Thursday, 3 January 2019

ಸಂವಿಧಾನವು ಭಾರತಕ್ಕೊಂದು ಭಾಷ್ಯ ಬರೆದಿದೆ. ಅದು ಸಡಿಲವಾಗಲು ಬಿಡಬಾರದು - ಡಾ. ಪುರುಷೋತ್ತಮ ಬಿಳಿಮಲೆ





ಭಾರತದ ಐತಿಹಾಸಿಕ ಅತ್ಯುತ್ತಮ ಘಟನೆ ಎಂದರೆ ನಾವು ದಾಸ್ಯತ್ವವನ್ನು ತೊರೆದು ಸಂವಿಧಾನವನ್ನು ಹೊಂದಿ ಸಿಟಿಜನ್ ಆಗಿದ್ದುದು. ಆದರೆ ಇಂದು ಸಂವಿಧಾನಕ್ಕೆ ಗೌರವ ತೋರದವರು ವಿವಿಧ ಹಂತದ ಸ್ಥಾನಮಾನದಲ್ಲಿದ್ದಾರೆ. ಕೆಲವರು ಸರ್ವೋಚ್ಛ ನ್ಯಾಯಾಲಯವು ಧಾರ್ಮಿಕವಾಗಿ ಜನ ಒಪ್ಪುವ ತೀರ್ಪು ಕೊಡಬೇಕೆಂದು ನಿಯಂತ್ರಿಸಲು ತೊಡಗುತ್ತಾರೆ. ದೇಶದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ ಎನ್ನುವವರು, ಕೋತಿಗಳು ಸೇತುವೆ ಕಟ್ಟಿದರು ಎನ್ನುವವರು, ಮಾನವಿಕ ವಿಷಯಗಳು ಅನುತ್ಪಾದಕ ವಿಷಯಗಳು ಎನ್ನುವವರು ಇಂದು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಕೆಲವು ಮಹತ್ವದ ಉನ್ನತ ಶಿಕ್ಷಣ ಸಂಸ್ಥೆಗಳ ಗಂಬೀರತೆಯನ್ನೇ ಕಳೆದಿದ್ದಾರೆ. ಈ ರೀತಿಯ ದಾಳಿ ಮಾಡುವವರಿಗೆ ಸಾಮಾಜಿಕ ಮನ್ನಣೆ ನೀಡುತ್ತಿರುವುದು ಖೇದಕರ. ಇಂದು ಸಂವಿಧಾನದ ಬಗ್ಗೆ ಅಪನಂಬಿಕೆ ಮೂಡುವಂತೆ ಮಾಡಲಾಗುತ್ತಿದೆ. ಆದರೆ ಸಂವಿಧಾನ ಮತ್ತು ಭಾರತದ ಬಹುತ್ವ ಉಳಿಸಲು ಹೊಸ ತಲೆಮಾರಿನ ಅನೇಕರು ಬಯಸುತ್ತಿರುವುದು ಆಶಾದಾಯಕ ಬೆಳವಣಿಗೆ. ಸಂವಿಧಾನ ಈ ದೇಶಕ್ಕೊಂದು ಭಾಷ್ಯ ಬರೆದಿದೆ. ಅದು ಸಡಿಲವಾಗಲು ಬಿಡಬಾರದು ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಡಾ. ಪುರುಷೋತ್ತಮ ಬಿಳಿಮಲೆಯವರು ಹೇಳಿದರು. ಅವರು ಸಹಯಾನ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮುಂದುವರೆದು ದೇಶ ಭಾಷೆ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ವಿಶ್ಲೇಷಿಸುತ್ತಾ “ಎಲ್ಲಾ ದೇಶೀಯ ಭಾಷೆಯ ಅಭಿವೃದ್ಧಿಯ ಜವಾಬ್ದಾರಿಯೂ ಕೇಂದ್ರಕ್ಕೆ ಸಂಬಂಧಿಸಿದುದು ಎಂದು ಹೇಳಲಾಗುತ್ತದೆ. ಆದರೆ, ಇನ್ನೊಂದೆಡೆ ಹೊಸ ಶಿಕ್ಷಣ ನೀತಿಯ ಪ್ರಕಾರ ಭಾಷೆಯ ಅಭಿವೃದ್ಧಿ ಆಯಾ ರಾಜ್ಯಕ್ಕೆ ಸೇರಿದ್ದೆಂದು ಉಲೇಖಿಸಿದ್ದಾರೆ. ವಿಚಿತ್ರವೆಂದರೆ, ಈ ನೀತಿಯ ಜಾರಿಯ ಭಾಗವಾಗಿ ಹಿಂದಿ ಭಾಷೆಯ ಅಭಿವೃದ್ಧಿಗೆ ಮಾತ್ರ ಕೇಂದ್ರ ಸರ್ಕಾರದ ನೀತಿ ಆಯೋಗದ ಹಣ ಬಿಡುಗಡೆ ಆಗಿದೆ. ಇದರಿಂದ ಕೇವಲ ಕನ್ನಡವೊಂದೇ ಅಲ್ಲ, ಭಾರತದ ಬಹು ಭಾಷೆಗಳು ಅಪಾಯದಲ್ಲಿವೆ. ಹಿಂದಿಯನ್ನು ಒಂದು ಭಾಷೆಯಾಗಿ ಪ್ರಚಾರ ಮಾಡುವುದಕ್ಕೆ ತಕರಾರಿಲ್ಲ. ಆದರೆ ಕನ್ನಡ ಕಸಿಯುವುದರ ಬಗ್ಗೆ ಆತಂಕವಿದೆ. ಈ ಸಂವಿಧಾನಾತ್ಮಕ ಅಂಶಗಳ ಬಗ್ಗೆ ಭಾರತದ ಎಲ್ಲಾ ಭಾಷಿಕರೂ ಒಟ್ಟಾಗಿ ವಾದಿಸಲು ಒಂದು ವೇದಿಕೆ ಇಲ್ಲದಂತಾಗಿದೆ. ಹಾಗಾಗಿ ದೆಲ್ಲಿ ಕೇಂದ್ರಿತ ಚಿಂತನಾಕ್ರಮ ಬಿಡಬೇಕು.
ಯಾವುದೇ ಭಾಷೆ ಒಂದು ರಾಜ್ಯದ ಅಧಿಕೃತ ಭಾಷೆ ಅಲ್ಲದಿದ್ದರೂ ಸಾಂವಿಧಾನಿಕ ಮಾನ್ಯತೆಯ ಭಾಷೆಯ ಸ್ಥಾನಮಾನ ನೀಡಬಹುದು ಎಂದು ಸಂವಿಧಾನದ ತಿದ್ದುಪಡಿ ಬರುವ ಮೊದಲು ಮತ್ತು ನಂತರವೂ 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕೆಂದು ಒತ್ತಾಯಿಸಿ ಸೀತಾಕಾಂತ ಮಹಾಪಾತ್ರರ ಎದುರು ಅಧಿಕೃತವಾಗಿ 95 ಭಾಷೆಗಳು ಕಾದಿವೆ.
ತುಳು, ಡೋಗ್ರಿ, ಸಂತಾಲಿ, ಬೋಡೋ, ಮೈಥಿಲಿ ಈ 5 ಭಾಷೆಗಳು ಈ ಹಿಂದೆ ಸಂವಿಧಾನಾತ್ಮಕ ಮಾನ್ಯತೆಗಾಗಿ ಸರ್ಕಾರದ ಮುಂದಿದ್ದವು. ಇವುಗಳಲ್ಲಿ ಡೋಗ್ರಿ, ಬೋಡೋ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಕೇವಲ ಭಾಷೆಯ ಕಾರಣಕ್ಕಾಗಿ ಸಂವಿಧಾನಾತ್ಮಕ ಮಾನ್ಯತೆಗೆ ಒಪ್ಪಿದ್ದಲ್ಲ, ಬದಲಿಗೆ ಇದರಲ್ಲಿ ಆಯಾ ಪ್ರದೇಶದ ರಾಜಕೀಯ ಕಾರಣಗಳು ಇವೆ. ಇದರ ಮಧ್ಯೆ ತುಳು ಭಾಷೆ ಮಾತ್ರ ಸಿಲುಕಿಹಾಕಿಕೊಂಡಿದೆ.
ಮಾತೃ ಭಾಷೆಯಲ್ಲಿ ಶಿಕ್ಷಣದ ಪ್ರಶ್ನೆ ಇತ್ಯರ್ಥ ಪಡಿಸುವಾಗ ನ್ಯಾಯಾಲಯವು ಹೇಳಿದ್ದೇನೆಂದರೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಕೊಡುವುದು ರಾಜ್ಯದ ಜವಾಬ್ದಾರಿಯಲ್ಲ; ಅದು ಪಾಲಕರು ಮತ್ತು ಮಕ್ಕಳಿಗೆ ಬಿಟ್ಟ ವಿಷಯ ಎಂದು. ಇದರಿಂದ ದೇಶದ ಪ್ರಜ್ಞಾವಂತರು ಬೆಚ್ಚಿಬೀಳುವಂತಾಗಿದೆ.
ಮಾತ್ರವಲ್ಲ, ಇಂದು ಸೆಕ್ಯುಲರ್ ಶಬ್ದವನ್ನು ತೆಗೆದು “ಹಿಂದು” ಶಬ್ದವನ್ನು ಸೇರಿಸಲು ಸಂವಿಧಾನ ತಿದ್ದುಪಡಿಗೆ ಆಳುವವರು ಹೊರಟಿದ್ದಾರೆ. ಹಿಂದು ಧರ್ಮದ ಹೆಸರಿನಲ್ಲಿ ಮೇಲ್ಜಾತಿಯ ಹಿತಾಸಕ್ತಿಯನ್ನು ಕಾಪಾಡುವ ಹುನ್ನಾರವನ್ನು ತಡೆಯಬೇಕಿದೆ. ಕೇವಲ ಒಂದು ಧರ್ಮಾಧಾರಿತವಾಗಿ ಯಾವ ದೇಶವೂ ಉಳಿದಿಲ್ಲ. ಅಲ್ಲದೇ ಹಿಂದು ಧರ್ಮ ಎಂಬುದು ಭಾರತೀಯರೆಲ್ಲರ ಧರ್ಮವಲ್ಲ. ಯುವಜನರು ಭಾರತದ ಇತಿಹಾಸ, ಭಾಷೆಗಳು, ಸಮುದಾಯಗಳನ್ನು ಅರಿಯಬೇಕು, ಎಲ್ಲಾ ವಿಷಯಗಳ ಜ್ಞಾನವನ್ನು ಪಡೆದುಕೊಳ್ಳಬೇಕು. ಸಂವಿಧಾನದ ಸವಲತ್ತುಗಳು ಸಿಗದ ಹಾಗೆ ಮಾಡುವ ಶಕ್ತಿಗಳ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕು. ಇಲ್ಲದಿದ್ದರೆ ಯುವಜನರಿಗೆ ಭವಿಷ್ಯವಿಲ್ಲ ಎಂದು ಪ್ರೊ. ಪುರುಷೋತ್ತಮ ಬಿಳಿಮಲೆಯವರು ಹೇಳಿದರು.
ಸಂದಿಗ್ಧ ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನದಲ್ಲಿ ಉತ್ತರವಿದೆ: ನ್ಯಾಯಮೂರ್ತಿ ನಾಗಮೋಹನ ದಾಸ್
ದೇಶ ಹಿಂದೆಂದಿಗಿಂತ ಹೆಚ್ಚು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಕಷ್ಟಕರ ವಿಷಯಗಳು ನಮ್ಮೆದುರು ಬಂದಾಗ ಅದರ ಪರಿಹಾರಕ್ಕೆ ಅನ್ವಯಿಸಬೇಕಾದುದು ಸಂವಿಧಾನವನ್ನು. ನ್ಯಾಯಾಧೀಶರಾದವರು ತಾವು ನೀಡುವ ತೀರ್ಪನ್ನು ಒಮ್ಮೆ ತಾವೇ ವಿಮರ್ಶಿಸಿ ನೋಡಬೇಕು. ಅದು ಪ್ರಜಾಪ್ರಭುತ್ವದ ಪರವಾಗಿದೆಯೇ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಒಳಗೊಂಡಿದೆಯೇ ಎಂದು ತುಲನೆ ಮಾಡಲು ಸಂವಿಧಾನವೊಂದೇ ತಳಹದಿ.
ರಾಜ್ಯಾದ್ಯಂತ ನಡೆಯುತ್ತಿರುವ ಸಂವಿಧಾನ ಅಭಿಯಾನದ ಗುಂಟ ಎಲ್ಲಿಯೂ ಅಸಮಾಧಾನ ಅತೃಪ್ತಿ ಆಗಿಲ್ಲ. ಏಕೆಂದರೆ ನಾವು ಹೋದಲ್ಲೆಲ್ಲ ನಡೆಸಿದ ಸಂವಾದ, ಚರ್ಚೆ, ಮಾತುಕತೆ ಎಲ್ಲವೂ ಸಂವಿಧಾನಾತ್ಮಕವಾಗಿತ್ತು. ಈ ಚಳುವಳಿ ಮುಂದಕ್ಕೆ ಹೋಗಬೇಕು ಮತ್ತು ಜನ ವಿಭಾಗಕ್ಕೆಲ್ಲ ತಲುಪಬೇಕು. ರೈತರ ಭೂಮಿ ಪ್ರಶ್ನೆ, ಕಾರ್ಮಿಕರು, ವಿದ್ಯಾರ್ಥಿ ಯುವಜನರ ಸಮಸ್ಯೆ ಬಗೆಹರಿಸಲು ಜನಪರ ಹೋರಾಟಕ್ಕೆ ಸಂವಿಧಾನ ಅವಕಾಶ ಕಲ್ಪಿಸಿದೆ. ಹಾಗಾಗಿ ಸೈದ್ಧಾಂತಿಕ ಸಂಘರ್ಷವನ್ನು ಅಂತರಂಗದಲ್ಲಿ ಪ್ರಾರಂಭಿಸಬೇಕಿದೆ. ಇದಕ್ಕಾಗಿ ನಮ್ಮ ಆದ್ಯತೆ ಮತ್ತು ವಿವೇಕವನ್ನು ಬಳಸಬೇಕು.
ದೇಶದಲ್ಲಿ ಸಂವಿಧಾನವನ್ನು ಕಳೆದುಕೊಂಡರೆ ಇಲ್ಲಿ ಅರಾಜಕತೆ  ಉಂಟಾಗುತ್ತದೆ. ಅಂತರ್ ಯುದ್ಧ ನಡೆಯುತ್ತದೆ. ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯಗಳು ಇರಲ್ಲ, ಕೋಮುವಾದ ಮೂಲಭೂತವಾದ ರಾರಾಜಿಸುತ್ತದೆ. ಗಳಿಸಿದ ಹಕ್ಕು ಕಸಿದುಕೊಂಡಾಗ, ಬಾಯಿಗೆ ಬೀಗ ಹಾಕಿ ಗುಲಾಮರಂತೆ ಬಾಳಬೇಕಾಗುತ್ತದೆ. ಹಾಗಾಗಿ ಸಂವಿಧಾನವನ್ನು ಅರ್ಥೈಸಿ, ಅಳವಡಿಸಿಕೊಳ್ಳೋಣ. ಮೈಗೂಡಿಸಿಕೊಳ್ಳೋಣ. ಕುಟುಂಬದವರಿಗೂ, ಸುತ್ತಮುತ್ತಲಿನವರಿಗೂ ಇದರ ಆಶಯಗಳನ್ನು ಮನವರಿಕೆ ಮಾಡಿಕೊಡುವದು ಆದ್ಯತೆಯ ಕೆಲಸವಾಗಲಿ. ಸಂವಿಧಾನ; ಹೊಸತಲೆಮಾರು ವಿಷಯದ ಮೇಲೆ ಸಹಯಾನ ಸಾಹಿತ್ಯೋತ್ಸವ ಅರ್ಥಪೂರ್ಣವಾಗಿ ನಡೆದು ಡಾ. ಆರ್.ವಿ. ಭಂಡಾರಿಯವರ ವೈಚಾರಿಕತೆಯ ಮೂಲ ಆಶಯಗಳನ್ನು ಈಡೇರಿಸುತ್ತಿದೆ ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್ ಹೇಳಿದರು.
ತಮ್ಮ ಕವಿತೆಯ ವಾಚನ ಮಾಡುವದರೊಂದಿಗೆ ಕವಿ ಕೆ.ಎನ್. ಮುಸ್ತಾಫಾ ಸಮಾರೋಪ ಸಮಾರಂಭವನ್ನು ನಿರ್ವಹಿಸಿದರು.
ನಂತರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಸಮುದಾಯ ಕರ್ನಾಟಕ, ಚಿಂತನ ಉತ್ತರ ಕನ್ನಡದ ಸಹಕಾರದಿಂದ ನಡೆದ “ವಾಲಿ ಸಗ್ರೀವರ ಕಾಳಗ” ತಾಳಮದ್ದಲೆಯಲ್ಲಿ, ಕೃಷ್ಣ ಭಂಡಾರಿ ಗುಣವಂತೆ ಭಾಗವತರಾಗಿ, ಮಂಜುನಾಥ ಭಂಡಾರಿ ಕರ್ಕಿ ಮದ್ದಲೆ ವಾದಕರಾಗಿ ಡಾ. ಕೇಶವ ಶರ್ಮ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಶ್ರೀಪಾದ ಭಟ್, ಗಣೇಶ್ ನಾಯ್ಕ ಮುಗ್ವಾ, ಗಣೇಶ ಭಂಡಾರಿಯವರು ಪ್ರಸಂಗದ ಅರ್ಥಧಾರಿಗಳಾಗಿದ್ದರು. ವೈಚಾರಿಕ ಸ್ಪರ್ಷದೊಂದಿಗೆ ಆ ಕಾಲದ ಒಳನೋಟವನ್ನು ಅದ್ಭುತವಾಗಿ ಅರ್ಥೈಸುವುದರೊಂದಿಗೆ ತಾಳಮದ್ದಲೆ ಯಶಸ್ವಿಯಾಯಿತು.




