ಅಹಲ್ಯಾ ಬಲ್ಲಾಳ್
ಕಣ್ಣ ಮುಂದೆಯೇ ಕಾಣಿಸುವಂಥದ್ದು ನಿಜವಾಗಿರಬೇಕಿಲ್ಲ. ಅದು ‘ಸೌಂದರ್ಯ’ ಎನ್ನುವ ಹೆಸರುಪಟ್ಟಿ ಹೊತ್ತ ಪ್ರದರ್ಶನ ಯಾ ಜಾಹೀರಾತು ಸರಕೇ ಆಗಿರಲಿ, ದೇಶದಲ್ಲಿ ನಡೆಯುವ ಆಗುಹೋಗುಗಳೇ ಆಗಿರಲಿ. ಪರದೆ ಸರಿಸಿದಾಗ ಗೋಚರವಾಗುವ ನಿಜಕ್ಕೆ ತಾನೆ ಮೌಲ್ಯವಿರುವುದು. ನೆಮ್ಮದಿ ತರುವಂಥದ್ದು ಅದೇ ಹೊರತು ಕಡ ತಂದ ‘ಸೌಂದರ್ಯ’ವಲ್ಲ.. ..
ಅನೇಕರಿಗೆ ಆಗುವಂತೆ ನನಗೂ ಹೀಗೆಲ್ಲಾ ಫಿಲಾಸಾಫಿಕಲ್ ಯೋಚನೆಗಳು ಆಗಾಗ ಸುಳಿದು ಹೋಗುವುದುಂಟು. ಈ ಸಲ ಮಾತ್ರ ಅದಕ್ಕೊಂದು ಬಲವಾದ ಕಾರಣವೂ ಇತ್ತು. ಸಂದರ್ಭ ತುಸು ಅನಿರೀಕ್ಷಿತವೇ.
ಅಚಾನಕ್ಕಾಗಿ ಊರಿಗೆ ಹೋಗಬೇಕಾಗಿ ಬಂದಿತ್ತು. ಮಣಿಪಾಲ ಪದವಿಪೂರ್ವ ಕಾಲೇಜಿನ ಮೊದಲ ಮಹಡಿಯ ಸಭಾಭವನದಲ್ಲಿ ಎದುರಿನ ಜಮಖಾನೆಯ ಮೇಲೆ, ಲೈಟುಸ್ಟ್ಯಾಂಡಿನ ಪಕ್ಕದಲ್ಲಿ ಕೂತಿದ್ದೆ. ಬಣ್ಣಬಣ್ಣದ ಕನಸಿನಲ್ಲಿ ದೃಶ್ಯಗಳು ಒಂದರ ನಂತರ ಒಂದು ಅನಾವರಣಗೊಳ್ಳುತ್ತಿವೆಯೋ ಎಂಬಂತೆ ಭಾಸವಾಗುತ್ತಿದ್ದ ‘ಚಿತ್ರಾ’ ನಾಟಕವನ್ನು ನೋಡುತ್ತಿದ್ದಂತೆ ಕಣ್ಮನಗಳಿಗೆ ಬೆಡಗು, ಹೊರಗೆ ಕತ್ತಲಲ್ಲಿ ಮಿಂಚು, ಮಳೆ-ಗುಡುಗು. ನನ್ನ ಪಾಲಿಗೆ ಒಂದು ಸರ್ರಿಯಲ್ ಅನುಭವ ಭಾಗ್ಯ!
ನಾಟಕವೆನ್ನುವ ಸುಳ್ಳನ್ನು ಸುಂದರವಾಗಿ ಕಟ್ಟಿಕೊಡುವ ಮೂಲಕ ಸತ್ಯದ ಶೋಧದಲ್ಲಿ ತೊಡಗುವ, ಪ್ರೇಕ್ಷಕರನ್ನೂ ತೊಡಗಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದಿರುವ ಡಾ. ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ, ನೃತ್ಯನಿಕೇತನ ಕೊಡವೂರು ಇದರ ರಜತ ಹಬ್ಬದ ಅಂಗವಾಗಿ ಆಹ್ವಾನಿತರಿಗಾಗಿ ಅದೇ ಸಂಸ್ಥೆಯ ಕಲಾವಿದೆಯರು ಅಭಿನಯಿಸಿದ, ಚಿನ್ನಾರಿ ತಂಡ ಆಯೋಜಿಸಿದ ಮೊದಲ ಪ್ರಯೋಗವದು. ರವೀಂದ್ರನಾಥ ಟಾಗೋರರ ನೃತ್ಯರೂಪಕ ‘ಚಿತ್ರಾ’ವನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಚೆಂದವಾಗಿ ರೂಪಾಂತರಿಸಿ ನಮ್ಮ ಕಾಲಕ್ಕೆ ತಂದವರು ಸುಧಾ ಆಡುಕಳ.
