Thursday 30 March 2017

ಭಾಸ್ಕರ ಗೌಡರಿಗೆ ‘ಸಹಯಾನ ಸಮ್ಮಾನ’ ಪ್ರದಾನ..



 ಪರದೆಯ ಹಿಂದೆ ದುಡಿದ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ- ಕಪ್ಪೆಕೆರೆ ಭಾಗವತರು.
“ಯಕ್ಷಗಾನ ಇಂದು ಹಲವು ಬದಲಾವಣೆ ಕಾಣುತ್ತಿದೆ. ಈಗ ಯಕ್ಷಗಾನ ಅತಿ ತ್ವರಿತಗತಿಯಲ್ಲಿದೆ. ಭಾವನೆ ಬೇಡ, ಅಭಿನಯ ಬೇಡ, ಭಾವನಾತ್ಮಕ ಮಾತು ಬೇಡ, ಔಚಿತ್ಯಪೂರ್ಣ ಪಾತ್ರ ಚಿತ್ರಣ ಬೇಡ ಎನ್ನುವಂತಾಗಿದೆ. ಯಾರು ಮಂಡಿ ಹಾಕುತ್ತಾರೋ, ಕುಪ್ಪಳಿಸುತ್ತಾರೋ ಅವರೇ ದೊಡ್ಡ ಕಲಾವಿದರು ಎನ್ನಿಸಿಕೊಳ್ಳುತ್ತಿದ್ದಾರೆ. ಒಂದು ಪ್ರಸಂಗವನ್ನು ರಾತ್ರಿಯಿಡೀ ವಿವರವಾಗಿ, ಸೂಕ್ಷ್ಮವಾಗಿ ಆಡುತ್ತಿದ್ದ ಕಾಲ ಇತ್ತು. ಇಂದು 4-5 ಪ್ರಸಂಗಗಳನ್ನು ಒಂದೇ ರಾತ್ರಿ ಆಡಿ ಮುಗಿಸುವ ಕಾಲ ಬಂದಿದೆ. ಇಂಥ ಸಂದರ್ಭದಲ್ಲಿ ಕಲಾವಿದನಾಗಲೀ ಹಿಮ್ಮೇಳದವರಾಗಲೀ ಪ್ರೇಕ್ಷಕರಿಗೆ ಏನನ್ನು ಕೊಡಲು ಸಾಧ್ಯ? ಹಿಂದೆ ಒಂದು ಪದ್ಯಕ್ಕೆ ಇಂತಿಷ್ಟೇ ಕುಣಿತ, ಹಿತಮಿತವಾದ ಮಾತು ಅಭಿನಯಕ್ಕೆ ಆದ್ಯತೆ ಭಾಷೆಯ ಸ್ವರಾಘಾತವನ್ನೂ ಒಳಗೊಂಡಂತೆ ಶಬ್ದೋಚ್ಛಾರಕ್ಕೆ ಮಾನ್ಯತೆ ಇತ್ತು. ಈಗ ಅದ್ಯಾವುದೂ ಇಲ್ಲ. ಯಕ್ಷಗಾನದ ನಿಜವಾದ ಆಸಕ್ತರು ಇದರಿಂದ ದೂರವಾಗುತ್ತಿದ್ದಾರೆ.” ಎಂದು ಹಿರಿಯ ಭಾಗವತರು, ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕøತರೂ ಆದ ಕಪ್ಪೆರೆಕೆ ಸುಬ್ರಾಯ ಭಾಗವತರು ಹೇಳಿದರು. ಅವರು ಕೆರೆಕೋಣದ  ಆರ್.ವಿ.ಭಂಡಾರಿ ನೆನಪಿನ ಸಂಸ್ಕøತಿ ಅಧ್ಯಯನ ಕೇಂದ್ರ ಸಹಯಾನದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ, ಮತ್ತು ಕನ್ನಡ ಸಂಸ್ಕøತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಹೆಸರಾಂತ ಯಕ್ಷಗಾನ ಕಲಾವಿದರೂ ಶಿಕ್ಷಕರೂ ಆದ ದಿ. ಜಿ.ಎಸ್. ಭಟ್ ನೆನಪಿನಲ್ಲಿ ಪ್ರತಿ ವರ್ಷ ನೀಡುವ 5000-00 ರೂ ಹಮ್ಮಿಣಿ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡ ಸಹಯಾನ ಸಮ್ಮಾನವನ್ನು ಯಕ್ಷಗಾನದ ವೇಷಭೂಷಣ ಮತ್ತು ಪ್ರಸಾದನ ಕಲಾವಿದ ಭಾಸ್ಕರ ಗೌಡ, ಆಡುಕುಳ ಇವರಿಗೆ ನೀಡಿ ಮಾತನಾಡುತ್ತಿದ್ದರು.
ಮುಂದುವರಿದು “ನಾನು ಬಾಲ್ಯದಲ್ಲಿ ಯಾರೊಡನೆ ಬೆರೆತೆನೋ ಯಾರಿಂದ ರಂಗಕ್ಕೆ, ಕತೆಗೆ ಬೇಕಾದ ಮೌಲ್ಯಗಳನ್ನು ತಿಳಿದುಕೊಂಡೆನೋ ಅಂತಹ ಆರ್.ವಿ.ಭಂಡಾರಿ ಮತ್ತು ಜಿ.ಎಸ್.ಭಟ್ ಧಾರೇಶ್ವರ ಇವರ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಖುಷಿಯ ಸಂಗತಿ. ಇವರಿಬ್ಬರೊಂದಿಗೆ ನಾನು ನನ್ನ 22 ನೇ ವಯಸ್ಸಿನಿಂದ ಸ್ನೇಹ ಗಳಿಸಿದ್ದೇನೆ. ಒಡನಾಡಿಯಾಗಿದ್ದೇನೆ. ಜಿ. ಎಸ್ ಭಟ್ ಅವರ ಹಲವು ನಾಯಕ, ಪ್ರತಿ ನಾಯಕ ಪಾತ್ರವನ್ನು ರಂಗದ ಮೇಲೆ ಕುಣಿಸಿದ್ದೇನೆ. ಹಿತಮಿತವಾದ ಕುಣಿತ, ಮಾತು, ಯಕ್ಷಗಾನಕ್ಕೆ ಒಗ್ಗುವ ದೇಹಸಿರಿ ನನಗೆ ಈಗಲೂ ನೆನಪಿನಲ್ಲಿದೆ. ಆರ್. ವಿ. ಭಂಡಾರಿಯವರಂತೆ ಕರ್ಣನ ಪಾತ್ರ ಕಟ್ಟಿಕೊಡುವವರು ಯಾರೂ ಇರಲಿಲ್ಲ. ಅದ್ಭುತ ಕಂಠ ಸಿರಿ ಅವರದು. ಪೌರಾಣಿಕ ಕತೆಯನ್ನು ಈಗಿನ ಹೊಸತನ ಸೇರಿಸಿ ಪಾತ್ರದ ಔಚಿತ್ಯಕ್ಕೆ ಚ್ಯುತಿ ಬರದಂತೆ ಜನಮೆಚ್ಚುಗೆ ಗಳಿಸಿದವರು. ದಿವಂಗತ ಜಿ. ಎಸ್. ಭಟ್ ಮತ್ತು ಆರ್. ವಿ. ಭಂಡಾರಿಯವರಲ್ಲಿ ಮಾತ್ರವಲ್ಲದೇ ಇಂದು ಸನ್ಮಾನ ಸ್ವೀಕರಿಸುತ್ತಿರುವ ಭಾಸ್ಕರ ಗೌಡರಲ್ಲಿಯೂ ಯಕ್ಷಗಾನದ ಪ್ರೀತಿ ಬದ್ಧತೆ, ಕಲ್ಮಶ ರಹಿತ ಪ್ರಾಮಾಣಿಕ ಮನೋಭಾವ ಇದೆ. ಎಲ್ಲರೂ ಹಿಮ್ಮೇಳ-ಮುಮ್ಮೇಳದವರಿಗೆ ಸನ್ಮಾನ ಮಾಡುತ್ತಾರೆ. ಆದರೆ ಪರದೆಯ ಹಿಂದೆ 40-45 ವರ್ಷಗಳ ಕಾಲ ದುಡಿದ ವೇಷಭೂಷಣ ಕಲಾವಿದರೊಬ್ಬರಿಗೆ ಸನ್ಮಾನ ನೀಡಿರುವುದು ಮಹತ್ವದ್ದಾಗಿದೆ. ವಸ್ತ್ರ ವಿನ್ಯಾಸ ನೋಡಿದೊಡನೆ ಆ ಪಾತ್ರ ಯಾವುದು ಎಂದು ಗುರುತಿಸುವ ರೀತಿಯಲ್ಲಿ (ಪ್ರತಿಯೊಂದು ಪಾತ್ರಕ್ಕೆ ಪ್ರತ್ಯೇಕ ವಸ್ತ್ರ ವಿನ್ಯಾಸ) ವೇಷ ಭೂಷಣ ಮತ್ತು ವಸ್ತ್ರ ವಿನ್ಯಾಸ ಮಾಡಿದರೆ ಭಾಸ್ಕರ ಗೌಡರವರು ಯಕ್ಷಗಾನದ ಚರಿತ್ರೆಯಲ್ಲಿ ಮೊದಲಿಗರಾಗಿ ಉಳಿಯುತ್ತಾರೆ. ಅವರಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಸಿಗಲಿ” ಎಂದು ಅವರಿಗೆ ಶುಭ ಹಾರೈಸಿದರು.
ಅಕಾಡೆಮಿ ಪ್ರಶಸ್ತಿ ಪಡೆದ ಸುಬ್ರಾಯ ಭಾಗವತರನ್ನು ಸಹಯಾನದ ಪರವಾಗಿ ವಿಷ್ಣು ನಾಯ್ಕ ಮತ್ತು ಇಂದಿರಾ ಭಂಡಾರಿ ಶಾಲು ಹೊದೆಸಿ ಅಭಿನಂಧಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಭಾಸ್ಕರ ಗೌಡರವರು “ಹಿಂದೆ ತಲೆಯ ಮೇಲೆ ಪೆಟ್ಟಿಗೆ ಹೊತ್ತುಕೊಂಡು ಹೋಗುವ ಕಾಲದಿಂದ ಈವರೆಗೆ ನಾನು ಶ್ರದ್ಧೆಯಿಂದ ಈ ಕೆಲಸ ಮಾಡಿದ್ದೇನೆ. ರಾತ್ರಿಯಲ್ಲಿ ಮುವತ್ತು ನಲವತ್ತು ಪಾತ್ರಗಳಿಗೆ ಬಣ್ಣ ಹಚ್ಚಿದ್ದಿದೆ. ಮಕ್ಕಳಿಗೂ ಅವರವರ ದೇಹ ರಚನೆಗೆ ಅನುಗುಣವಾಗಿ ವಸ್ತ್ರ ವಿನ್ಯಾಸ ಮಾಡಿದ್ದಿದೆ. ಈ ಕೆಲಸವನ್ನು ಸುಮಾರು 45 ವರ್ಷಗಲಿಂದ ಮುಂದುವರೆಸುತ್ತಲೆ ಬಂದಿದ್ದೇನೆ.” ಎಂದರು.
ಭಾಸ್ಕರ ಗೌಡರ ಕುರಿತು ಕಲಾವಿದ ಗಣೇಶ ಭಂಡಾರಿ ಅಭಿನಂದನಾ ಮಾತುಗಳನ್ನಾಡಿದರು. ಉದಯ ಜಿ. ಭಟ್ ಉಪಸ್ಥಿರಿದ್ದು ಮಾತನಾಡಿದರು. ಸಹಯಾನದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತನ್ನ ಬಾಲ್ಯದಲ್ಲಿ ಯಕ್ಷಗಾನ ವೇಷವನ್ನು ನಿರ್ವಹಿಸಿದ ಪರಿಯನ್ನು ನೆನಪಿಸಿಕೊಂಡರು.  ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ ನಾಯ್ಕ ವಂದಿಸಿದರು. ವಿಠ್ಠಲ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ವಿಶ್ವರಂಗಭೂಮಿ ದಿನದ ಭಾಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಮಂಜುಳಾ ಸುಬ್ರಹ್ಮಣ್ಯ ಅವರ ಅಭಿನಯದ “ರಾಧಾ” ನಾಟಕ ಅಭಿನಯಿಸಲ್ಪಟ್ಟಿತು. ಸುಧಾ ಆಡುಕಳ ಅವರು ರಚಿಸಿದ ನಾಟಕವನ್ನು ಡಾ. ಶ್ರೀಪಾದ ಭಟ್ ಅವರು ನಿರ್ದೇಶಿಸಿದ್ದರು. ವಿದ್ಯಾಧರ ಕಟತೋಕ ಅವರು ಸ್ವಾಗತಿಸಿದರೆ ಮಾಧವಿ ಭಂಡಾರಿ ನೆನಪಿನ ಕಾಣಿಕೆ ಕೊಟ್ಟು ವÀಂದಿಸಿದರು.


