Monday 15 April 2019

ಸಮುದಾಯ ಕರ್ನಾಟಕ-ಮತದಾರರಲ್ಲಿ ಒಂದು ಮನವಿ

ಭಾರತವಿಂದು ನಿರ್ಣಾಯಕ ಘಟ್ಟ ತಲುಪಿದೆ. ಇನ್ನೊಂದು ಮಹಾಚುನಾವಣೆಗೆ ಸಜ್ಜಾಗಿದೆ. ಈ ಚುನಾವಣೆ ಕೇವಲ ಮುಂದಿನ ಐದು ವರ್ಷದ ಭವಿಷ್ಯವನ್ನಲ್ಲ; ಮತದಾನದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಭವಿಷ್ಯದಲ್ಲಿ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಅರ್ಥ ಕಳೆದುಕೊಳ್ಳುವ ಸಾಧ್ಯತೆ ಇದೆ. ಎಲ್ಲರೂ ಮತದಾನ ಮಾಡುವಂತೆಜಾಗೃತಿ ಮೂಡಿಸುವ ಧನಾತ್ಮಕ ಕೆಲಸ ತಡವಾಗಿ ಯಾದರೂ ನಡೆಯುತ್ತಿದೆ. ಆದರೆ ಕಡ್ಡಾಯ ಮತದಾನ ಮಾಡಬೇಕು ಎನ್ನುವುದು ಎಷ್ಟು ಮುಖ್ಯವೋ, ಯಾರಿಗೆ ಮತದಾನ ಮಾಡಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯವಾದುದು ಎಂದು ಸಮುದಾಯ ಕರ್ನಾಟಕ ಭಾವಿಸುತ್ತದೆ.
ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗುತ್ತಿದ್ದರೂ ಅನ್ನ-ನೀರು-ಸೂರು-ಅಕ್ಷರ ಎಲ್ಲ ಜನರನ್ನೂ ತಲುಪಲಾರದ ದೌರ್ಬಲ್ಯ ನಮ್ಮದಾಗಿದೆ. ಪ್ರಜಾಪ್ರಭುತ್ವದ ಅಡಿಗಲ್ಲಾದ ಪ್ರಜೆಗಳ ಭೌತಿಕ ಅಗತ್ಯತೆಯನ್ನು ಪೂರೈಸುವ ಕುರಿತು ಇಂದು ಚರ್ಚಿಸುವ ಬದಲು ದೇವರು-ಧರ್ಮ-ಜಾತಿಯಂಥ ಭಾವನಾತ್ಮಕ ಸಂಗತಿಯ ಕುರಿತು ಒತ್ತು ಕೊಟ್ಟು ಮತದಾರರ ದಿಕ್ಕು ತಪ್ಪಿಸುವ ಕೆಲಸ ನಡೆಸಲಾಗುತ್ತಿದೆ. ಕಳೆದ ಚುನಾವಣೆಗಳಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಹಲವು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನ್ಯ ಮಾರ್ಗ ಹಿಡಿದುದೇಶದ ಭವಿಷ್ಯದ ಕುರಿತ ಚರ್ಚೆಯ ದಿಕ್ಕನ್ನೇ ಬದಲಿಸುತ್ತಿದ್ದಾರೆ. ದೇಶದ ಜನತೆಯ ಆಶಯದ ಭಾಗವಾಗಿ ರೂಪಿತವಾದ ನಮ್ಮ ಸಂವಿಧಾನ ಜಾತಿ, ಮತ, ಪ್ರದೇಶ, ಬಣ್ಣ, ಲಿಂಗ, ಭಾಷೆ ಇತ್ಯಾದಿ ಯಾವ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಯನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಕಳೆದ ಐದು ವರ್ಷಗಳಿಂದ ನಡೆದ ಬೆಳವಣಿಗೆ ನೋಡಿದರೆ ಆಳುವ ವರ್ಗ ಸಂವಿಧಾನವನ್ನೇ ಅಮಾನ್ಯ ಮಾಡುವ ಕಡೆಗೆ ಹೆಜ್ಜೆ ಹಾಕುತ್ತಿದೆ. ಸಾಮಾಜಿಕ ನ್ಯಾಯ, ರೂಲ್ ಆಫ್ ಲಾ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆ, ಕಲ್ಯಾಣ ರಾಜ್ಯದ ಕಲ್ಪನೆ, ಮಾನವ ಹಕ್ಕುಗಳು, ಜಾತ್ಯತೀತತೆ ಮತ್ತು ಧರ್ಮ ನಿರಪೇಕ್ಷತೆ ಹೀಗೆ ಒಟ್ಟಾರೆಯಾಗಿ ಭಾರತದ ಬಹುತ್ವದ ಮೇಲೆ ಅಕ್ಷರಶಃ ಮಾರಣಾಂತಿಕ ಹಲ್ಲೆ ನಡೆಯುತ್ತಿದೆ.