ಚಿತ್ರಾ ಅಥವಾ ಚಿತ್ರಾಂಗದೆ ಮಹಾಭಾರತದಲ್ಲಿ ಬರುವ ಒಂದು ಪಾತ್ರ. ಅರ್ಜುನ ತನ್ನ ಅಲೆದಾಟದಲ್ಲಿ ಈಶಾನ್ಯ ಭಾರತದ ಮಣಿಪುರವೆಂಬ ಸಹಜ ಸೌಂದರ್ಯದ ನಾಡಿಗೆ ಹೋದಾಗ ಅಲ್ಲಿಯ ಅರಸನ ಮಗಳನ್ನು ಪ್ರೇಮಿಸಿ ಮದುವೆಯಾಗಬಯಸುತ್ತಾನೆ. ಅರಸನೋ ಮಗಳನ್ನೂ ಅವಳಿಗೆ ಹುಟ್ಟುವ ಮಕ್ಕಳನ್ನೂ ಮಣಿಪುರದಿಂದಾಚೆಗೆ ಕರೆದುಕೊಂಡುಹೋಗುವಂತಿಲ್ಲ ಎಂಬ ಕರಾರು ಹಾಕುತ್ತಾನೆ. ಸರಿ ಎಂದು ಒಪ್ಪಿದ ಅರ್ಜುನ ಚಿತ್ರಾಳನ್ನು ಮದುವೆಯಾಗಿ ಬಬ್ರುವಾಹನ ಎಂಬ ಮಗನನ್ನು ಪಡೆಯುತ್ತಾನೆ.
ಈ ಪ್ರಸಿದ್ಧ ಕಥೆಗೆ ಹಲವು ಓದುಗಳಿವೆ. ಟಾಗೋರರು ಅದನ್ನು ಒಂದು ಸುಂದರ ಶೃಂಗಾರ ಕಥಾನಕವಾಗಿ ಕಂಡಿದ್ದಾರೆ. ಕುವೆಂಪುರವರ ಚಿತ್ರಾಂಗದಾ ಕೃತಿಯಲ್ಲಿ ಅರ್ಜುನನಿಲ್ಲದೆ ಚಿತ್ರಾಂಗದೆ ಕಳೆದ ದಿನಗಳ ವರ್ಣನೆಯಿದೆ. ನಮ್ಮ ಯಕ್ಷಗಾನ ಮತ್ತು ಚಲನಚಿತ್ರಗಳಲ್ಲಿ ಬಬ್ರುವಾಹನ-ಅರ್ಜುನ ಮುಖಾಮುಖಿಯ ಹಿನ್ನೆಲೆಯಲ್ಲಿ ಚಿತ್ರಾಂಗದೆ ಸಾಕಷ್ಟು ಜನಪ್ರಿಯಳೇ. ನಿರ್ದೇಶಕ ಋತುಪರ್ಣೋ ಘೋಷ್ ‘ಚಿತ್ರಾಂಗದಾ: ದ ಕ್ರೌನಿಂಗ್ ವಿಶ್’ ಎಂಬ ಸಿನೆಮಾದಲ್ಲಿ ಲೈಂಗಿಕ ಅಸ್ಮಿತೆಯ ಆಯಾಮವನ್ನು ಚಿತ್ರಿಸಿದ್ದಾರೆ. ಜಗತ್ತಿನಾದ್ಯಂತ ರಬೀಂದ್ರ ಸಂಗೀತ ಮತ್ತು ಇತರ ಪ್ರಕಾರಗಳ ಸಂಗೀತದೊಂದಿಗೆ ಮೂಲ ಬಂಗಾಳಿ ಹಾಗೂ ಬೇರೆ ಭಾಷೆಗಳಲ್ಲಿ ಈ ನೃತ್ಯರೂಪಕದ ಅನೇಕ ಉತ್ತಮ ಪ್ರದರ್ಶನಗಳಾಗಿವೆ.