Wednesday 29 March 2017

ಜ್ಞಾನವು ಪ್ರಭುತ್ವದ ಹಂಗಿನಲ್ಲಿದೆ- ಜಿ. ರಾಜಶೇಖರ


ಬೆಳಕು
ವಿಶ್ವರಂಗಭೂಮಿ ದಿನಾಚರಣೆ

         ರಂಗದ ಮೇಲಿನ ಘಟನಾವಳಿಗಳಿಗೂ ಪ್ರೇಕ್ಷಕರಿಗೂ ನಡುವೆ ಒಂದು ಅಂತರವಿರುವುದು ಅತ್ಯಗತ್ಯ. ರಂಗದ ಮೇಲೆ ನಡೆಯುತ್ತಿರುವುದು ನಾಟಕ ಮತ್ತು ತಾವು ಪ್ರ್ರೇಕ್ಷಕರು ಎಂಬ ಅರಿವಿದ್ದರೆ ಮಾತ್ರ ನಾಟಕವನ್ನು ಮತ್ತು ಆ ಮೂಲಕ ಜೀವನವನ್ನು ವಿಮರ್ಶಕ ದೃಷ್ಟಿಯಿಂದ ನೋಡುವುದು ಸಾಧ್ಯ. ಭಾವಾತಿರೇಕದಿಂದ ವಿಚಾರಶಕ್ತಿಯನ್ನು ನಿಶ್ಚೇಷ್ಟಿತಗೊಳಿಸುವುದು ನಾಟಕ ಕಲೆಯ ಉದ್ದೇಶವಲ್ಲ. ನಾಟಕದ ಸದ್ಯದ ಗುರಿ ಮನರಂಜನೆಯಾದರೂ ಅಂತಿಮ ಗುರಿ ಜೀವನ ವಿಮರ್ಶೆಯಾಗಿದೆ ಎಂದು ಖ್ಯಾತ ಚಿಂತಕ, ವಿಮರ್ಶಕ ಜಿ. ರಾಜಶೇಖರ ನುಡಿದರು. ಕುಂದಾಪುರ ಸಮುದಾಯವು ರೋಟರಿ ಸನ್ ರೈಸ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವರಂಗಭೂಮಿ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬರ್ಟೋಲ್ಟ್ ಬ್ರೆಕ್ಟ್ ಅವರ ಎಪಿಕ್ ಥಿಯೇಟರ್ ಸಿದ್ಧಾಂತ ವಿವರಿಸುತ್ತಾ ಒಂದು ಸಾರ್ವತ್ರಿಕ ಸತ್ಯದ ಪ್ರತಿಪಾದನೆಯಲ್ಲಿಯೂ ಸಹ ಧರ್ಮಾಧಿಕಾರಿಗಳು ಹಾಗೂ ಶ್ರೀಮಂತ ವರ್ಗ ಹೇಗೆ ಪ್ರಭಾವ ಬೀರುತ್ತಾರೆ ಎನ್ನುವುದನ್ನು ಬ್ರೆಕ್ಟ್ ಬರೆದು ಆಡಿಸಿದ ಗೆಲಿಲಿಯೋ ನಾಟಕದ ದೃಶ್ಯ ಸಂಯೋಜನೆ ಮತ್ತು ಸಂಭಾಷಣೆಗಳನ್ನು ವಿಮರ್ಶಿಸುತ್ತಾ ಉಪನ್ಯಾಸ ನೀಡಿದರು. ಫ್ರಾನ್ಸಿನ ರಂಗಭೂಮಿ ಹಾಗೂ ಚಲನಚಿತ್ರ ನಟಿ ಇಸಾಬೆಲ್ಲೆ ಹಾಪರ್ಟ್ ವಿಶ್ವ ರಂಗಭೂಮಿ ದಿನದಂದು ನೀಡಿದ ಸಂದೇಶವನ್ನು ರಂಗ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿನ ಉಪನ್ಯಾಸಕರಾಗಿರುವ ವಿನಾಯಕ ಎಸ್ ಎಂ. ಅವರು  ವಾಚಿಸಿದರು. ನಂತರ ಸಮುದಾಯದ  ಉಪಾಧ್ಯಕ್ಷರಾದ ವಾಸುದೇವ ಗಂಗೇರ ಅವರ ನಿರ್ದೇಶನದಲ್ಲಿ ಸಮುದಾಯದ ಸಂಗಾತಿಗಳು ಅಭಿನಯಿಸಿದ ಬರ್ಟೋಲ್ಟ್ ಬ್ರೆಕ್ಟ್ ಅವರ ‘ಪಾಷಂಡಿಯ ಕೋಟು’  ಕಥೆಯ ರಂಗರೂಪವನ್ನು ಪ್ರದರ್ಶಿಸಲಾಯಿತು. ರೋಟರಿ ಸನ್‍ರೈಸ್ ಅಧ್ಯಕ್ಷರಾದ ನರಸಿಂಹ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಸಮುದಾಯದ ಅಧ್ಯಕ್ಷರಾದ ಉದಯ ಗಾಂವಕರ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರಂಗಭೂಮಿಗೆ ಸಮಾಜದ ಎಲ್ಲ ವರ್ಗಗಳನ್ನು ಒಳಗೊಳ್ಳುವ, ಪ್ರತಿನಿಧಿಸುವ ಮತ್ತು ಆ ಮೂಲಕ ಅವರೆಲ್ಲರ ಮಾತುಗಳನ್ನು ಆಡುವ ಶಕ್ತಿಯಿದೆ ಎಂದರು. ಮಾತನಾಡಿದರು. ರೋಟರಿ ಸನ್‍ರೈಸ್ ಕಾರ್ಯದರ್ಶಿ ದಿನಕರ ಶೆಟ್ಟಿ ಧನ್ಯವಾದ ಅರ್ಪಿಸಿದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರ್ ಕಾರ್ಯಕ್ರಮ ನಿರೂಪಿಸಿದರು.  ರೋಟರಿ ಸನ್‍ರೈಸ್ ಸದಸ್ಯರು, ಸಮುದಾಯದ ಸಂಗಾತಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಜಿ ವಿ ಕಾರಂತ, ಶಂಕರ ಆನಗಳ್ಳಿ, ಬಾಲಕೃಷ್ಣ, ಸಂದೇಶ ಹಾಗೂ ನರಸಿಂಹ ಸಹಕರಿಸಿದರು.