ದಲಿತರ ಮೇಲಿನ ದೌರ್ಜನ್ಯ ಹೆಚ್ಚಿದೆ. ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಏರಿಕೆಯಾಗಿದೆ. ಅಲ್ಪ ಸಂಖ್ಯಾತರ ಮೇಲಿನ ದಾಳಿ ಗರಿಷ್ಟ ಮಟ್ಟಕ್ಕೆ ಮುಟ್ಟಿದೆ. ವಿದ್ಯಾರ್ಥಿ ಯುವಜನರಿಗೆ ಉಚಿತ ಶಿಕ್ಷಣ-ಉದ್ಯೋಗ ಕೊಡುವ ಬದಲು ಧರ್ಮಾಧಾರಿತ ಹಿಂಸೆಗೆ ಅವರನ್ನು ಪ್ರಚೋದಿಸಲಾಗುತ್ತದೆ. ಬುದ್ಧ ನಡೆದಾಡಿದ ನೆಲದಲ್ಲಿ ಯುದ್ದೋನ್ಮಾದವನ್ನು ಸೃಷ್ಟಿಸಲಾಗುತ್ತಿದೆ. ಭಾರತದ ಹೆಮ್ಮೆಯ ಸೈನ್ಯವನ್ನೇ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ದ್ವೇಷದ ರಾಜಕೀಯವು ದೇಶವನ್ನು ಒಡೆಯುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಶಾಂತಿ ಕದಡಿದೆ. ಪ್ರಗತಿ ಕುಂಠಿತವಾಗಿದೆ. ಹಿಂಸೆ ಹೆಚ್ಚುತ್ತಿದೆ. ಜನರನ್ನು ಭಯ ಮತ್ತು ಅಭದ್ರತೆ ಕಾಡುತ್ತಿದೆ.
ಕೋಮುವಾದ ಮತ್ತು ಧಾರ್ಮಿಕ ಮೂಲಭೂತವಾದವನ್ನು ಪ್ರಶ್ನಿಸುವವರ ಮೇಲೆ ಧಾಳಿ ಮಾಡುವ ಮೂಲಕ ಭೀತಿಯ ವಾತಾವರಣ ಹುಟ್ಟುಹಾಕಲಾಗುತ್ತಿದೆ. ತಮ್ಮ ಆಣತಿಯನ್ನು ಪಾಲಿಸದ ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ...ಹೀಗೆ ಹಲವರನ್ನು ಸಾಯಿಸಲಾಗಿದೆ. ಬರಹಗಾರರು, ಕಲಾವಿದರು, ಸಂಗೀತಗಾರರು, ಅಧ್ಯಾಪಕರು, ಪತ್ರಕರ್ತರನ್ನೂ ಒಳಗೊಂಡು  ಸಾಂಸ್ಕøತಿಕ ವಲಯದ ಪ್ರಜ್ಞಾವಂತರು ನಾಡಿನ ಬಹುತ್ವವನ್ನು ಬೆಂಬಲಿಸಿ ಮಾತನಾಡಿದಾಗ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಪ್ರತಿರೋಧದ ದನಿಯನ್ನೇ ಅಡಗಿಸುವ ಮೂಲಕ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವ ಹುನ್ನಾರ ನಡೆದಿದೆ. ಆರ್ಥಿಕ, ಸಾಂಸ್ಕøತಿಕ, ಸಾಮಾಜಿಕ ತುರ್ತು ಪರಿಸ್ಥಿತಿಯನ್ನು ಅಘೋಷಿತವಾಗಿ ಜಾರಿಗೊಳಿಸಲಾಗುತ್ತಿದೆ.