Tuesday, 18 December 2018

ಸಹಯಾನ ಸಾಹಿತ್ಯೋತ್ಸವ-ಭಾರತ ಸಂವಿಧಾನ : ಹೊಸ ತಲೆಮಾರು



ಸರ್ವಾಧ್ಯಕ್ಷರು 
ಸಹಯಾನ ಸಾಹಿತ್ಯೋತ್ಸವ- 30 ಡಿಸೆಂಬರ್, 2018, ರವಿವಾರ

                   ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರಿಗೆ ಸರ್ವಾಧ್ಯಕ್ಷ ಗೌರವ
ಡಿಸೆಂಬರ್ 30, 2018 ರಂದು ರವಿವಾರ ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. “ಭಾರತ ಸಂವಿಧಾನ: ಹೊಸ ತಲೆಮಾರು” ಎನ್ನುವ ವಿಷಯದ ಮೇಲೆ 8 ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದು ಸರ್ವಾಧ್ಯಕ್ಷತೆಯನ್ನು ಖ್ಯಾತ ಸಂಸ್ಕøತಿ ಚಿಂತಕರೂ ಸಂವಿಧಾನ ತಜ್ಞರೂ ಆದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎಚ್. ಎನ್. ನಾಗಮೋಹನದಾಸ್ ವಹಿಸಲಿದ್ದಾರೆ.

ಸರ್ವಾಧ್ಯಕ್ಷತೆ ವಹಿಸಿಕೊಳ್ಳುತ್ತಿರುವ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಅವರು ಮೂಲತಃ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯಿಂದ ಬಂದವರು. ಕರ್ನಾಟಕದಲ್ಲಿ ನಡೆದ ಹಲವು ಪ್ರಜಾಸತ್ತಾತ್ಮಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿರುವ ಅವರು ಹುಟ್ಟಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೆಬ್ಬಣ್ಣಿ ಗ್ರಾಮದಲ್ಲಿ 1952ರ ಫೆಬ್ರುವರಿ 12ರಂದು. ತಂದೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎನ್.ನಾಗಪ್ಪ. ತಾಯಿ ಪಾರ್ವತಮ್ಮ.
ಪ್ರಾಥಮಿಕ ಮತ್ತು ಪೌಢ ಶಿಕ್ಷಣವನ್ನು ಕನ್ನಡ ಶಾಲೆಯಲ್ಲಿ ಕಲಿತ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಅಖಿಲ ಭಾರತ ವಕೀಲರ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಯಂಗ್ ಅಡ್ವೊಕೇಟ್ಸ ಫೋರಂನ ಸಂಸ್ಥಾಪಕರು ಇವರು. ಮತ್ತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಸದಸ್ಯರಾಗಿ ಸಕ್ರಿಯ ಪಾತ್ರವಹಿಸಿದ್ದಾರೆ.  2004ರ ಅಕ್ಟೋಬರ್‍ನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ. 2014ರಿಂದ ದೆಹಲಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕ. ಬಾಬಾಬುಡನ್ ಗಿರಿ ಆಯೋಗ, ಲಿಂಗಾಯತ ಸ್ವತಂತ್ರ ಧರ್ಮದ ಕುರಿತ ಆಯೋಗ…ಹೀಗೆ ರಾಜ್ಯ ಸರಕಾರದ ಹಲವು ಆಯೋಗಗಳ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಖ್ಯಾತಿ ಇವರದು. ಒಳ್ಳೆಯ ವಾಗ್ಮಿಗಳೂ, ಬರಹಗಾರರೂ ಆಗಿರುವ ಇವರ ಪುಸ್ತಕಗಳು: 
1. ಸಮಾಜವಾದ; 2. ಕರ್ನಾಟಕದಲ್ಲಿ ನ್ಯಾಯಾಂಗ, 3. ಅಸ್ಪøಶ್ಯತೆ, ಸಮಾಜ ಮತ್ತು ಕಾನೂನು; 4. ಅರಿವು ಬೆಳಕು; 5. ಮಹಿಳಾ ಅಸಮಾನತೆ; 6. ಛಾಲೆಂಜಸ್ ಆ್ಯಂಡ್ ಪ್ರಾಬ್ಲೆಮ್ಸ ಬಿಫೋರ್ ಯಂಗ್ ಲಾಯರ್ಸ್; 7. ಚಾಲೆಂಜಸ್ ಟು ದ ಕಾನ್ಸ್ಟಿಟ್ಯೂಷನ್; 8. ಜಾಗತಿಕ ಧುರೀಣ ಡಾ. ಅಂಬೇಡ್ಕರ್;
9. ಡಾ. ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು, 10. ಮಾಧ್ಯಮ ದಿಕ್ಕು ಎತ್ತ, ಇತ್ಯಾದಿ. ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

____________________________________________________________

ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್  ಅವರು ಇತ್ತೀಚೆಗೆ ಬರೆದು ಪ್ರಕಟಿಸಿದ “ಸಂವಿಧಾನ ಓದು” ಪುಸ್ತಕವು 50,000 ಪ್ರತಿಗಳ ದಾಖಲೆಯ ಮಾರಾಟ ಕಂಡಿದೆ. ರಾಜ್ಯದಾದ್ಯಂತ ಓಡಾಡಿ ಸಂವಿಧಾನದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.
__________________________________________________

9 ವರ್ಷದ ಹಿಂದೆ ಅವರೇ ಸಹಯಾನವನ್ನು ಕೂಡ ಉದ್ಘಾಟಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹತ್ತು ವರ್ಷದ ನಂತರ ಮತ್ತೆ ಸಹಯಾನಕ್ಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಇವರೊಂದಿಗೆ, ಸಾಹಿತ್ಯೋತ್ಸವದ ಉದ್ಘಾಟಕರಾಗಿ ಪದ್ಮಶ್ರೀ ಗಣೇಶ ದೇವಿಯವರು ಮತ್ತು ಸಮಾರೋಪ ಮಾತುಗಳನ್ನಾಡಲು ದೆಹಲಿಯ ಜೆ ಎನ್ ಯು ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆಯವರು ಆಗಮಿಸುತ್ತಿದ್ದು ನಾಡಿನ ಸುಮಾರು 200 ಜನ ಚಿಂತಕರು ಪಾಲ್ಗೊಳ್ಳಲಿದ್ದಾರೆ.



Sunday, 4 November 2018

ಪ್ರಜಾವಾಣಿಯಲ್ಲಿ ಸಮುದಾಯ ರಾಯಚೂರಿನ ತೀನ್ ಕಂದೀಲು

ಕರ್ನಾಟಕದಲ್ಲಿ ರಂಗಭೂಮಿಗೆ ಸಂಬಂಧಪಟ್ಟ ಅನೇಕ ಸಂಸ್ಥೆಗಳು, ಶಾಲೆಗಳು, ತರಬೇತಿ ಕೇಂದ್ರಗಳು ಮತ್ತು ಸಮುದಾಯಗಳು ರಂಗ ಚಟುವಟಿಕೆಗಳನ್ನು ನಡೆಸುತ್ತಿರುವುದು ಗಮನಾರ್ಹ. ಇಂತಹ ಸಂಸ್ಥೆಗಳಂತೆ ರಾಯಚೂರು ಸಮುದಾಯವು ಕೂಡ ತನ್ನ ಕ್ರಿಯಾಶೀಲತೆಯನ್ನು ಕಾಯ್ದುಕೊಂಡು ಬಂದಿದೆ ಎನ್ನುವುದಕ್ಕೆ ಮೊನ್ನೆ ರಾಯಚೂರಿನ ಜಂಬಲದಿನ್ನಿ ರಂಗಮಂದಿರದಲ್ಲಿ ಸಮುದಾಯ ಅಭಿನಯಿಸಿದ ನಾಟಕಕ್ಕೆ ಕಿಕ್ಕಿರಿದು ಸೇರಿದ ಪ್ರೇಕ್ಷಕರೆ ಸಾಕ್ಷಿಯಾಗಿತ್ತು.

ಒಂದು ಕಾಲದಲ್ಲಿ ರಾಯಚೂರು ಸಮುದಾಯ ತನ್ನ ಗೌರವ ಘನತೆ ಕಾಯ್ದುಕೊಂಡಿತ್ತು. ಆದರೆ ಇಂದು ನಾಟಕದ ಬಗ್ಗೆ ನಮ್ಮ ಭಾಗದ ಜನರ ಧೋರಣೆಗಳು ಬದಲಾದಾಗ ಇನ್ನು ನಮ್ಮ ಭಾಗದಲ್ಲಿ ರಂಗಭೂಮಿ ಬೆಳೆಯುವುದಕ್ಕೆ ಸಾಧ್ಯವಾಗಬಹುದು. ನಾಟಕ ಎಂದರೆ ಮೂಗು ಮುರಿಯುವ ಜನ ನಮ್ಮವರು.

'ಅಯ್ಯ ನಾಟಕ ಮಾಡ್ತಳಂತ? ಮನ್ಯಗೇನು ಯಾರು ಹೇಳವ್ರು ಇಲ್ಲ ಕೇಳವ್ರು ಇಲ್ಲ ಆ ಪೋರಿಗೆ? ನಾಟಕದಾಗ ಗಂಡ್ಸ್ರ ಕೈ ಮುಟ್ಟದು ಮೈ ಮುಟ್ಟದು ಮಾಡ್ತಾಳ ಎನಾ ಯವ್ವ ಅಸಂಯ?’ ಅನ್ನುವಂತ ಮನಸ್ಸುಗಳು ಬದಲಾದಾಗ ರಂಗಭೂಮಿ ಮತ್ತು ರಂಗ ಸಮುದಾಯಗಳು ಬೆಳೆಯಲು ಸಾಧ್ಯವಾಗಬಹುದು. ಕೆಲವೊಬ್ಬರನ್ನು ಬಿಟ್ಟರೆ ಯಾರೂ ವೃತ್ತಿಪರ ಕಲಾವಿದರಲ್ಲ, ಆದರೂ ಆ ವಿದ್ಯಾರ್ಥಿಗಳನ್ನು ಕರೆದುಕೊಂಡು ಒಂದು ಟೀಮ್ ಕಟ್ಟಿ ಒಂದು ಹೊಸ ಪ್ರಯೋಗಗಳ ಮೂಲಕ ರಾಯಚೂರು ಸಮುದಾಯವು ಕ್ರಿಯಾಶೀಲವಾಗಿದೆ. ಯಶಸ್ಸಿನ ಎಲ್ಲಾ ಶ್ರೇಯಸ್ಸು ಈ ನಾಟಕ ನಿರ್ದೇಶಕರಾದ ಪ್ರವೀಣ್ ರೆಡ್ಡಿ ಗುಂಜಳಿಯವರಿಗೆ ಸಲ್ಲಬೇಕು.