ಕಥಾರಂಗ
ಪಾಷಂಡಿಯ ಕೋಟು

ಕವಿಯಾಗಿ, ನಾಟಕಕಾರನಾಗಿ ಪ್ರಸಿದ್ಧರಾಗಿರುವ ಬರ್ಟೋಲ್ಟ್ ಬ್ರೆಕ್ಟ್ ಅನೇಕ ಸಣ್ಣ ಕತೆಗಳನ್ನೂ ಬರೆದಿದ್ದಾರೆ. ಪಾಷಂಡಿಯ ಕೋಟು ಅವರ ಒಂದು ಸಣ್ಣ ಕತೆ. ಪ್ರಕಾಂಡ ಪಂಡಿತ, ವಿಜ್ಞಾನಿ ಜೋರ್ಡೋನೋ ಬ್ರೂನೋ ಪಾಷಂಡವಾದಿಯೆಂದು ತೀರ್ಮಾನಿಸಿ ರೋಮೊನ ಇನಕ್ವಿಸಿಷನ್ ನ್ಯಾಯಾಲಯ ಅವರಿಗೆ ಮರಣದಂಡನೆಯನ್ನು ವಿಧಿಸುತ್ತದೆ. ಬ್ರೂನೋ ಸುಡುಗಂಬವನ್ನೇರುವ ಮೊದಲು ದೀರ್ಘಕಾಲದವರೆಗೆ ವಿಚಾರಣೆಯನ್ನೆದುರಿಸಬೇಕಾಗುತ್ತದೆ. ವಿಚಾರಣಾದೀನ ಖೈದಿಯಾಗುವ ಮುಂಚೆಯೇ ಬ್ರೂನೋ ಹೊಲಿಸಲು ಕೊಟ್ಟಿದ್ದ ಕೋಟಿನ ಬಾಬ್ತನ್ನು ಅವರಿಂದ ಪಡೆಯಲು ದರ್ಜಿ ಮೊಂಟೋವಿನ ಹೆಂಡತಿ ಮತ್ತು ಆ ಹಣವನ್ನು ಹಿಂದಿರುಗಿಸಲು ಬ್ರೂನೋ ಮಾಡುವ ಮನುಷ್ಯ ಪ್ರಯತ್ನಗಳನ್ನು ಬ್ರೆಕ್ಟ್ ಧರ್ಮಬೀರುಗಳ ಖಾಲಿತನದÀ ಹಿನ್ನೆಲೆಯಲ್ಲಿ ನಮ್ಮೆದುರು ಹಿಡಿಯುತ್ತಾರೆ. ಈ ಪುಟ್ಟ ಕತೆಯನ್ನು ನಿರ್ದೇಶಕ ವಾಸುದೇವ ಗಂಗೇರ ಯಕ್ಷಗಾನದ ಅರ್ಥಗಾರಿಕೆ, ಭಾಗವತಿಕೆಯ ವಿಶಿಷ್ಟ ಸ್ವರಸಂಚಾರವನ್ನು ಬಳಸಿಕೊಂಡು ನಟರಿಂದ ಓದಿಸುತ್ತಾರೆ. ಅಲ್ಲಲ್ಲಿ ಆಡುವಂತೆ, ಹಾಡುವಂತೆ ಮಾಡುತ್ತಾರೆ. ರಂಗಚಲನೆಗಳನ್ನು ಬಳಸಿಕೊಂಡು ದೃಶ್ಯಗಳನ್ನು ಸೃಷ್ಟಿಸುತ್ತಾರೆ. ಕುಂದಾಪುರ ಸಮುದಾಯ ಪ್ರತಿತಿಂಗಳೂ ನಡೆಸುತ್ತಾ ಬಂದಿರುವ ಕಥಾಓದು ಕಾರ್ಯಕ್ರಮಕ್ಕೆ ಈ ಚಿಕ್ಕ ಪ್ರದರ್ಶನದ ಮೂಲಕ ಹೊಸದೊಂದು ಆಯಾಮವನ್ನು ನಿರ್ದೇಶಕರು ನೀಡಿದ್ದಾರೆ. ರಂಗದ ಮೇಲೆ ವೆಂಕಟರಮಣ ನಾಯಕ, ಶಂಕರ ಆನಗಳ್ಳಿ, ಸಂಜೀವ ಹೊಸಾಡು, ಸಂಧ್ಯಾ ನಾಯಕ, ಚೈತ್ರಾ ಎಂ,  ಉದಯ ಗಾಂವಕಾರ. ಧನ್ಯಾ, ಅಜಾದ ಬೈಂದೂರ್, ಹಿತೇಶ್ ಕತೆಯನ್ನು ನೋಡುಗರಿಗೆ ದಾಟಿಸುವಲ್ಲಿ ಸಫಲರಾಗಿದ್ದಾರೆ. ಬಾಲಕೃಷ್ಣ ಎಂ ಇವರ ರಂಗಸಜ್ಜಿಕೆ, ಜಿ.ವಿ ಕಾರಂತ, ನಿಶಾಂತ್, ಸುಧಾಕರ ಕಾಂಚನ್ ಇವರ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕತೆಯೊಂದಿಗೆ ಚಲಿಸುವಂತೆ ಮಾಡುವಲ್ಲ್ಲಿ ನೆರವಾಗಿದೆ. ಇದೊಂದು ಪ್ರಯೋಗವಷ್ಟೇ ಎಂದು ನಿರ್ದೇಶಕರು ಮೊದಲೇ ಹೇಳಿದ್ದರೂ ಆನಂತರದಲ್ಲಿ ಇದೊಂದು ಉತ್ತಮ ಪ್ರಯೋಗ ಎಂಬುದು ಸಾಬೀತಾಯಿತು.