ಅಂತರ್‍ಧರ್ಮೀಯರ ಮದುವೆ, ಸ್ನೇಹಕೂಟ, ಭಿನ್ನ ಉಡುಪು, ಭಿನ್ನ ಆಹಾರ, ಭಿನ್ನ ನಂಬಿಕೆಯ ಮೇಲೆ ನೈತಿಕ ಪೋಲಿಸ್ ಗಿರಿ, ಗೋರಕ್ಷಣೆ ಮತ್ತು ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಕಾನೂನು ಬಾಹಿರ ದಾಳಿ ಮುಂದುವರೆದಿದೆ.
ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡಿ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನಕ್ಕೆ ಅವಮಾನ ಮಾಡಲಾಗುತ್ತಿದೆ. ಜನಪ್ರತಿನಿಧಿಗಳೇ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೊಲೆ ಸುಲಿಗೆಯಂಥ ಕ್ರಿಮಿನಲ್ ಕೆಲಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂತವರನ್ನು ಶಿಕ್ಷಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಇಂತಹ ಪರಿಸ್ಥಿತಿ ಬದಲಾಗಬೇಕಿದೆ. ಸಂವಿಧಾನದತ್ತ ಹಕ್ಕುಗಳು ನಿರಂತರವಾಗಿರಬೇಕಾದರೆ ಈ ನಾಡಿನ ಜೀವವಾದ ಸಹಿಷ್ಣುತೆ, ಸೋದರತೆ, ಸೌಹಾರ್ದತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕಿದೆ. ಏಕ ಸಂಸ್ಕøತಿ, ಏಕ ಭಾಷೆ, ಏಕ ಧರ್ಮವನ್ನು ಪ್ರತಿಪಾದಿಸುವವರನ್ನು ಸೋಲಿಸಬೇಕಾಗಿದೆ. ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿಯನ್ನು ಜಾರಿಗೆ ತರಬೇಕೆಂದು ಬಯಸುವವರನ್ನು ತಿರಸ್ಕರಿಸಬೇಕಿದೆ. ಅದಕ್ಕಾಗಿ ಈ ಚುನಾವಣೆಯಲ್ಲಿ ಕೋಮುವಾದ, ಜಾಗತೀಕರಣ ಮತ್ತು ಜಾತಿವಾದಿ ವ್ಯಕ್ತಿಗಳನ್ನು, ಪಕ್ಷಗಳನ್ನು ಸೋಲಿಸುವ ಮೂಲಕ ಬಹುತ್ವ ಮತ್ತು ಸಮಾನ ಭಾರತವನ್ನು ಕಟ್ಟಲು ಮತದಾರರು ಮುಂದಾಗಬೇಕೆಂದು ಸಮುದಾಯ ಕರ್ನಾಟಕ ಕಳಕಳಿಯ ಮನವಿ ಮಾಡುತ್ತದೆ. ಆ ಮೂಲಕ ಭಾರತದ ಸಂವಿಧಾನವನ್ನು ಗೆಲ್ಲಿಸಬೇಕಾಗಿದೆ. ಸದ್ಯದ ಸಾಂಸ್ಕೃತಿಕ  ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸುವ ಕಡೆಗೆ ಮತದಾರರು ಮುಂದಾಗಬೇಕೆಂದು, ಜನತೆಯಲ್ಲಿ ಈ ತಿಳುವಳಿಕೆಯನ್ನು ವಿಸ್ತರಿಸಬೇಕೆಂದು ವಿನಂತಿ ಮಾಡುತ್ತದೆ.

