಲ. ಹೀಗೆ ಮುಟ್ಟು ‘ಹುಶ್ ಹುಶ್ ಸಂಗತಿಯಾದ ಕಾರಣಕ್ಕೇ ಮುಟ್ಟಾದ ಮೂರು ದಿನ ಅವರಿಗೇನಾಗುತ್ತದೆ, ರಕ್ತಹರಿವನ್ನು ಹೇಗೆ ಮ್ಯಾನೇಜ್ ಮಾಡುತ್ತಾರೆ, ಅವರ ಸಮಸ್ಯೆಗಳೇನು ಎಂಬ ಬಗೆಗೆ ಸಮಾಜ ಇದುವರೆಗು ಯೋಚಿಸಿರಲಿಲ್ಲ.

ಈಗ ಅಂತಹ ಕಾಲ ಬಂದಿದೆ. ಸಮಾಜ ಮುಟ್ಟಿನ ಬಗೆಗಷ್ಟೆ ಅಲ್ಲ, ‘ಮುಟ್ಟಿನ ಸ್ಯಾಲೆ ಕುರಿತೂ ಚಿಂತಿಸುತ್ತಿದೆ. ಏಕೆಂದರೆ ೨೦೦೦ನೇ ಇಸವಿಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಮುಟ್ಟಿನ ಟ್ಯಾಂಪೂನುಗಳಿಗೆ ೧೨% ಜಿಎಸ್ಟಿ ವಿಧಿಸಿದಾಗ; ಬ್ರಿಟನಿನಲ್ಲಿ ೨೦೧೪ರಲ್ಲಿ ಪ್ಯಾಡು-ಟ್ಯಾಂಪೂನುಗಳ ಮೇಲೆ ವ್ಯಾಟ್ ವಿಧಿಸಿದಾಗ ಮಹಿಳೆಯರಿಂದ ‘ಏಕ್ಸ್ ದಿ ಟ್ಯಾಂಪೂನ್ ಟ್ಯಾಕ್ಸ್, ‘ಸ್ಟಾಪ್ ಟ್ಯಾಕ್ಸಿಂಗ್ ಪಿರಿಯಡ್ಸ್ ಮುಂತಾದ ಅಭಿಯಾನಗಳು ನಡೆದವು. ಸರ್ಕಾರ, ಸಮಾಜಗಳು ಮೈ ಕೊಡವಿ ಎಚ್ಚೆತ್ತವು. ಈಗ ಭಾರತದಲ್ಲು ಸ್ಯಾನಿಟರಿ ನ್ಯಾಪ್ಕಿನ್‌ಗಳು ೧೨.೫% ಜಿಎಸ್ಟಿಗೆ ಒಳಗಾಗಿ ಇನ್ನಷ್ಟು ತುಟ್ಟಿಯಾಗಿ ವಿಸ್ತೃತ ಚರ್ಚೆ-ಹೋರಾಟ-ಅಭಿಯಾನಕ್ಕೆ ದಾರಿಯಾಗಿವೆ.

ಏನಾದರಿರಲಿ, ಅಧಿಕ ತೆರಿಗೆ ವಿಧಿಸುವ ಮೂಲಕ ಇಂಥದೊಂದು ಮುಕ್ತ ಚರ್ಚೆ ಏರ್ಪಡಲು ಸಹಾಯ ಮಾಡಿದವರಿಗೆ ಧನ್ಯವಾದಗಳು.
ಈ ಮೊದಲು ಆ ಮೂರು ದಿನ ಹೇಗೆ ನಿಭಾಯಿಸುತ್ತಿದ್ದರು? ಹೊರಗೆ ಉಳಿದು ಏಕಾಂಗಿಯಾಗಿ ಆರಾಮವಾಗಿ ಮೂರು ದಿನ ಕಳೆಯುತ್ತಿದ್ದರೋ, ಅಥವಾ ಹೊರಗೆ ಗೇಯಬೇಕಾದ ಕಷ್ಟಕುಲದ ಶ್ರಮಿಕ ಹೆಣ್ಮಕ್ಕಳು ಅದೊಂದು ಅನಿವಾರ್ಯ ಕರ್ಮವೆಂದು ಹೊರೆ ಹೊತ್ತು ತಿರುಗುತ್ತಿದ್ದರೋ? ಯಾರಿಗೂ ಗೊತ್ತಿಲ್ಲ, ಯಾಕೆಂದರೆ ಯಾವ ಅಜ್ಜಿ ಮುತ್ತಜ್ಜಿಯೂ ವಿವರವಾಗಿ ಇವನ್ನೆಲ್ಲ ಹೇಳಲೇ ಇಲ್ಲ. ಒಂದಾನೊಂದು ಕಾಲದಿಂದ ಮುಟ್ಟಿನ ಅವಧಿಯಲ್ಲಿ ಸಾಮಾನ್ಯ ಹೆಣ್ಮಕ್ಕಳ ಪರಿಸ್ಥಿತಿ ಏನಾಗಿತ್ತು ಎಂದು ಯಾವ ಸಾಹಿತ್ಯವೂ ಉಲ್ಲೇಖಿಸಿಲ್ಲ. ವರ್ಷಗಟ್ಟಲೆ ಕಾಡಿನಲ್ಲುಳಿದ, ತಿಂಗಳುಗಟ್ಟಲೆ ರಾವಣ ನಗರದಲ್ಲಿದ್ದ ಸೀತೆ ಮುಟ್ಟಾದಾಗ ಏನು ಮಾಡಿದಳೋ ರಾಮಾಯಣ ತಿಳಿಸುವುದಿಲ್ಲ.

ಅಮ್ಮ ಪರ್ರನೆ ತನ್ನ ಮೆತ್ತನ್ನ ಹಳೆ ಸೀರೆಯನ್ನು ಚೌಕುಳಿ ಆಕಾರಕ್ಕೆ ಹರಿದು, ಮಡಚಿ ತೊಡೆ ಸಂದಿ ಬೀಳದಂತೆ ಇಟ್ಟುಕೋ ಎಂದದ್ದು ಬಹುಶಃ ಮುಟ್ಟಿನ ಸ್ರಾವವನ್ನು ಹೇಗೆ ನಿಭಾಯಿಸುವುದು ಎನ್ನುವ ಕುರಿತು ಹೇಳಿಕೊಡುವ ಮೊದಲ ಮತ್ತು ಕೊನೆಯ ಪಾಠ. ಮೊದಮೊದಲ ದಿನಗಳಲ್ಲಿ ಅಮ್ಮನ ಮೇಲ್ವಿಚಾರಣೆ ಕೊಂಚ ಮಟ್ಟಿಗೆ ಇರುತ್ತದಾದರೂ ಬರಬರುತ್ತ ಅದು ಪ್ರತಿ ತಿಂಗಳ ಮಾಮೂಲಿ ರೇಜಿಗೆ, ರಗಳೆಯೆನಿಸಿಬಿಡುತ್ತದೆ. ಮೂರು ಪ್ಲಸ್ ಎರಡು ದಿನಗಳಲ್ಲಿ ತಾನು ಮೈಲಿಗೆಯವಳು ಎಂದು ಅವಳನ್ನು ನಂಬಿಸಿ ಮತ್ತಷ್ಟು ಕೀಳರಿಮೆ ಹುಟ್ಟಿಸಲಾಗುತ್ತದೆ. ಅಕಸ್ಮಾತ್ ಉಟ್ಟ ಬಟ್ಟೆ ರಕ್ತಕಲೆಯಾದರೆ ಅವಮಾನ. ಕನಿಷ್ಟ ಶುಚಿ, ಕಾಮನ್‌ಸೆನ್ಸ್ ಇಲ್ಲದ ಹೆಣ್ಣೆಂಬ ತಿರಸ್ಕಾರ. ಖಾಸಗಿ ಸ್ಥಳವಿರದ ಕಡೆ ಎಲ್ಲೆಲ್ಲೋ ಯಾವ್ಯಾವಾಗಲೋ ಮುಟ್ಟಾಗಿಬಿಟ್ಟರೆ ಕಂಗಾಲು. ಕರ್ಚೀಫು, ಕೈಗೆ ಸಿಕ್ಕ ಬಟ್ಟೆ, ಕಾಗದ, ಹತ್ತಿ ಏನೇನನ್ನೆಲ್ಲ ‘ಪ್ಯಾಡುಗಳಾಗಿಸಬೇಕಾದ ಅನಿವಾರ್ಯತೆ. ಮಳೆಗಾಲದಲ್ಲಿ ಬಟ್ಟೆ ಒಣಗದೇ ಕಮಟು ನಾತ ಸೂಸುವಾಗ ಎಲ್ಲರೆದುರಿಗೆ ಅದನ್ನುಟ್ಟು ಹೋಗುವುದು ಹೇಗೆಂದು, ಅಕಸ್ಮಾತ್ ಬಿಸಿಲು ಮುಖ ಕಂಡಾಗ ಹೊರಗೆ ಒಣಗಿಸುವುದು ಹೇಗೆಂದು ಮುಜುಗರ. ಕುಡಿಯಲೇ ನೀರು ಸಿಗದ ಊರುಗಳಲ್ಲಿ ಮುಟ್ಟಿನ ಬಟ್ಟೆ ತೊಳೆಯಲು ಅನುಭವಿಸಬಹುದಾದ ಕಷ್ಟ ಊಹಾತೀತ. ಹೊರಗೆ ತಿರುಗಾಡಲು ಹೋಗುವಾಗ, ಶಾಲೆಕಾಲೇಜುಕಚೇರಿಗೆ ಹೋಗುವಾಗ ಬಟ್ಟೆ ಬದಲಿಸಲು ಆಗದೇ, ಬದಲಿಸಿದರೆ ತೊಳೆಯಲಾಗದೇ, ಬಳಸಿದ್ದು ಬ್ಯಾಗಿನೊಳಗೆ ಇಟ್ಟುಕೊಳ್ಳಲಾಗದೆ, ಬಿಸಾಡಲಾಗದೇ .. ಅಯ್ಯಯ್ಯಯ್ಯೋ, .. ಯಾಕಾದರೂ ಈ ಕಾಲದಲ್ಲಿ ಹೊರಬಿದ್ದೆನೋ, ಯಾಕಾದರೂ ಹುಡುಗಿಯಾದೆನೋ ಅನಿಸುವಂತ ಮೂರು ದಿನದ ಅಪರಂಪಾರ ಕಷ್ಟ ಪರಂಪರೆ! ಇದು ಅನಾದಿಯಿಂದ ಹೆಣ್ಣು ಎದುರಿಸಿಕೊಂಡುಬಂದ ಒಳಸಂಕಟಗಳ ಸರಮಾಲೆ.

ಹೀಗಿರುತ್ತ ಬೇಕಾದಾಗ ಬಳಸಿ ಬಿಸಾಡುವ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಗೆ ಬಂದಾಗ ಸ್ವರ್ಗದಿಂದಿಳಿದು ಬಂದ ಒಂದು ವರದಂತೆ ಅದು ಹೆಣ್ಮಕ್ಕಳಿಗೆ ಕಂಡಿದ್ದರೆ ಅಚ್ಚರಿಯಿಲ್ಲ. ಹೆಣ್ಣು ಕಲಿಕೆ-ದುಡಿಮೆಗೆ ಮನೆಯಿಂದ ಹೊರಬೀಳುವುದು ಹೆಚ್ಚಾಗುತ್ತ ಹೋದಂತೆ ಯಾವ ಕಾನೂನೂ ಇಲ್ಲದೆ, ಯಾವ ಜಾಹೀರಾತೂ ಇಲ್ಲದೆ, ಹಳ್ಳಿ ದಿಲ್ಲಿಯೆನದೆ ಸರಸರ ಸ್ಯಾನಿಟರಿ ಪ್ಯಾಡಿನ ಜನಪ್ರಿಯತೆ ಏರಿಬಿಟ್ಟಿತು. ಅದರ ಇರವು-ಬಳಕೆ ಕುರಿತು ಎಲ್ಲ ವರ್ಗ-ವಯೋಮಾನದ ಹೆಣ್ಮಕ್ಕಳೂ ಅರಿತರು. ಎಲಎಲಾ! ಎಷ್ಟು ಸುಲಭ, ಎಷ್ಟು ನಿರಾಳ! ಶಿಕ್ಷಣ-ಉದ್ಯೋಗವೆಂದು ಹೊರಗೆ ಓಡಾಡುವವರಿಗೆ, ನೀರಿರುವವರಿಗೆ, ಇಲ್ಲದವರಿಗೆ, ತಿರುಗಾಟ ಅನಿವಾರ್ಯವಾದವರಿಗೆ ಬಳಸಿ ಬಿಸಾಡುವ, ಸುಲಭದಲ್ಲಿ ಹೊತ್ತೊಯ್ಯಬಲ್ಲ ನ್ಯಾಪ್ಕಿನ್ ತುಂಬ ಆಪ್ತವೆನಿಸಿ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿತು. ಅಪಾಯವೋ, ನಿರಪಾಯವೋ, ಹಿಂದೆಮುಂದೆ ಯೋಚಿಸದೇ ಅದರ ಸುಲಭ ಬಳಕೆಗೆ ಎಲ್ಲರೂ ಮಾರುಹೋದರು.