ಈ ನಾಟಕದ ತಲೆ ಬರಹ ‘ತೀನ್ ಕಂದೀಲು’ ಈ ಪದ ಮೇಲ್ನೋಟಕ್ಕೆ ಇದರಲ್ಲಿ ಏನೋ ವಿಭಿನ್ನವಾದ ಒಳ ಅರಿವು, ವಿಷಯ ವಸ್ತು, ಅಥವಾ ಇತಿಹಾಸನೇನೋ ಹೇಳಲು ಹೊರಟಿರಬೇಕು ಎಂದು ಪ್ರೇಕ್ಷಕರಿಗೆ ಕುತೂಹಲ ಕೆರಳಿಸುತ್ತದೆ. ಇಲ್ಲಿ ‘ತೀನ್ ಕಂದೀಲು’ ಎನ್ನುವ ನಾಟಕದ ತಲೆಬರಹ ರಾಯಚೂರಿನಲ್ಲಿರುವ, ಬಡವರ, ಕೂಲಿ ಕಾರ್ಮಿಕರ, ವ್ಯಾಪಾರಸ್ಥರ, ಹೊಟ್ಟೆ ತುಂಬಿಸುವ ಒಂದು ಪ್ರದೇಶದ ಹೆಸರು. ಒಟ್ಟಿನಲ್ಲಿ ಇದು ರಾಯಚೂರಿನ ಹೃದಯ ಭಾಗ ಎಂದರೆ ತಪ್ಪಾಗಲಾರದು.

ನಾಟಕಕಾರರು ಇದೇ ಪ್ರದೇಶದಲ್ಲಿ ತುಂಬ ಒಡನಾಟ ಇರುವುದರಿಂದ ಅಲ್ಲಿನ ಬಡವರ ಬದುಕು, ಅವರ ಸ್ಥಿತಿಗತಿಗಳು, ಜಾತಿ, ಧರ್ಮ, ಹಿಂಸೆ, ಕೊಲೆ, ಅತ್ಯಾಚಾರ, ಮೋಸ, ವಂಚನೆ ಮರ್ಯಾದೆಗೇಡು ಹತ್ಯೆ ಹೀಗೆ ಎಷ್ಟೋ ವರ್ಷಗಳ ಕಾಲದ ಧರ್ಮಸಂಕಟವನ್ನು ಹೇಳಿಕೊಳ್ಳಲಾಗದೆ ನಿಜಾಮರ ಕೋಟೆಗಳಲ್ಲಿ ಕಳೆದುಹೋದದ್ದು ಈಗ ಇತಿಹಾಸ.

ಕಳೆದು ಹೋದ ಜೀವಗಳಿಗೆ ರಮೇಶ ಅರೋಲಿಯವರು ಪಾತ್ರದ ರೂಪ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದಿರುವುದು, ವಾಸ್ತವ ಬದುಕಿನ ಒಂದು ರೋಚಕವಾದ ಸಂಗತಿ. ನಾಟಕ ಆರಂಭವಾಗುವುದೇ ಗಾರೆ ಕೆಲಸಗಾರರು ಕೆಬ್ಬ್ಣಬುಟ್ಟಿ ಹಿಡಿದುಕೊಂಡು ಕೆಲ್ಸ ಮಾಡುವುದು, ನಂತರ ಅನೇಕ ಸಣ್ಣ ಪುಟ್ಟ ವ್ಯಾಪಾರಸ್ಥರು,(ತಳ್ಳುವ ಬಂಡಿ) ಚಹಾ ಹೋಟೆಲ್ ನಂತರ ಮೂರು ದಾರಿ ಕೂಡುವ(ಸರ್ಕಲ್)ನಲ್ಲಿ ಮೂರು ವಿವಿಧ ಬಣ್ಣದಿಂದ ಕೂಡಿರುವ ಕಂದೀಲಿನ ಬೆಳಕಿನ ಕಂಬ ಹೀಗೆ ಅನೇಕ ರಂಗ ಪರಿಕರಗಳು ರಂಗದ ಮೇಲೆ ಪ್ರವೇಶ ಮಾಡಿಸಿರುವುದು ನಿರ್ದೇಶಕರ ಸೂಕ್ಷ್ಮತೆ ತೋರುತ್ತದೆ.

ಈ ನಾಟಕದ ಕೇಂದ್ರ ಬಿಂದು ದಲಿತ ಹುಡುಗ ಹುಸೇನಿ ಮತ್ತು ಮೇಲ್ಜಾತಿಯ ಹುಡುಗಿ ಶಾಂತಿ ಯುವ ಪ್ರೇಮಿಗಳಾದರೂ ಇಡೀ ನಾಟಕಕ್ಕೆ ನಾಯಕನಾಗಿ ನಿಲ್ಲುವುದು ಯಲ್ಲಯ್ಯ ಅಜ್ಜ. ಯುವ ಪ್ರೇಮಿಗಳನ್ನು ಒಂದು ಮಾಡುವ ಒದ್ದಾಟದ ಜೊತೆಗೆ ಪ್ರಸ್ತುತ ದೇಶದಲ್ಲಿ ನಡೆಯುವ ಘಟನೆಗಳು ನಾಟಕದುದ್ದಕೂ ಟೀಕೆಗೆ ಗುರಿಯಾಗುತ್ತಾ ಹೋಗುತ್ತವೆ.

‘ಈ ದೇಶದಲ್ಲಿ ಬಡವರ, ದಲಿತರ, ಪರ ಮಾತಾಡಬೇಡಿ. ನೀವು ಕೂಡ ನಗರ ನಕ್ಸಲೈಟ್ ಎಂಬ ಪಟ್ಟ ಕಟ್ಟಿ ಜೈಲಿಗೆ ಕಳಿಸುತ್ತಾರೆ. ಕಾಯುವವರೇ ಕೊಲ್ಲಲು ಬಂದಾಗ ಯಾರ ಮುಂದ ದೂರು ಕೊಡತೀರಿ’ ಎಂದು ಪರೋಕ್ಷವಾಗಿ ರಾಜಕೀಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು. ಹೀಗೆ ಇಂತಹ ಅನೇಕ ಪ್ರಶ್ನೆಗಳು ನಾಟಕದುದ್ದಕೂ ಎತ್ತುತ್ತ ಹೋಗುತ್ತಾನೆ ಯಲ್ಲಯ್ಯ. ಯುವ ಪ್ರೇಮಿಗಳ ಪ್ರೀತಿಯನ್ನು (ಶಾಂತಿ ಮತ್ತು ಹುಸೇನ) ಒಂದು ಮಾಡಲು ಯಲ್ಲಯ್ಯ ಎಷ್ಟೇ ಪ್ರಯತ್ನಪಟ್ಟರೂ ಮತ್ತು ಇಲ್ಲಿ ಶಾಂತಿ ಎಷ್ಟೇ ಗಟ್ಟಿಗಿತ್ತಿ ಹುಡುಗಿಯಾಗಿದ್ದರೂ ಮನೆಯಲ್ಲಿ ಪ್ರತಿರೋಧ ಒಡ್ಡಿದಾಗ ಜಾತಿವಾದಿಗಳ ಗುಂಪು ಕೊನೆಗೆ ಶಾಂತಿಯ ಹತ್ಯೆ ಮಾಡುತ್ತದೆ.

ನಾಟಕದಲ್ಲಿ ಅನೇಕ ರೂಪಕಗಳು ಬಳಸಿರುವುದು ವಿಶೇಷ. ಧರ್ಮ ವಿರೋಧಿಗಳು ಹುಸೇನಿಗೆ ಹೊಡೆಯುವಂತಹ ಸಂದರ್ಭದಲ್ಲಿ ಕೋಲಿನ ನಾದದ ಜೊತೆಗೆ ಆ ಕೆಂಪಾದ ಫೋಕಸ್ ಲೈಟಿನಲ್ಲಿ ಪಾತ್ರಗಳು ಸುತ್ತಲೂ ತಿರುಗುವುದು ವಿಶೇಷ ಅನಿಸುತ್ತದೆ. ಇನ್ನೊಂದು ವಿಶೇಷವೆಂದರೆ ಈ ಯಲ್ಲಯ್ಯನ ಪಾತ್ರವೇ ನಾಟಕದುದ್ದಕೂ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದು. ಈ ನಾಟಕಕ್ಕೆ ಅನೇಕ ಪಾತ್ರಗಳು ಜೊತೆಯಾಗಿವೆ. ಯಲ್ಲಯ್ಯ ಮುದುಕನ ಪಾತ್ರದಲ್ಲಿ ಲಕ್ಷ್ಮಣ ಮಂಡಲಗೇರಾ ಅವರ ಅಭಿನಯ ಮೆಚ್ಚುವಂತಹದ್ದು. ಈ ನಾಟಕದಲ್ಲಿ ಯುವತಿಯ ಹತ್ಯೆಯನ್ನು ತಡೆಯದೆ ದೇಶದ ಆರಕ್ಷಕರು ಹೇಗೆ ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಎನ್ನುವುದು ಗೊತ್ತಾಗುತ್ತದೆ.

ನಾಟಕಕ್ಕೆ ಬೆಳಕಿನ ವಿನ್ಯಾಸ ಕಡಿಮೆ ಇತ್ತು. ಹಿನ್ನೆಲೆ ಗಾಯನ ನಾಟಕಕ್ಕೆ ಅನುಕೂಲವಾಗುವ ರೀತಿಯಲ್ಲಿ ಇತ್ತು. ಕೆಲವೊಂದು ಪಾತ್ರಗಳು ಬಂದಾಗ ಅನವಶ್ಯಕವಾಗಿ ಚೀರುವಂತೆ ಕಂಡು ಬಂದಿತು. ಅದರ ಜೊತೆಗೆ ಪ್ರೇಕ್ಷಕ ವರ್ಗವೂ ಚೀರಿದಾಗ ಕೆಲ ರಂಗಪ್ರಿಯರಿಗೆ ಮತ್ತು ಶಾಂತತೆಯಿಂದ ಕುಳಿತು ನೋಡುವವರಿಗೆ ಇರಿಸುಮುರಿಸು ಆದುದೂ ಉಂಟು. ಈ ಮೈಸೂರು ಮತ್ತು ಧಾರವಾಡ ರಂಗಪ್ರೇಕ್ಷಕರು ನಾಟಕ ನೋಡುವ ವಿಧಾನ ಬೇರೆ ರೀತಿಯಾಗಿರುತ್ತದೆ.

ಯಾವತ್ತೂ ನಟರಿಗೆ ತೊಂದರೆ ಕೊಡುವ ಕೆಲಸ ಮಾಡುವುದಿಲ್ಲ. ಏನಾದರೂ ನಟರ ಬಾಯಿಯಿಂದ ಹಾಸ್ಯ ಅಥವಾ ಗಂಭೀರ ಮಾತುಗಳು ಬಂದರೆ ಅದಕ್ಕೆ ಒಂದಿಷ್ಟು ಚಪ್ಪಾಳೆ ಕೊಟ್ಟು ಹುರಿದುಂಬಿಸುತ್ತಾರೆ. ಆದರೆ ನಮ್ಮ ರಾಯಚೂರಿನ ಯುವ ಪ್ರೇಕ್ಷಕರು ನಾಟಕವನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಂಡರೆ ರಾಯಚೂರಿನಲ್ಲೂ ರಂಗಸಂಸ್ಥೆಗಳನ್ನು ಕಟ್ಟುವುದರಲ್ಲಿ ಸಂಶಯವಿಲ್ಲ. ಅದೇ ಇಲ್ಲಿನ ರಂಗಪ್ರಿಯರ ಆಶಯ.