ಹೀಗೆ ಸಮಾಜೋ-ರಾಜಕೀಯ ನೆಲೆ (ಹಸ್ತಿನಾಪುರದ ಸಾಮ್ರಾಜ್ಯ-ಮಣಿಪುರದ ಬುಡಕಟ್ಟು ಜನಾಂಗ), ಲಿಂಗಾಧಾರಿತ ನೆಲೆ (ಸ್ತ್ರೀ-ಪುರುಷ), ಹೆಣ್ಣೊಬ್ಬಳ ಜೀವನ ಪಯಣದ ನೆಲೆ (ಪುತ್ರಿ-ಪ್ರೇಯಸಿ-ಪತ್ನಿ-ತಾಯಿ-ಸಂಗಾತಿ), ಅಧ್ಯಾತ್ಮಿಕ ನೆಲೆ ಇತ್ಯಾದಿಯಾಗಿ ಇದರ ಅರ್ಥೈಸುವಿಕೆಗೆ ಅವಕಾಶವಿದೆ. “ಟಾಗೋರರ ಮೂಲ ನಾಟಕವನ್ನು ಹಾಗೇ ಓದಿದಾಗಲೂ ಹಲವಾರು ಸಮಕಾಲೀನ ವ್ಯಾಖ್ಯಾನಗಳು ಸಾಧ್ಯವಾಗುವಂತಿತ್ತು. ಮೂಲದಲ್ಲಿಯ ಅರ್ಜುನ ಚಿತ್ರಾ ಸಂಬಂಧದ ಸಾಂಸಾರಿಕ ಕಥನವನ್ನು ಹೆಚ್ಚು ಲಂಬಿಸದೇ ಚಿತ್ರಾಳ ಒಳಹೊರಗಿನ ಹೊಯ್ದಾಟದಲ್ಲಿ ಆಕೆ ಪಡೆದ ಗೆಲುವು ಯಾವುದು ಅನ್ನೋದನ್ನು ಮುನ್ನೆಲೆಗೆ ತಂದೆ” ಎನ್ನುತ್ತಾರೆ ನಿರ್ದೇಶಕರು.
ಈ ಪ್ರಯೋಗದಲ್ಲಿ ನೃತ್ಯ ಮತ್ತು ನಾಟಕ ಎರಡರ ಅಂಶಗಳೂ ಇರುತ್ತವೆ ಎಂಬುದು ಮೊದಲೇ ತಿಳಿದಿದ್ದರಿಂದ ಕುತೂಹಲವಂತೂ ಇದ್ದೇ ಇತ್ತು. ನಾಂದೀಪದ್ಯದಲ್ಲಿ ಶಿವ ಪಾವರ್ತಿ ಹಾಗೂ ನರ್ತಕಿಯರು ‘ವಾಗರ್ಥ’ ಶ್ಲೋಕವನ್ನು ಅಭಿನಯಿಸಿದಾಗಲೇ ಈ ಪ್ರಸ್ತುತಿಯ ಪ್ರಮೇಯದ ಸೂಚನೆ ಸಿಕ್ಕಂತಾಯ್ತು. ಒಂದಕ್ಕೊಂದು ಬಿಡಿಸಲಾರದಂತೆ ಇರುವ ಮಾತು ಮತ್ತು ಅರ್ಥದಂತೆ ಸಹಬಾಳ್ವೆಯ, ಸಮಾನತೆಯ ಆಧಾರದ ಮೇಲೆ ನಿಂತಿರುವ ಪ್ರೀತಿಯ ದೃಷ್ಟಿಕೋನ ಇಲ್ಲಿದೆ.