ನಿರ್ದೇಶಕ ವಾಸುದೇವ ಗಂಗೇರ
ಸಮುದಾಯದ ಮೂಲಕವೇ ರಂಗಭೂಮಿಯ ಆಸಕ್ತಿಯನ್ನು ಬೆಳಸಿಕೊಂಡ ವಾಸುದೇವ ಗಂಗೇರ ನಿನಾಸಮ್ ನಲ್ಲಿ ರಂಗಶಿಕ್ಷಣ ಪಡೆದವರು. ರಂಗಾಯಣದಲ್ಲಿ ನಟನಾಗಿ, ನಿರ್ದೇಶಕನಾಗಿ ಅನುಭವ ಗಳಿಸಿಕೊಂಡವರು. ನಡಿನ ಬೇರೆ ಬೇರೆ ರಂಗತಂಡಗಳಿಗೆ ನಿರ್ದೇಶನ ಮಾಡಿದ ಹೆಮ್ಮೆ ಇವರದು. ಧಾರವಾಡ ಸಮುದಾಯಕ್ಕಾಗಿ ವಾಸುದೇವರು ನಿರ್ದೇಶಿಸಿದ ಬುದ್ಧ ಪ್ರಬುದ್ಧ, ಕುಂದಾಪುರ ಸಮುದಾಯಕ್ಕೆ ನಿರ್ದೇಶಿಸಿದ ಕುಲಂ, ಸುಲ್ತಾನ್ ಟಿಪ್ಪು ಅಪಾರ ಜನಮನ್ನಣೆ ಗಳಿಸಿವೆ. ಮಕ್ಕಳಿಗಾಗಿ ಕುಂದಾಪುರ ಸಮುದಾಯವು ಸಂಘಟಿಸುವ ರಜಾಮೇಳದಲ್ಲಿ ವಾಸುದೇವ ಗಂಗೇರ ಪ್ರತಿವರ್ಷವೂ ಒಂದು ಮಕ್ಕಳ ನಾಟಕವನ್ನಾಡಿಸುತ್ತಾರೆ. ಕಥಾರಂಗ ವಾಸುದೇವರ ಪ್ರತಿಭೆಯನ್ನು ಮತ್ತೊಮ್ಮೆ ಸಬೀತುಪಡಿಸಿದೆ.




ಜಿ. ರಾಜಶೇಖರ
ಜಿ . ರಾಜಶೇಖರ ನಮ್ಮ ನಡುವಿನ ಪ್ರಭಾವಶಾಲಿ ಚಿಂತಕರು ಮತ್ತು ಪ್ರಖರ ವಿಮರ್ಶಕರು . ತಮ್ಮ ನುಡಿಯಲ್ಲಿರುವ ನಿಷ್ಠುರತೆಯನ್ನು ನಡೆಯಲ್ಲಿಯೂ ರೂಢಿಸಿಕೊಂಡವರು . ರಷ್ಯಾದಲ್ಲಿ ಕಮುನಿಷ್ಟರಿಂದಾದ ನರಮೇಧವನ್ನೂ, ಇಂದಿರಾ ಹತ್ಯೆಯ ನಂತರದ ಸಿಖ್ ಹತ್ಯಾಕಾಂಡವನ್ನೂ ಖಂಡಿಸಿದ ದನಿಯಲ್ಲೇ ಆನಂತರದಲ್ಲಿ ಗುಜರಾತನಲ್ಲಾದ ಹಿಂಸಾಚಾರವನ್ನು ಖಂಡಿಸಿದ್ದವರು . ಅಡಿಗರ ಕಾವ್ಯದ ಪ್ರತಿಗಾಮಿತನವನ್ನು ತಿರಸ್ಕರಿಸುತ್ತಲೇ ಅದರ ಹೊರತಾದ ಕಾವ್ಯದ ನಿಜವಾದ ಸತ್ವವನ್ನು ತೋರಿಸಿಕೊಡಬಲ್ಲರು . ಅವರ ಬಗ್ಗೆ ಲಂಕೇಶ್ ಹೀಗೆ ಹೇಳುತ್ತಾರೆ "ನಮ್ಮ ರಾಜಶೇಖರ ಎಷ್ಟು ಒಳ್ಳೆಯ ವಿಚಾರವಂತ . ನಿಷ್ಟುರತೆ ಮತ್ತು ಬದುಕಿನ ಬಗ್ಗೆ ಪ್ರೀತಿಯನ್ನು ಇಟ್ಟುಕೊಂಡವರೆಂದರೆ, ಅವರು ಶ್ರೇಷ್ಠ ಚಿಂತನಕಾರ ಎನ್ನುವುದು ನನಗೆ ಹೆಮ್ಮೆಯನ್ನುಂಟು ಮಾಡಿದೆ . "
ಇವರ ಬಿಡಿ ಲೇಖನಗಳ ಸಂಗ್ರಹ ವನ್ನು 'ಬಹುವಚನ ಭಾರತ' ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಅಭಿನವ ಪ್ರಕಾಶನ ಹೊರತಂದಿದೆ . ತಮ್ಮ ಅಪಾರ ಓದಿನಿಂದ ದಕ್ಕಿದ ಜ್ಞಾನವನ್ನು ಸೋಸಿ ಎಳೆಯರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ದಾಟಿಸುವ ಓಘದಲ್ಲಿ ಮಾತಾಡುವ ಹಿರಿಯರಾದ ಕವಿ ಹೃದಯದ ಸಮಾಜವಾದಿಯ ಜಿ. ರಾಜಶೇಖರರ ಮಾತು ನಮ್ಮ ಬದುಕನ್ನು ಮತ್ತು ಸುತ್ತಣ ಸಮಾಜವನ್ನು ಸ್ವಸ್ಥವಾಗಿಟ್ಟುಕೊಳ್ಳಲು ಅತ್ಯಂತ ಅವಶ್ಯಕ .