ಮಲ್ಲಮ್ಮ ಯಾಟಗಲ್

Monday, 2 October 2017

ಸಂವಾದದ ಹಿರಿಮೆಯನ್ನು ಎತ್ತಿಹಿಡಿದ ಸಮುದಾಯದ ಸೂರ್ಯನ ನೆರಳು




   ಪ್ರತಿ ತಿಂಗಳ ಮೊದಲ ಭಾನುವಾರದಂದು ನಡೆಯುವ ತಿಂಗಳ ಕಥಾ ಓದು ಕಾರ್ಯಕ್ರಮ ಮತ್ತು ಸಂವಾದದ ಹಿರಿಮೆಯನ್ನು ಎತ್ತಿ ಹಿಡಿಯುವ ಸೂರ್ಯನ ನೆರಳು ನಾಟಕಗಳನ್ನು ಒಟ್ಟಿಗೆ ಗಾಂಧಿ ಜಯಂತಿಯಂದು ಹಮ್ಮಿಕೊಳ್ಳುವ ಮೂಲಕ ಕುಂದಾಪುರ ಸಮುದಾಯವು ಗಾಂಧಿಯನ್ನು ಮತ್ತೊಮ್ಮೆ ಚರ್ಚೆಯ ತೆಕ್ಕೆಗೆ ತೆಗೆದುಕೊಂಡಿತು.
   ಬೋಳುವಾರರ ಪಾಪು ಗಾಂಧಿ ಬಾಪೂ ಗಾಂಧಿ ಆದ ಕತೆಯಲ್ಲಿನ ಗಾಂಧಿಯ ಬದುಕಿನ ಮೂರು ಮುಖ್ಯ ಕಾಲಘಟ್ಟವನ್ನು ಪ್ರತಿನಿಧಿಸುವ ಕತೆಗಳನ್ನು ಡಾ. ರಶ್ಮಿ ಕುಂದಾಪುರ ರವರು ಫ್ಲಿಫ್ ಚಾರ್ಟಗಳ ನೆರವಿನಿಂದ ಸೊಗಸಾಗಿ ವಾಚಿಸಿದರು. ವೈದ್ಯ ವೃತ್ತಿಯಲ್ಲಿರುವವರು ಕೆಲವು ಸೂಕ್ಷ್ಮ ವಿಷಯಗಳನ್ನು ಜನರಿಗೆ ಮನದಟ್ಟು ಮಾಡುವಾಗ ಫ್ಲಿಫ್ ಚಾರ್ಟುಗಳನ್ನು ಬಳಸುತ್ತೇವೆ. ಸದ್ಯಕ್ಕೆ, ಗಾಂಧಿಯೂ ಸೂಕ್ಷ್ಮ ಸಂಗತಿಯೇ ಎನ್ನುತ್ತಾ ಆರಂಭಿಸಿದ ಡಾ. ರಶ್ಮಿಯವರು ಕತೆಯ ನಂತರವೂ ಗಾಂಧಿಯ ಈ ಕತೆಯನ್ನು ಓದಲು ಆರಂಭಿಸಿದ ಮೇಲೆ ತನ್ನ ಬದುಕು ಭಾವಗಳ ಮರುಸಂಘಟನೆಗೆ ಹೇಗೆ ಕಾರಣವಾಯಿತು ಎಂಬುದನ್ನೂ ಹಂಚಿಕೊಂಡರು. ಕಥಾ ಓದಿಗೆ ಡಾ. ಹಯವದನ ಮೂಡುಸಗ್ರಿ, ರಾಘವೇಂದ್ರ ಬೈಂದೂರು ಇನ್ನಿತರರು ಪ್ರತಿಕ್ರಿಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಘಟಕದ ಅಧ್ಯಕ್ಷರಾದ ಅಶೋಕ ತೆಕ್ಕಟ್ಟೆ ಡಾ. ರಶ್ಮಿಯವರಿಗೆ ಹೂ ನೀಡಿ ಗೌರವಿಸಿದರು.
   ಕಥಾ ಓದಿನ ನಂತರ ವಾಸುದೇವ ಗಂಗೇರ ನಿರ್ದೇಶನದಲ್ಲಿ ಸಮುದಾಯದ ಕಲಾವಿದರು `ಸೂರ್ಯನ ನೆರಳು’ ನಾಟಕವನ್ನು ಪ್ರದರ್ಶಿಸಲಾಯಿತು. ಉದಯ ಗಾಂವಕಾರ ರಚಿಸಿದ ಈ ಪುಟ್ಟ ನಾಟಕ ಸಂವಾದದ ಸಂಸ್ಕøತಿಯು ಭಾರತದ ಜ್ಞಾನಪರಂಪರೆಯನ್ನು ಹೇಗೆ ಬೆಳೆಸಿತು ಎಂಬ ಸಂಗತಿಗಳನ್ನು ಮನದಟ್ಟು ಮಾಡಿಸುತ್ತಲೇ ಈ ನೆಲದ ಮೂಲನೆಲೆಯಾದ ಮಾತುಕತೆ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಪರಂಪರೆಯಿಂದ ನಾವು ದೂರಸರಿಯುತ್ತಿರುವ ಆತಂಕವನ್ನು ಪ್ರೇಕ್ಷರೆದುರು ಹಿಡಿಯಿತು. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ ಎಂಬುದನ್ನು ಚರಿತ್ರೆಯ ಪುಟಗಳಿಂದ ಪಡೆದ ಪುಟ್ಟ ಪುಟ್ಟ ಸಂವಾದದ ತುಣುಕುಗಳನ್ನು ಪೋಣಿಸಿ ನಿರೂಪಿಸಲಾಯಿತು.
   ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆ ನಡೆದಿದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳಿಗೆ ಪ್ರಶ್ನೆಗಳನ್ನೆಸದಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಶಿವಾನಂದ, ಸಚಿನ್, ಪ್ರಾರ್ಥನಾ, ಸ್ಮಿತಾ, ಅಜಾದ್, ಅನುಷಾ, ಹಿತೇಶ್, ಲಂಕೇಶ್, ನಾಗಶ್ರೀ, ರಶ್ಮಿ, ರಮ್ಯಾ, ಸಂದೇಶ, ಸಂಧ್ಯಾ ನಾಯಕ, ಸುಕನ್ಯಾ ನಾಟಕದುದ್ದಕ್ಕೂ ಲವಲವಿಕೆಯ ಅಭಿನಯ ನೀಡಿದರು.  ಈ ನಾಟಕಕ್ಕೆ ಮೂರು ದಿನಗಳಲ್ಲಿ  ಧ್ವನಿ, ಚಲನೆ ಮತ್ತು ಉಸಿರನ್ನು ನೀಡಿ ಜೀವಂತವಾಗಿಸಿದ ನಿರ್ದೇಶಕ ವಾಸುದೇವ ಗಂಗೇರ ಅವರ ಶ್ರಮ ಮತ್ತು ಸೃಜನಶೀಲತೆ ಪ್ರಶಂಸೆಗೆ ಪಾತ್ರವಾಯಿತು. ನಾಟಕದ ವಿನ್ಯಾಸ, ಸಂಗೀತ ನಿರ್ವಹಣೆಯಲ್ಲಿ ಸಹಕರಿಸಿದ ಚಿನ್ನಾ ವಾಸುದೇವ್, ಸದಾನಂದ ಬೈಂದೂರು, ವಿಕ್ರಂ, ಬಾಲಕೃಷ್ಣ ಎಮ್, ಶಂಕರ ಆನಗಳ್ಳಿ ಇವರೆಲ್ಲರ ಶ್ರಮವೂ ನಾಟಕದಲ್ಲಿ ಪ್ರತಿಫಲಿತವಾಗಿತ್ತು.
    ನಾಟಕದ ನಂತರದ ಸಂವಾದದಲ್ಲಿ ಢಾ. ದಿನೇಶ ಹೆಗ್ಡೆ, ಸುಧಾ ಆಡುಕಳ ಮುಂತಾದವರು ಪ್ರತಿಕ್ರಿಯೆ ನೀಡಿದರು. ರಿಸರ್ವೇಷನ್ ಸಿನೇಮಾ ಖ್ಯಾತಿಯ ಶ್ರೀ ಯಾಕೂಬ್ ಖಾದರ್ ಗುಲ್ವಾಡಿ, ಕಿನಾರೆ ಮತ್ತು ಕನ್ನಡ ಶಾಲೆ ಸಿನೆಮಾ ತಂಡದ ಸದಸ್ಯರು ನಾಟಕವನ್ನು ವೀಕ್ಷಿಸಿದರು. ಕೊನೆಯಲ್ಲಿ ಜಿ.ವಿ.ಕಾರಂತರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

Sunday, 1 October 2017

ಗಾಂಧಿ ಜಯಂತಿಯಂದು ನೆನಪಾಗುವ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ...



ಸೂರ್ಯನ ನೆರಳು

ನಿರ್ದೇಶನ: ವಾಸುದೇವ ಗಂಗೇರ
ರಚನೆ: ಉದಯ ಗಾಂವಕಾರ
ಸಂಗೀತ ನಿರ್ವಹಣೆ: ಸದಾನಂದ ಬೈಂದೂರು, ವಿಕ್ರಂ 
ವಸ್ತ್ರ ವಿನ್ಯಾಸ: ಚಿನ್ನಾ ವಾಸುದೇವ್
ರಂಗ ವಿನ್ಯಾಸ: ಬಾಲಕೃಷ್ಣ ಎಂ
ನಿರ್ವಹಣೆ: ಜಿ.ವಿ.ಕಾರಂತ, ಶಂಕರ ಆನಗಳ್ಳಿ
ಅನುಷಾ
ಅಜಾದ್ ಬೈಂದೂರು
ಹಿತೇಶ್
ಲಂಕೇಶ್
ನಾಗಶ್ರೀ
ಪಾರ್ಥನಾ ಗಾಂವಕಾರ
ರಶ್ಮಿ
ರಮ್ಯಾ
ಸಚಿನ್
ಸ್ಮಿತಾ
ಸಂದೇಶ
ಸಂಧ್ಯಾ ನಾಯಕ
ಶಿವಾನಂದ
ಸುಕನ್ಯಾ


ಅಕ್ಟೋಬರ್ 2, 2017: ಸಂಜೆ 4.00 ಕ್ಕೆ
ಎಚ್ ಎಮ್ ಎಮ್ ಶಾಲೆಯ ಹಳೆಯ ಕಟ್ಟಡ, ಕುಂದೇಶ್ವರ ರಸ್ತೆ, ಕುಂದಾಪುರ

  ಮನುಷ್ಯನ ಚರಿತ್ರೆಯನ್ನು ವಿಚಾರಗಳ ಸಾಹಸ ಎಂದು ಕರೆಯಲಾಗುತ್ತದೆ.  ಪ್ರಶ್ನೆ ಹುಟ್ಟಿಕೊಂಡ ಮರುಗಳಿಗೆಯಲ್ಲೇ ಮನುಷ್ಯ ಹುಟ್ಟಿಕೊಂಡ. ಉಸಿರಾಟ, ಆಹಾರ ಸೇವನೆ, ನಿದ್ದೆ, ಮೈಥುನಗಳು ಮಾತ್ರವೇ ಜೀವಂತಿಕೆಯ ಚಿಹ್ನೆಗಳಲ್ಲ್ಲ; ಪ್ರಶ್ನಿಸುವ ಚೈತನ್ಯ ಕೂಡಾ ಜೀವಂತಿಕೆಯ ಲಕ್ಷಣ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ, ಮನುಷ್ಯನ ಮಟ್ಟಿಗಂತೂ ಜೀವಂತಿಕೆಯ ಲಕ್ಷಣ ಇದೊಂದೆ! ನಾವು ಪ್ರಶ್ನಿಸುತ್ತಿದ್ದೇವೆಂದರೆ ಯೋಚಿಸುತ್ತಿದ್ದೇವೆಂದು ಅರ್ಥ. ಸ್ವತಂತ್ರವಾಗಿ ಯೋಚಿಸುವವರು ಸ್ವತಂತ್ರ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳಿರುವುದು ಪ್ರತಿಯೊಬ್ಬರಿಗೂ ತಮ್ಮದೇ ಆಸೆ, ಆಮಶಂಕೆ, ಜ್ವರ, ನೆಗಡಿ ಕೆಮ್ಮು ಇರುವಷ್ಟು ಸ್ವಾಭಾವಿಕ. ಸಂವಾದ ಸಂಸ್ಕøತಿಯಿಂದಲೇ ಮನುಷ್ಯ ಸಮಾಜವು ಇಲ್ಲಿಯವರೆಗೂ ಬರೆಲು ಸಾಧ್ಯವಾಗಿದೆ. ದೂರದ ಗಮ್ಯಕ್ಕೂ ಇದೇ ದಾರಿ. ಬುದ್ಧ, ಬಸವ,  ಗಾಂಧಿ, ಅಂಬೇಡ್ಕರ್ ರನ್ನೂ ಒಳಗೊಂಡಂತೆ ಮಾನವ ಇತಿಹಾಸದಲ್ಲಿ ಮಿಂಚಿ ಮರೆಯಾದ ಮಹಾ ಚೇತನಗಳೆಲ್ಲ ಸಂವಾಧದ ಸಮುದ್ರ-ಮಥನದಿಂದ ಉದ್ಭವಿಸಿದವರೇ! ಇಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದಿಲ್ಲ. ಒಬ್ಬರು ಇನ್ನಬ್ಬರನ್ನುಆವಿರ್ಭವಿಸಿಕೊಂಡು ಹೊಸ ಹುಟ್ಟನ್ನು ಪಡೆಯುತ್ತಾರೆ.  ಸೂರ್ಯನಿಗಿಂತ ಪಖರವಾದ ಬೆಳಕಿನ ಹಿನ್ನೆಯಲ್ಲಿ ಮಾತ್ರ ಸೂರ್ಯನ ನೆರಳು ಸಾಧ್ಯ.
ಗಾಂಧಿ ತನ್ನ ಜೀವಿತದ ಪ್ರತಿ ಘಟ್ಟದಲ್ಲೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅನೇಕ ಪ್ರಶ್ನೆಗಳನ್ನು ಎದುರಿಸುತ್ತಾರೆ. ಅವರ ಸಾವೂ ಅವರು ಕೇಳಿದ ಪ್ರಶ್ನೆಯೇ!
ಸೂರ್ಯನ ನೆರಳು ನಾಟಕವು ಗಾಂಧಿಯ ಸಾವಿನ ನಂತರದ ಪ್ರಶ್ನೆಗಳನ್ನು ಎದುರಿಸುತ್ತದೆ. ಈ ನೆಲದಲ್ಲಿ ಒಡಮೂಡಿದ ವಿವೇಕದಲ್ಲಿ ನೂರಾರು, ಸಾವಿರಾರು ಸಂವಾದಗಳ ತಿಳಿವಿನ ಎಳೆಗಳು ಜೋಡಿಸಿಕೊಂಡಿವೆ. ಆಧುನಿಕ ಕಾಲದ ಗಾಂಧಿ-ಅಂಬೇಡ್ಕರ್, ಗಾಂಧಿ-ಎಮ್ ಎನ್ ರಾಯ್ ರ ನಡುವೆ ಇದ್ದಿರುವ ವ್ಯತ್ಯಾಸಗಳೇ ಉಪನಿಷತ್ತುಗಳಲ್ಲಿ ಬರುವ ಉದ್ಧಾಲಕ ಮತ್ತು ಯಾಜ್ಞವಲ್ಕ್ಯರ ನಡುವೆಯೂ ಇದ್ದವು. ಚಾರ್ವಾಕ, ಬುದ್ಧ, ಬಸವ ಮುಂತಾದವರೆಲ್ಲರೂ ಆಯಾ ಕಾಲದ ಯಥಾಸ್ಥಿತಿವಾದಿಗಳನ್ನು ಪ್ರಶ್ನೆಗಳ ಮೂಲಕ ಎದುರಿಸಿದ್ದರು. ಗಾಂಧಿಯಿಂದ ಅಂಬೇಡ್ಕರ್ ಎಷ್ಟನ್ನು ಪಡೆದುಕೊಂಡಿದ್ದರೋ ಅಷ್ಟನ್ನು ಅಂಬೇಡ್ಕರರಿಂದ ಗಾಂಧಿಯೂ ಪಡೆದುಕೊಂಡಿದ್ದರು. ವೈಚಾರಿಕ ವಿಕಾಸಕ್ಕೆ ಸಂವಾದದ ಜರೂರು ಇದೆ ಎನ್ನುವುದನ್ನು ಈ ನಾಟಕ ಮತ್ತೆ ಮತ್ತೆ ಹೇಳುತ್ತದೆ.
 ನಾಟಕದುದ್ದಕ್ಕೂ ವಿಭಿನ್ನ ಯೋಚನೆ, ಸಿದ್ಧಾಂತಗಳನ್ನು ಮುಖಾಮುಖಿಯಾಗಿಸುತ್ತಲೇ ಯಾವುದನ್ನೂ ಕಡೆಯದೆ, ಯಾವುದನ್ನೂ ಹಿರಿದೆಂದು ಎತ್ತಿಹಿಡಿಯದೆ ನಮ್ಮ ನಡುವೆ ಮಾತುಕತೆ ಅಗತ್ಯ ಎಂಬುದಷ್ಟನ್ನೇ ಈ ನಾಟಕ ಸೂಚಿಸುತ್ತದೆ. ಗಾಂಧಿಯ ಸಾವಿನಿಂದ ಆರಂಭವಾಗುವ ನಾಟಕ ಸಮಯರೇಖೆಯ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಾ ಕಾಲಾತೀತವಾಗುತ್ತದೆ. ಆಗಾಗ ನಟರು ವರ್ತಮಾನಕ್ಕೆ, ದೈನಿಕದ ಕಡು ವಾಸ್ತವಕ್ಕೆ ಹಿಂದಿರುಗುತ್ತಾರೆ. ಈ ನೆಲದ ಇತಿಹಾಸವನ್ನು ಮತ್ತೆ ಮತ್ತೆ ಮುಟ್ಟಿನೋಡುತ್ತಾರೆ.  ಕೆಲವೊಮ್ಮೆ ಹಠಾತ್ತನೆ ನಾಟಕದಿಂದ ಹೊರಬಂದು ಪ್ರೇಕ್ಷಕರಾಗಿಬಿಡುತ್ತಾರೆ. ಗಾಂಧಿ ಜಯಂತಿಯ ಸಮಯದಲ್ಲಿ ಬೇಡವೆಂದರೂ ನೆನಪಾಗಬಹುದಾದ ಸಂಗತಿಗಳಿಗೆ ಪ್ರತಿಕ್ರಿಯಿಸುವ ತುರ್ತಿನಲ್ಲಿ ಈ ನಾಟಕ ಹುಟ್ಟಿಕೊಂಡಿದೆಯೆಂಬುದನ್ನು ಒಪ್ಪುತ್ತಲೇ ನಾಟಕವನ್ನು ನೋಡಲು ನಿಮ್ಮನ್ನು ಪ್ರೀತಿಯಿಂದ ಒತ್ತಾಯಿಸುತ್ತದೆ ಸಮುದಾಯ.