ಅರ್ಜುನನಿಗೆ ಮನಸೋತು ಅವನ ಬಳಿ ಹೋಗುವ ಗಂಡು ವೇಷದ ಚಿತ್ರಾ ತಿರಸ್ಕೃತಳಾಗುವುದು, ಮದನನ ಸಹಾಯದಿಂದ ಆಕೆ ಅಪೂರ್ವ ರೂಪ ಪಡೆಯುವುದು, ಅರ್ಜುನ ಆಕೆಯನ್ನು ಮೋಹಿಸಿ ಆಕೆಯೊಡನೆ ಒಂದಾಗುವುದು, ಈ ಬಾಹ್ಯರೂಪ ತನ್ನ ನಿಜವಲ್ಲ ಎಂದು ಚಿತ್ರಾಳಿಗೆ ಅನಿಸಿ ಆಕೆ ಚಡಪಡಿಸುವುದು ಮತ್ತು ಕೊನೆಯಲ್ಲಿ ತನ್ನ ನಿಜಸ್ವರೂಪವನ್ನು ಬೆಳಕಿಗೆ ತರುವುದು.. ಹೀಗೆ ನಾಟಕದ ಕ್ರಿಯೆ ಮುಂದುವರಿಯುತ್ತದೆ.
ನೃತ್ಯ ಪ್ರಧಾನವಾದರೂ ಈ ರಂಗ ಪ್ರಸ್ತುತಿಯಲ್ಲಿ ನಾಟಕೀಯ ಅಂಶಗಳು ಹೇರಳ. ಚಿತ್ರಾಳ ಪಾತ್ರಕ್ಕಾಗಿ ಇಬ್ಬರು ನಟಿಯರ ಬಳಕೆ ಒಂದೇ ವ್ಯಕ್ತಿಯಲ್ಲಿ ಎರಡು ಮನೋಭಾವಗಳ ಚಿತ್ರಣವನ್ನು ಬಿಂಬಿಸಲು ತುಂಬ ಪರಿಣಾಮಕಾರಿಯಾದ ತಂತ್ರ. ರಂಗದ ಹಿಂದಿನ ಭಾಗದಲ್ಲಿ ಮೇಲೆ ತೂಗು ಹಾಕಿದ ದೊಡ್ಡ ಬಿಲ್ಲು; ರಂಗದ ಅಂಚಿನಲ್ಲಿ ನೆಲದ ಮೇಲೆ ಚಾಚಿಕೊಂಡಿದ್ದ ಬೃಹತ್ ಹೂಮಾಲೆ; ಮದನನಿಗೊಂದು ಹೂವಿನ ರಥ; ಅವನ ಸಹಚರರಿಗೆ ಹೂಬಾಣಗಳು; ಹೂವು ಪೋಣಿಸಿದ ಬಿಳಲುಗಳನ್ನು ಮುಖಕ್ಕೆ ಅಡ್ಡ ಹಿಡಿದುಕೊಂಡು ಹೆಜ್ಜೆ ಹಾಕುವ, ತನ್ಮೂಲಕ ಅನಾಯಾಸವಾಗಿ ವಿಶಿಷ್ಟ ಲೋಕವೊಂದರ ಅನುಭವವನ್ನು ಕಟ್ಟಿಕೊಡುವ ಪಾತ್ರಗಳು, ಸಮೂಹ ನರ್ತಕಿಯರ ವೇಷಭೂಷಣ….ರಾಜು ಮಣಿಪಾಲರ ರಂಗವಿನ್ಯಾಸ ನಾಟಕಕ್ಕೆ ಸೊಬಗು ಕೊಟ್ಟು ಒಟ್ಟು ಆಶಯಕ್ಕೆ ಪೂರಕವೇ ಆಗಿತ್ತು.