Thursday 3 January 2019

ಸಂವಿಧಾನವು ಭಾರತಕ್ಕೊಂದು ಭಾಷ್ಯ ಬರೆದಿದೆ. ಅದು ಸಡಿಲವಾಗಲು ಬಿಡಬಾರದು - ಡಾ. ಪುರುಷೋತ್ತಮ ಬಿಳಿಮಲೆ





ಭಾರತದ ಐತಿಹಾಸಿಕ ಅತ್ಯುತ್ತಮ ಘಟನೆ ಎಂದರೆ ನಾವು ದಾಸ್ಯತ್ವವನ್ನು ತೊರೆದು ಸಂವಿಧಾನವನ್ನು ಹೊಂದಿ ಸಿಟಿಜನ್ ಆಗಿದ್ದುದು. ಆದರೆ ಇಂದು ಸಂವಿಧಾನಕ್ಕೆ ಗೌರವ ತೋರದವರು ವಿವಿಧ ಹಂತದ ಸ್ಥಾನಮಾನದಲ್ಲಿದ್ದಾರೆ. ಕೆಲವರು ಸರ್ವೋಚ್ಛ ನ್ಯಾಯಾಲಯವು ಧಾರ್ಮಿಕವಾಗಿ ಜನ ಒಪ್ಪುವ ತೀರ್ಪು ಕೊಡಬೇಕೆಂದು ನಿಯಂತ್ರಿಸಲು ತೊಡಗುತ್ತಾರೆ. ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎನ್ನುವವರು, ಕೋತಿಗಳು ಸೇತುವೆ ಕಟ್ಟಿದರು ಎನ್ನುವವರು, ಮಾನವಿಕ ವಿಷಯಗಳು ಅನುತ್ಪಾದಕ ವಿಷಯಗಳು ಎನ್ನುವವರು ಇಂದು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಕೆಲವು ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಗಳ ಗಂಬೀರತೆಯನ್ನೇ ಕಳೆದಿದ್ದಾರೆ. ಈ ರೀತಿಯ ದಾಳಿ ಮಾಡುವವರಿಗೆ ಸಾಮಾಜಿಕ ಮನ್ನಣೆ ನೀಡುತ್ತಿರುವುದು ಖೇದಕರ. ಇಂದು ಸಂವಿಧಾನದ ಬಗ್ಗೆ ಅಪನಂಬಿಕೆ ಮೂಡುವಂತೆ ಮಾಡಲಾಗುತ್ತಿದೆ. ಆದರೆ ಸಂವಿಧಾನ ಮತ್ತು ಭಾರತದ ಬಹುತ್ವ ಉಳಿಸಲು ಹೊಸ ತಲೆಮಾರಿನ ಅನೇಕರು ಬಯಸುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂವಿಧಾನ ಈ ದೇಶಕ್ಕೊಂದು ಭಾಷ್ಯ ಬರೆದಿದೆ. ಅದು ಸಡಿಲವಾಗಲು ಬಿಡಬಾರದು ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ. ಪುರುಷೋತ್ತಮ ಬಿಳಿಮಲೆಯವರು ಹೇಳಿದರು. ಅವರು ಸಹಯಾನ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಂದುವರೆದು ದೇಶ ಭಾಷೆ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ವಿಶ್ಲೇಷಿಸುತ್ತಾ “ಎಲ್ಲಾ ದೇಶೀಯ ಭಾಷೆಯ ಅಭಿವೃದ್ಧಿಯ ಜವಾಬ್ದಾರಿಯೂ ಕೇಂದ್ರಕ್ಕೆ ಸಂಬಂಧಿಸಿದುದು ಎಂದು ಹೇಳಲಾಗುತ್ತದೆ. ಆದರೆ, ಇನ್ನೊಂದೆಡೆ ಹೊಸ ಶಿಕ್ಷಣ ನೀತಿಯ ಪ್ರಕಾರ ಭಾಷೆಯ ಅಭಿವೃದ್ಧಿ ಆಯಾ ರಾಜ್ಯಕ್ಕೆ ಸೇರಿದ್ದೆಂದು ಉಲೇಖಿಸಿದ್ದಾರೆ. ವಿಚಿತ್ರವೆಂದರೆ, ಈ ನೀತಿಯ ಜಾರಿಯ ಭಾಗವಾಗಿ ಹಿಂದಿ ಭಾಷೆಯ ಅಭಿವೃದ್ಧಿಗೆ ಮಾತ್ರ ಕೇಂದ್ರ ಸರ್ಕಾರದ ನೀತಿ ಆಯೋಗದ ಹಣ ಬಿಡುಗಡೆ ಆಗಿದೆ. ಇದರಿಂದ ಕೇವಲ ಕನ್ನಡವೊಂದೇ ಅಲ್ಲ, ಭಾರತದ ಬಹು ಭಾಷೆಗಳು ಅಪಾಯದಲ್ಲಿವೆ. ಹಿಂದಿಯನ್ನು ಒಂದು ಭಾಷೆಯಾಗಿ ಪ್ರಚಾರ ಮಾಡುವುದಕ್ಕೆ ತಕರಾರಿಲ್ಲ. ಆದರೆ ಕನ್ನಡ ಕಸಿಯುವುದರ ಬಗ್ಗೆ ಆತಂಕವಿದೆ. ಈ ಸಂವಿಧಾನಾತ್ಮಕ ಅಂಶಗಳ ಬಗ್ಗೆ ಭಾರತದ ಎಲ್ಲಾ ಭಾಷಿಕರೂ ಒಟ್ಟಾಗಿ ವಾದಿಸಲು ಒಂದು ವೇದಿಕೆ ಇಲ್ಲದಂತಾಗಿದೆ. ಹಾಗಾಗಿ ದೆಲ್ಲಿ ಕೇಂದ್ರಿತ ಚಿಂತನಾಕ್ರಮ ಬಿಡಬೇಕು.