Tuesday, 29 August 2017

ವಿದ್ಯಾರ್ಥಿಗಳ ಮನಸೂರೆಗೊಂಡ ಸಮುದಾಯದ ಕಾವ್ಯರಂಗ














ಯುವಕ-ಯುವತಿಯರ ದೇಹಭಾಷೆಗೆ ಕಾವ್ಯದ ಸಾಹಚರ್ಯವನ್ನು ಒದಗಿಸುವ ಉದ್ಧೇಶದಿಂದ ಸಮುದಾಯ ಕರ್ನಾಟಕ ರೆಪರ್ಟರಿ ರೂಪಿಸಿದ ಕಾವ್ಯರಂಗ ಪ್ರಯೋಗ ಕುಂದಾಪುರದ ಆಸುಪಾಸಿನ ಐದು ಕಾಲೇಜುಗಳಲ್ಲಿ  ಪ್ರದರ್ಶನ ಗೊಂಡು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕುಂದಾಪುರ ಸಮುದಾಯದ ಸಂಯೋಜನೆಯಲ್ಲಿ ಎರಡು ದಿನಗಳಲ್ಲಿ ಸುಮಾರು ಮೂರುಸಾವಿರ ವಿದ್ಯಾರ್ಥಿಗಳನ್ನು ತಲುಪಿದ ಈ ಪ್ರಯೋಗವು ಕನ್ನಡದ ನಾಡು-ನುಡಿ ರೂಢಿಸಿಕೊಂಡುಬಂದ ಸಾಮರಸ್ಯ, ಸಹಬಾಳ್ವೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕಥನ-ಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ರಂಗದ ಸಶಕ್ತ ಭಾಷೆಯ ಮೂಲಕ ತಲುಪಿಸುವಲ್ಲಿ ಯಶಸ್ವಿಯಾಯಿತು. ಕವಿರಾಜ ಮಾರ್ಗಕಾರ ನೃಪತುಂಗನಿಂದ ನಾವು ಹುಡುಗಿಯರೇ ಹೀಗೆ ಎಂದ ಪ್ರತಿಭಾ ನಂದಕುಮಾರರವರೆಗೆ, ಭಾರತವನ್ನು ಕನ್ನಡದ ಕಣ್ಣಿನಲ್ಲಿ ಕಂಡ ಪಂಪನಿಂದ ರಾಮಾಯಣವನ್ನು ವೈಚಾರಿಕ ನೆಲೆಯಲ್ಲಿ ಮರುಲೇಖಿಸಿದ ಕುವೆಂಪುವರೆಗೆ, ಮಣ್ಣಿನ ಸಂಗಾತವನ್ನು ಹಪಹಪಿಸಿದ ಕಾರಂತರ ಚೋಮನಿಂದ ವ್ಯವಸ್ಥೆಯ ಕ್ರೌರ್ಯವನ್ನು ವ್ಯಂಗ್ಯದಲ್ಲಿ ತೆರೆದಿಡುವ ದೇವನೂರರ ಸಾಕವ್ವನವರೆಗೆ, ವಚನಕಾರರಿಂದ ತತ್ವಪದಕಾರರವರೆಗೆ ಹೀಗೆ ಕನ್ನಡ ಪರಂಪರೆಯ ಪ್ರಾತಿನಿಧಿಕ ಕೃತಿಗಳ ತುಣುಕುಗಳನ್ನು ಸಂಬಂಧ ಪರಿಕಲ್ಪನೆಯಲ್ಲಿ ಜೋಡಿಸಿ ರಂಗ ನಿರ್ದೇಶಕ ಡಾ ಶ್ರೀಪಾದ ಭಟ್ ನಿರ್ದೇಶಿಸಿದ ಈ ಪ್ರಯೋಗಕ್ಕೆ ಜೀವತುಂಬಿದವರು ಧಾರವಾಡ ಸಮುದಾಯದ ನಟ-ನಟಿಯರು.

 ಬೈಂದೂರು ಪದವಿಪೂರ್ವ ಕಾಲೇಜು, ಬಸ್ರೂರಿನ ಶಾರದಾ ಕಾಲೇಜು, ಬ್ರಹ್ಮಾವರದ ಎಸ್ ಎಮ್ ಎಸ್ ಕಾಲೇಜು, ಕುಂದಾಪುರದ ಡಾ. ಬಿ. ಬಿ .ಹೆಗ್ಡೆ ಕಾಲೇಜು ಮತ್ತು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆದ ಈ ಪ್ರಯೋಗಗಳ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ಏರ್ಪಡಿಸಲಾಯಿತು. ಯುವಕ-ಯುವತಿಯರು ಮತ್ತೆ ಪುಸ್ತಕಗಳಿಗೆ, ಕಾವ್ಯದ ಕಂಪಿಗೆ ಮರು ಪ್ರಯಾಣ ನಡೆಸಲು ಈ ಪ್ರದರ್ಶನ ಸ್ಪೂರ್ತಿಯಾಗುತ್ತದೆ ಎಂಬ ಭರವಸೆಯನ್ನು ವಿದ್ಯಾರ್ಥಿಗಳು ವ್ಯಕ್ತಪಡಿಸಿದರು. ಈ ಪ್ರದರ್ಶನಕ್ಕೆ ಬೆಂಬಲ ನೀಡಿದ ವಿವಿಧ ಕಾಲೇಜುಗಳ ಆಡಳಿತ ವೃಂದ, ಕುಂದಾಪುರದ ರೋಟರಿ ಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಕೋಟೇಶ್ವರ ಹೋಬಳಿ ಘಟಕ ಮತ್ತು ಉಡುಪಿ ಜಿಲ್ಲೆಯ ಪ್ರೌಢಶಾಲಾ ಕನ್ನಡ ಶಿಕ್ಷಕರ ಸಂಘ ಮತ್ತು ಸಾವಿರ ಸಾವಿರ ಸಂಖ್ಯೆಯ ಸಹೃದಯರಿಗೆ ಕೃತಜ್ಙತೆಗಳು

Monday, 10 July 2017

ಇಫ್ತಾರ್‌ ಕೂಟ, ಪ್ರಜಾತಾಂತ್ರಿಕ ಮೌಲ್ಯ ಮತ್ತು ಚರಿತ್ರೆಯ ಭಾರ



ಸಂವಾದಗಳು ಪ್ರಜಾಪ್ರಭುತ್ವವನ್ನು ಜೀವಂತವಾಗಿಡುವ ಆಮ್ಲಜನಕವಿದ್ದಂತೆ. ವಿಭಿನ್ನ ದೃಷ್ಟಿಕೋನ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ನಾವು ಸಂಯಮದಿಂದ ಮತ್ತು ತುಂಬು ಗೌರವದಿಂದ ಆಲಿಸುವುದನ್ನು ಕಲಿಯಬೇಕಿದೆ. ಪೇಜಾವರ ಶ್ರೀಗಳು ಆಯೋಜಿಸಿದ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ವಿಭಿನ್ನ ಅನಿಸಿಕೆಗಳು ಇಲ್ಲಿವೆ.












________________________________________________________________________

ಸಂಗತ

ಉಡುಪಿಯ ‘ಇಫ್ತಾರ್’ ಸ್ತುತ್ಯರ್ಹ

ಎಸ್.ಆರ್. ವಿಜಯಶಂಕರ

29 Jun, 2017




ನೂರಾರು ವರ್ಷಗಳಿಂದ ಉಡುಪಿಯಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು ಸಹಬಾಳ್ವೆ ನಡೆಸಿದ್ದಾರೆ. ಆ ಊರಿನ ನಿಜವಾದ ಚರಿತ್ರೆಯನ್ನು ಸ್ವಾಮೀಜಿ ನೆನಪಿಸಿಕೊಟ್ಟಿದ್ದಾರೆ...ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಮುಸ್ಲಿಮರನ್ನು ಆಹ್ವಾನಿಸಿ ಆತಿಥ್ಯ ನೀಡಿದ್ದನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ವಿರೋಧಿಸಿದ ವರದಿ ಓದಿ ದುಃಖವಾಯಿತು (ಪ್ರ.ವಾ. ಜೂನ್‌ 27).

‘ನನ್ನ ಧರ್ಮ ಪಾಲಿಸಿದ್ದೇನೆ’ ಎಂದು ಪ್ರತಿಕ್ರಿಯೆ ನೀಡಿದ ಪೇಜಾವರ ಸ್ವಾಮೀಜಿ ಸ್ತುತ್ಯರ್ಹ ಕೆಲಸ ಮಾಡಿದ್ದಾರೆ. ಅವರು ಇಫ್ತಾರ್ ಕೂಟ ನಡೆಸಿರುವುದು ಯಾಕೆ ಸರಿ ಎಂಬುದಕ್ಕೆ ನನಗೆ ಅನಿಸಿದ ಕೆಲವು ವಿಚಾರಗಳನ್ನು ಹಂಚಿಕೊಳ್ಳುತ್ತೇನೆ.ವಿ

ಭಜನಾಪೂರ್ವ ದಕ್ಷಿಣ ಕನ್ನಡ, ಕೋಮು ಸೌಹಾರ್ದಕ್ಕೆ ಹೆಸರಾಗಿದ್ದ ಜಿಲ್ಲೆಯಾಗಿತ್ತು. ಈಚಿನ ಕೆಲವು ವರ್ಷಗಳಲ್ಲಿ ಆ ಸೌಹಾರ್ದವನ್ನು ಉದ್ದೇಶಪೂರ್ವಕ ಕಲಕಲಾಗಿದೆ. ಉಳ್ಳಾಲದ ಮುಸ್ಲಿಮರ ದರ್ಗಾಕ್ಕೆ ಹಿಂದೂಗಳೂ ಹರಕೆ ಹೇಳುವುದು ಅಲ್ಲಿಂದ ನಲವತ್ತು ಮೈಲು ದೂರದ ನನ್ನ ವಿಟ್ಲ ಪಡ್ಕೂರು ಗ್ರಾಮದಲ್ಲಿ 1970ರ ದಶಕದಲ್ಲಿ ಸಾಮಾನ್ಯ ವಿಚಾರವಾಗಿತ್ತು. ದನಕರುಗಳ ಆರೋಗ್ಯಕ್ಕಾಗಿ ಕುಂಬಳೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹರಕೆ ಹೊತ್ತಂತೆ ಉಳ್ಳಾಲದ ದರ್ಗಾಕ್ಕೂ ಹರಕೆ ಹೊರುತ್ತಿದ್ದರು.

ನಾನು ಉಡುಪಿಯಲ್ಲಿದ್ದಾಗ 1980ರಲ್ಲಿ ನಡೆದ ಒಂದು ಘಟನೆ; ಸಾಮಾಜಿಕ ಕಾರ್ಯಕರ್ತ ಯು.ಆರ್. ಜಯವಂತರ ಬಳಿ ಕೌಟುಂಬಿಕ ದೂರು ಕೊಡುವುದಕ್ಕಾಗಿ ಬಂದಿದ್ದ ವೃದ್ಧೆಯೊಬ್ಬಳು ತುಳುವಿನಲ್ಲಿ ‘ಯಾನು ಸಾಯಿಬ್ಬರೆ ಪಡಿಗು ಉಂತುದಾಂಡಲ ಜೀವನ ಕಳೆವೆ (ನಾನು ಸಾಯಿಬ್ಬರು ಎಲ್ಲರಿಗೂ ನೀಡುವ ಉಚಿತ ಅಕ್ಕಿ ಪಡೆದಾದರೂ ಜೀವನ ಕಳೆದೇನು) ಎಂದಳು.

ಸಾಯಿಬ್ಬರ ಪಡಿ ಎನ್ನುವುದು ಅಲ್ಲಿ ಬಳಕೆ ಮಾತು. ಹಾಜಿ ಅಬ್ದುಲ್ಲ ಸಾಹೇಬರು ಜಾತಿ, ಧರ್ಮಗಳ ಭೇದವಿಲ್ಲದೆ ಬಡವರಿಗೆ ಧರ್ಮಾರ್ಥವಾಗಿ ಊಟಕ್ಕೆ ಅಕ್ಕಿಯನ್ನು (ಪಡಿ) ಪ್ರತಿದಿನ ನೀಡುತ್ತಿದ್ದರು. ಇದೇ ಹಾಜಿ ಅಬ್ದುಲ್ಲ ಉಡುಪಿಯ ಸರ್ಕಾರಿ ಆಸ್ಪತ್ರೆಗೆ ಜಾಗ, ಹಣ ಎರಡನ್ನೂ ದಾನ ಮಾಡಿದರು.




ಉಡುಪಿಯ ಹಿಂದೂ ಧಾರ್ಮಿಕ ಸಂಸ್ಥೆಗಳು ಕಷ್ಟದಲ್ಲಿದ್ದಾಗ ಸಾಲ ನೀಡಿದ ಮುಸ್ಲಿಮರಿದ್ದರು. ಉಡುಪಿಯ ಹಳೆ ಭೂಮಿ ದಾಖಲೆಗಳಲ್ಲಿ ಮಠದ ಹತ್ತಿರದ ಜಾಗಗಳು ನವಾಯತ (ಮುಸ್ಲಿಂ) ಕೇರಿಗಳೆಂದು ದಾಖಲಾಗಿದೆ. ಇದರ ಅರ್ಥ ನೂರಾರು ವರ್ಷಗಳ ಕಾಲ ಉಡುಪಿಯಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು, ಬ್ರಾಹ್ಮಣರು ಸಹ ಬಾಳ್ವೆ ನಡೆಸಿದ್ದಾರೆ. 800 ವರ್ಷಗಳ ಹಿಂದೆ ರಾಘವೇಂದ್ರ ಮಠ ಸ್ಥಾಪನೆಗೆ ಮುಸ್ಲಿಂ ಸುಲ್ತಾನರು ಜಾಗ ನೀಡಿದ್ದಾರೆ. ‘ತಮ್ಮ ಗುರುಗಳು ಹಾಜಿ ಅಬ್ದುಲ್ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದಾರೆ’ ಎಂದು ಪೇಜಾವರ ಸ್ವಾಮಿಗಳು ಹೇಳಿದ ಮಾತುಗಳನ್ನು ನಾವು ಗೌರವಿಸಬೇಕಾಗಿದೆ.