ತಂಡದ ನೃತ್ಯಗುರುಗಳಾದ ಮಾನಸಿ ಮತ್ತು ಸುಧೀರ್ ದಂಪತಿಗಳು ಪೋಷಿಸಿರುವ ಒಬ್ಬೊಬ್ಬ ವಿದ್ಯಾರ್ಥನಿಯೂ ಒಂದೊಂದು ಮುತ್ತು. ಅಚ್ಚುಕಟ್ಟಾದ ಭಂಗಿ, ಮುದ್ರೆ, ಹಾವಭಾವ, ಲಯಗಾರಿಕೆ, ಹೆಜ್ಜೆಗಳು, ಅತಿಯಾಗದ ಆಂಗಿಕಾಭಿನಯ, ಸ್ಥಿರ ಹಾಗೂ ಚರ ಗುಣದ ಸಮೂಹ ರಚನಾ ವಿನ್ಯಾಸಗಳು, ಮುಖ್ಯವಾಗಿ ಭರತನಾಟ್ಯ, ಜೊತೆಗೆ ಯಕ್ಷಗಾನ ಹಾಗೂ ಜಾನಪದ ನೃತ್ಯದ ಅಂಶಗಳು ಕಥೆಯನ್ನು ಸುಲಲಿತವಾಗಿ ಮುಂದುವರಿಸಿಕೊಂಡು ಹೋದವು.
ವಾಚಿಕದಲ್ಲಿ ಹಾಡು, ಸ್ವರ ಸಂಯೋಜನೆಗಳು, ಆಲಾಪ ಮತ್ತು ನೃತ್ಯದ ಬೋಲ್-ಗಳು ಧ್ವನಿಮುದ್ರಿತವಾಗಿದ್ದು ನಟಿಯರ ಮಾತು ಸಂಭಾಷಣೆ ಮಾತ್ರ ಲೈವ್ ಆಗಿತ್ತು. ಹೇಳಿ ಕೇಳಿ ನೃತ್ಯ ತಂಡ, ರಂಗದ ಮೇಲೆ ಕಾಣಿಸಿಕೊಂಡವರೆಲ್ಲರೂ ಸ್ತ್ರೀಯರೇ. ಅರ್ಜುನನೂ ಸೇರಿದಂತೆ ಪುರುಷ ಪಾತ್ರಗಳನ್ನೂ ಅವರೇ ನಿರ್ವಹಿಸಿದ್ದು- ನೃತ್ಯದ ಹಿನ್ನೆಲೆಯಿರುವ ನನಗಂತೂ- ಮೊದಲ ಒಂದೆರಡು ನಿಮಿಷಗಳ ನಂತರ ತೊಡಕು ಎನಿಸಲಿಲ್ಲ.
ವಸಂತನ ಚಿರಯೌವನವನ್ನು ಬಿಂಬಿಸಲೋ ಎಂಬಂತೆ ಆ ಪಾತ್ರವನ್ನು ಅಭಿನಯಿಸಿದ್ದು ನಗುಮೊಗದ ಮುದ್ದು ಪುಟ್ಟಿ. ಚಿತ್ರಾಳ ಅಂತರಂಗವನ್ನು ಇಬ್ಬರು ನಟಿಯರೂ ವ್ಯಕ್ತಪಡಿಸಿದ ರೀತಿ ತುಂಬ ಸಹಜವಾಗಿತ್ತು. ಈ ಸಂಘರ್ಷ ಇಂದಿನ ಕಾಲದ ಹೆಣ್ಣಿಗೂ ಪ್ರಸ್ತುತವೇ. ಅಷ್ಟೇ ಏಕೆ, ಇನ್ನೊಂದು ನೆಲೆಯಲ್ಲಿ ಈ ಹೊಯ್ದಾಟ ಮಾನವಕುಲಕ್ಕೇ ಸಂಬಂಧಿಸಿದ್ದು ಎನಿಸಿತು! ಕಲಾತ್ಮಕ ಪರದೆಯ ಪ್ರಾಪ್ ಎಷ್ಟೆಲ್ಲ ಅರ್ಥಗಳನ್ನು ಕೊಡುತ್ತದೆ ಎಂದು ಅದು ಬಳಕೆಯಾದ ದೃಶ್ಯಗಳಲ್ಲಿ ಅನಿಸದೇ ಇರದು. ಇಡೀ ನಾಟಕವನ್ನು ಒಂದು ನೋಟದಲ್ಲಿ ಸೆರೆಹಿಡಿ ಎನ್ನುವ ಸವಾಲೇನಾದರೂ ಎದುರಾದರೆ ನಾನಂತೂ ಪರದೆಯ ಆಚೆ ಈಚೆ ಇರುವ ಇಬ್ಬರು ಚಿತ್ರಾರ ದೃಶ್ಯವನ್ನೇ ಆಯ್ಕೆಮಾಡುವವಳು! ಅಷ್ಟರ ಮಟ್ಟಿಗೆ ನನಗೆ ಆ ಎರಡೂ ಸಂದರ್ಭಗಳು ಕಣ್ಣಿಗೆ ಕಟ್ಟಿದಂತಿವೆ.