ಯಾವುದೇ ಭಾಷೆ ಒಂದು ರಾಜ್ಯದ ಅಧಿಕೃತ ಭಾಷೆ ಅಲ್ಲದಿದ್ದರೂ ಸಾಂವಿಧಾನಿಕ ಮಾನ್ಯತೆಯ ಭಾಷೆಯ ಸ್ಥಾನಮಾನ ನೀಡಬಹುದು ಎಂದು ಸಂವಿಧಾನದ ತಿದ್ದುಪಡಿ ಬರುವ ಮೊದಲು ಮತ್ತು ನಂತರವೂ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕೆಂದು ಒತ್ತಾಯಿಸಿ ಸೀತಾಕಾಂತ ಮಹಾಪಾತ್ರರ ಎದುರು ಅಧಿಕೃತವಾಗಿ 95 ಭಾಷೆಗಳು ಕಾದಿವೆ.
ತುಳು, ಡೋಗ್ರಿ, ಸಂತಾಲಿ, ಬೋಡೋ, ಮೈಥಿಲಿ ಈ 5 ಭಾಷೆಗಳು ಈ ಹಿಂದೆ ಸಂವಿಧಾನಾತ್ಮಕ ಮಾನ್ಯತೆಗಾಗಿ ಸರ್ಕಾರದ ಮುಂದಿದ್ದವು. ಇವುಗಳಲ್ಲಿ ಡೋಗ್ರಿ, ಬೋಡೋ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಕೇವಲ ಭಾಷೆಯ ಕಾರಣಕ್ಕಾಗಿ ಸಂವಿಧಾನಾತ್ಮಕ ಮಾನ್ಯತೆಗೆ ಒಪ್ಪಿದ್ದಲ್ಲ, ಬದಲಿಗೆ ಇದರಲ್ಲಿ ಆಯಾ ಪ್ರದೇಶದ ರಾಜಕೀಯ ಕಾರಣಗಳು ಇವೆ. ಇದರ ಮಧ್ಯೆ ತುಳು ಭಾಷೆ ಮಾತ್ರ ಸಿಲುಕಿಹಾಕಿಕೊಂಡಿದೆ.
ಮಾತೃ ಭಾಷೆಯಲ್ಲಿ ಶಿಕ್ಷಣದ ಪ್ರಶ್ನೆ ಇತ್ಯರ್ಥ ಪಡಿಸುವಾಗ ನ್ಯಾಯಾಲಯವು ಹೇಳಿದ್ದೇನೆಂದರೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕೊಡುವುದು ರಾಜ್ಯದ ಜವಾಬ್ದಾರಿಯಲ್ಲ; ಅದು ಪಾಲಕರು ಮತ್ತು ಮಕ್ಕಳಿಗೆ ಬಿಟ್ಟ ವಿಷಯ ಎಂದು. ಇದರಿಂದ ದೇಶದ ಪ್ರಜ್ಞಾವಂತರು ಬೆಚ್ಚಿಬೀಳುವಂತಾಗಿದೆ.