ಇದೇ ರೀತಿ ಮುಸ್ಲಿಮರು ಕೂಡಾ ಅನೇಕ ಹಿಂದೂ ಸಂಸ್ಥೆ, ದೇವಾಲಯಗಳಿಗೆ ಹರಕೆ ಹೇಳುತ್ತಿದ್ದರು. ನಾನಿದ್ದ ಹಳ್ಳಿಯಲ್ಲಿ ಅನೇಕ ಮುಸ್ಲಿಂ ಮನೆಗಳಿದ್ದವು. ಊರ ಭೂತಕೋಲ ನಡೆಯುವಾಗ ಮುಸ್ಲಿಮರು ಹಾಗೂ ಮುಸ್ಲಿಂ ಹೆಂಗಸರು ಕಾಣಿಕೆ ನೀಡುತ್ತಿದ್ದರು. ಯಾರಾದರೂ ಹಿಂದೂಗಳ ಕೈಯಲ್ಲಿ ಸ್ವಲ್ಪ ಹಣ ಕೊಟ್ಟು ಅದನ್ನು ಕಾಣಿಕೆ ಹಾಕಲು ಹೇಳುತ್ತಿದ್ದರು. ನಮ್ಮ ಊರಿನ ಮುಸ್ಲಿಮರು ಧರ್ಮಸ್ಥಳದ ದೇವರಿಗೂ ಕಾಣಿಕೆ ಹಾಕುತ್ತಿದ್ದುದು ಇದೆ. ಆ ಹಣವನ್ನು ಹೆಚ್ಚಾಗಿ ಹಿಂದೂಗಳ ಕೈಯಲ್ಲಿ ಕೊಟ್ಟು ದೇವರ ಹುಂಡಿಗೆ ಹಾಕಿಸುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣೆ ಕಾನೂನು ಬಂದಾಗ ಲಕ್ಷಾಂತರ ಮಂದಿ ಭೂ ಮಾಲೀಕರಾದರು. ಆಗ ಟ್ರಿಬ್ಯೂನಲ್‌ಗಳಲ್ಲಿ, ಕೋರ್ಟ್‌ ಕಚೇರಿಗಳಲ್ಲಿ ಒಕ್ಕಲು ಮಸೂದೆಯ ಹಕ್ಕಿಗಾಗಿ ಮುಸ್ಲಿಮರು ಹಾಗೂ ಹಿಂದೂಗಳು ಒಂದಾಗಿ ಹೋರಾಡುತ್ತಿದ್ದರು. ಮುಸ್ಲಿಮರು ಸಂಪೂರ್ಣ ನಂಬಿಕೆಯಿಂದ ಹಿಂದೂ ವಕೀಲರುಗಳನ್ನು ನೇಮಿಸಿಕೊಳ್ಳುತ್ತಿದ್ದರು. ಐದು ಸೆಂಟ್ಸ್ ಭೂಮಿಗಾಗಿ ನಮ್ಮ ಊರಿನ ಮುಸ್ಲಿಮನೊಬ್ಬ ತನ್ನ ಹೆಂಡತಿಯ ಚಿನ್ನ ಮಾರಿ ಸಾಲ ಮಾಡಿ ಹೈಕೋರ್ಟಿನಲ್ಲಿ ಭೂಮಾಲೀಕರ ವಿರುದ್ಧ ಹೋರಾಡಿದ. ತಾನು ಭೂಮಿಯನ್ನು ಪ್ರೀತಿಸುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೆ?
ಮಧ್ವ ಪರಂಪರೆಯ ಯತಿಗಳು ಮುಸ್ಲಿಮರ ಜತೆ ಮೊದಲಿನಿಂದಲೂ ಉತ್ತಮ ಸ್ನೇಹ, ಸೌಹಾರ್ದ ಬೆಳೆಸಿಕೊಂಡು ಬಂದಿದ್ದಾರೆ ಎಂದು ಹೇಳುವುದರ ಮೂಲಕ ಪೇಜಾವರ ಸ್ವಾಮಿಗಳು ಆ ಊರಿನ ನಿಜವಾದ ಚರಿತ್ರೆಯನ್ನು ಜ್ಞಾಪಿಸಿ ಕೊಟ್ಟಿದ್ದಾರೆ. ಅಜೆಂಡಾ ಒಂದನ್ನೇ ಹಿಡಿದುಕೊಂಡು ಇನ್ನೊಂದು ಊರಿನಿಂದ ಬರುವವರಿಗೆ ಆ ಊರಿನ ಸೌಹಾರ್ದದ ಚರಿತ್ರೆ ತಿಳಿದಿರುವುದಿಲ್ಲ. ಉಡುಪಿಯ ಕೋಮು ಸೌಹಾರ್ದವನ್ನು ಇಫ್ತಾರ್ ಕೂಟದ ಮೂಲಕ ನೆನಪಿಸಿ ಪೇಜಾವರ ಸ್ವಾಮೀಜಿ ದೇವರು ಮೆಚ್ಚುವ ಮಾನವ ಪ್ರೀತಿಯ ಕೆಲಸ ಮಾಡಿದ್ದಾರೆ. ಈ ಉತ್ತಮ ಕೆಲಸಕ್ಕೆ ಗೋಪಾಲಕನಾದ ಶ್ರೀ ಕೃಷ್ಣ ಪರಮಾತ್ಮನೂ ಆಶೀರ್ವದಿಸುತ್ತಾನೆ ಎಂಬ ನಂಬುಗೆ ನನ್ನದು.
________________________________
ನಾಡಿಗೇ ಮಾದರಿ
–ವೈದೇಹಿ, ಮಣಿಪಾಲ
ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರು ಮುಸ್ಲಿಂ ಬಾಂಧವರನ್ನು ಇಫ್ತಾರ್ ಸ್ನೇಹಕೂಟಕ್ಕೆ ಆಹ್ವಾನಿಸಿರುವುದು ನಿಜಕ್ಕೂ ಒಂದು ದೊಡ್ಡ ಹೆಜ್ಜೆ. ಇದರಿಂದಾಗಿ ತಾನು ಎದುರಿಸಬೇಕಾದ ವಿರೋಧಗಳ ಎಲ್ಲ ಅರಿವಿದ್ದೂ ತನ್ನ ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಂಡ ಅವರ ರೀತಿ ನಾಡಿಗೇ ಒಂದು ಮಾದರಿ.
ಸ್ವಾಮೀಜಿಯವರು ತನ್ನ ಪ್ರೀತಿಯ ಕೈಚಾಚಿ ಅವರನ್ನು ಮಠದೊಳಗೆ ಬರಮಾಡಿಕೊಂಡದ್ದಷ್ಟೇ ಅಲ್ಲ, ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಲಾಗಾಯ್ತಿನಿಂದ ಇದ್ದ ನಂಟಿನ ಪರಂಪರೆಯನ್ನು ನೆನಪಿಸಿಕೊಂಡಿದ್ದಾರೆ. ಮಠದ ಈ ಸಮಾರಂಭದ ಚಿತ್ರದಲ್ಲಿ ಅತಿಥಿಗಳನ್ನು ನಿಷ್ಕಲ್ಮಶ ಕಿರುನಗೆಯಿಂದ ಕೂಡಿ ಮಾಗಿದ ವಾತ್ಸಲ್ಯಭರಿತ ಅಜ್ಜಿಯಂತೆ ಉಪಚರಿಸುವ ಪೇಜಾವರರ ಚಿತ್ರ ಒಂದು ಅರ್ಥಪೂರ್ಣ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ.




ಸ್ವಾಮೀಜಿಯ ಕರೆಯ ಮೇರೆಗೆ ಮುಸ್ಲಿಂ ಬಾಂಧವರೂ ಬಂದರು, ಉಪಾಹಾರ ಸೇವಿಸಿದರು. ಭಕ್ತಿಯಿಂದ ನಮಾಜು ಮಾಡಿದರು. ಇದೂ ದೊಡ್ಡದೇ. ಪ್ರೀತಿ ಸ್ನೇಹದ ಬೆಲೆ ಅರಿತು, ಯಾವ ಕಹಿಯಿಲ್ಲದೆ ಬಂದ ಈ ಅತಿಥಿಗಳದೂ ಕೂಡ ದೊಡ್ಡ ಮಾದರಿಯೇ.

ಸಾಮಾಜಿಕ ಸ್ನೇಹ ಸೌಹಾರ್ದದ ಬಾಳುವೆಗಾಗಿ ನಡೆದ ಈ ಹೊಸ ಪರಿಯ ಪೀಠಿಕೆ ಕಂಡು ಅದನ್ನು ಹಂಬಲಿಸುವ ಎಲ್ಲರ ಮನ ತುಂಬಿದೆ. ಕಣ್ಣು ಕಂಬನಿಗೂಡಿದೆ.

ಹಾಜಿ ಅಬ್ದುಲ್ಲಾ ಸಾಹೇಬ್ ಅವರಂತಹ ಉದಾರದಾನಿ ಧೀಮಂತರು ಮಠದ ಇತಿಹಾಸವಷ್ಟೇ ಅಲ್ಲ, ಉಡುಪಿಯ ಇತಿಹಾಸದೊಂದಿಗೇ ಬೆರೆತು ಹೋಗಿದ್ದಾರೆ. ಬದುಕಿದ್ದಾಗಲೇ ದಂತಕತೆಯಂತಿದ್ದ ಅವರು ಅಕ್ಷರಶಃ ಸ್ವಚ್ಛ ಸಮಾಜದ ಹರಿಕಾರರಾಗಿ ನಮ್ಮ ಸ್ಮೃತಿಯಲ್ಲಿ ಇವತ್ತಿಗೂ ಅಚ್ಚಳಿಯದೆ ಇದ್ದಾರೆ. ಸಮಾಜವನ್ನು ನಡೆಸುತ್ತಿರುವುದು ಎಲ್ಲ ಸಮುದಾಯಗಳ ಪರಸ್ಪರ ಅವಲಂಬನೆ ಹೊಂದಾಣಿಕೆ ಪ್ರೀತಿ ಸ್ನೇಹಗಳೇ ಹೊರತು ಅವಿವೇಕಿ ಜಗಳ ದೊಂಬಿಗಳಲ್ಲವಷ್ಟೆ?

ಇವತ್ತು ಸಾಮಾಜಿಕ ಮನೋಸ್ವಾಸ್ಥ್ಯಕ್ಕಾಗಿ ದುಡಿಯುವಲ್ಲಿ, ಜನರ ಮನ ಒಲಿಸಿ ಒಂದಾಗಿಸುವಲ್ಲಿ ಎಲ್ಲಾ ಮತಗಳ ಧರ್ಮಗುರುಗಳು ಪಾತ್ರ/ಹೊಣೆ ವಹಿಸಲೇಬೇಕಾದ ಪರಿಸ್ಥಿತಿ ಇದೆ. ಮತಗಳ ಮೂಲ ಧ್ಯೇಯವೇ ಪ್ರೀತಿ ಸೌಹಾರ್ದ ಕಾರುಣ್ಯವಲ್ಲವೆ?
ಅದೃಷ್ಟವಶಾತ್ ಮುಸ್ಲಿಂ ಧರ್ಮಗುರುಗಳು ಯಾರೂ ತಮ್ಮ ಸಮುದಾಯದವರು ಮಠಕ್ಕೆ ತೆರಳಿ ನಮಾಜು ಮಾಡಿದ್ದನ್ನು ವಿರೋಧಿಸಿಲ್ಲ. ಪೇಜಾವರರ ನಡೆಯನ್ನು ವಿರೋಧಿಸುವವರ ಹೇಳಿಕೆಗಳು ದಿಗ್ಭ್ರಮೆಗೊಳಿಸುತ್ತಿವೆ. ಇದು - ‘ವಿರೋಧವು ಅಳಿಯಲೇ ಬಾರದು, ಸದಾಕಾಲ ಜಾರಿಯಲ್ಲಿರಬೇಕು’ ಎಂಬ ಜೀವವಿರೋಧಿ ಆಕಾಂಕ್ಷೆಯೆ?ಶಾಂತಿಯುತ ಸಹಬಾಳ್ವೆಯ ಹಂಬಲವಿದ್ದವರಾರೂ ಸ್ವಾಮೀಜಿಯ ಈ ಕಾರ್ಯವನ್ನು ವಿರೋಧಿಸಲಾರರು.
___________________________________________________________

ಎಂ.ಅಬ್ದುಲ್ ರೆಹಮಾನ್ ಪಾಷ

30 Jun, 2017

ನಿಮಗೆ ಭಾರತದಲ್ಲಿ ಕೋಮು ಸೌಹಾರ್ದ ಬೇಕೇ? ಹಾಗಾದರೆ ದಯವಿಟ್ಟು ಅದಕ್ಕಾಗಿ ಏನೂ ಮಾಡಲು ಹೋಗಬೇಡಿ...


ಅರೇಬಿಕ್ ಭಾಷೆಯಲ್ಲಿ ‘ಇಫ್ತಾರ್‌’ ಎಂದರೆ (ಬ್ರೇಕ್‌ಫಾಸ್ಟ್‌) ಉಪವಾಸವನ್ನು ಮುರಿಯುವುದು ಎಂದರ್ಥ. ನಿತ್ಯ ಮುಂಜಾನೆ ಉಪಾಹಾರ ತೆಗೆದುಕೊಳ್ಳುವುದಕ್ಕೂ ‘ಇಫ್ತಾರ್‌’ ಎನ್ನಬಹುದು. ಆದರೆ, ರಂಜಾನ್ ತಿಂಗಳ ಸಂದರ್ಭದಲ್ಲಿ ಇಫ್ತಾರ್‌ ಎಂದರೆ ಇಡೀ ದಿನ ವಿಧಿಬದ್ಧವಾಗಿ ಅನುಸರಿಸಿದ ಕಠಿಣ ಉಪವಾಸವನ್ನು ಅಷ್ಟೇ ವಿಧಿಬದ್ಧವಾಗಿ ಮುಕ್ತಾಯಗೊಳಿಸಿ ಲಘು ಉಪಾಹಾರವನ್ನು ಸೇವಿಸುವ ಕ್ರಿಯೆ.

ಇದನ್ನು ಮಗ್ರಿಬ್ (ಸೂರ್ಯಾಸ್ತದ ನಂತರದ) ನಮಾಜಿಗಿಂತ ಸ್ವಲ್ಪ ಮುಂಚೆ, ನಮಾಜಿಗೆ ಹೋಗುವ ಶುದ್ಧತೆಯ ಸಿದ್ಧತೆಯೊಂದಿಗೆ ಮಾಡಲಾಗುತ್ತದೆ. ಸಮುದಾಯದವರು ಸಂಜೆ ಹೊತ್ತು ತಮ್ಮ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿನಿಸು, ಹಣ್ಣುಹಂಪಲ, ದ್ರಾಕ್ಷಿ ಇತ್ಯಾದಿಗಳನ್ನು ಇಫ್ತಾರ್‌ಗಾಗಿ ಮಸೀದಿಗೆ ಕಳಿಸಿಕೊಡುತ್ತಾರೆ. ಅಲ್ಲಿ ರೋಜ್‌ದಾರರು (ರೋಜಾ ಇರುವವರು) ಇದನ್ನು ಸೇವಿಸಿ ಇಫ್ತಾರ್‌ ಮುಗಿಸುತ್ತಾರೆ.