ಅದು ಹೆಣ್ಮಕ್ಕಳನ್ನು ಬಾಧಿಸುತ್ತಿದ್ದ ಪ್ರಜನನ ಅಂಗಗಳ ಸೋಂಕುರೋಗದ ಪ್ರಮಾಣವನ್ನು ಗಮನಾರ್ಹವಾಗಿ ಕುಗ್ಗಿಸಿತು. ಆ ಮೂರು ದಿನಗಳಲ್ಲೂ ಧೈರ್ಯವಾಗಿ ಹೊರಹೋಗಲು, ಮಾಮೂಲಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಆತ್ಮವಿಶ್ವಾಸ ತುಂಬಿತು. ೨೦೧೧ರ ಸರ್ವೇ ಪ್ರಕಾರ ಈಗ ಭಾರತದ ೧೨% ಹೆಣ್ಮಕ್ಕಳು ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾರೆ. ಈ ಆರು ವರ್ಷಗಳಲ್ಲಿ ಬಳಕೆದಾರರ ಸಂಖ್ಯೆ ಹೆಚ್ಚಾಗಿರಬಹುದು. ಈಗ ಒಂದಷ್ಟು ಮಹಿಳೆಯರಿಗೆ ಅದು ಅನಿವಾರ್ಯ ಅನಿಸಿರಲೂಬಹುದು.

ಆದರೆ ನಡುನಡುವೆ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಯ ಮಿತಿಗಳು, ಅದರಿಂದಾಗಬಹುದಾದ ತೊಂದರೆಗಳ ಬಗೆಗೆ ದೀರ್ಘ ಚರ್ಚೆ, ವಾದವಿವಾದವೂ ನಡೆಯಿತು. ಅದು ಈಗಲೂ ನಡೆಯುತ್ತಿದ್ದು ಅದನ್ನು ಗಮನಿಸಬಹುದು.

ಸ್ಯಾನಿಟರಿ ಪ್ಯಾಡಿನ ಕುರಿತು ಇರುವ ಮುಖ್ಯ ತಕರಾರುಗಳು ಹೀಗಿವೆ:

ಅದು ತುಟ್ಟಿ. ನಮ್ಮಲ್ಲಿ ಲಭ್ಯವಿರುವ ಉತ್ತಮ ನ್ಯಾಪ್ಕಿನ್‌ಗಳು ಎಷ್ಟು ತುಟ್ಟಿಯೆಂದರೆ ಮುಕ್ಕಾಲುಪಾಲು ಜನ ‘ಬಡತನ ರೇಖೆ ಹತ್ತತ್ತಿರ ಬದುಕುವ ಭಾರತೀಯರಿಗೆ ಅದು ಕೈಗೆಟುಕದಂತಾಗಿದೆ. ಈಗ ಭಾರತದ ೩೫.೫ ಕೋಟಿ ಮುಟ್ಟಾಗುವ ಮಹಿಳೆಯರಲ್ಲಿ ೭೦% ಮಹಿಳೆಯರು ಅಷ್ಟು ದುಡ್ಡು ಕೊಟ್ಟು ಪ್ಯಾಡ್ ಕೊಳ್ಳಲು ತಾವು ಸಮರ್ಥರಲ್ಲ ಎಂದೇ ಹೇಳಿದ್ದಾರೆ.

ಮತ್ತೊಂದು ಸಮಸ್ಯೆ ಬಳಸಿದ ಪ್ಯಾಡಿನ ವಿಲೇವಾರಿಯದು. ನಾವು ಕೊಳ್ಳುವ ಬ್ರ್ಯಾಂಡುಗಳ ಪರಿಸರ ಸ್ನೇಹಿ ವಿಲೇವಾರಿಯೆಂದರೆ ಬಳಸಿದ ನಂತರ ಪೇಪರಿನಲ್ಲಿ ಸುತ್ತಿ ಸಂಗ್ರಹಿಸಿ ಭೂಮಿಯೊಳಗೆ ಹೂಳುವುದು. ಪ್ರತಿತಿಂಗಳು ಭಾರತ ಒಂದು ಬಿಲಿಯನ್ (೧೦೦ ಕೋಟಿ) ಕರಗದ ನ್ಯಾಪ್ಕಿನ್ ಪ್ಯಾಡುಗಳನ್ನು, ೯೦೦೦ ಟನ್ ಕರಗದ ನ್ಯಾಪ್ಕಿನ್ ಕಸವನ್ನು ತನ್ನ ಪರಿಸರಕ್ಕೆ ಸೇರಿಸುತ್ತಿದೆ! ಮೊದಲೇ ನಮ್ಮ ಕಸ ವಿಲೇವಾರಿ ಅಭ್ಯಾಸಗಳು ಆರೋಗ್ಯಕರವಾಗಿಲ್ಲ. ಬಳಸಿ ಬಿಸಾಡುವ ವಸ್ತುವನ್ನು ಎಲ್ಲಿ ಬಿಸಾಡಿದೆ, ಏನಾಯಿತು ಎಂಬ ಬಗೆಗೆ ಯೋಚಿಸುವುದಿಲ್ಲ. ಎಲ್ಲೆಂದರಲ್ಲಿ ನ್ಯಾಪ್ಕಿನ್ ಬಿಸಾಡಿ, ಹಾದಿಬೀದಿಗಳಲ್ಲಿ ನಾಯಿಗಳು ಎಳೆದಾಡಿ, ಚಿಂದಿ ಆಯುವವರ ಕೈಗಳ ಗಲೀಜು ಮಾಡಿ, ಸಾರ್ವಜನಿಕ ಟಾಯ್ಲೆಟ್ಟಿನಲ್ಲಿ ತುಂಬಿ ಅವು ಕಟ್ಟಿಕೊಳ್ಳುವಂತಾಗಿ - ನ್ಯಾಪ್ಕಿನ್ ಸೃಷ್ಟಿಸುವ ಅಪಾಯ, ಅಧ್ವಾನಗಳೇನು ಕಡಿಮೆಯಿಲ್ಲ. ನಗರಗಳಲ್ಲಿ ಹೆಸರಿಗಾದರೂ ಕಸ ವಿಲೇವಾರಿಗೊಂದು ವ್ಯವಸ್ಥೆಯಿದೆ. ಆದರೆ ಶಾಲಾಕಾಲೇಜು-ಹೋಟೆಲು-ಮತ್ತಿತರ ಕಡೆಗಳಲ್ಲಿ ‘ಡಬ್ಬ’ಕ್ಕೆ ತುಂಬಿದ ನ್ಯಾಪ್ಕಿನ್ ಆಮೇಲೆ ಏನಾಗುತ್ತಿದೆ? ಹಳ್ಳಿಗಳ ದೇಶ ಭಾರತದಲ್ಲಿ ಗ್ರಾಮೀಣ ಕಸ ವಿಲೇವಾರಿಗೆ ಯಾವ ಖಾಯಂ ವ್ಯವಸ್ಥೆಯೂ ಇಲ್ಲ. ಅದರ ಕುರಿತು ಯಾವ ಸ್ವಚ್ಛ ಭಾರತ ಮಿಷನೂ ತಲೆ ಕೆಡಿಸಿಕೊಂಡಿಲ್ಲ. ಹಳ್ಳಿಗಳಲ್ಲಿ ಊರ ಹೊರಗಿನ ರಸ್ತೆ, ಮೈದಾನ, ತಿಪ್ಪೆ, ಕಾಡು, ಗುಡ್ಡಗಳಲ್ಲಿ ಪ್ಲಾಸ್ಟಿಕ್ಕೂ, ಅದರೊಳಗೆ ತುಂಬಿ ಚೆಲ್ಲಾಡಲ್ಪಟ್ಟ ಕಸದಲ್ಲಿ ನ್ಯಾಪ್ಕಿನ್ನುಗಳೂ ಕಾಣುತ್ತವೆ. ನ್ಯಾಪ್ಕಿನ್ನುಗಳು ಮಣ್ಣಲ್ಲಿ ಕರಗಲಾರವು. ಏಕೆಂದರೆ ಅವು ಲೀಕ್ ಪ್ರೂಫ್ ಆಗಲು ಪ್ಲಾಸ್ಟಿಕ್ ಹೊರಕವಚ ಹೊಂದಿವೆ. ಎಂದೇ ವರ್ಷಾನುಗಟ್ಟಲೆ ಹಳೆಯ ಮುಟ್ಟಿನ ಪಳೆಯುಳಿಕೆಗಳನ್ನು ನ್ಯಾಪ್ಕಿನ್ನುಗಳ ರೂಪದಲ್ಲಿ ಕಾಣುವಂತಾಗಿದೆ. ಅವನ್ನು ಸುಡುವುದೂ ಅಪಾಯ, ಯಾಕೆಂದರೆ ಪ್ಯಾಡಿನಲ್ಲಿರುವ ರೇಯಾನ್ ಡಯಾಕ್ಸಿನ್ ಎಂಬ ವಿಷಕಾರಕವನ್ನು ಹೊಂದಿದೆ. ಪ್ಯಾಡನ್ನು ಸುಟ್ಟಾಗ ಹೊರಸೂಸುವ ಡಯಾಕ್ಸಿನ್ ಪರಿಸರಕ್ಕೆ ಹಾನಿಕಾರಕವಾಗಿದೆ. ಅಕಸ್ಮಾತ್ ಸೋಂಕಿರುವ ರಕ್ತದ ಪ್ಯಾಡನ್ನು ತಿನ್ನುವುದು ಪಶುಪಕ್ಷಿಕ್ರಿಮಿಕೀಟಗಳಿಗೂ ಅಪಾಯಕಾರಿಯಾಗಿದೆ.

ನ್ಯಾಪ್ಕಿನ್ ತಯಾರಿಯ ಬಗೆಗೆ ಬಹುಪಾಲು ಜನರಿಗೆ ತಿಳಿದಿರುವುದಿಲ್ಲ. ಅದನ್ನು ಕಂಪನಿಗಳು ತಿಳಿಸುವುದೂ ಇಲ್ಲ. ಅದರಲ್ಲಿ ಬಳಸುವ ಹಲವು ಕಚ್ಛಾ ವಸ್ತುಗಳು ಪೆಟ್ರೋಲಿಯಂ ಹಾಗೂ ಅರಣ್ಯ ಉಪ ಉತ್ಪನ್ನಗಳು. ಹತ್ತಿ, ಪ್ಲಾಸ್ಟಿಕ್ ಮತ್ತು ಮರದ ಹೊಟ್ಟು-ತಿರುಳಿನಿಂದ ತಯಾರಾಗುವ ಸಿಂಥೆಟಿಕ್ ರೆಯಾನ್ ಬಳಸಿ ಅವನ್ನು ತಯಾರಿಸಲಾಗುತ್ತದೆ. ನ್ಯಾಪ್ಕಿನ್ ಬಳಕೆಯಿಂದ ಯೋನಿ ಸೋಂಕು, ತುರಿಕೆ, ಬಿಳಿ ಮುಟ್ಟು, ಫಂಗಸ್ ಸೋಂಕು ಉಂಟಾಗುವುದು ಈ ಕಚ್ಛಾವಸ್ತುಗಳಿಂದ. ಅದರಲ್ಲು ರಕ್ತ ಹೀರಿಕೊಳ್ಳುವುದು ವೇಗವಾಗಲೆಂದು ಬಳಸುವ ಪಾಲಿಆಕ್ರಿಲೇಟ್ ಜೆಲ್ ಮತ್ತಿತರ ರಾಸಾಯನಿಕಗಳು, ಲೀಕ್ ಪ್ರೂಫ್ ಆಗಲು ಬಳಸುವ ಪಾಲಿ ಇಥಿಲೀನ್, ಪರಿಮಳಕ್ಕೆಂದು ಬಳಸುವ ರಾಸಾಯನಿಕಗಳು ಈ ದುಷ್ಪರಿಣಾಮಗಳಿಗೆ ಕಾರಣವಾಗಿವೆ. ಅಲ್ಲದೆ ಒಬ್ಬ ಮಹಿಳೆ ಜೀವಿತಾವಧಿಯ ೩೦-೪೦ ವರ್ಷ ನಿರಂತರ ಡಯಾಕ್ಸಿನ್ ಸಂಪರ್ಕಕ್ಕೆ ಬರುವುದರಿಂದ, ಅದು ಯೋನಿಯ ಒಳ ಲೋಳ್ಪೊರೆಯ ಸಂಪರ್ಕಕ್ಕೆ ಬರುವುದರಿಂದ ಕ್ಯಾನ್ಸರ್ ರೋಗಕಾರಕವಾಗಬಹುದು ಎಂಬ ಶಂಕೆಯಿದೆ.