ಬರ್ಟೋಲ್ಟ್ ಬ್ರೆಕ್ಟ್

ಕನ್ನಡ ರಂಗಭೂಮಿಗೆ ಶೇಕ್ಸ್‍ಪಿಯರ್‍ನಷ್ಟೇ ಪರಿಚಿತನಾಗಿರುವ ಇನ್ನೊಬ್ಬ ನಾಟಕಕಾರ ಬ್ರೆಕ್ಟ್.  ಸಾಹಿತ್ಯದ ಕೆಲಸವು ಸಮಾಜಕ್ಕೆ ಕನ್ನಡಿ ಹಿಡಿಯುವುದಷ್ಟೇ ಅಲ್ಲ ಸಮಾಜವನ್ನು ತಿದ್ದುವುದೇ ಆಗಿದೆ ಎಂದವನು ಬ್ರೆಕ್ಟ್. ಸೊಕ್ರೆಟಿಸ್, ಕೊಪರ್ನಿಕಸ್, ಸಿದ್ಧಾರ್ಥಬುದ್ಧರಂತೆ ಪ್ರಶ್ನೆಗಳನ್ನು ಕೇಳಬೇಕೆಂದವನು. ಕೇಳಿಯೇ ತೀರಿದವನು. `ಪ್ರಶ್ನೆ ಕೇಳುವುದಕ್ಕೆ ಹೆದರದಿರು ಒಡನಾಡಿ..' ಎಂದ ಬ್ರೆಕ್ಟ್. ಪ್ರಶ್ನೆ ಎನ್ನುವುದು ಒಂದು ಆಯುಧ ಎಂದು ತಿಳಿದ.  ತನ್ನ ನಾಟಕ, ಕವಿತೆಗಳ ಮೂಲಕ ಪ್ರಶ್ನೆಗಳನ್ನು ಕೇಳುತ್ತಾ ಚರಿತ್ರೆಯ ಮಹಾನ್ ಪ್ರಶ್ನÀಕಾರರಲ್ಲಿ ಒಬ್ಬನಾದವನು. ಪ್ರಶ್ನೆ ಮಾಡುವುದರಿಂದ ಸರ್ವಾಧಿಕಾರಿಯನ್ನೂ ಅಲುಗಿಸಬಹುದು ಎಂದು ತಿಳಿದ ಬ್ರೆಕ್ಟ್ ಪ್ರಶ್ನಿಸುತ್ತಲೇ ಹೋದ. ಮಾತ್ರವಲ್ಲ, ಪ್ರಶ್ನಿಸುವಂತೆಯೂ ಪ್ರೇರೇಪಿಸಿದ. ಆತನ ಸರಿಸುಮಾರು 45 ನಾಟಕಗಳು, ಕೈಗೆ ಸಿಕ್ಕಿರುವ ಸಾವಿರಕ್ಕೂ ಹೆಚ್ಚು ಕವಿತೆಗಳು, ನೂರಾರು ರಂಗ ಗೀತೆಗಳು ಸುತ್ತಿಗೆಯಂತೆ ಕೆಲಸ ಮಾಡುತ್ತದೆ.
ವೈದ್ಯಕೀಯ ಶಿಕ್ಷಣ ಪಡೆದ ಬ್ರೆಕ್ಟ್ ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸೇನಾ ಶಿಬಿರಗಳಲ್ಲಿ ಕೆಲಸ ಮಾಡಬೇಕಾಯಿತು. ಕಣ್ಣೆದುರಿಗೆ ಕಂಡ ಧಾರುಣ ದೃಶ್ಯಗಳು ಬ್ರೆಕ್ಟ್ ನೊಳಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದವು. ಯುದ್ಧ ಮುಗಿದ ನಂತರ ಕಂಡಿದ್ದು ಬದುಕಿನಲ್ಲಿ ಅಂಧಕಾರ ತುಂಬಿದವರನ್ನು. ದೇಶಕ್ಕೆ ದೇಶವೇ ನಿರಾಶ್ರಿತರ ಶಿಬಿರದಂತೆ ಆಗಿತ್ತು. ಹಿಟ್ಲರ್ ಘರ್ಜಿಸತೊಡಗಿದ, ನಾಜಿ ಪಡೆ ಆರ್ಭಟಿಸತೊಡಗಿತು. ಬ್ರೆಕ್ಟ್ ಗೆ ಅನಿಸಿಹೋಯಿತು- ನಾನು ಬರೆದು ಸಮಾಜ ಹೀಗಿದೆ ಎಂದು ಸಾರುತ್ತ ಹೋದರಷ್ಟೇ ಸಾಲುವುದಿಲ್ಲ ಸಮಾಜವನ್ನು ರಿಪೇರಿಯೂ ಮಾಡಬೇಕು . ತತ್ವಜ್ಞಾನಿಗು ಜಗತ್ತನ್ನು ವಿವರಿಸಿದ್ದಾರಷ್ಟೇ ಸದ್ಯದ ತುರ್ತೆಂದರೆ ಜಗತ್ತನ್ನು ಬದಲಿಸುವುದು ಎಂಬ ಮಾಕ್ರ್ಸ್‍ನ ಮಾತುಗಳು ಬ್ರೆಕ್ಟ್‍ಗೆ ಪ್ರೇರಣೆಯಂತಿದೆ. ಸಮಾಜದ ನೋವಿನೊಳಗೆ ಕಳೆದು ಹೋಗಿಬಿಡುವುದಲ್ಲ, ಆ ನೋವನ್ನು ಅರಿತು ಅದನ್ನು ಬದಲಿಸುವುದು ಮುಖ್ಯ ಎಂದು ಕಂಡುಕೊಂಡ ಕಾರಣಕ್ಕಾಗಿಯೇ `ಎಪಿಕ್ ರಂಗ' ಶೈಲಿ ಸಹಾ ಕುಡಿಯೊಡೆಯಿತು. ಕಕೇಶಿಯನ್ ಚಾಕ್ ಸರ್ಕಲ್, ಥ್ರೀ ಪೆನ್ನಿ ಅಪೇರಾ, ಮದರ್ ಕರೇಜ್, ಗೆಲಿಲಿಯೋ ಹೀಗೆ ಸಾಲು ಸಾಲು ನಾಟಕಗಳು ಬ್ರೆಕ್ಟ್‍ನ ಕಾಣ್ಕೆಯನ್ನು ಸ್ಪಷ್ಟಪಡಿಸಿದವು. ಜರ್ಮನಿಯ ಬವೇರಿಯಾ ಪ್ರಾಂತ್ಯದಿಂದ ಹೊರಟ ಬ್ರೆಕ್ಟ್‍ನ ಬದುಕಿನ ಯಾತ್ರೆ ಕೊನೆಗೆ ದೇಶಭ್ರಷ್ಟನ ಹಣೆಪಟ್ಟಿ ಹೊತ್ತು ದೇಶ ದೇಶ ಅಲೆಯುವಂತೆ ಮಾಡಿತು. ಆ ನಂತರ ಅಮೆರಿಕಾದಲ್ಲೂ ಆತ ವಿಚಾರಣೆಯನ್ನು ಎದುರಿಸಬೇಕಾಗಿ ಬಂತು, ಆದರೆ ಬ್ರೆಕ್ಟ್ ಎಲ್ಲೆಡೆಯೂ ಬರೆದ, ಎಲ್ಲೆಡೆಯೂ ನಾಟಕ ಆಡಿಸಿದ, ಎಲ್ಲೆಡೆಯೂ ಪ್ರಶ್ನೆಗಳನ್ನು ಕೇಳಿದ. ಆದರೆ, ಯಾರಿಗೂ ಪ್ರಶ್ನೆಯಾಗಲಿಲ್ಲ.