ಟಾಗೋರರ ಕಾವ್ಯಭಾಗಗಳಿಗೆ ಸುಧಾ ನ್ಯಾಯ ಒದಗಿಸಿದ್ದಾರೆ: ವಾಚಿಕದ ಹಲವು ಭಾಗಗಳು ಉತ್ತಮ ಸಾಹಿತ್ಯಿಕ ಗುಣದಿಂದ ಕೂಡಿವೆ. ಧ್ವನಿಮುದ್ರಣದ ಮಿಕ್ಸಿಂಗ್-ನಲ್ಲಿ ಒಂದಿಷ್ಟು ಸುಧಾರಣೆಗೆ ಅವಕಾಶವಿದೆ ಅನಿಸಿತು. ಮೂಲ ಪಠ್ಯದಲ್ಲಿದ್ದ ಅರ್ಜುನನ ಪ್ರತಿಕ್ರಿಯೆಯ ಮುಂದುವರಿಕೆಯಾಗಿ ಇಲ್ಲಿ ಆತ ಚಿತ್ರಾಳಿಗೆ ಇನ್ನು ಮುಂದೆ ನಾನು ನಿನ್ನ ಸಹಚರ, ಎಲ್ಲ ಅರ್ಥಗಳಲ್ಲೂ ಸಂಗಾತಿ ಎಂದು ಹೇಳುವುದು ಇಂದಿನ ಕಾಲದ ಅಗತ್ಯವೇ ಆಗಿದೆ. ಅರ್ಜುನನ ಈ ಕೊನೆಯ ವಾಕ್ಯಗಳಿಗೆ ಇನ್ನಷ್ಟು ಒತ್ತು ಸಿಕ್ಕಿದ್ದರೆ ಇನ್ನೂ ಉತ್ತಮ ಪರಿಣಾಮ ಉಂಟಾಗುತ್ತಿತ್ತಲ್ಲವೇ ಎಂದು ಮೊದಲ ಪ್ರಯೋಗದಲ್ಲಿ ಅನಿಸಿತು.
ಟಾಗೋರರ ಮೂಲಕ ಶ್ರೀಪಾದ ಭಟ್ಟರು ಸೃಷ್ಟಿಸುವ ಚಿತ್ರಾ ಒಬ್ಬ ಅಸಾಮಾನ್ಯ ದಿಟ್ಟ ಹೆಣ್ಣು; ಲಾಲಿತ್ಯ ಹಾಗೂ ಆಂತರಿಕ ಬಲವನ್ನು ಏಕಕಾಲಕ್ಕೆ ಪ್ರತಿನಿಧಿಸುವವಳು. ಒಮ್ಮೆ ಹೋಗಿ ಅವಳನ್ನು ಭೇಟಿಯಾಗಿ, ಈ ದೃಶ್ಯಕಾವ್ಯವನ್ನು
ಖುದ್ದು ಅನುಭವಿಸಿ!
“ಚಿತ್ರಾ” ನಾಟಕವನ್ನು ಉಡುಪಿಯ ಕೊಡವೂರಿನ “ನೃತ್ಯನಿಕೇತನ” ನೃತ್ಯ ಶಾಲೆಯ ಕಲಾವಿದರಿಗೆ ಡಾ.ಶ್ರೀಪಾದರು ನಿರ್ದೇಶಿಸಿದ್ದು ಈ ನಾಟಕ ಈಗಾಗಲೇ ದೆಹಲಿಯಲ್ಲಿ 2017 ಜನವರಿಯಲ್ಲಿ ನಡೆದ “ಭಾರತ್ ರಂಗ ಮಹೋತ್ಸವ” ದಲ್ಲಿ ಪ್ರದರ್ಶನಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
No comments:
Post a Comment