ಈ ವಾದಗಳಲ್ಲಿ ಹುರುಳಿರಬಹುದು, ಇಲ್ಲದಿರಬಹುದು ಆದರೆ ಹೆಣ್ಮಕ್ಕಳು ತುಟ್ಟಿಯಾದರೂ ನ್ಯಾಪ್ಕಿನ್ ಕೊಂಡು, ಬಳಸಿ, ಹೇಗೋ ವಿಲೇವಾರಿ ಮಾಡಿ ಎಷ್ಟು ಒಗ್ಗಿದ್ದಾರೆಂದರೆ ಅವರು ಮರಳಿ ‘ಬಟ್ಟೆಯ ದಿನಗಳಿಗೆ ಹೋಗಲಾರದವರಾಗಿದ್ದಾರೆ. ನಾವು ದಿನೇದಿನೇ ‘ಬಳಸಿ ಬಿಸಾಡುವ ವಸ್ತುಗಳ ದಾಸರಾಗುತ್ತಿದ್ದೇವೆ. ಅಪಾರ ಪ್ರಮಾಣದ ಮರುಬಳಸಲಾಗದ, ಪರಿಸರಕ್ಕೆ ಅಪಾಯಕಾರಿಯಾದ ಕಸ ಉತ್ಪತ್ತಿ ಮಾಡುತ್ತಿದ್ದೇವೆ. ಅದರ ಒಳಿತು ಕೆಡುಕುಗಳ ಬಗೆಗೆ ಕಿಂಚಿತ್ ಯೋಚಿಸದೆ ಈಗ ಬಟ್ಟೆಯಿಂದ ಪ್ಯಾಡಿಗೆ ಬಂದಿದ್ದೇವೆ. ಆದರೂ ಮರುಚಿಂತಿಸಬೇಕಾದ ಹೊತ್ತು ಬಂದಿದೆ.


ಹಾಗಾದರೆ ಪರಿಸರಸ್ನೇಹಿಯಾಗಿ ಹೇಗೆ ‘ಮುಟ್ಟ'ನ್ನು ನಿಭಾಯಿಸುವುದು?


ಇಡಿಯ ಮಹಿಳಾ ಸಂಕುಲಕ್ಕೇ ಅನ್ವಯವಾಗುವ ಏಕೈಕ ಪರಿಸರ ಸ್ನೇಹಿ, ದೇಹ ಸ್ನೇಹಿ ವಿಧಾನ ಇಲ್ಲ. ಅವರವರ ಆದ್ಯತೆ, ಅವಶ್ಯಕತೆ, ವಯೋಮಿತಿ, ಕೊಳ್ಳುವ-ಬಯಸುವ ಸಾಮರ್ಥ್ಯದ ಮೇಲೆ 3-4 ವಿಧಾನಗಳು ಲಭ್ಯವಿವೆ.


ಯಾರಿಗೆ ಸಮಯ, ನೀರು, ಸಹನೆ ಲಭ್ಯವೋ ಮತ್ತು ಸಾಧ್ಯವೋ ಅವರು ಹಳೆಯ ವಿಧಾನಕ್ಕೆ ಮರಳಬಹುದು. ಶುದ್ಧ, ಒಣ, ಹತ್ತಿಯ ಬಟ್ಟೆಗಳನ್ನು ಬಳಸಬಹುದು.

ಮದುವೆಗೂ ಮೊದಲು ಬಳಸಲು ಯುವಸಮುದಾಯಕ್ಕೆ ನ್ಯಾಪ್ಕಿನ್ ಉತ್ತಮ ಆಯ್ಕೆಯಾಗಿದೆ. ಅದಕ್ಕಾಗಿ ಸರ್ಕಾರ ಸಹಾಯ ಧನ ನೀಡಿ ಪರಿಸರಸ್ನೇಹಿ ನ್ಯಾಪ್ಕಿನ್‌ಗಳನ್ನು ಅತಿ ಕಡಿಮೆ ದರದಲ್ಲಿ ತಯಾರಿಸಲು ಉತ್ತೇಜಿಸಬೇಕು. ಅವಶ್ಯವಾಗಿ ನ್ಯಾಪ್ಕಿನ್‌ಗಳಿಗೆ ಸೂಕ್ತ ವಿಲೇವಾರಿ ವಿಧಾನ ತಿಳಿಸಿ ಹೇಳಬೇಕು. ತಮಿಳುನಾಡಿನ ಕೊಯಮತ್ತೂರಿನ ಅರುಣಾಚಲಂ ಮುರುಗನಾಥನ್, ಗೋವಾದ ಪಿಳ್ಗಾಂವ್ ಹಳ್ಳಿಯ ಸ್ವಸಹಾಯ ಸಂಘ ಸಹೇಲಿ ಮತ್ತಿತರರು ಕಡಿಮೆ ಬೆಲೆಯ ಪರಿಸರ ಸ್ನೇಹಿ, ಮಣ್ಣಿನಲ್ಲಿ ಕರಗುವ ನ್ಯಾಪ್ಕಿನ್ನುಗಳನ್ನು ತಯಾರಿಸುತ್ತಿದ್ದಾರೆ. ಗೋವಾ ಹಳ್ಳಿಯ ಮಹಿಳೆಯರು ೮ ದಿನದಲ್ಲಿ ಮಣ್ಣಿನಲ್ಲಿ ಕರಗುವ ನ್ಯಾಪ್ಕಿನ್ ತಯಾರಿಸಿರುವುದಾಗಿ ಹೇಳಿದ್ದಾರೆ. ಈ ಕುರಿತ ಸತ್ಯಾಸತ್ಯತೆಯನ್ನು ಸಂಶೋಧನೆಗೊಳಪಡಿಸಿ ಸರ್ಕಾರ ಸಹಾಯ ಧನ ಒದಗಿಸಿ ಉತ್ತೇಜಿಸಬೇಕು. ಸ್ಯಾನಿಟರಿ ನ್ಯಾಪ್ಕಿನ್ನಿನಂತೆಯೇ ಈ ಮಾತು ಮಕ್ಕಳಿಗೆ, ವೃದ್ಧರಿಗೆ ಬಳಸುವ ಪ್ಯಾಡಿಗೂ ಅನ್ವಯಿಸುತ್ತದೆ.

ಯೋನಿಯೊಳಗಿಟ್ಟುಕೊಳ್ಳುವ ಸಣ್ಣ ಕೊಳವೆಯಂತಹ ಟ್ಯಾಂಪೂನುಗಳು ಬಳಕೆಯಲ್ಲಿವೆ. ಆದರೆ ಕನ್ಯೆಯರಿಗೆ ಅದು ಸರಿ ಹೊಂದುವುದಿಲ್ಲ. ಅಲ್ಲದೆ ಅದಕ್ಕೆ ಬಳಸುವ ಕಚ್ಛಾವಸ್ತುಗಳು ಸ್ಯಾನಿಟರಿ ಪ್ಯಾಡಿನವೇ ಆಗಿದ್ದು ವಿಲೇವಾರಿ ಸವಾಲಿನದಾಗಿದೆ.


ಇದರ ಜೊತೆಗೆ ಕನ್ಯೆಯರಲ್ಲದ ಹೆಣ್ಮಕ್ಕಳು ಆರಾಮವಾಗಿ ಬಳಸಬಹುದಾದ ಒಂದು ಪರ್ಯಾಯವಿದೆ. ಅದು ‘ಮುಟ್ಟಿನ ಬಟ್ಟಲು ಅಥವಾ ‘ಮೆನ್‌ಸ್ಟ್ರುವಲ್ ಕಪ್. ಅದಕ್ಕೆ ಶಿ ಕಪ್, ಸಿಲ್ಕಿ ಕಪ್, ಗ್ರೀನ್ ಕಪ್, ದಿವಾ ಕಪ್ (ಕೆನಡ), ಮೂನ್ ಕಪ್ (ಯುಕೆ) ಮೊದಲಾದ ಬ್ರ್ಯಾಂಡ್ ಹೆಸರುಗಳಿವೆ.


ಮಕ್ಕಳಿಗೆ ಬಾಟಲಿ ಹಾಲು ಕುಡಿಸುವಾಗ ಬಳಸುವ ಸಿಲಿಕಾನ್ ನಿಪ್ಪಲ್ ನೋಡಿರುತ್ತೀರಿ. ಅಂಥದೇ ಮೆತ್ತನ್ನ ಆದರೆ ಧೃಢವಾದ ಮುಟ್ಟಿನ ಬಟ್ಟಲುಗಳು ಬಂದಿವೆ. ತಿರುಗಿಸಿಟ್ಟ ಗಂಟೆಯಾಕಾರದ ಇವುಗಳ ಬುಡದಲ್ಲಿ ಒಂದು ಚೊಟ್ಟು ಇರುತ್ತದೆ. ಒಂದು ಕಾಲನ್ನು ಕುರ್ಚಿ ಅಥವಾ ಕಮೋಡಿನ ಮೇಲಿಟ್ಟು ಇನ್ನೊಂದು ಕಾಲಿನ ಮೇಲೆ ನಿಂತು ಅದನ್ನು ಹಾಕಿಕೊಳ್ಳಬಹುದು. ತುದಿ ಮಡಚಿ ಯೋನಿಯೊಳಗೆ ತುಂಬಿ ಒಮ್ಮೆ ತಿರುಪಿದಂತೆ ಸರಿಸಿದರೆ ಮುಗಿಯಿತು, ಒಳಹೋಗಿ ಸರಿಯಾಗಿ ಹಿಡಿದು ಕೂರುತ್ತದೆ. ಅವರವರ ರಕ್ತಸ್ರಾವಕ್ಕೆ ತಕ್ಕಂತೆ ೪ ರಿಂದ ೧೨ ತಾಸಿಗೊಮ್ಮೆ ಅದನ್ನು ಬದಲಿಸಬೇಕಾಗುತ್ತದೆ. ಅದರ ಬುಡದ ನಿಪ್ಪಲಿನಂತಹ ಚೊಟ್ಟು ಎಳೆದರೆ ಹೊರಬರುತ್ತದೆ. ಹೊರತೆಗೆದು, ತೊಳೆದು ಮತ್ತೆ ಬಳಸಬೇಕು. ತಿಂಗಳ ಸ್ರಾವ ಮುಗಿದ ಕೂಡಲೇ ನೀರಲ್ಲಿ ಕುದಿಸಿ, ಒಣಗಿಸಿ, ಇಟ್ಟುಕೊಂಡರೆ ೧೦ ವರ್ಷದ ತನಕ ಬಳಸಬಹುದು.