ಸಮುದಾಯ ಬಿಇಎಂಎಲ್‍ನಗರ,KGF -ವಿಶ್ವ ರಂಗಭೂಮಿ ದಿನಾಚರಣೆ


ಸಮುದಾಯ ಬಿಇಎಂಎಲ್‍ನಗರ, ಕೆಜಿಎ¥sóï, “ವಿಶ್ವರಂಗಭೂಮಿ ದಿನಾಚರಣೆ” ಯನ್ನು ದಿನಾಂಕ 27.03.2017  sಸೋಮವಾರ  ಬಿಎಂಶ್ರೀ ಭವನದಲ್ಲಿರುವ ಗುಬ್ಬಿವೀರಣ್ಣ ರಂಗಮಂದಿರದಲ್ಲಿ  ನಡೆಸಲಾಯಿತು.  
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಈ ಬಾರಿ ಸನ್ಮಾನಕ್ಕೆ ಪಾತ್ರರಾದ ಹಿರಿಯ ರಂಗಕರ್ಮಿ ಹಾಗೂ ಸಮುದಾಯ ಕೆಜಿಎ¥sóï ಘಟಕದ ಸಂಸ್ಥಾಪಕ ಸಂಚಾಲಕರಾಗಿದ್ದ ಶ್ರೀ ಎಸ್.ಕೃಷ್ಣಮೂರ್ತಿ (ಕಿಟ್ಟಿ ಎಂದೇ ಪ್ರಖ್ಯಾತ) ಮಾತನಾಡುತ್ತಾ ಸಮುದಾಯದ ಇಲ್ಲಿನ ಘಟಕವನ್ನು ಆರಂಭಿಸಿದ ಬಗೆ ಮತ್ತು ಅಂದು ದೇಶದಲ್ಲಿ ಇದ್ದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಮುದಾಯದಂತಹ ಸಾಂಸ್ಕøತಿಕ ಸಂಘಟನೆಯೊಂದು ಕೆಜಿಎ¥sóïನ ರಂಗಭೂಮಿಗೆ ಅಧುನಿಕ ರಂಗಭೂಮಿಯ ಪರಿಚಯವನ್ನು ಮಾಡಿ ಕೊಟ್ಟಿದ್ದೇ ಕತ್ತಲೆ ದಾರಿ ದೂರ ನಾಟಕದ ಪ್ರದರ್ಶನದ ಮೂಲಕವೇ ಎಂಬುದು ಈಗ ಇತಿಹಾಸದ ಭಾಗವಾಗಿದೆ ಎಂದರು.00 ಇಂದು ಮಕ್ಕಳು ಶಾಲೆಯಲ್ಲಿನ ಓದು ಮತ್ತು ಗ್ಯಾಜೆಟ್‍ಲೋಕದಲ್ಲಿ ಮುಳುಗಿಹೋಗಿದ್ದಾರೆ.  ರಂಗಭೂಮಿಗೆ ಅವರನ್ನು ಕರೆತರುವ ಮೂಲಕ, ತಮ್ಮ ಸುತ್ತಲಿನ ಸಮಾಜವನ್ನು ನೋಡುವ ಬಗೆ ಮತ್ತು ಸವಾಲುಗಳನ್ನು ಎದುರಿಸಿ ಒಬ್ಬ ಪ್ರಜ್ಞಾವಂತ ನಾಗರೀಕರನ್ನಾಗಿ ಮಾಡುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಆದ ಕಾರಣ ತಮ್ಮ ಮಕ್ಕಳನ್ನು ರಂಗಭೂಮಿಗೆ ಕಳುಹಿಸಿಕೊಡಿ ಎಂದು ನೆರೆದ ಎಲ್ಲಾ ಪೋಷಕರಲ್ಲಿ ವಿನಂತಿಸಿದರು.
ಇನ್ನೊಬ್ಬ ಅತಿಥಿಯಾಗಿ ಮತ್ತು ಸನ್ಮಾನವನ್ನು ಸ್ವೀಕರಿಸಿದ ಶ್ರೀ ಬಿ.ಆರ್.ಸೆಲ್ವಪಿಳ್ಳೈ (ಶೆಲ್ಲಿ ಎಂದೇ ಪ್ರಖ್ಯಾತ) ಹಿರಿಯ ರಂಗಕರ್ಮಿ ಮತ್ತು ಈ ಘಟಕದ ಮಾಜೀ ಅಧ್ಯಕ್ಷರು ಮಾತನಾಡುತ್ತಾ ನಾನೂ ಕೂಡ ಕತ್ತಲೆ ದಾರಿ ದೂರ ನಾಟಕದ ಮೂಲಕ ನಾನೊಬ್ಬ ಮನುಷ್ಯನಾಗಿದ್ದು ಹಾಗೂ ನಮ್ಮ ಸುತ್ತಲಿನ ಸಮಾಜದಲ್ಲಿ ಎಂತೆಂತಹ ಮನುಷ್ಯರು ಇದ್ದಾರೆ ಅವರನ್ನು ನಾವು ಹೇಗೆ ನೋಡಬೇಕು ಎಂದು ಕಲಿಸಿದ್ದು ಸಮುದಾಯ ಎಂದು ಹೆಮ್ಮೆಯಿಂದ ಹೇಳುತ್ತೇನೆ, ರಂಗಭೂಮಿ ಎನ್ನುವುದು ಒಂದು ಚಳುವಳಿ ಇದರ ಮೂಲಕ ನಾವು ಸಮಾಜದ ನೋವು ನಲಿವುಗಳಿಗೆ ಪ್ರತಿಸ್ಪಂದಿಸಬಹುದಾಗಿದೆ. ಇಂದು ಬೆಮೆಲ್ ಖಾಸಗೀಕರಣಕ್ಕೆ ಜಾರುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅಂಗನವಾಡಿಯವರು ನಡೆಸಿದ ಹೋರಾಟದಂತೆ ಎಲ್ಲಾ ಬೆಮೆಲ್ ಕುಟುಂಬದವರು ಮುಖ್ಯವಾಗಿ ಮಹಿಳೆಯರು ಅನಿರ್ದಿಷ್ಟ ಹೋರಾಟವನ್ನು ರೂಪಿಸಿದರೆ ಎಂತಹ ಸರಕಾರವಾದರೂ ಕೂಡ ತಮ್ಮ ತೀರ್ಮಾನಗಳನ್ನು ಬದಲಿಸಲೇ ಬೇಕಾದಂತಹ ಅನಿವಾರ್ಯತೆ ಬರುತ್ತದೆ  ಎಂದರು. 
ಈ ಇಬ್ಬರು ಸನ್ಮಾನಿತರ ಕುರಿತು ಸಮುದಾಯ ಕರ್ನಾಟಕದ ರಾಜ್ಯ ಅಧ್ಯಕ್ಷರಾದ ಶ್ರೀ ಅಚ್ಯುತ ರವರು ಮಾತನಾಡುತ್ತಾ ಕೆಜಿಎ¥sóï ಸಮುದಾಯ ಘಟಕದ ಮಾತೃ ಸಂಸ್ಥೆಯಾಗಿದ್ದ ಕರ್ನಾಟಕ ಕಲೈ ಇಳೈಕ್ಯ ಮಂಡ್ರಮ್ ( ಕರ್ನಾಟಕ ಕಲೆ ಮತ್ತು ಸಾಹಿತ್ಯ ಮಂಡಳಿ ) ಸಮುದಾಯ ಘಟಕವಾಗಿ ರೂಪುಗೊಂಡ ಬಗೆಯನ್ನು ಹಾಗೂ ಅಂದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕತ್ತಲೆ ದಾರಿ ದೂರ ನಾಟಕ ನಮ್ಮೆಲ್ಲರ ಮೇಲೆ ಬೀರಿದ ಪ್ರಭಾವವೇ ಇಂದು ಈ ಘಟಕ ಅತ್ಯಂತ ಕ್ರಿಯಾಶೀಲವಾಗಿರುವುದಕ್ಕೆ ಸಾಕ್ಷಿ. ಸಮುದಾಯ ನಡೆಸಿದ ರಾಜ್ಯವ್ಯಾಪಿ ಚಾರಿತ್ರಿಕ ಜಾತಾ ಒಂದು ಭಾಗ ಕೆಜಿಎ¥sóï ನಿಂದ ಹೊರಟಿದ್ದನ್ನು ನೆರೆದ ಎಲ್ಲಾ ರಂಗಾಸಕ್ತರಿಗೆ ನೆನಪಿಸಿದರು. ಇಂದು ಸನ್ಮಾನಿತರಾಗಿರುವ ಅತಿಥಿಗಳು ಹಾಕಿದ ಭಧ್ರ ಬುನಾದಿಯೇ ಈ ಸಮುದಾಯ ಘಟಕದ ಇಂದಿನ ಜೀವಾಳ ಎಂದರು.    
ಅತಿಥಿಗಳಾಗಿ ಭಾಗವಹಿಸಿದ್ದ ಸಮುದಾಯ ಕರ್ನಾಟಕದ ರಾಜ್ಯ ಉಪಾಧ್ಯಕ್ಷರಾದ ಶ್ರೀ ಟಿ.ಸುರೇಂದ್ರರಾವ್ ರವರು ವಿಶ್ವ ರಂಗಭೂಮಿ ದಿನಾಚರಣೆಯ ಶುಭಾóóಷಯಗಳನ್ನು ತಿಳಿಸಿದರು.
ಘಟಕದ ಅಧ್ಯಕ್ಷರಾದ ಶ್ರೀ ಜಗದೀಶ್ ನಾಯಕ ಮತ್ತು ಉಪಾಧ್ಯಕ್ಷರಾದ ಡಾ|| ವಿನೋದ್‍ಕುಮಾರ್ ರವರು ಮಾತನಾಡುತ್ತಾ ನೆರೆದ ಎಲ್ಲಾ ರಂಗಾಸಕ್ತರಿಗೆ ರಂಗಭೂಮಿಯಲ್ಲಿ ತಾವು ತೊಡಗಿಸಿಕೊಂಡ ಬಗೆಯನ್ನು ಹಾಗು ಪೋಷಕರುಗಳು ಮಕ್ಕಳು ರಂಗಭೂಮಿಗೆ ಬರುವುದಕ್ಕೆ
ಯಾವುದೇ ಅಡೆತಡೆಗಳನ್ನು ಮಾಡಬೇಡಿ ಎಂದು ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ-35 ಸಾಮರಸ್ಯ ಜನಸಂಸ್ಕøತಿ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ|| ಸಿ.ಕೃಷ್ಣಕುಮಾರ್ ರವರು ಮಾತನಾಡುತ್ತಾ ರಂಗಭೂಮಿಯ ಮೂಲಕ ನಾವು ಕಲಿಯಬೇಕಾಗಿರುವುದು ಸಾಕಷ್ಟಿದೆ, ಸಾಮಾನ್ಯ ಮನುಷ್ಯರಾಗಿದ್ದವರಿಗೆ  ಮಾನವೀಯತೆಯನ್ನು ಕಲಿಸಿಕೊಡುತ್ತದೆ.  ಸಮುದಾಯದ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದರು. 
ಈ ಕಾರ್ಯಕ್ರಮದಲ್ಲಿ ವಿಶ್ವರಂಗಭೂಮಿ ದಿನಾಚರಣೆಯ ಸಂದೇಶವನ್ನು ಈ ಬಾರಿ ಫ್ರಾನ್ಸ್ ದೇಶದ ರಂಗಭೂಮಿ ನಟಿ ಮತ್ತು ಚಲನಚಿತ್ರ ನಟಿಯಾದ ಇಸಾಬೆಲ್ಲೆ ಹಾಪರ್ಟ್  ನೀಡಿದ ಇಂಗ್ಲೀಷ್ ಭಾಷೆಯ ಸಂದೇಶವನ್ನು ಕನ್ನಡಕ್ಕೆ ಮೈಸೂರಿನ ಶ್ರೀಕಂಠ ಗುಂಡಪ್ಪ ರವರು ಅನುವಾದಿಸಿದ್ದರು. ಈ ಸಂದೇಶವನ್ನು ಕಾರ್ಯಕಾರಿ ಸಮಿತಿಯ ಶ್ರೀ ಶಶಿಧರ ರವರು ಕಾರ್ಯಕ್ರಮ ಮೊದಲಿಗೆ ವಾಚಿಸಿದರು. 
ಸ್ವಾಗತ ಶ್ರೀ ಆರ್.ಡಿ.ಅಲಿಕ್, ಪ್ರಾಸ್ತಾವಿಕ ನುಡಿ ಶ್ರೀಮತಿ ¥sóÉ್ಲೂೀರಾ, ವಂದನಾರ್ಪಣೆ ಶ್ರೀಮತಿ ಸುವi, ಆಶಯಗೀತೆ ಮತ್ತು ನಿರೂಪಣೆ ಜನಾರ್ಧನ. 
ಸಭಾ ಕಾರ್ಯಕ್ರಮದ ನಂತರದಲ್ಲಿ ಪುಟಾಣಿ ಕಲಾವಿದರಿಂದ  ಜಗದೀಶ್ ನಾಯಕ್ ನಿರ್ದೇಶನದಲ್ಲಿ ದೇಶಪ್ರೇಮಿ ಭಗತ್‍ಸಿಂಗ್ ಮತ್ತು ಕರ್ನಾಟಕ ಹಲಗಲಿ ಬೇಡರನ್ನು ಕುರಿತ ರಂಗದೃಶ್ಯಗಳನ್ನು ಪ್ರದರ್ಶಿಸಲಾಯಿತು.  ಹಲವಾರು ರಂಗಗೀತೆಗಳನ್ನು ಪ್ರಸ್ತುತಿಪಡಿಸಲಾಯಿತು. 