ನಾವು ಚಿಕ್ಕವರಿದ್ದಾಗ ಕೆಲವರು ರಂಜಾನ್ ತಿಂಗಳಲ್ಲಿ ರೋಜ್‌ದಾರರನ್ನು ಊಟಕ್ಕೆ ಕರೆಯುವುದು ಪುಣ್ಯದ ಕೆಲಸ ಎಂದು ಭಾವಿಸುತ್ತಿದ್ದರು. ಮಸೀದಿಗೆ ಹೋಗಿ ಅಲ್ಲಿ ಇರುವವರಿಗೆಲ್ಲ (ಎಲ್ಲರೂ ಸಾಮಾನ್ಯವಾಗಿ ರೋಜಾ ಇದ್ದವರು) ಊಟಕ್ಕೆ ಬರುವಂತೆ ಔತಣ ನೀಡುತ್ತಿದ್ದರು. ಕರೆದವರ ಮನೆಗೇ ಹೋಗಿ ರೋಜ್‌ದಾರರು ಊಟ ಸೇವನೆ ಮಾಡುತ್ತಿದ್ದರು.

ಮನೆ ಚಿಕ್ಕದೋ ದೊಡ್ಡದೋ ಅಲ್ಲಿಯೇ ಮಾಡಿದ ಅಡುಗೆಯನ್ನು ಇದ್ದಷ್ಟು ಜಾಗದಲ್ಲಿ ವಿವಿಧ ಪಂಕ್ತಿಗಳಲ್ಲಿ ಕುಳಿತು ಊಟ ಮಾಡಿ ಮನೆಯವರನ್ನು ಹರಸುವುದು ಒಂದು ಬಗೆಯ ಸಂಭ್ರಮದ ಸಂಗತಿಯಾಗಿತ್ತು. ಇದನ್ನು ‘ಇಫ್ತಾರ್‌ ಔತಣಕೂಟ’ ಎಂದು ಕರೆಯಬಹುದು. ಇದು ಮೂಲಭೂತವಾಗಿ ಧಾರ್ಮಿಕ ಆಚರಣೆ.

ಈಗ, ಮಸೀದಿಯ ಬಳಿಯಲ್ಲಿಯೇ ಅಡುಗೆ, ಊಟದ ವ್ಯವಸ್ಥೆ ಮಾಡುತ್ತಿದ್ದು, ಅಪೇಕ್ಷೆ ಇರುವವರು ಹಣ ಕೊಟ್ಟರೆ ಸಾಕು ಎಲ್ಲವೂ ‘ವ್ಯವಸ್ಥೆ’ ಮಾಡಲಾಗುತ್ತದೆ. ಇದರಿಂದ ಮೊದಲಿದ್ದ ಭ್ರಾತೃತ್ವ ಕಡಿಮೆಯಾಗಿ ಇದೊಂದು ‘ಇವೆಂಟ್’ ಆಗಿ ಪರಿಣಮಿಸಿದೆ.

ಬರಬರುತ್ತಾ ಇಫ್ತಾರ್‌ ಕೂಟ ಎನ್ನುವುದು ಹೆಚ್ಚು ಸಾರ್ವತ್ರಿಕ ಇವೆಂಟ್ ಆಗುತ್ತಿರುವುದನ್ನು ನಾವು ಕಾಣುತ್ತೇವೆ. ಮುಸ್ಲಿಮ್ ರಾಜಕೀಯ ನಾಯಕರು ತಮ್ಮ ಪಕ್ಷಬಾಂಧವರನ್ನು ಆಹ್ವಾನಿಸಿ ‘ಇಫ್ತಾರ್‌ ಕೂಟ’ದ ಹೆಸರಿನಲ್ಲಿ ಔತಣ ಕೂಟಗಳನ್ನು ನಡೆಸುತ್ತಿದ್ದಾರೆ. ಇಲ್ಲಿ ಬರುವ ಅನ್ಯ ಮತಸ್ಥರು ತಲೆಗೊಂದು ಟೋಪಿ, ಹೆಗಲ ಮೇಲೆ ಸ್ಕಾರ್ಫ್‌ ಹಾಕಿಕೊಳ್ಳುತ್ತಾರೆ. ಇವರು ಮುಸ್ಲಿಮರಾಗಬೇಕಾಗಿಲ್ಲ. ರೋಜ್‌ದಾರ್ ಕೂಡ ಆಗಿರಬೇಕಾಗಿಲ್ಲ. ಆದರೂ ಇದು ‘ಇಫ್ತಾರ್‌ ಕೂಟ’!


ಮುಸ್ಲಿಮ್ ನಾಯಕರೊಬ್ಬರು ತನ್ನ ಪ್ರತಿಷ್ಠೆಗಾಗಿ ರಂಜಾನ್ ತಿಂಗಳ ಸಂದರ್ಭವನ್ನು ಬಳಸಿಕೊಳ್ಳುತ್ತಿರಬಹುದು. ಆದರೆ ಜಾತ್ಯತೀತ ಸರ್ಕಾರದ ಪ್ರತಿನಿಧಿಗಳಾದ ಮುಖ್ಯಮಂತ್ರಿಗಳು, ರಾಜ್ಯಪಾಲರು, ರಾಷ್ಟ್ರಪತಿಯೂ ಅಧಿಕೃತವಾಗಿ ‘ಇಫ್ತಾರ್‌ ಕೂಟ’ಗಳನ್ನು ನಡೆಸುವುದು ನನಗೆ ಅರ್ಥವಾಗುವ ಸಂಗತಿಯಲ್ಲ!

ನನಗೆ ಇನ್ನೂ ಆಶ್ಚರ್ಯವಾಗುವ ಸಂಗತಿಯೆಂದರೆ, ಈದ್ ದಿನ ಈದ್ಗಾ ಮೈದಾನದಲ್ಲಿ ಮುಸ್ಲಿಮ್ ಸಮುದಾಯದ ಪುರುಷರು ಸಾಮೂಹಿಕ ನಮಾಜ್ ಮಾಡುವಾಗಲೂ ಮುಸ್ಲಿಮೇತರ ನಾಯಕರು ಟೋಪಿ ಹಾಕಿಕೊಂಡು ಅವರೊಂದಿಗೆ ನಮಾಜ್ ಮಾಡುವುದು! ನಮಾಜ್ ಮಾಡುವಾಗ ಆರಂಭದಲ್ಲಿಯೇ ಉಚ್ಚರಿಸಲಾಗುವ ಶ್ಲೋಕಗಳಲ್ಲಿ ಒಂದು ಪ್ರಮುಖವಾದ ಅರೇಬಿಕ್ ಶ್ಲೋಕದ ಅರ್ಥ, ‘ಅಲ್ಲಾಹ್‌ನ ಹೊರತು ಅನ್ಯ ಆರಾಧ್ಯರಿಲ್ಲ, ಹಜರತ್‌ ಮುಹಮ್ಮದರು ಅಲ್ಲಾಹನ ಪ್ರವಾದಿಗಳು’ ಎಂಬುದು. ಮೂರ್ತಿ ಪೂಜೆ ಮಾಡುವ ಇವರು ಇಸ್ಲಾಮ್ ಧರ್ಮದ ಈ ಮೂಲ ತತ್ವವನ್ನು ಒಪ್ಪಿಕೊಳ್ಳುವರೇ? ಇಲ್ಲವಾದರೆ ಇವರ ‘ನಮಾಜ್’ ಹೇಗೆ ಸಿಂಧುವಾಗುತ್ತದೆ? ಇಂಥ ನಂಬಿಕೆ ಇಲ್ಲದವರೊಂದಿಗೆ ಮಾಡುವ ಇತರರ ನಮಾಜೂ ಕೂಡ ಸಿಂಧುವಾಗುವುದೇ? ಎಲ್ಲವೂ ರಾಜಕೀಯ.


ಇತ್ತೀಚೆಗೆ, ಮೊದಲ ಬಾರಿಗೆ, ಉಡುಪಿಯ ಮಠದ ಶ್ರೀಗಳು ಮುಸಲ್ಮಾನರನ್ನು ‘ಇಫ್ತಾರ್‌ ಕೂಟ’ಕ್ಕೆ ಕರೆದರು. ತಾವೇ ಸ್ವತಃ ಫಲಾಹಾರವನ್ನು ಬಡಿಸಿದರು. ಅಲ್ಲಿ ಆಹ್ವಾನಿತರಾದವರು ತಮ್ಮ ಧರ್ಮದ ಒಂದು ಕ್ರಮವಾಗಿ ಅಲ್ಲಿದ್ದ ಒಂದು ಖಾಲಿ ಜಾಗದಲ್ಲಿ ನಮಾಜೂ ಮಾಡಿದ್ದಾರೆ. ಇದೆಲ್ಲವೂ ಹಲವು ಬಗೆಯ ಪರ–ವಿರೋಧ ವಾದಗಳಿಗೆ ಎಡೆ ಮಾಡಿಕೊಟ್ಟಿದೆ. ಅದೇ ರೀತಿಯಲ್ಲಿ ರಾಜಕೀಯ ನಾಯಕರು ಗ್ರಾಮ ಸಂದರ್ಶನಕ್ಕೆ ಹೋಗಿ ದಲಿತರ ಮನೆಯಲ್ಲಿ ಉಪಾಹಾರವನ್ನು ಸೇವಿಸುವುದನ್ನೂ ದೊಡ್ಡ ಸಾಧನೆ, ದೊಡ್ಡ ಆದರ್ಶ ಎಂಬಂತೆ ಬಿಂಬಿಸಲು ಹೋಗಿ ವಿವಾದಕ್ಕೆ, ಅಪಹಾಸ್ಯಕ್ಕೆ ಒಳಗಾಗಿದ್ದಾರೆ.

ಇವು ಯಾವುವೂ ಭ್ರಾತೃತ್ವದ, ಕೋಮುಸೌಹಾರ್ದದ ನಡೆಗಳಲ್ಲ. ಎಲ್ಲವೂ ಕ್ಷುಲ್ಲಕ ರಾಜಕಾರಣ. ನಮ್ಮ ದೇಶದಲ್ಲಿ ಅನೇಕ ಜಾತಿ, ಮತ ಮತ್ತು ಧರ್ಮಗಳಿವೆ. ಒಂದೈವತ್ತು ವರ್ಷಗಳ ಹಿಂದೆ, (ಈಗಲೂ ಕೆಲವು ಕಡೆ ಅಪರೂಪಕ್ಕೆ) ಹಿಂದೂಗಳು ಮುಸ್ಲಿಮರೊಂದಿಗೆ ಮೊಹರಂಅನ್ನು, ಉರುಸುಗಳನ್ನು ಆಚರಿಸಿದರೆ, ಮುಸಲ್ಮಾನರು ಊರಮ್ಮನ ಹಬ್ಬ, ಗಣೇಶನ ಹಬ್ಬದ ಆಚರಣೆಯಲ್ಲಿ ಸೇರಿಕೊಳ್ಳುತ್ತಿದ್ದರು. ಈಗ ಕೋಮು ರಾಜಕೀಯ ಗೆದ್ದಲಿನಂತೆ ಸಮಾಜದಲ್ಲಿ ಹೊಕ್ಕು ಜಾತ್ಯತೀತ ಕಟ್ಟಡವನ್ನು ಒಳಗೊಳಗೇ ಸರ್ವನಾಶ ಮಾಡಿದೆ.
ಮುಸ್ಲಿಮರಲ್ಲೂ ಪುರೋಹಿತಶಾಹಿ ಪ್ರಬಲವಾಗಿ ಬೆಳೆದಿದೆ. ಧರ್ಮವನ್ನು ತಮಗೆ ಸರಿ ತೋರಿದ ರೀತಿಯಲ್ಲಿ ಅರ್ಥೈಸುತ್ತಾ, ಅದರ ಕುರಿತು ಪ್ರಾಥಮಿಕ ಅರಿವೂ ಇಲ್ಲದ ದುಡಿಯುವ, ಸಾಮಾನ್ಯ ಜನರ ತಲೆ ಕೆಡಿಸಿ, ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಪುರೋಹಿತಶಾಹಿ ಇದನ್ನು ಧರ್ಮದ ಹೆಸರಿನಲ್ಲಿ ಮಾಡಿದರೆ ರಾಜಕೀಯ ನಾಯಕರು ಮತಗಳಿಕೆಯ ಸಾಧನವಾಗಿ ಸಮಾಜವನ್ನು ಹೆಚ್ಚು ಹೆಚ್ಚು ಜಾತಿ, ಉಪಜಾತಿಗಳಾಗಿ ವಿಂಗಡಿಸಿ, ನೀವು ಉಳಿದವರಿಗಿಂತ ಬೇರೆ ಎನ್ನುವ ವಿಷಬೀಜವನ್ನು ಜನರಲ್ಲಿ ಬಿತ್ತುತ್ತಿದ್ದಾರೆ. ಇಷ್ಟೆಲ್ಲಾ ಮಾಡಿ ಆಗೀಗ ‘ಕೋಮುಸೌಹಾರ್ದ’ದ ಪ್ರಹಸನಗಳನ್ನು ನಡೆಸಿದರೆ ಏನೂ ಪ್ರಯೋಜನವಿಲ್ಲ.
ನಿಜವೆಂದರೆ, ಸಂವಿಧಾನದಲ್ಲಿರುವ ‘ಜಾತ್ಯತೀತ’ ಎಂಬ ಪದವನ್ನು ‘ಸರ್ವಧರ್ಮ ಸಮಭಾವದ’ ಎಂದು ಅರ್ಥ ಮಾಡಿಕೊಳ್ಳುವ ಬದಲಿಗೆ ‘ಧರ್ಮನಿರಪೇಕ್ಷ’ ಎಂದು ಅರ್ಥ ಮಾಡಿಕೊಂಡು ಅನುಸರಿಸಬೇಕಾಗಿತ್ತು. ಎಂದರೆ ಸರ್ಕಾರಕ್ಕೂ ಯಾವುದೇ ಧರ್ಮ ಅಥವಾ ಧಾರ್ಮಿಕ ಆಚರಣೆಗೂ ಸಂಬಂಧವಿಲ್ಲ.
ಸರ್ಕಾರ ಎಲ್ಲರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭ್ಯುದಯವನ್ನಷ್ಟೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತದೆ. ಧಾರ್ಮಿಕ, ಪಾರಮಾರ್ಥಿಕ ಗುರಿಗಳು ಆಯಾ ವ್ಯಕ್ತಿ ಮತ್ತು ಸಮುದಾಯಗಳಿಗೆ ಸೇರಿದ್ದು. ಇನ್ನೊಂದು ವ್ಯಕ್ತಿ ಮತ್ತು ಸಮುದಾಯದ ಸ್ವಂತ ಹಕ್ಕುಗಳಿಗೆ ಧಕ್ಕೆ ಬಾರದ ಹಾಗೆ ಅವರು ಅದನ್ನು ಅನುಸರಿಸುವ ಅವಕಾಶ ಹೇಗೂ ಸಂವಿಧಾನದಲ್ಲಿದೆ.