ಅವರವರ ಎತ್ತರ, ಗಾತ್ರ, ಸ್ರಾವದ ಪ್ರಮಾಣದ ಮೇಲೆ ಭಿನ್ನ ಅಳತೆಯ ಕಪ್‌ಗಳು ಲಭ್ಯವಿವೆ. ಶಿ ಕಪ್ ೨೮ ಎಂಎಲ್ ಹಿಡಿಯುತ್ತದೆ. ದಿವಾ ಕಪ್ ೩೦ ಎಂಎಲ್. ಸಾಧಾರಣವಾಗಿ ತಿಂಗಳ ಸ್ರಾವ ೩೫ ಎಂಎಲ್ ಇರುತ್ತದೆ. ಅದು ೧೦-೮೦ ಎಂಎಲ್ ತನಕವೂ ಇರಬಹುದು. ಮಕ್ಕಳಾಗದ 30 ವರ್ಷ ವಯಸಿನೊಳಗಿನವರಿಗೆ ಸಣ್ಣ ಕಪ್ ಸರಿ ಹೊಂದುತ್ತದೆ. 30ರ ನಂತರ ನಾರ್ಮಲ್ ಡೆಲಿವರಿ ಆದವರು ಮೀಡಿಯಂ-ಲಾರ್ಜ್ ಕಪ್ ಬಳಸಬಹುದು. ಏನಾದರೂ ಸ್ರಾವದ ಸಮಯದಲ್ಲಿ ಪ್ರತಿದಿನ ಬೆಳಿಗ್ಗೆ ಒಮ್ಮೆ, ರಾತ್ರಿ ಒಮ್ಮೆ ಕಪ್ ಬರಿದುಮಾಡಿ ತೊಟ್ಟುಕೊಂಡರೆ ಸಾಕಾಗುತ್ತದೆ.


ಒಬ್ಬ ಮಹಿಳೆ ಸರಾಸರಿ ೩೦-೪೦ ವರ್ಷ ಮುಟ್ಟಿನ ಸ್ರಾವಕ್ಕೊಳಗಾಗುತ್ತಾಳೆ. ಇಡಿಯ ಜೀವಮಾನಕ್ಕೆ ೪ ಕಪ್ ಸಾಕು. ಒಂದರ ಬೆಲೆ ೫೦೦ ರೂಪಾಯಿ. ೧೦ ವರ್ಷಕ್ಕೆ ೫೦೦ ರೂಪಾಯಿ, ಒಂದು ವರ್ಷಕ್ಕೆ ೫೦ ರೂಪಾಯಿ, ತಿಂಗಳಿಗೆ ೪ ರೂಪಾಯಿ ಖರ್ಚು!


ಇದು ಐದಾರು ದಶಕಗಳಿಂದ ಅಮೆರಿಕ, ಕೆನಡ, ಯುಕೆ ಮತ್ತಿತರ ಕಡೆ ಬಳಕೆಯಲ್ಲಿದೆ. ಭಾರತದಲ್ಲೂ ಬಳಸಲ್ಪಡುತ್ತಿದೆ. ಆದರೆ ವೈದ್ಯಕೀಯವಾಗಿ ಸುರಕ್ಷಿತವೆಂದು ಸೂಚಿಸಲ್ಪಟ್ಟರೂ ಕನ್ಯತ್ವ ಹೋದೀತು ಎಂದು ಹೆದರಿ, ಮತ್ತಿನ್ನೇನೇನೋ ಆದೀತು ಎಂದು ಹೆದರಿ, ತನ್ನ ಅಂಗದೊಳಗೆ ತಾನೇ ಏನನ್ನೋ ತೂರಿಸಿ ಇಟ್ಟುಕೊಳ್ಳಲು ಹೆದರಿ ಮಹಿಳೆಯರು ಪ್ಯಾಡಿನಷ್ಟು ಸುಲಭವಾಗಿ ಅದಕ್ಕೆ ಒಗ್ಗಿಕೊಂಡಿಲ್ಲ. ಜೊತೆಗೆ ಪ್ರತಿ ತಿಂಗಳು ಸ್ಯಾನಿಟರಿ ಪ್ಯಾಡ್ ಮಾರಿದರೆ ಬರುವಷ್ಟು ಲಾಭ ೧೦ ವರ್ಷ ಬಾಳಿಕೆ ಬರುವ ಕಪ್ ಮಾರಿದರೆ ಬರುವುದಿಲ್ಲವಾದ್ದರಿಂದ ಕಂಪನಿಗಳು ತಯಾರಿಗೆ ಮುಂದೆ ಬರುತ್ತಿಲ್ಲ.


ಆದರೆ ಇದು ನಮ್ಮ ಭವಿಷ್ಯದ ಪರಿಣಾಮಕಾರಿ, ಸುರಕ್ಷಿತ, ಪರಿಸರ ಸ್ನೇಹಿ, ಕಾಸ್ಟ್ ಎಫೆಕ್ಟಿವ್ ಪರ್ಯಾಯ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಎಂದೇ ಸರ್ಕಾರ ಈ ಮುಂಚೆ ನಿರೋಧ್ ತಯಾರಿಸಿ ಪುಕ್ಕಟೆ ವಿತರಿಸಿದಂತೆ ಈ ಕಪ್‌ಗಳನ್ನೂ ತಯಾರಿಸಿ ಬಳಸಲು ಕೊಡುವುದು ಅವಶ್ಯವಾಗಿದೆ.


ಮುಟ್ಟು ಎನಲು ಹಿಂಜರಿಕೆ. ಮುಟ್ಟಿನ ಬಟ್ಟೆ ತೊಳೆದು ಬಿಸಿಲಿಗೆ ಒಣಗಿಸಲು ಹಿಂಜರಿಕೆ. ನಮ್ಮ ಅಂಗಾಂಗಗಳ ಮುಟ್ಟಿಕೊಳಲೂ ಹಿಂಜರಿಕೆ. ಅದರ ಬಗೆಗೆ ಮಾತನಾಡಲೂ ಹಿಂಜರಿಕೆ. ಏನು ಮಾಡುವುದೆಂದು ಕೇಳಲೂ ಹಿಂಜರಿಕೆ. ಹೇಳಿದ್ದನ್ನು ಕೇಳಿಸಿಕೊಳ್ಳಲೂ ಹಿಂಜರಿಕೆ. ಅನುಸರಿಸಲೂ ಅನುಮಾನ ಭರಿತ ಹಿಂಜರಿಕೆ.


ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು. ಪ್ಯಾಡು, ಟ್ಯಾಂಪೂನ್, ಕಪ್ಪುಗಳು ಅವರಿಗೆ ಮಾತ್ರ ಅಲ್ಲ, ಅವರನ್ನು ಹೆತ್ತ ಭೂಮಿಗೂ ಸ್ನೇಹಿಯಾಗುವಂತಾದೀತು.
****************************************************

ನಮ್ಹತ್ರ ನಡಿಯಲ್ಲ..

Sushma Rao

Yesterday at 1:20am


ಅಮ್ಮ ತನ್ನ ಡಾಕ್ಟರಿಗೆ ಹೇಳಿದ್ಲಂತೆ ಹೆಣ್ಣೇ ಬೇಕು ಅಂತ. .... ಹೆಣ್ಣೇ ಹುಟ್ಟೋದು ಅಲ್ವಾ ಅಂತ ತನ್ನ ಅತ್ತೆ ಯನ್ನೂ ಪೀಡಿಸಿದ್ಲಂತೆ.
ಆದ್ರೂ 'I hate amma' ಆ ದಿನಗಳಲ್ಲಿ ಮಾತ್ರ. ಅಮ್ಮನ ಮೇಲೆ ಸಿಟ್ಟು, ಅಸಹನೆ, ಅವಳಿಂದ ತಾನೆ ನಾನು ಹೆಣ್ಣಾಗಿದ್ದು..!
ನನಗಾಗ 11 ತುಂಬಿತ್ತು. ತುಂಬು ಕುಟುಂಬ...'ಬಡಕಲು ಕೋಲಿನಂತಿದ್ದ ನಾನು ಅಷ್ಟು ಬೇಗ ಋತುುಮತಿಯಾಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ
ಅಂದು ಸಂಜೆ, ಟೀವಿಯಲ್ಲಿ 'ನಾ ನಿನ್ನ ಬಿಡಲಾರೆ' ಸಿನಿಮಾ ಬರ್ತಾ ಇತ್ತು. ಚಿಕ್ಕಪ್ಪ ನ ತೊಡೆಯ ಮೇಲೆ ಕೂತ ನನಗೆ ಇದ್ದಕ್ಕೆ ಇದ್ದಹಾಗೆ ಚಡ್ಡಿ ಒದ್ದೆ ಯಾದಂತನ್ನಿಸಿ ಬಚ್ಚಲಿಗೆ ಹೋದರೆ...... .! ಕೆಂಪು ಕಲೆ. ರಕ್ತ.....! ಆಗಷ್ಟೇ ಕೆಲ ದಿನಗಳ ಹಿಂದೆ 'ಬಂಧನ ' ಫಿಲ್ಮ್ ನೋಡಿ ಅತ್ತಿದ್ದ ನನಗೆ ಖಾತ್ರಿಯಾಗಿತ್ತು.... ಇದೇನೋ ಕ್ಯಾನ್ಸರ್ರೇ ಸರಿ... ಇನ್ನು ಸ್ವಲ್ಪ ದಿನಕ್ಕೆ ರಕ್ತ ವಾಂತಿಯಾಗಿ ಸಾಯೋದೇ. ..!
ಗೊಳೋ ಎಂದು ಅಳು‌ತ್ತಾ ಬಂದವಳನ್ನು ಸಮಾಧಾನ ಮಾಡಲು ಎಲ್ಲರೂ ಕಲಿತ ಪಾಠವನ್ನೆಲ್ಲಾ ಉಪಯೋಗಿಸಿದರು. ಆದ್ರೂ ನಂಗೆ ಗೊತ್ತು... ನಂಗೆ ಬೇಜಾರಾಗ್ಬಾರ್ದೂ ಅಂತ ಹೇಳ್ತಾರೆ, but actually ನಂಗೆ ಕ್ಜನ್ಸರ್ರೇ...
ವಿಷಯ ಹಿಂಗಿಂಗೇ.... ಹಿಂಗಿಂಗೇ.... ಹಿಂಗಿಂಗೇ... ಅಂತ ಸಾಗರದಲ್ಲಿದ್ದ ಅಣ್ಣ ನಿಗೆ ಅಂದೇ ರಾತ್ರಿ ಕಾಗದ ಬರೆದೆ.... ನಾಳೆ ಶಾಲೆಗೆ ಹೋಗ್ತಾ ಪೋಸ್ಟ್ ಮಾಡೋದು ಅಂತ....
ರಾತ್ರಿಯೆಲ್ಲಾ ನಿದ್ರೆ ಇಲ್ಲಾ.... ಒಂಥರಾ ಕೆಟ್ಟ ಒದ್ದೊದ್ದೇ feeling...
ಮೂರು ದಿನ ಶಾಲೆಗೆ ರಜೆ ಅಂತ ಮರುದಿನ ಅಮ್ಮಾ ಹೇಳಿದಾಗ ಆಕಾಶ ಕಳಚಿ ಬಿದ್ದಿತ್ತು... ಅರೇ ವಾಲೀಬಾಲ್ ಟೀಮ್ ಗೆ selection ಇದೆ, ಶಾಲೆಗೇ ಹೋಗ್ದೇ ಇದ್ರೆ...!?
ಅತ್ತು ಕರೆದು ಎಲ್ಲಾ ಆದ್ರೂ use ಆಗ್ಲಿಲ್ಲ... 'ಹೋಗ್ಲಿ ತಗಳೆ ಮಾರಾಯ್ತಿ' ಅಂತ ಅಮ್ಮಮ್ಮ ಹೇಳ್ತಾಳೆ ಅನ್ನೋ last hope ಕೂಡಾ ಇಲ್ಲದಾಗಿತ್ತು.
ಮೊದಲ ಬಾರಿ, ಮುಟ್ಟಿನ ಬಟ್ಟೆ ತೊಳೆದಾಗ ವಾಕರಿಸಿದ್ದು ಸುಳ್ಳಲ್ಲ .... ಇದೇನು ಒಂದು ತಿಂಗಳಿಗೆ ಮುಗಿಯುವ ಕಥೆಯೇ....? ಪ್ರತೀ ತಿಂಗಳ ನರಕ, ತುಟಿ ಕಚ್ಚಿ ಬಿಕ್ಕುವಷ್ಟು ಹೊಟ್ಟೆ ನೋವು, ಜೊತೆಗೆ ಈ ಬಟ್ಟೆ ತೊಳೆಯೋ ವಾಸನೆ, ಅಸಹ್ಯ ಮತ್ತು ಉಮ್ಮಳಿಸಿ ಬರುವ ವಾಂತಿ....!
ಹಲವು ಬಾರಿ ಆಟದ ಮೈದಾನದಲ್ಲೋ, ಶಾಲೆಯ ದಾರಿಯಲ್ಲೋ ಕಾಲ ತನಕ ಹರಿಯುವಷ್ಟು ತೀವ್ರ ರಕ್ತ ಸ್ರಾವವಾಗಿ ಆದ embarassment ಇನ್ನೂ ಮರೆತಿಲ್ಲ....!
ಇದರ ಉಪಾಯವಾಗಿ ಮೇಲಿಂದ ಮೇಲೆ ಬಟ್ಟೆ ಪೇರಿಸಿ ಕೊಂಡು ಶಾಲೆಗೆ ಹೋಗುತ್ತಿದ್ದೆ. ಬೆಳಿಗ್ಗೆ 8 ರಿಂದ ಸಂಜೆ 4ರ ವರೆಗಿನ ಶಾಲೆ ಮತ್ತು ತೀವ್ರ ರಕ್ತ ಸ್ರಾವಕ್ಕೆ ಅದೊಂದೆ ಆಗ ಹೊಳೆದಿದ್ದು.. ಹೀಗೆ ಬಟ್ಟೆ ಪೇರಿಸಿ ನಡೆದು, ತೊಡೆಯ ಸಂದಿಯೆಲ್ಲಾ ಬೆವರಿಗೆ rashes ಆಗಿ..... ಯವ್ವಾ....
ಈಗಲೂ ಸೀರೆ ಊಟ್ಟಾಗ 'ಅಡ್ಡ ಕಾಲಿಟ್ಟು ನಡೀಬೇಡ' ಅಂತ ಅಮ್ಮ ಬೈತಾಳೆ. ಹೀಗೆ ಅಡ್ಡಗಾಲಿಟ್ಟು ನಡೆಯದೇ ಆಗ ಬೇರೆ ದಾರಿ ಇರಲಿಲ್ಲ.... ಈಗ ಅಭ್ಯಾಸ ವಾಗಿದೆ...!
ನನ್ನ ಕಡು ವೈರಿಗೂ ಈ ಪಾಡು ಬೇಡ ಅನ್ನಿಸಿದ್ದು ಆಗಲೇ... ಬಯಸೀ ಬಯಸೀ ಜೀವ ಕೊಟ್ಟು ಹಡೆದ ಅಮ್ಮನ್ನ hate ಮಾಡೋಕೆ ಶುರು ಮಾಡಿದ್ದೂ ಕೂಡಾ... ಅವಳಿಂದ ತಾನೆ ನಾನು 'ಹುಡುಗಿ' ಯಾಗಿದ್ದು....!!
ಕ್ರಮೇಣ whisper sanitary pad ಗಳು ಪರಿಚಿತ ವಾದವು. Whisper ultra ಮಾತ್ರ ನನ್ನ ಪಾಲಿಗೆ most amazing discovery...
ಬಟ್ಟೆ ಯನ್ನೂ ಬಳಸಿ sanitary pads ಗಳನ್ನೂ ಬಳಸಿದ generation ನಮ್ದು.... hygiene, health survey, western culture, eco friendly ಎಲ್ಲಾ ನಮ್ಹತ್ರ ನಡಿಯಲ್ಲ.......!
***************************************************************