ಮಾತ್ರವಲ್ಲ, ಇಂದು ಸೆಕ್ಯುಲರ್ ಶಬ್ದವನ್ನು ತೆಗೆದು “ಹಿಂದು” ಶಬ್ದವನ್ನು ಸೇರಿಸಲು ಸಂವಿಧಾನ ತಿದ್ದುಪಡಿಗೆ ಆಳುವವರು ಹೊರಟಿದ್ದಾರೆ. ಹಿಂದು ಧರ್ಮದ ಹೆಸರಿನಲ್ಲಿ ಮೇಲ್ಜಾತಿಯ ಹಿತಾಸಕ್ತಿಯನ್ನು ಕಾಪಾಡುವ ಹುನ್ನಾರವನ್ನು ತಡೆಯಬೇಕಿದೆ. ಕೇವಲ ಒಂದು ಧರ್ಮಾಧಾರಿತವಾಗಿ ಯಾವ ದೇಶವೂ ಉಳಿದಿಲ್ಲ. ಅಲ್ಲದೇ ಹಿಂದು ಧರ್ಮ ಎಂಬುದು ಭಾರತೀಯರೆಲ್ಲರ ಧರ್ಮವಲ್ಲ. ಯುವಜನರು ಭಾರತದ ಇತಿಹಾಸ, ಭಾಷೆಗಳು, ಸಮುದಾಯಗಳನ್ನು ಅರಿಯಬೇಕು, ಎಲ್ಲಾ ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬೇಕು. ಸಂವಿಧಾನದ ಸವಲತ್ತುಗಳು ಸಿಗದ ಹಾಗೆ ಮಾಡುವ ಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕು. ಇಲ್ಲದಿದ್ದರೆ ಯುವಜನರಿಗೆ ಭವಿಷ್ಯವಿಲ್ಲ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆಯವರು ಹೇಳಿದರು.
ಸಂದಿಗ್ಧ ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನದಲ್ಲಿ ಉತ್ತರವಿದೆ: ನ್ಯಾಯಮೂರ್ತಿ ನಾಗಮೋಹನ ದಾಸ್
ದೇಶ ಹಿಂದೆಂದಿಗಿಂತ ಹೆಚ್ಚು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಕಷ್ಟಕರ ವಿಷಯಗಳು ನಮ್ಮೆದುರು ಬಂದಾಗ ಅದರ ಪರಿಹಾರಕ್ಕೆ ಅನ್ವಯಿಸಬೇಕಾದುದು ಸಂವಿಧಾನವನ್ನು. ನ್ಯಾಯಾಧೀಶರಾದವರು ತಾವು ನೀಡುವ ತೀರ್ಪನ್ನು ಒಮ್ಮೆ ತಾವೇ ವಿಮರ್ಶಿಸಿ ನೋಡಬೇಕು. ಅದು ಪ್ರಜಾಪ್ರಭುತ್ವದ ಪರವಾಗಿದೆಯೇ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಒಳಗೊಂಡಿದೆಯೇ ಎಂದು ತುಲನೆ ಮಾಡಲು ಸಂವಿಧಾನವೊಂದೇ ತಳಹದಿ.
ರಾಜ್ಯಾದ್ಯಂತ ನಡೆಯುತ್ತಿರುವ ಸಂವಿಧಾನ ಅಭಿಯಾನದ ಗುಂಟ ಎಲ್ಲಿಯೂ ಅಸಮಾಧಾನ ಅತೃಪ್ತಿ ಆಗಿಲ್ಲ. ಏಕೆಂದರೆ ನಾವು ಹೋದಲ್ಲೆಲ್ಲ ನಡೆಸಿದ ಸಂವಾದ, ಚರ್ಚೆ, ಮಾತುಕತೆ ಎಲ್ಲವೂ ಸಂವಿಧಾನಾತ್ಮಕವಾಗಿತ್ತು. ಈ ಚಳುವಳಿ ಮುಂದಕ್ಕೆ ಹೋಗಬೇಕು ಮತ್ತು ಜನ ವಿಭಾಗಕ್ಕೆಲ್ಲ ತಲುಪಬೇಕು. ರೈತರ ಭೂಮಿ ಪ್ರಶ್ನೆ, ಕಾರ್ಮಿಕರು, ವಿದ್ಯಾರ್ಥಿ ಯುವಜನರ ಸಮಸ್ಯೆ ಬಗೆಹರಿಸಲು ಜನಪರ ಹೋರಾಟಕ್ಕೆ ಸಂವಿಧಾನ ಅವಕಾಶ ಕಲ್ಪಿಸಿದೆ. ಹಾಗಾಗಿ ಸೈದ್ಧಾಂತಿಕ ಸಂಘರ್ಷವನ್ನು ಅಂತರಂಗದಲ್ಲಿ ಪ್ರಾರಂಭಿಸಬೇಕಿದೆ. ಇದಕ್ಕಾಗಿ ನಮ್ಮ ಆದ್ಯತೆ ಮತ್ತು ವಿವೇಕವನ್ನು ಬಳಸಬೇಕು.