Sunday 19 March 2017

ಸಮುದಾಯ ಕರ್ನಾಟಕ


1975 ರಲ್ಲಿ, ತುರ್ತುಪರಿಸ್ಥಿತಿಯ ಹಿನ್ನೆಲೆಯಲ್ಲಿ ಒಂದು ರಂಗ ತಂಡವಾಗಿ ಆರಂಭಗೊಂಡ ಸಮುದಾಯ `ಕಲೆ ಕಲೆಗಾಗಿ ಅಲ್ಲ, ಜನತೆಗಾಗಿ ಕಲೆ’ ಎಂಬ ಧ್ಯೇಯ (ಘೋಷಣೆ) ಯೊಂದಿಗೆ ಜನತೆಯ ನೋವು ನಲಿವುಗಳಿಗೆ ಸ್ಪಂದಿಸುತ್ತಾ, ಬೀದಿ ನಾಟಕದ ಜಾಥಾ ಗಳನ್ನು ಕರ್ನಾಟಕದ ಉದ್ದಗಲಕ್ಕೂ ಮಾಡುತ್ತಾ ರಾಜ್ಯದಲ್ಲಿ ಪ್ರಭಾವಶಾಲಿಯಾಗಿ ಬೆಳೆದು ಬಂದಿತು. ನಂತರ ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಎಂಬುದಾಗಿ ರಾಜ್ಯ ಸಂಘಟನೆಯಾಗಿ ರೂಪುಗೊಂಡು ರಾಜ್ಯದ ತುಂಬ ಹಲವಾರು ಘಟಕಗಳನ್ನು ಹೊಂದಿ ರಾಜ್ಯಮಟ್ಟದ ಒಂದು ಪ್ರಗತಿಪರ ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದು ಬಂತು.
ಹೊಸ ಮೌಲ್ಯಗಳತ್ತ ಸಮುದಾಯ ಜಾಥಾ, ರೈತನತ್ತ ಸಮುದಾಯದ ಜಾಥಾ, ಅಣುಸಮರ ವಿರೋಧಿ ಬಣ್ಣದ ಜಾಥಾ, ಭೀಕರ ಬರದ ಎದುರು ಸಮುದಾಯದ ಜಾಥಾ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಜನತೆಯ ಸಂಕಷ್ಟಗಳಿಗೆ ಸ್ಪಂದಿಸಿದ ಸಾಂಸ್ಕೃತಿಕ ಸಂಘಟನೆ ಸಮುದಾಯ ಕನ್ನಡ ಸಾಂಸ್ಕೃತಿಕ ಲೋಕವನ್ನು ನವ್ಯ ನಾಟಕಗಳು, ಜನಪರ ಹೋರಾಟ ಗೀತೆಗಳಿಂದ ಸಿಂಗರಿಸಿದೆ.
ನಾಟಕ, ಹಾಡು, ಜಾಥಾಗಳಂತಹ ಕಾರ್ಯಕ್ರಮಕ್ಕೆ ತನ್ನನ್ನು ಸೀಮಿತಗೊಳಿಸಿದ್ದ ಸಮುದಾಯ ಈಗ ತನ್ನ ಕಾರ್ಯಕ್ರಮಗಳ ತೆಕ್ಕೆಗೆ ಸಾಹಿತ್ಯ, ಚಲನಚಿತ್ರ ವನ್ನೂ ತೆಗೆದುಕೊಳ್ಳುವ ನಿಟ್ಟಿನಲ್ಲಿದೆ.
ರಾಜ್ಯಾದ್ಯಂತ 30 ಕ್ಕೂ ಹೆಚ್ಚಿನ ಘಟಕಗಳನ್ನು ಹೊಂದಿರುವ ಸಮುದಾಯ ಈಗ ಚಿತ್ರ ಸಮುದಾಯ ಹಾಗೂ ಸಾಹಿತ್ಯ ಸಮುದಾಯ ದ ಅಡಿಯಲ್ಲಿ ಕೆಲವು ಹೊಸ ಘಟಕಗಳನ್ನೂ ಹುಟ್ಟು ಹಾಕಿದೆ.
 ಸಮುದಾಯ ಕ್ಕೆ 40 ವರ್ಷಗಳು ತುಂಬಿವೆ. ಸಮೂಹದ ಆಶಯಗಳನ್ನು ಆಕೃತಿಗೊಳಿಸುತ್ತ, ಕಾಲದ ಕರೆಗೆ ಓಗೊಡುತ್ತ ಸಾಗಿಬಂದ ಪ್ರಗತಿಪರ ಸಂಘಟನೆ ಇದು. ರಂಗಪ್ರಯೋಗ, ವಿಚಾರಸಂಕಿರಣಗಳು, ಜಾಥಾಗಳು ಮುಂತಾದ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡುಬಂದ ‘ಸಮುದಾಯ’ ಈಗ ಸಾಹಿತ್ಯಸಮುದಾಯ, ರಂಗಸಮುದಾಯ, ಚಿತ್ರಸಮುದಾಯ ಹೀಗೆ ಸೌಂದರ್ಯಶಾಸ್ತ್ರದ ಹಲವು ಭೂಮಿಕೆಗಳಲ್ಲಿ ಸಮಾಜದ ಗತಿಬಿಂಬವಾಗಿ ಮುಂದುವರಿಯುತ್ತಿದೆ.
ಎಲ್ಲಿಂದ ಬಂದಿರೆಂದು ಕೇಳಬಹುದು ನೀವು
ಜನರ ನಡುವಿನಿಂದ ಎಂದು ಹೇಳುತೇವೆ ನಾವು
ಮತ್ತೆ ಪಯಣ ಎಲ್ಲಿಗೆಂದು ಕೇಳಬಹುದು ನೀವು=
ತಿರುಗಿ ಮತ್ತೆ ಜನರ ನಡುವೆ ಹೋಗುತೇವೆ ನಾವು


 ಈ ಬ್ಲಾಗ್ ನ ಮೂಲಕ ಜನತೆಯ ಜತೆಗೆ ತನ್ನ ಚಟುವಟಿಕೆಯನ್ನು ಹಂಚಿಕೊಂಡು ಸಂವಾದ ನಡೆಸಲು `ಸಮುದಾಯ’ ಸಾಂಸ್ಕೃತಿಕ ಸಂಘಟನೆ ಬಯಸಿದೆ