"Why luxury tax is levied on sanitary napkins! Only rich women bleed? 


Nagarjun B. Rajashekar

July 5 at 4:00pm ·

Bengaluru: Women across the state have lashed out at Modi-led government for levying 12 percent tax on sanitary pads.

The enraged women have started campaign on social media, "Don't tax on my period" against the central government for causing injustice to women. Under GST, Kumkum and bangles have been made tax-free but the government has levied 12 percent tax on sanitary pads.


"Sex is a choice, but periods are not. When condom is tax free why can't napkins be?", women have raised their voice.


Renowned Gynecologist from Bengaluru Padmini Prasad lashed out at the central government for levying 12 percent tax on sanitary pads. "Even now women in rural areas cannot afford to buy sanitary pads. I support this campaign," she said.
Several women vented their anger against the present GST reform which PM Modi had labelled as "Good and Simple Tax." They also demanded that sanitary pads should be given at a subsidised rate instead of putting taxes on them.

One of the Twitter users commented, "The only explanation for sanitary napkins being taxed at 12 percent under GST is that the GST Council has 'only' men on it and men don't get periods."
Another woman commented, "About 80 percent of the Indian women can't afford proper menstrual hygiene.12 percent GST on sanitary napkins. 0 percent on sindoor, bangles and bindis. Do ask Mr Arun Jaitley why?"

Another woman supporting the campaign said, "Why luxury tax is levied on sanitary napkins! Only rich women bleed? Its high time we should know its an essential not luxury."

********************************************************

Now, if they roll it back, will you roll back your words too?
Preethi Nagaraj


July 8 at 5:25pm ·

Among other umpteen things that are present in a woman's handbag, is a precariously hidden wafer-thin sanitary pad that sits in some zipped compartment. I say precarious, because it is supposed to exist, but not be seen. For my generation, sanitary pad was a luxury as against torn parts of mum's soft cotton sarees which were well past their date of use. Those sarees were kept for the sole purpose of being used as menstrual clothes. When we started with our cycles, we looked at sanitary pads as 'ultimate comfort tools' that were also luxurious. Our convents distributed them for free. So, we would secretly hope that we could get a few from school since they were a rarity at home. They were reserved ONLY for journeys. Disposing them was an mission by itself. One of the most significant signs of having achieved economic prowess is that you could budget your sanitary pads when you got a salary. It was EMPOWERING to say the least. Not only buying, but also the comfort it gave of being able to travel despite having periods.
Today we have menstrual cups for sure, but they have a long way to tread before becoming a norm. But then our sanskari party wants us to use soft cotton strips of cloth again. Hope the women members of that party stop using all products such as makeup and medicines that use parts from cows in their manufacturing. Be bharatiya nari, be a sanskari.


Malavika Avinash was so happy to see you promote use of tampons and menstrual cups, as against sanitary pads in keeping with your party's decision to have high tax slab on pads . Now, if they roll it back, will you roll back your words too? :P

******************************************************

I have been widely misread, misinterpreted
Malavika Avinash with Sinu Joseph and 9 others.


Yesterday at 2:14pm ·

I have been widely misread,misinterpreted, misquoted & misunderstood since yesterday. An issue that is best grasped by women has even been politicised by some men on social media. To begin with, #GST has brought down taxes on sanitary pads-what used to be 14.5%Vat+other indirect taxes, has come down to a flat 12% GST. Issues of Functionality is what compelled us to move from cloth to pads. Never once have I said let's return to cloth or do not use sanitary pads. I have used pads as much as any other girl or woman has. The choice I believe, ultimately should be with the woman. The question also is how do you dispose the sanitary waste that is generated by the pads? FMCG companies do find us, developing countries, to be a dumping ground for pads that the west has moved on from, to tampoons & cups which we perhaps also need to adapt to with the changing times.
ನೆನ್ನೆಯಿಂದ ನನ್ನ ನಿಲುವಿನ ಬಗೆಗೆ ತಪ್ಪು ತಿಳುವಳಿಕೆ, ತಪ್ಪುಗ್ರಹಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೆಣ್ಣುಮಕ್ಕಳು ಅತಿಹೆಚ್ಚು ಗ್ರಹಿಸಿಕೊಳ್ಳಬಲ್ಲ ವಿಚಾರಕ್ಕೆ ಕೆಲವು ಪುರುಷರು ರಾಜಕೀಯ ಬಣ್ಣ ಕಟ್ಟುತ್ತಿರುವುದು ಇನ್ನೂ ವಿಶೇಷ. ಮೊದಲಿಗೆ, ಈ ಹಿಂದೆ ಇದ್ದ ೧೪.೫%ವ್ಯಾಟ್ ಮತ್ತಿತರ ತೆರಿಗಳಿಂದ ಜಿ ಎಸ. ಟಿ, ಈಗ ಸ್ಯಾನಿಟರಿ ಪ್ಯಾಡ್ಸ್ ಮೇಲಿನ ತೆರಿಗೆಯನ್ನು ೧೨%ಕ್ಕೆ ಇಳಿಸಿದೆ. ಪ್ರಾಯೋಗಿಕ ತೊಂದರೆಗಳಿಂದ ನಾವು ಬಟ್ಟೆಯನ್ನು ಬಿಟ್ಟು ಪ್ಯಾಡ್ಸ್ ಗಳನ್ನು ಉಪಯೋಗಿಸಲಾಂಭಿಸಿದು ಎಲ್ಲರಿಗೂ ಗೊತ್ತಿರುವ ಸತ್ಯ. ನಾನೆಲ್ಲೂ, ಎಂದೂ, ಬಟ್ಟೆಗೆ ಮರುಕಳಿಸೋಣ ಎಂದೋ, ಪ್ಯಾಡ್ಸ್ ಗಳನ್ನು ಬಳಸಬಾರದು ಎಂದೋ ಹೇಳಿಲ್ಲ. ನಾನೂ ಒಬ್ಪ ಹುಡುಗಿಯಾಗಿ, ಮಹಿಳೆಯಾಗಿ ಪ್ಯಾಡ್ಸನ್ನು ಬಳಸಿದ್ದೇನೆ. ಆಯ್ಕೆಯ ಸ್ವಾತಂತ್ರ್ಯ ಹೆಣ್ಣಿಗಿರಬೇಕೆಂಬುದು ನನ್ನ ನಂಬಿಕೆ. ಬಳಕೆಯಾದ ಪ್ಯಾಡ್ಸ್ ಗಳ ತ್ಯಾಜ್ಯ ನಿರ್ವಹಣೆಯೂ ಒಂದು ಸಮಸ್ಯೆಯೇ. ಮುಂದುವರೆದ ರಾಷ್ಟ್ರಗಳು ಪ್ಯಾಡ್ಸ್ ನಿಂದ ಮುಂದುವರೆದು ಟ್ಯಾಂಪೂನ್ ಮತ್ತು ಕಪ್ ಗಳಿಗೆ ಮಾರುಹೋಗಿದ್ದಾರೆ, ಬದಲಾಗುತ್ತಿರುವ ಕಾಲದೊಂದಿಗೆ, ಕ್ರಮೇಣ ನಾವೂ ನಮ್ಮನ್ನು ಅಂತಹ ಆಯ್ಕೆಗಳಿಗೆ ಅಳವಡಿಸಿಕೊಳ್ಳಲ್ಲಾರಂಭಿಸಬೇಕು.
******************************************************

Doctors, women activists oppose 12% tax on sanitary napkins



TNN | Jul 8, 2017, 08.39 AM IS


BENGALURU: "Sex is a choice, period is not". This hard-hitting statement has been going viral since the Centre introduced GST and levied a 12% tax on sanitary napkins. On Facebook, women have begun an online campaign, `Don't tax my period', to urge the government to withdraw the tax levied on sanitary pads.
Stating that the move will lead to unhygienic practices, many women's groups, gynaecologists and NGOs have been vociferous about their demand."What should be treated as a necessity has been taxed. In fact, it's the kumkum and bangles that are a choice, but they have been exempted from GST.Menstruation is my pride; my biological functioning, but not my choice. The government that talks about `Beti Bachao, Beti Padhao' does not seem to have respect for women. We will fight this till the government withdraws the GST on sanitary napkins," said K S Vimala of Janavadi Mahila Sanghatane that has been working on gender issues and women's rights. On Friday , the NGO held a protest in Gulbarga, opposing the move. Such protests will be be replicated across the state, said Vimala, voicing the concerns of many .
Swarna Venkataraman, a city-based entrepreneur is part of the online brigade opposing the move. "This is an issue of basic hygiene, something which is non-negotiable," she said, also pointing to the need to look into matters of sustainable menstruation products which too would come under the tax net. "There is a need to look into all the options available for sustainable menstruation," she said.
Top Comment


We must abolish sanitary napkins and use cloths which is washable and can be used for multiple times. Why are these women obsessed with western inventions ?Sathish S
In fact, protests by several women's groups have received the endorsement of doctors and gynaecologists. "Ideally, use of sanitary napkins should be incetivized. This kind of taxation will only take us back to unhygienic practices. In rural areas, many young girls do not have water to drink or wash, and use of sanitary napkin has been a boon in such places. Women shouldn't refrain from using pads now just because of the added financial burden," said Dr Hema Divakar, former president of The Federation of Obstetric and Gynaecological Societies of India, Karnataka chapter.
Dr Hema's hospital (Diva kar's Hospital) has been distributing Kanya Pads, a made-inIndia product, to create awareness about menstrual hygiene among girls in government school and, so far, 25,000 girls have benefited from the initiative. "We do haemoglobin checks on girls and explain to them the need to use pads. As we have sufficient stock, we may not be hit by GST immediately. Our intention is to make girls use pads. If they use them for a year, they won't stop using them," said Dr Hema.