ದೇಶದಲ್ಲಿ ಸಂವಿಧಾನವನ್ನು ಕಳೆದುಕೊಂಡರೆ ಇಲ್ಲಿ ಅರಾಜಕತೆ  ಉಂಟಾಗುತ್ತದೆ. ಅಂತರ್ ಯುದ್ಧ ನಡೆಯುತ್ತದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯಗಳು ಇರಲ್ಲ, ಕೋಮುವಾದ ಮೂಲಭೂತವಾದ ರಾರಾಜಿಸುತ್ತದೆ. ಗಳಿಸಿದ ಹಕ್ಕು ಕಸಿದುಕೊಂಡಾಗ, ಬಾಯಿಗೆ ಬೀಗ ಹಾಕಿ ಗುಲಾಮರಂತೆ ಬಾಳಬೇಕಾಗುತ್ತದೆ. ಹಾಗಾಗಿ ಸಂವಿಧಾನವನ್ನು ಅರ್ಥೈಸಿ, ಅಳವಡಿಸಿಕೊಳ್ಳೋಣ. ಮೈಗೂಡಿಸಿಕೊಳ್ಳೋಣ. ಕುಟುಂಬದವರಿಗೂ, ಸುತ್ತಮುತ್ತಲಿನವರಿಗೂ ಇದರ ಆಶಯಗಳನ್ನು ಮನವರಿಕೆ ಮಾಡಿಕೊಡುವದು ಆದ್ಯತೆಯ ಕೆಲಸವಾಗಲಿ. ಸಂವಿಧಾನ; ಹೊಸತಲೆಮಾರು ವಿಷಯದ ಮೇಲೆ ಸಹಯಾನ ಸಾಹಿತ್ಯೋತ್ಸವ ಅರ್ಥಪೂರ್ಣವಾಗಿ ನಡೆದು ಡಾ. ಆರ್.ವಿ. ಭಂಡಾರಿಯವರ ವೈಚಾರಿಕತೆಯ ಮೂಲ ಆಶಯಗಳನ್ನು ಈಡೇರಿಸುತ್ತಿದೆ ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್ ಹೇಳಿದರು.
ತಮ್ಮ ಕವಿತೆಯ ವಾಚನ ಮಾಡುವದರೊಂದಿಗೆ ಕವಿ ಕೆ.ಎನ್. ಮುಸ್ತಾಫಾ ಸಮಾರೋಪ ಸಮಾರಂಭವನ್ನು ನಿರ್ವಹಿಸಿದರು.
ನಂತರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸಮುದಾಯ ಕರ್ನಾಟಕ, ಚಿಂತನ ಉತ್ತರ ಕನ್ನಡದ ಸಹಕಾರದಿಂದ ನಡೆದ “ವಾಲಿ ಸಗ್ರೀವರ ಕಾಳಗ” ತಾಳಮದ್ದಲೆಯಲ್ಲಿ, ಕೃಷ್ಣ ಭಂಡಾರಿ ಗುಣವಂತೆ ಭಾಗವತರಾಗಿ, ಮಂಜುನಾಥ ಭಂಡಾರಿ ಕರ್ಕಿ ಮದ್ದಲೆ ವಾದಕರಾಗಿ ಡಾ. ಕೇಶವ ಶರ್ಮ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಶ್ರೀಪಾದ ಭಟ್, ಗಣೇಶ್ ನಾಯ್ಕ ಮುಗ್ವಾ, ಗಣೇಶ ಭಂಡಾರಿಯವರು ಪ್ರಸಂಗದ ಅರ್ಥಧಾರಿಗಳಾಗಿದ್ದರು. ವೈಚಾರಿಕ ಸ್ಪರ್ಷದೊಂದಿಗೆ ಆ ಕಾಲದ ಒಳನೋಟವನ್ನು ಅದ್ಭುತವಾಗಿ ಅರ್ಥೈಸುವುದರೊಂದಿಗೆ ತಾಳಮದ್ದಲೆ ಯಶಸ್ವಿಯಾಯಿತು.