Friday 10 March 2017

ಸಮುದಾಯ ರೆಪರ್ಟರಿಯ ಕಾವ್ಯರಂಗ-ಸಾಹಿತ್ಯದ ರಂಗ ಓದು


ಯುವಕರ ದನಿ ಕರ್ಕಶವಾಗುತ್ತಿರುವ ಈ ಹೊತ್ತಲ್ಲಿ ಅವರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಸಾಮಾಜಿಕ ಉದ್ಧೇಶದಿಂದ ಕಾವ್ಯರಂಗ ಎಂಬ ರಂಗಪ್ರಯೋಗವನ್ನು ಸಮುದಾಯ ರೆಪರ್ಟರಿ ತನ್ನ ತಿರುಗಾಟದಲ್ಲಿ ಆಡುತ್ತಿದೆ. ಶಾಸನ ಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ತುಣುಕಗಳನ್ನು ಸಂಬಂಧ ಪರಿಕಲ್ಪನೆಯಾಧಾರದಲ್ಲಿ ಇಲ್ಲಿ ಹೆಣೆಯಲಾಗಿದೆ. ರಂಗಭೂಮಿಯ ಈ ಸುಂದರ ಕೋಲಾಜ್‍ನಲ್ಲಿ ಕನ್ನಡದ ಲೋಕಗ್ರಹಿಕೆ , ಕನ್ನಡದ ವಿವೇಕವನ್ನು ರಂಗಾಭಿವ್ಯಕ್ತಿಯ ಮೂಲಕ ಮರುನಿರೂಪಿಸಲಾಗಿದೆ. ಈ ರಂಗಾಭಿವ್ಯಕ್ತಿ ಅಥವಾ ಕಾವ್ಯದ ರಂಗ ಓದಿನಲ್ಲಿ ಸಮುದಾಯ ರೆಪರ್ಟರಿಯ ನಟ-ನಟಿಯರು ಕಾವ್ಯ, ಕಥನಗಳನ್ನು ಆಡುತ್ತಾರೆ, ಹಾಡುತ್ತಾರೆ ಕೆಲವನ್ನು ಅಭಿನಯಿಸುತ್ತಾರೆ. ಎಪ್ಪತ್ತೈದು ನಿಮಿಷಗಳ ಈ ಪ್ರಸ್ತುತಿಯಲ್ಲಿ ಮೂವತ್ತೊಂದು ಸಾಹಿತ್ಯಿಕ ಬರೆಹಗಳನ್ನು ರಂಗದ ಮೇಲೆ ತರಲಾಗಿದೆ. ಸಾಹಿತ್ಯ ಓದಿಗೆ ಹೊಸದಾಗಿ ಪ್ರವೇಶಿಸುತ್ತಿರುವವರಿಗೂ, ಗಂಭೀರ ಓದಿನ ವಿದ್ಯಾರ್ಥಿಗಳಿಗೂ ಸಾಹಿತ್ಯ ಕೃತಿಯೊಂದರ ಆಶಯಗಳನ್ನು ಗ್ರಹಿಸಲು ಸೂಕ್ತ ಒಳನೋಟಗಳನ್ನು ಒದಗಿಸುವ ಶೈಕ್ಷಣಿಕ ಉದ್ಧೇಶವನ್ನೂ ಈ ಪ್ರಸ್ತುತಿ ಹೊಂದಿದೆ.

  ಕವಿ ಶಿವರುದ್ರಪ್ಪನವರ ಹಣತೆ ಹಚ್ಚುತ್ತೇವೆ ನಾವು… ಎಂಬ ಪದ್ಯದಿಂದ ಆರಂಭವಾಗುವ ಈ ಕಾವ್ಯರಂಗ ಪ್ರಯೋಗವು ಕನ್ನಡ ನಾಡು-ನುಡಿ ರೂಪಿಸಿಕೊಂಡು ಬಂದ ಸಂಬಂಧಗಳನ್ನು ಹೆಣೆಯುವ ಕವಿರಾಜ ಮಾರ್ಗದಿಂದ ಮತ್ತೂ ದೂರದ ಬನವಾಸಿಯ ಕುರಿತು ಆದಿ ಕವಿ ಪಂಪ ಹೇಳುವ `ಚಾಗದ ಭೋಗದಕ್ಕರದ.. “ ಸಾಲುಗಳವರೆಗೆ ಹರಡಿಕೊಳ್ಳುತ್ತದೆ. ಮನುಷ್ಯರ ನಡುವಿನ ಜಾತಿಸೂತಕ, ಕರ್ಮಸೂತಕಗಳನ್ನು ತನ್ನ ಅನನ್ಯ ನುಡಿವೈಭವದಲ್ಲಿ ವಿಲೀನಗೊಳಿಸುವ ಶರಣಪರಂಪರೆಯನ್ನು ನೆನೆಯುತ್ತದೆ. ಹೀಗೆ, ಕುವೆಂಪುವವರ ರಾಮಾಯಣ ದರ್ಶನಂ ನ ವೈಚಾರಿಕ ನೆಲೆಗಟ್ಟು, ಕಾರಂತರ ಚೋಮ ಪ್ರತಿನಿಧಿಸುವ ಜಗತ್ತನ್ನು ನಮ್ಮೆದುರು ತಂದು ನಿಲ್ಲಿಸುತ್ತದೆ.ಬೇಂದ್ರೆಯವರ ``ಭ್ರ0ಗದ ಬೆನ್ನೇರಿ ಬಂತು.. “ ಕವಿತೆಯ ಮೂಲಕ ಪೃಕೃತಿಯ ಸೌಂದರ್ಯಶಾಸ್ತ್ರವನ್ನು ಓದಿಗಿಂತಲೂ ಮಿಗಿಲಾದ ಅನುಭವಗಳ ಮೂಲಕ ತಲುಪಿಸುತ್ತದೆ. ವರ್ಗ ಅಸಮಾನತೆ, ಧರ್ಮದ ಹೆಸರಲ್ಲಿ ನಡೆಯುವ ಢೋಂಗಿ ರಾಜಕಾರಣಗಳನ್ನು ತತ್ವ ಪದಗಳು ಮತ್ತು ಜನಪದ ಕಥನಗಳ ಮೂಲಕ ಬೆತ್ತಲುಗೊಳಿಸುತ್ತದೆ.  ಪ್ರತಿಭಾ ನಂದಕುಮಾರ್ ಮತ್ತು ವೈದೇಹಿಯವರ ಕವಿತೆಗಳು ಹೆಣ್ಣಿನ ಘನವಾದ ಬದುಕು ಮತ್ತು ಆ ಬದುಕನ್ನು ಕಾಡುವ ಗಂಡಸು ರೂಪಿಸಿದ ಮೌಲ್ಯಗಳ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ದೇವನೂರರ ಒಡಲಾಳ,  ಸಿದ್ದಲಿಂಗಯ್ಯನವರ ನೆನ್ನೆ ದಿನ ನನ್ನ ಜನ ಕವಿತೆಗಳು ಇಂದಿಗೂ ಮುಂದುವರೆದಿರುವ ಜಾತಿ ಅಸಮಾನತೆಗಳನ್ನು ಹೇಳುತ್ತವೆ. ಕೊನೆಗೆ ಕವಿ ಎಕ್ಕುಂಡಿಯವರ ಮೂಡಲ ದೀಪದೊಂದಿಗೆ ಕಾವ್ಯರಂಗ ಮುಕ್ತಾಯಗೊಳ್ಳುತ್ತದೆ.

   ಕನ್ನಡ ಸಾಹಿತ್ಯದ ಅನಘ್ರ್ಯ ರತ್ನಗಳನ್ನು ಪೋಣಿಸಿ ರಂಗಪಠ್ಯವನ್ನು ಸಜ್ಜುಗೊಳಿಸಿದವರು ವಿಮರ್ಶಕ ಡಾ. ಎಂ. ಈ. ಹೆಗಡೆಯವರು. ಡಾ. ಶ್ರೀಪಾದ ಭಟ್ ಅವರು ತಮ್ಮದೇ ಪರಿಕಲ್ಪನೆಯ ಈ ಪ್ರಯೋಗವನ್ನು ಸಮುದಾಯ ರೆಪರ್ಟರಿಗಾಗಿ ನಿಒರ್ದೇಶಿಸಿದ್ದಾರೆ. ಸಹನಿರ್ದೇಶನ ಸೂರಜ್ ಬಿ. ಆರ್ ಅವರದು. ಸುಂದರ ರಂಗ ಸಜ್ಜಿಕೆಯನ್ನು ರೂಪಿಸಿದವರು ಚಿಂತನದ ದಾಮೋದರ ನಾಯ್ಕ. ರಂಗದ ಮೇಲೆ ರಂಜಿತಾ ಜಾದವ, ಶರತಿ ತಿಪಟೂರು, ಧೀರಜ್, ಯಲ್ಲಪ್ಪ ಗಾಣಗೇರ, ಚಿದಂಬರ ಕುಲಕರ್ಣಿ, ವಿನಾಯಕ ಈಲಗೇರ, ಬಸವರಾಜ ಕಮ್ಮಾರ, ಕುಮಾರ ಬದಾಮಿ, ಚಂದ್ರಶೇಖರ ಕಿಲ್ಲೇಹಾರ, ಪ್ರಮೋದ, ಶಿವಕುಮಾರ ಅಭಿನಯಿಸಿದ್ದಾರೆ.
   ನಿಮ್ಮ ಊರಿಗೂ ಸಮುದಾಯ ರೆಪರ್ಟರಿಯ ಬಿಡುಗಡೆಯ ರಂಗಸಂಚಾರ ಬರಲಿದೆ. ಕಾವ್ಯದ ರಂಗ ಓದಿಗೆ ಸಜ್ಜಾಗಿ.

ನಟರಾಜ ಹುಳಿಯಾರ್ ಕಾವ್ಯರಂಗದ ಕುರಿತು… ಕ್ಲಿಕ್ ಮಾಡಿ

http://samudayakarnataka.blogspot.in/2017/02/kavyaranga_24.html