Monday 5 June 2017

ರಂಗಶಂಕರದಲ್ಲಿ ಡಾ. ಶ್ರೀಪಾದ ಭಟ್ ನಾಟಕಗಳ ಉತ್ಸವ




||ಉದಯ ಗಾಂವಕಾರ
_________________________

ಪ್ರತಿಯೊಂದು ಅಭಿವ್ಯಕ್ತಿಯೂ ತನ್ನ ಉತ್ಕೃಷ್ಟ ಎತ್ತರವನ್ನು ತಲುಪಿದಾಗ ಕವಿತೆಯಾಗುತ್ತದೆ. ಡಾ. ಶ್ರೀಪಾದ ಭಟ್ಟರು ತನ್ನ ನಾಟಕಗಳನ್ನು ಪ್ರತಿಮೆಗಳ ಮೂಲಕ ಕಟ್ಟುತ್ತಾರೆ. ಎಲ್ಲವನ್ನೂ ಹೇಳದೇ ನೋಡುಗನ ಭಾವಲೋಕದಲ್ಲಿ  ದೃಶ್ಯಗಳನ್ನು ಮುಂದುವರಿಸುತ್ತಾರೆ. ಸಾಲುಗಳ ನಡುವಿರುವ ಅರ್ಥವನ್ನು ಹುಡುಕಾಡುತ್ತಾರೆ. ಸ್ನಿಗ್ಧ ದೃವದ ಹರಿವನ್ನು ಪ್ರತಿ ದೃಶ್ಯಕ್ಕೂ ಒದಗಿಸುತ್ತಾರೆ. ಅವರ ನಾಟಕಗಳೆಲ್ಲ ಚೆಂದದ ಕವಿತೆಗಳೇ!

ಶಿರಸಿಯ ಉರ್ದು ಶಾಲೆಯಲ್ಲಿ ಕನ್ನಡದ ಮಾಸ್ತರರಾಗಿರುವ ಶ್ರೀಪಾದರು ನಾಟಕವಾಡಲೆಂದೇ ಉಸಿರಾಡುವವರು. ಜಿ. ಎಸ್ ಅವಧಾನಿ, ಡಾ. ಆರ್ ವಿ ಭಂಡಾರಿಯಂತವರ ಒಡನಾಟದಲ್ಲಿ ತನ್ನ ಯೋಚನೆಗಳಿಗೆ ಸ್ಪಷ್ಟತೆಯನ್ನು ಪಡೆದುಕೊಂಡು ಎದೆಯ ತೇವದಲ್ಲಿ ಸಂವಹನ ನಡೆಸಲು ಸಾಹಿತ್ಯ, ನಾಟಕ ಮುಂತಾದ ಸೃಜನಶೀಲ ಅಭಿವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬ ತಿಳಿವನ್ನು ತಮ್ಮದಾಗಿಸಿಕೊಂಡವರು.
ತನ್ನ ಮಾಸ್ತರಿಕೆ ವೃತ್ತಿಯ ನಿಮಿತ್ತ ಹಾವೇರಿಯ ಶೇಷಗಿರಿಯಲ್ಲಿರುವಾಗಲೂ ಅಲ್ಲಿ ನಾಟಕದ ಕಂಪನ್ನು ಪಸರಿಸಿದ್ದು ಮಾತ್ರವಲ್ಲ. ಹಾವೇರಿಯನ್ನು ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಗುರುತಿಸಿಕೊಳ್ಳಲು ನೆರವಾಗುವಂತಹ ಶೇಷಗಿರಿಯ ರಂಗಮಂದಿರದ ನಿರ್ಮಾಣಕ್ಕೆ ಸ್ಪೂರ್ತಿಯಾದವರು .ಶ್ರೀಪಾದರು ಅಲ್ಲಿ ತನ್ನ ಶಾಲಾ ಮಕ್ಕಳಿಗಾಗಿ ಅವರು ಅನೇಕ ನಾಟಕಗಳನ್ನು ನಿರ್ದೇಶಿಸಿದರು. ಅವರು ನಿರ್ದೇಶಿಸಿದ `ದೇವರ ಕಾಡು’ ರಾಷ್ಟ್ರ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಮೊದಲ ಸ್ಥಾನ ಪಡೆಯಿತು. ಶ್ರೀಪಾದರು ನಿರ್ದೇಶಿಸಿದ ಕರ್ಣಭಾರ, ಚಿತ್ರಾ ನಾಟಕಗಳು ರಾಷ್ರೀಯ ನಾಟಕಶಾಲೆಯ ಭಾರತೀಯ ನಾಟಕ ಮಹೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಅವರ ಕಂಸಾಯಣ, ರೆಕ್ಕೆ ಕಟ್ಟುವಿರಾ, ಮಕ್ಕಳ ರವೀಂದ್ರ ನಾಟಕಗಳು ದೆಹಲಿಯ ಜಶ್ನೆ ಬಚಪನ್ ನಾಟಕೋತ್ಸವದಲ್ಲಿ ಪ್ರದರ್ಶಿತವಾಗಿವೆ. ಕನ್ನಡದ ಕಥನ ಕಾವ್ಯಗಳನ್ನು ರಂಗದ ಮೇಲೆ ಓದುವ ಕಾವ್ಯರಂಗ ಎಂಬ ಹೊಸ ರಂಗಮಾರ್ಗವನ್ನೇ ಕನ್ನಡ ರಂಗಭೂಮಿಗೆ ಶ್ರೀಪಾದನೀಡಿದರು. ನಾಟಕ ಅಕಾಡೆಮಿಯ ಸಿ.ಜಿ.ಕೆ ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿಗಳೂ ಸೇರಿದಂತೆ ಅನೇಕ ಪ್ರಶಸ್ತಿಗಳು ಶ್ರೀಪಾದರನ್ನು ಹುಡುಕಿಕೊಂಡು ಬಂದಿವೆ. ಸಮುದಾಯ ಚಳುವಳಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ತನ್ನ ತಿಳಿವು-ತೀವೃತೆಗಳನ್ನು ಹೆಚ್ಚಿಸಿಕೊಳ್ಳುತ್ತಲೇ ತನ್ನ ಕಸುಬುದಾರಿಕೆಯ ಮೂಲಕ ಸಮುದಾಯದ ಕಲಾಭಿವ್ಯಕ್ತಿಗೆ ಶ್ರೀಪಾದರು ಘನತೆಯನ್ನು ಒದಗಿಸಿರುವರು.

ಶ್ರೀಪಾದರು ಪೌರಾಣಿಕ ಕಥಾಭಾಗವೊಂದನ್ನು ಎತ್ತಿಕೊಂಡಾಗಲೂ ಸಮಕಾಲೀನ ವಿಷಯಗಳನ್ನು ಚರ್ಚಿಸುತ್ತಾರೆ. ಅದು ಬರಿಯ ಒಣ ಶಬ್ದಾಡಂಬರವಾಗದಂತೆಯೂ ನೋಡಿಕೊಳ್ಳುತ್ತಾರೆ. ಅವರ ಮಹಿಳಾ ಭಾರತ ನಾಟಕವು ವರ್ತಮಾನ, ಭೂತ ಮತ್ತು ಭವಿಷ್ಯತ್ತುಗಳನ್ನು ಒಂದಾಗಿಸುತ್ತಾ ಕಾಲದ ಎಲ್ಲೆಗಳನ್ನು ನಾಜೂಕಾಗಿ ಮುರಿಯುತ್ತದೆ. ಸಮುದಾಯ ರೆಪರ್ಟರಿಗಾಗಿ ಅವರು ನಿರ್ದೇಶಿಸಿದ ಮೃತ್ಯುಂಜಯ ನಾಟಕದಲ್ಲಿ ಶ್ರೀಪಾದರು ಬರೀ ಕಾಲದ ಮೇರೆಗಳನ್ನು ಮಾತ್ರ ಮೀರುವುದಿಲ್ಲ; ಭೌಗೋಳಿಕ ಗಡಿಗಳನ್ನೂ ಜನಹೋರಾಟದ ಮಹಾಯಜ್ಞ್ಷದಲ್ಲಿ ವಿಲೀನಗೊಳಿಸುತ್ತಾರೆ. ಮನುಷ್ಯನ ಸಣ್ಣತನಗಳು ಹೇಗೆ ಕಾಲದೇಶಗಳನ್ನು ಮೀರುತ್ತವೋ ಹಾಗೆ ಮನುಷ್ಯನ ಕಷ್ಟಗಳೂ ಕಾಲಾತೀತವೂ ದೇಶಾತೀತವೂ ಆಗಿರುತ್ತವೆ ಎಂಬುದನ್ನು ಸೂಚಿಸುತ್ತ ಅವರ ನಾಟಕಗಳು ನಮ್ಮ ಶತ್ರುವನ್ನು ಗುರುತಿಸಿಕೊಳ್ಳಲು ಸಮಸ್ತ ಮನುಷ್ಯ ಕುಲವೇ ಒಟ್ಟಿಗೆ ಸೇರಬೇಕೆಂಬ ಹೆಬ್ಬಯಕೆಯನ್ನು ವ್ಯಕ್ತಪಡಿಸುತ್ತವೆ.

ಶ್ರೀಪಾದರು ಒಬ್ಬರೇ ಇರುವವರಲ್ಲ. ನಾಲ್ಕು ಜನ ಸೇರಿದಲ್ಲೇ ಇರುವವರು. ಶಿಕ್ಷಕರಿಗಾಗಿ ನಡೆಯುವ ಕಾರ್ಯಾಗಾರಗಳಲ್ಲಿ, ನಾಟಕದ ಸೆಮಿನಾರು, ಚರ್ಚೆಗಳಲ್ಲಿ ಮಾತ್ರವಲ್ಲ ಬೀದಿ ಹೋರಾಟಗಳಲ್ಲೂ ಕಾಣಸಿಗುವವರು. ಸಮಯ ಸಿಕ್ಕಾಗ ಪಂಪನನ್ನೋ, ತಿರುಮಲೇಶರನ್ನೋ ಓದುತ್ತಾ, ಉಮೇದು ಬಂದಾಗ ಎಕ್ಕುಂಡಿಯವರನ್ನು ಹಾಡುತ್ತಾ, ಯಾವುದೋ ಊರಿನಲ್ಲಿ ಗುರುತೇ ಇಲ್ಲದ ಗಲ್ಲಿಯಲ್ಲಿ ಸಾಹಿತ್ಯ-ಸಂಸ್ಕೃತಿಗಳ ಮಾತಾಡುತ್ತಾ ಲೋಕವನ್ನೇ ಮರೆಯಬಲ್ಲವರು.

ಅವಧಿಯ ಜಿ. ಎನ್ ಮೋಹನರ ಸಹಕಾರದಲ್ಲಿ ಜೂನ್ 15, 16 ಮತ್ತು 17 ರಂದು ರಂಗಶಂಕರದಲ್ಲಿ ಡಾ. ಶ್ರೀಪಾದ ಭಟ್ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ. ಠ್ಯಾಗೋರರ ಕೆಂಪುಕಣಗಿಲೆ ಮತ್ತು ಚಿತ್ರಾ ಹಾಗೂ ಮಾಂಟೋನ ಮಿಸ್ಟೇಕ್ ಆಧರಿಸಿದ ನಾಟಕಗಳು ಅಲ್ಲಿ ಪ್ರದರ್ಶನಗೊಳ್ಳಲಿವೆ.

 ಶ್ರೀಪಾದರು ಈ ಗೌರವಕ್ಕೆ ತುಂಬು ಅರ್ಹರು.
____________________________________________



ನಾಟಕಗಳ ವಿಮರ್ಶೆ
ಚಿತ್ರಾ ನೃತ್ಯ ನಾಟಕ

ಮಿಸ್ಟೇಕ್

ಕೆಂಪು ಕಣಗಿಲೆ

ಚಿತ್ರಾ: ಮುಸುಕು ತೆಗೆದ ಮಾಯಾಂಗನೆ




ಅಹಲ್ಯಾ ಬಲ್ಲಾಳ್ 
ಕಣ್ಣ ಮುಂದೆಯೇ ಕಾಣಿಸುವಂಥದ್ದು ನಿಜವಾಗಿರಬೇಕಿಲ್ಲ. ಅದುಸೌಂದರ್ಯಎನ್ನುವ ಹೆಸರುಪಟ್ಟಿ ಹೊತ್ತ ಪ್ರದರ್ಶನ ಯಾ ಜಾಹೀರಾತು ಸರಕೇ ಆಗಿರಲಿ, ದೇಶದಲ್ಲಿ ನಡೆಯುವ ಆಗುಹೋಗುಗಳೇ ಆಗಿರಲಿ. ಪರದೆ ಸರಿಸಿದಾಗ ಗೋಚರವಾಗುವ ನಿಜಕ್ಕೆ ತಾನೆ ಮೌಲ್ಯವಿರುವುದು. ನೆಮ್ಮದಿ ತರುವಂಥದ್ದು ಅದೇ ಹೊರತು ಕಡ ತಂದಸೌಂದರ್ಯವಲ್ಲ.. ..

ಅನೇಕರಿಗೆ ಆಗುವಂತೆ ನನಗೂ ಹೀಗೆಲ್ಲಾ ಫಿಲಾಸಾಫಿಕಲ್ ಯೋಚನೆಗಳು ಆಗಾಗ ಸುಳಿದು ಹೋಗುವುದುಂಟು. ಸಲ ಮಾತ್ರ ಅದಕ್ಕೊಂದು ಬಲವಾದ ಕಾರಣವೂ ಇತ್ತು. ಸಂದರ್ಭ ತುಸು ಅನಿರೀಕ್ಷಿತವೇ.
ಅಚಾನಕ್ಕಾಗಿ ಊರಿಗೆ ಹೋಗಬೇಕಾಗಿ ಬಂದಿತ್ತು. ಮಣಿಪಾಲ ಪದವಿಪೂರ್ವ ಕಾಲೇಜಿನ ಮೊದಲ ಮಹಡಿಯ ಸಭಾಭವನದಲ್ಲಿ ಎದುರಿನ ಜಮಖಾನೆಯ ಮೇಲೆ, ಲೈಟುಸ್ಟ್ಯಾಂಡಿನ ಪಕ್ಕದಲ್ಲಿ ಕೂತಿದ್ದೆ. ಬಣ್ಣಬಣ್ಣದ ಕನಸಿನಲ್ಲಿ ದೃಶ್ಯಗಳು ಒಂದರ ನಂತರ ಒಂದು ಅನಾವರಣಗೊಳ್ಳುತ್ತಿವೆಯೋ ಎಂಬಂತೆ ಭಾಸವಾಗುತ್ತಿದ್ದಚಿತ್ರಾನಾಟಕವನ್ನು ನೋಡುತ್ತಿದ್ದಂತೆ ಕಣ್ಮನಗಳಿಗೆ ಬೆಡಗು, ಹೊರಗೆ ಕತ್ತಲಲ್ಲಿ ಮಿಂಚು, ಮಳೆ-ಗುಡುಗು. ನನ್ನ ಪಾಲಿಗೆ ಒಂದು ಸರ್ರಿಯಲ್ ಅನುಭವ ಭಾಗ್ಯ!
ನಾಟಕವೆನ್ನುವ ಸುಳ್ಳನ್ನು ಸುಂದರವಾಗಿ ಕಟ್ಟಿಕೊಡುವ ಮೂಲಕ ಸತ್ಯದ ಶೋಧದಲ್ಲಿ ತೊಡಗುವ, ಪ್ರೇಕ್ಷಕರನ್ನೂ ತೊಡಗಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುವ ಡಾ. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ, ನೃತ್ಯನಿಕೇತನ ಕೊಡವೂರು ಇದರ ರಜತ ಹಬ್ಬದ ಅಂಗವಾಗಿ ಆಹ್ವಾನಿತರಿಗಾಗಿ ಅದೇ ಸಂಸ್ಥೆಯ ಕಲಾವಿದೆಯರು ಅಭಿನಯಿಸಿದ, ಚಿನ್ನಾರಿ ತಂಡ ಆಯೋಜಿಸಿದ ಮೊದಲ ಪ್ರಯೋಗವದು. ರವೀಂದ್ರನಾಥ ಟಾಗೋರರ ನೃತ್ಯರೂಪಕಚಿತ್ರಾವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಚೆಂದವಾಗಿ ರೂಪಾಂತರಿಸಿ ನಮ್ಮ ಕಾಲಕ್ಕೆ ತಂದವರು ಸುಧಾ ಆಡುಕಳ.
ಚಿತ್ರಾ ಅಥವಾ ಚಿತ್ರಾಂಗದೆ ಮಹಾಭಾರತದಲ್ಲಿ ಬರುವ ಒಂದು ಪಾತ್ರ. ಅರ್ಜುನ ತನ್ನ ಅಲೆದಾಟದಲ್ಲಿ ಈಶಾನ್ಯ ಭಾರತದ ಮಣಿಪುರವೆಂಬ ಸಹಜ ಸೌಂದರ್ಯದ ನಾಡಿಗೆ ಹೋದಾಗ ಅಲ್ಲಿಯ ಅರಸನ ಮಗಳನ್ನು ಪ್ರೇಮಿಸಿ ಮದುವೆಯಾಗಬಯಸುತ್ತಾನೆ. ಅರಸನೋ ಮಗಳನ್ನೂ ಅವಳಿಗೆ ಹುಟ್ಟುವ ಮಕ್ಕಳನ್ನೂ ಮಣಿಪುರದಿಂದಾಚೆಗೆ ಕರೆದುಕೊಂಡುಹೋಗುವಂತಿಲ್ಲ ಎಂಬ ಕರಾರು ಹಾಕುತ್ತಾನೆ. ಸರಿ ಎಂದು ಒಪ್ಪಿದ ಅರ್ಜುನ ಚಿತ್ರಾಳನ್ನು ಮದುವೆಯಾಗಿ ಬಬ್ರುವಾಹನ ಎಂಬ ಮಗನನ್ನು ಪಡೆಯುತ್ತಾನೆ.
ಪ್ರಸಿದ್ಧ ಕಥೆಗೆ ಹಲವು ಓದುಗಳಿವೆ. ಟಾಗೋರರು ಅದನ್ನು ಒಂದು ಸುಂದರ ಶೃಂಗಾರ ಕಥಾನಕವಾಗಿ ಕಂಡಿದ್ದಾರೆ. ಕುವೆಂಪುರವರ ಚಿತ್ರಾಂಗದಾ ಕೃತಿಯಲ್ಲಿ ಅರ್ಜುನನಿಲ್ಲದೆ ಚಿತ್ರಾಂಗದೆ ಕಳೆದ ದಿನಗಳ ವರ್ಣನೆಯಿದೆ. ನಮ್ಮ ಯಕ್ಷಗಾನ ಮತ್ತು ಚಲನಚಿತ್ರಗಳಲ್ಲಿ ಬಬ್ರುವಾಹನ-ಅರ್ಜುನ ಮುಖಾಮುಖಿಯ ಹಿನ್ನೆಲೆಯಲ್ಲಿ ಚಿತ್ರಾಂಗದೆ ಸಾಕಷ್ಟು ಜನಪ್ರಿಯಳೇ. ನಿರ್ದೇಶಕ ಋತುಪರ್ಣೋ ಘೋಷ್ಚಿತ್ರಾಂಗದಾ: ಕ್ರೌನಿಂಗ್ ವಿಶ್ಎಂಬ ಸಿನೆಮಾದಲ್ಲಿ ಲೈಂಗಿಕ ಅಸ್ಮಿತೆಯ ಆಯಾಮವನ್ನು ಚಿತ್ರಿಸಿದ್ದಾರೆ. ಜಗತ್ತಿನಾದ್ಯಂತ ರಬೀಂದ್ರ ಸಂಗೀತ ಮತ್ತು ಇತರ ಪ್ರಕಾರಗಳ ಸಂಗೀತದೊಂದಿಗೆ ಮೂಲ ಬಂಗಾಳಿ ಹಾಗೂ ಬೇರೆ ಭಾಷೆಗಳಲ್ಲಿ ನೃತ್ಯರೂಪಕದ ಅನೇಕ ಉತ್ತಮ ಪ್ರದರ್ಶನಗಳಾಗಿವೆ.
ಹೀಗೆ ಸಮಾಜೋ-ರಾಜಕೀಯ ನೆಲೆ (ಹಸ್ತಿನಾಪುರದ ಸಾಮ್ರಾಜ್ಯ-ಮಣಿಪುರದ ಬುಡಕಟ್ಟು ಜನಾಂಗ), ಲಿಂಗಾಧಾರಿತ ನೆಲೆ (ಸ್ತ್ರೀ-ಪುರುಷ), ಹೆಣ್ಣೊಬ್ಬಳ ಜೀವನ ಪಯಣದ ನೆಲೆ (ಪುತ್ರಿ-ಪ್ರೇಯಸಿ-ಪತ್ನಿ-ತಾಯಿ-ಸಂಗಾತಿ), ಅಧ್ಯಾತ್ಮಿಕ ನೆಲೆ ಇತ್ಯಾದಿಯಾಗಿ ಇದರ ಅರ್ಥೈಸುವಿಕೆಗೆ ಅವಕಾಶವಿದೆ.ಟಾಗೋರರ ಮೂಲ ನಾಟಕವನ್ನು ಹಾಗೇ ಓದಿದಾಗಲೂ ಹಲವಾರು ಸಮಕಾಲೀನ ವ್ಯಾಖ್ಯಾನಗಳು ಸಾಧ್ಯವಾಗುವಂತಿತ್ತು. ಮೂಲದಲ್ಲಿಯ ಅರ್ಜುನ ಚಿತ್ರಾ ಸಂಬಂಧದ ಸಾಂಸಾರಿಕ ಕಥನವನ್ನು ಹೆಚ್ಚು ಲಂಬಿಸದೇ ಚಿತ್ರಾಳ ಒಳಹೊರಗಿನ ಹೊಯ್ದಾಟದಲ್ಲಿ ಆಕೆ ಪಡೆದ ಗೆಲುವು ಯಾವುದು ಅನ್ನೋದನ್ನು ಮುನ್ನೆಲೆಗೆ ತಂದೆಎನ್ನುತ್ತಾರೆ ನಿರ್ದೇಶಕರು.
ಪ್ರಯೋಗದಲ್ಲಿ ನೃತ್ಯ ಮತ್ತು ನಾಟಕ ಎರಡರ ಅಂಶಗಳೂ ಇರುತ್ತವೆ ಎಂಬುದು ಮೊದಲೇ ತಿಳಿದಿದ್ದರಿಂದ ಕುತೂಹಲವಂತೂ ಇದ್ದೇ ಇತ್ತು. ನಾಂದೀಪದ್ಯದಲ್ಲಿ ಶಿವ ಪಾವರ್ತಿ ಹಾಗೂ ನರ್ತಕಿಯರುವಾಗರ್ಥಶ್ಲೋಕವನ್ನು ಅಭಿನಯಿಸಿದಾಗಲೇ ಪ್ರಸ್ತುತಿಯ ಪ್ರಮೇಯದ ಸೂಚನೆ ಸಿಕ್ಕಂತಾಯ್ತು. ಒಂದಕ್ಕೊಂದು ಬಿಡಿಸಲಾರದಂತೆ ಇರುವ ಮಾತು ಮತ್ತು ಅರ್ಥದಂತೆ ಸಹಬಾಳ್ವೆಯ, ಸಮಾನತೆಯ ಆಧಾರದ ಮೇಲೆ ನಿಂತಿರುವ ಪ್ರೀತಿಯ ದೃಷ್ಟಿಕೋನ ಇಲ್ಲಿದೆ.
ಅರ್ಜುನನಿಗೆ ಮನಸೋತು ಅವನ ಬಳಿ ಹೋಗುವ ಗಂಡು ವೇಷದ ಚಿತ್ರಾ ತಿರಸ್ಕೃತಳಾಗುವುದು, ಮದನನ ಸಹಾಯದಿಂದ ಆಕೆ ಅಪೂರ್ವ ರೂಪ ಪಡೆಯುವುದು, ಅರ್ಜುನ ಆಕೆಯನ್ನು ಮೋಹಿಸಿ ಆಕೆಯೊಡನೆ ಒಂದಾಗುವುದು, ಬಾಹ್ಯರೂಪ ತನ್ನ ನಿಜವಲ್ಲ ಎಂದು ಚಿತ್ರಾಳಿಗೆ ಅನಿಸಿ ಆಕೆ ಚಡಪಡಿಸುವುದು ಮತ್ತು ಕೊನೆಯಲ್ಲಿ ತನ್ನ ನಿಜಸ್ವರೂಪವನ್ನು ಬೆಳಕಿಗೆ ತರುವುದು.. ಹೀಗೆ ನಾಟಕದ ಕ್ರಿಯೆ ಮುಂದುವರಿಯುತ್ತದೆ.
ನೃತ್ಯ ಪ್ರಧಾನವಾದರೂ ರಂಗ ಪ್ರಸ್ತುತಿಯಲ್ಲಿ ನಾಟಕೀಯ ಅಂಶಗಳು ಹೇರಳ. ಚಿತ್ರಾಳ ಪಾತ್ರಕ್ಕಾಗಿ ಇಬ್ಬರು ನಟಿಯರ ಬಳಕೆ ಒಂದೇ ವ್ಯಕ್ತಿಯಲ್ಲಿ ಎರಡು ಮನೋಭಾವಗಳ ಚಿತ್ರಣವನ್ನು ಬಿಂಬಿಸಲು ತುಂಬ ಪರಿಣಾಮಕಾರಿಯಾದ ತಂತ್ರ. ರಂಗದ ಹಿಂದಿನ ಭಾಗದಲ್ಲಿ ಮೇಲೆ ತೂಗು ಹಾಕಿದ ದೊಡ್ಡ ಬಿಲ್ಲು; ರಂಗದ ಅಂಚಿನಲ್ಲಿ ನೆಲದ ಮೇಲೆ ಚಾಚಿಕೊಂಡಿದ್ದ ಬೃಹತ್ ಹೂಮಾಲೆ; ಮದನನಿಗೊಂದು ಹೂವಿನ ರಥ; ಅವನ ಸಹಚರರಿಗೆ ಹೂಬಾಣಗಳು; ಹೂವು ಪೋಣಿಸಿದ ಬಿಳಲುಗಳನ್ನು ಮುಖಕ್ಕೆ ಅಡ್ಡ ಹಿಡಿದುಕೊಂಡು ಹೆಜ್ಜೆ ಹಾಕುವ, ತನ್ಮೂಲಕ ಅನಾಯಾಸವಾಗಿ ವಿಶಿಷ್ಟ ಲೋಕವೊಂದರ ಅನುಭವವನ್ನು ಕಟ್ಟಿಕೊಡುವ ಪಾತ್ರಗಳು, ಸಮೂಹ ನರ್ತಕಿಯರ ವೇಷಭೂಷಣ….ರಾಜು ಮಣಿಪಾಲರ ರಂಗವಿನ್ಯಾಸ ನಾಟಕಕ್ಕೆ ಸೊಬಗು ಕೊಟ್ಟು ಒಟ್ಟು ಆಶಯಕ್ಕೆ ಪೂರಕವೇ ಆಗಿತ್ತು.
ತಂಡದ ನೃತ್ಯಗುರುಗಳಾದ ಮಾನಸಿ ಮತ್ತು ಸುಧೀರ್ ದಂಪತಿಗಳು ಪೋಷಿಸಿರುವ ಒಬ್ಬೊಬ್ಬ ವಿದ್ಯಾರ್ಥನಿಯೂ ಒಂದೊಂದು ಮುತ್ತು. ಅಚ್ಚುಕಟ್ಟಾದ ಭಂಗಿ, ಮುದ್ರೆ, ಹಾವಭಾವ, ಲಯಗಾರಿಕೆ, ಹೆಜ್ಜೆಗಳು, ಅತಿಯಾಗದ ಆಂಗಿಕಾಭಿನಯ, ಸ್ಥಿರ ಹಾಗೂ ಚರ ಗುಣದ ಸಮೂಹ ರಚನಾ ವಿನ್ಯಾಸಗಳು, ಮುಖ್ಯವಾಗಿ ಭರತನಾಟ್ಯ, ಜೊತೆಗೆ ಯಕ್ಷಗಾನ ಹಾಗೂ ಜಾನಪದ ನೃತ್ಯದ ಅಂಶಗಳು ಕಥೆಯನ್ನು ಸುಲಲಿತವಾಗಿ ಮುಂದುವರಿಸಿಕೊಂಡು ಹೋದವು.
ವಾಚಿಕದಲ್ಲಿ ಹಾಡು, ಸ್ವರ ಸಂಯೋಜನೆಗಳು, ಆಲಾಪ ಮತ್ತು ನೃತ್ಯದ ಬೋಲ್-ಗಳು ಧ್ವನಿಮುದ್ರಿತವಾಗಿದ್ದು ನಟಿಯರ ಮಾತು ಸಂಭಾಷಣೆ ಮಾತ್ರ ಲೈವ್ ಆಗಿತ್ತು. ಹೇಳಿ ಕೇಳಿ ನೃತ್ಯ ತಂಡ, ರಂಗದ ಮೇಲೆ ಕಾಣಿಸಿಕೊಂಡವರೆಲ್ಲರೂ ಸ್ತ್ರೀಯರೇ. ಅರ್ಜುನನೂ ಸೇರಿದಂತೆ ಪುರುಷ ಪಾತ್ರಗಳನ್ನೂ ಅವರೇ ನಿರ್ವಹಿಸಿದ್ದು- ನೃತ್ಯದ ಹಿನ್ನೆಲೆಯಿರುವ ನನಗಂತೂ- ಮೊದಲ ಒಂದೆರಡು ನಿಮಿಷಗಳ ನಂತರ ತೊಡಕು ಎನಿಸಲಿಲ್ಲ.
ವಸಂತನ ಚಿರಯೌವನವನ್ನು ಬಿಂಬಿಸಲೋ ಎಂಬಂತೆ ಪಾತ್ರವನ್ನು ಅಭಿನಯಿಸಿದ್ದು ನಗುಮೊಗದ ಮುದ್ದು ಪುಟ್ಟಿ. ಚಿತ್ರಾಳ ಅಂತರಂಗವನ್ನು ಇಬ್ಬರು ನಟಿಯರೂ ವ್ಯಕ್ತಪಡಿಸಿದ ರೀತಿ ತುಂಬ ಸಹಜವಾಗಿತ್ತು. ಸಂಘರ್ಷ ಇಂದಿನ ಕಾಲದ ಹೆಣ್ಣಿಗೂ ಪ್ರಸ್ತುತವೇ. ಅಷ್ಟೇ ಏಕೆ, ಇನ್ನೊಂದು ನೆಲೆಯಲ್ಲಿ ಹೊಯ್ದಾಟ ಮಾನವಕುಲಕ್ಕೇ ಸಂಬಂಧಿಸಿದ್ದು ಎನಿಸಿತು! ಕಲಾತ್ಮಕ ಪರದೆಯ ಪ್ರಾಪ್ ಎಷ್ಟೆಲ್ಲ ಅರ್ಥಗಳನ್ನು ಕೊಡುತ್ತದೆ ಎಂದು ಅದು ಬಳಕೆಯಾದ ದೃಶ್ಯಗಳಲ್ಲಿ ಅನಿಸದೇ ಇರದು. ಇಡೀ ನಾಟಕವನ್ನು ಒಂದು ನೋಟದಲ್ಲಿ ಸೆರೆಹಿಡಿ ಎನ್ನುವ ಸವಾಲೇನಾದರೂ ಎದುರಾದರೆ ನಾನಂತೂ ಪರದೆಯ ಆಚೆ ಈಚೆ ಇರುವ ಇಬ್ಬರು ಚಿತ್ರಾರ ದೃಶ್ಯವನ್ನೇ ಆಯ್ಕೆಮಾಡುವವಳು! ಅಷ್ಟರ ಮಟ್ಟಿಗೆ ನನಗೆ ಎರಡೂ ಸಂದರ್ಭಗಳು ಕಣ್ಣಿಗೆ ಕಟ್ಟಿದಂತಿವೆ.
ಟಾಗೋರರ ಕಾವ್ಯಭಾಗಗಳಿಗೆ ಸುಧಾ ನ್ಯಾಯ ಒದಗಿಸಿದ್ದಾರೆ: ವಾಚಿಕದ ಹಲವು ಭಾಗಗಳು ಉತ್ತಮ ಸಾಹಿತ್ಯಿಕ ಗುಣದಿಂದ ಕೂಡಿವೆ. ಧ್ವನಿಮುದ್ರಣದ ಮಿಕ್ಸಿಂಗ್-ನಲ್ಲಿ ಒಂದಿಷ್ಟು ಸುಧಾರಣೆಗೆ ಅವಕಾಶವಿದೆ ಅನಿಸಿತು. ಮೂಲ ಪಠ್ಯದಲ್ಲಿದ್ದ ಅರ್ಜುನನ ಪ್ರತಿಕ್ರಿಯೆಯ ಮುಂದುವರಿಕೆಯಾಗಿ ಇಲ್ಲಿ ಆತ ಚಿತ್ರಾಳಿಗೆ ಇನ್ನು ಮುಂದೆ ನಾನು ನಿನ್ನ ಸಹಚರ, ಎಲ್ಲ ಅರ್ಥಗಳಲ್ಲೂ ಸಂಗಾತಿ ಎಂದು ಹೇಳುವುದು ಇಂದಿನ ಕಾಲದ ಅಗತ್ಯವೇ ಆಗಿದೆ. ಅರ್ಜುನನ ಕೊನೆಯ ವಾಕ್ಯಗಳಿಗೆ ಇನ್ನಷ್ಟು ಒತ್ತು ಸಿಕ್ಕಿದ್ದರೆ ಇನ್ನೂ ಉತ್ತಮ ಪರಿಣಾಮ ಉಂಟಾಗುತ್ತಿತ್ತಲ್ಲವೇ ಎಂದು ಮೊದಲ ಪ್ರಯೋಗದಲ್ಲಿ ಅನಿಸಿತು.
ಟಾಗೋರರ ಮೂಲಕ ಶ್ರೀಪಾದ ಭಟ್ಟರು ಸೃಷ್ಟಿಸುವ ಚಿತ್ರಾ ಒಬ್ಬ ಅಸಾಮಾನ್ಯ ದಿಟ್ಟ ಹೆಣ್ಣು; ಲಾಲಿತ್ಯ ಹಾಗೂ ಆಂತರಿಕ ಬಲವನ್ನು ಏಕಕಾಲಕ್ಕೆ ಪ್ರತಿನಿಧಿಸುವವಳು. ಒಮ್ಮೆ ಹೋಗಿ ಅವಳನ್ನು ಭೇಟಿಯಾಗಿ, ದೃಶ್ಯಕಾವ್ಯವನ್ನು ಖುದ್ದು ಅನುಭವಿಸಿ!
ಚಿತ್ರಾನಾಟಕವನ್ನು ಉಡುಪಿಯ ಕೊಡವೂರಿನನೃತ್ಯನಿಕೇತನನೃತ್ಯ ಶಾಲೆಯ ಕಲಾವಿದರಿಗೆ ಡಾ.ಶ್ರೀಪಾದರು ನಿರ್ದೇಶಿಸಿದ್ದು ನಾಟಕ ಈಗಾಗಲೇ ದೆಹಲಿಯಲ್ಲಿ 2017 ಜನವರಿಯಲ್ಲಿ ನಡೆದಭಾರತ್ ರಂಗ ಮಹೋತ್ಸವದಲ್ಲಿ ಪ್ರದರ್ಶನಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.