ನಿಮಗೆ ಭಾರತದಲ್ಲಿ ಕೋಮು ಸೌಹಾರ್ದ ಬೇಕೇ? ಹಾಗಾದರೆ ದಯವಿಟ್ಟು ಅದಕ್ಕಾಗಿ ಏನೂ ಮಾಡಲು ಹೋಗಬೇಡಿ. ಊಟಕ್ಕೆ ಕರೆಯಿರಿ, ಆದರೆ ಹಬ್ಬಗಳನ್ನು ಬಿಟ್ಟು ಕರೆಯಿರಿ. ಅವರಿಗೆ ಬೇಕಾದ ಹಬ್ಬವನ್ನು ಆಚರಿಸಲು, ಅವರಿಗೆ ಬೇಕಾದ ಆಹಾರವನ್ನು ಸೇವಿಸಲು ಬಿಟ್ಟು ಬಿಡಿ. ಒಂದು ದಶಕದ ಕಾಲ ಇದನ್ನು ಸಂವಿಧಾನದ ಮೇಲೆ ಆಣೆಯಿಟ್ಟು ಎಲ್ಲರೂ ಮಾಡಿ. ನೋಡಿ, ಅದರ ನಂತರ ನಮ್ಮ ಸಮಾಜದ ಮುಖವೇ ಬದಲಾಗಿರುತ್ತದೆ. ನಮ್ಮದು ನಿಜವಾದ ಜಾತ್ಯತೀತ ರಾಷ್ಟ್ರವಾಗಿರುತ್ತದೆ.
__________________________________________________________________________


ಚರ್ಚೆ
ಇಫ್ತಾರ್ ಕೂಟ ಮತ್ತು ಮತಸೌಹಾರ್ದ
ಡಾ ರಾಜಾರಾಮ ಹೆಗಡೆ

1 Jul, 2017


ಮುಸ್ಲಿಂ ಸಮುದಾಯದವರಿಗೆ ಉಡುಪಿಯ ಕೃಷ್ಣ ಮಠದಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಇಫ್ತಾರ್ ಕೂಟ ಏರ್ಪಡಿಸಿದ್ದು ಹಾಗೂ ಆ ಸಂದರ್ಭದಲ್ಲಿ ಮಠದೊಳಗೆ ನಮಾಜ್‌ ಮಾಡಲು ಅವಕಾಶ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ. ಅದನ್ನು ವಿರೋಧಿಸುವ ಬಣಗಳಲ್ಲಿ ಎರಡು ಪ್ರಕಾರದವರಿದ್ದಾರೆ: 1. ಹಿಂದುತ್ವ ಪ್ರತಿಪಾದಕರು. 2. ಕಟ್ಟಾ ಸಂಪ್ರದಾಯಸ್ಥರು. ಇವರಿಬ್ಬರೂ ಬೇರೆ ಬೇರೆ ಕಾರಣಗಳನ್ನಿಟ್ಟುಕೊಂಡು ಖಂಡಿಸಿದ್ದರೂ ಇವರು ಪರಸ್ಪರ ವಿರೋಧಿಗಳೇನಲ್ಲ ಹಾಗೂ ಈ ಗುಂಪುಗಳ ವಿರೋಧದ ಕುರಿತು ಆಶ್ಚರ್ಯವೇನೂ ಇಲ್ಲ.

ಆದರೆ ಅದನ್ನು ಬೆಂಬಲಿಸುವ ಗುಂಪಿನೊಳಗೆ ಎರಡು ಪರಸ್ಪರ ವಿರೋಧಿ ರಾಜಕೀಯ ಗುಂಪುಗಳು ಸೇರಿಕೊಂಡಿವೆ ಎಂಬುದು ವಿಲಕ್ಷಣವಾಗಿದೆ: 1. ಹಿಂದುತ್ವ ಬಣದವರು. 2. ಸೆಕ್ಯುಲರ್ ಪ್ರಗತಿಪರರು. ಸೆಕ್ಯುಲರ್ ಪ್ರಗತಿಪರರು ಸ್ವಾಭಾವಿಕವಾಗಿಯೇ ಈ ನಡೆಯನ್ನು ಸ್ವಾಗತಿಸಿದ್ದಾರೆ, ಅದರಲ್ಲೇನೂ ಆಶ್ಚರ್ಯವಿಲ್ಲ. ಅವರ ಮಾನದಂಡಗಳು ಸ್ಪಷ್ಟವಾಗಿವೆ. ಅದರಲ್ಲೂ ಹಿಂದುತ್ವವಾದಿಗಳಿಂದ ವಿರೋಧ ಬಂದದ್ದಂತೂ ಈ ವಿಚಾರದಲ್ಲಿ ಸೆಕ್ಯುಲರ್‌ವಾದಿಗಳು ಯಾರ ಪರ ನಿಲ್ಲಬೇಕೆಂಬುದನ್ನು ಸರಳಗೊಳಿಸಿದೆ.
ಆದರೆ ಹಿಂದುತ್ವವಾದಿಗಳು ಹಾಗೂ ಸಂಪ್ರದಾಯಸ್ಥರಲ್ಲೇ ಬಹುಸಂಖ್ಯಾತರು ಪೇಜಾವರ ಸ್ವಾಮೀಜಿ ಜೊತೆಗೇ ಇರುವಂತಿದೆ. ಇದು ಈ ಪ್ರಸಂಗದ ವಿಶೇಷ. ಸ್ವತಃ ಪೇಜಾವರ ಶ್ರೀಗಳೇ ಹಿಂದುತ್ವ ಚಳವಳಿಯ ನಾಯಕರಲ್ಲೊಬ್ಬರು. ಇಂಥವರ ನಡೆಯನ್ನು ಹೇಗೆ ಅರ್ಥೈಸುವುದು?
ಸೆಕ್ಯುಲರ್‌ವಾದಿಗಳ ಮತಸಹಿಷ್ಣುತೆಯ ಮಂತ್ರವನ್ನು ಈ ಹಿಂದುತ್ವವಾದಿಗಳೂ ಒಪ್ಪಿಕೊಂಡಂತಿದೆ ಹಾಗೂ ಸೆಕ್ಯುಲರ್ ರಾಜಕಾರಣದ ತಂತ್ರಗಳನ್ನು ಹಿಂದುತ್ವದವರೂ ಕಾಪಿ ಮಾಡಿದಂತಿದೆ! ಇದು, ಇವರೆಲ್ಲ ಸೆಕ್ಯುಲರ್ ರಾಜಕೀಯವನ್ನು ಅಪ್ಪಿಕೊಂಡ ಲಕ್ಷಣವೇ?

ಇಲ್ಲ ಹೊಸದೊಂದು ರಾಜಕೀಯ ಪ್ರಹಸನ ಮೊದಲಾಗಿದೆಯೇ ಎಂಬ ಗೊಂದಲ ಹುಟ್ಟುವುದು ಸಹಜ. ಒಂದು ರೀತಿಯಲ್ಲಿ ನೋಡಿದರೆ ಇದು ಪ್ರಸ್ತುತ ಭಾರತೀಯ ರಾಜಕೀಯದ ಗೊಂದಲ ಕೂಡಾ. ಒಟ್ಟಾರೆಯಾಗಿ ಹಿಂದುತ್ವವಾದಿಗಳ ನಡೆ ತುಂಬ ಸಂಕೀರ್ಣವಾಗಿರುವಂತಿದೆ.


ಅವರೊಳಗೆ ತಮ್ಮ ಆಚರಣೆಯ ಕುರಿತು ಆಂತರಿಕ ವೈರುಧ್ಯ ಹಾಗೂ ಗೊಂದಲವಿರುವಂತಿದೆ. ಏನೇ ಆದರೂ ಈ ವಿದ್ಯಮಾನ ಸನಾತನವಾದಿ ಹಿಂದೂಗಳನ್ನು ಕೂಡಾ ಬೆಚ್ಚಿಬೀಳಿಸಿಲ್ಲ ಎಂಬುದು ಗಮನಿಸಬೇಕಾದ ವಿಷಯ.

ನನ್ನ ಅಭಿಪ್ರಾಯವೆಂದರೆ ಒಟ್ಟಾರೆಯಾಗಿ ಭಾರತೀಯ ಸಾಂಪ್ರದಾಯಿಕ ಪರಿಸರವೇ ಇಂಥ ಕ್ರಿಯೆಗಳನ್ನು ಪೋಷಿಸುವ ಧೋರಣೆಯನ್ನು ಬೆಳೆಸುವಂಥದ್ದು. ಅದಕ್ಕೆ ವಿರೋಧವನ್ನು ವ್ಯಕ್ತಪಡಿಸುವವರೇ ಭಾರತೀಯ ಸಂಪ್ರದಾಯಗಳ ಜೊತೆಗೆ ಸಂಬಂಧವನ್ನು ಕಡಿದುಕೊಂಡವರಂತೆ ಕಾಣುತ್ತಾರೆ.

ಅದು ಅವರಿಗೆ ಗೊತ್ತಿಲ್ಲದಿದ್ದರೆ ಗೊತ್ತು ಮಾಡಿಕೊಳ್ಳಲು ಇದು ಸಕಾಲ. ಈ ಸಂದರ್ಭದಲ್ಲಿ ಪ್ರಗತಿಪರ ಸೆಕ್ಯುಲರ್‌ವಾದಿ ಹಿಂದೂಗಳಿಗೆ ಕೂಡ ಅವರು ಹಿಂದೂಗಳಾಗಿರುವ ಕಾರಣದಿಂದಲೇ ಈ ಅನುಕಂಪ ಶ್ಲಾಘನೀಯವಾಗಿ ಕಂಡಿದ್ದರೂ ಆಶ್ಚರ್ಯವಿಲ್ಲ. ಅದು ಅವರಿಗೆ ಗೊತ್ತಿಲ್ಲದಿದ್ದರೆ ಅದನ್ನು ಗೊತ್ತುಮಾಡಿಕೊಳ್ಳಲಿಕ್ಕೂ ಇದು ಸಕಾಲ.

ಈ ಹೇಳಿಕೆಯ ಮಹತ್ವವನ್ನು ಅರ್ಥೈಸಿಕೊಳ್ಳಬೇಕಾದರೆ ನಮ್ಮ ಮತಸಂಪ್ರದಾಯಗಳ ಸಹಬಾಳ್ವೆಯ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. ಭಾರತವು ವೈವಿಧ್ಯಪೂರ್ಣ ಮತಗಳು ಒಟ್ಟಾಗಿ ಬದುಕಿದ ಒಂದು ಅಪರೂಪದ ನೆಲ. ಭಾರತದಲ್ಲಿ ಸಾಂಪ್ರದಾಯಿಕ ಸಹಬಾಳ್ವೆ ಎಂದಾಕ್ಷಣ ಉರಿದುಬಿದ್ದು ಆಕ್ಷೇಪಿಸುವವರೂ ಇದ್ದಾರೆ.

‘ಹಾಗಾದರೆ ಕರ್ನಾಟಕದ ಇತಿಹಾಸದಲ್ಲಿ ಶೈವ– ವೈಷ್ಣವರ, ಶೈವ– ಜೈನರ ಹೊಡೆದಾಟದ ಇತಿಹಾಸ ಸುಳ್ಳೆನ್ನುತ್ತೀರಾ, ಹಿಂದೂ ರಾಜರು ಪರಮತಗಳ ದೇವಾಲಯಗಳನ್ನು ಹಾಳುಮಾಡಿದ್ದು ಸುಳ್ಳೆನ್ನುತ್ತೀರಾ’ ಎಂಬ ಪ್ರಶ್ನೆಗಳನ್ನು ಹಾಗೆ ಹೇಳಿದವರ ಕಿವಿ ತೂತಾಗುವವರೆಗೂ ಕೇಳುತ್ತಾರೆ. ಅಂದರೆ ನಾವು ಮಧ್ಯಪ್ರಾಚ್ಯದ ರಿಲಿಜಿಯಸ್ ಯುದ್ಧಗಳನ್ನು ನಮ್ಮ ಮತಗಳ ನಡುವಿನ ಹೊಡೆದಾಟಗಳಿಗೆ ಆರೋಪಿಸುತ್ತೇವೆ. ಆದರೆ ಹಾಗೆ ಆರೋಪಿಸಲು ಹಿಂದೂ ಸಂಪ್ರದಾಯಗಳು ರಿಲಿಜನ್‌ಗಳೂ ಅಲ್ಲ, ಅವುಗಳ ನಡುವೆ ಸತ್ಯ-ಸುಳ್ಳುಗಳ ವೈರತ್ವವೂ ಇಲ್ಲ. ಹಾಗಾದರೆ ಅವುಗಳು ಪರಸ್ಪರ ಕಾದಾಡಿಲ್ಲವೇ, ಸಂಘರ್ಷಿಸಿಲ್ಲವೇ ಎಂದರೆ ಅದೂ ನಿಜ. ಆದರೆ ಈ ಸಂಘರ್ಷಗಳ ಸ್ವರೂಪ ಬೇರೆಯೇ ಆಗಿದೆ.

ಸಹಬಾಳ್ವೆ ಎಂದರೆ ಎರಡು ಸಮುದಾಯಗಳು ಸದಾ ನಗುನಗುತ್ತ ಕೈಕೈ ಹಿಡಿದುಕೊಂಡು ಇರುವುದು ಎಂಬ ಅರ್ಥವಲ್ಲ. ಅದೊಂದು ರಮ್ಯ ಕಲ್ಪನೆ ಹಾಗೂ ಅವಾಸ್ತವ! ಬದುಕೆಂಬುದು ಸದಾ ಸಂಘರ್ಷಗಳನ್ನು, ಪೈಪೋಟಿಗಳನ್ನು ಹುಟ್ಟುಹಾಕುತ್ತಲೇ ಇರುವ ಒಂದು ಕಾರ್ಖಾನೆಯಂತೆ ಇದೆ. ಆದರೆ ಇಂಥ ಸಂಘರ್ಷಗಳನ್ನು ನೀಗಿಕೊಂಡು ಸಂಬಂಧವನ್ನು ಉಳಿಸಿಕೊಳ್ಳುವ ಕಲೆಯನ್ನು ಕಲಿಯುವುದೇ ಸಹಬಾಳ್ವೆ ಎನಿಸಿಕೊಳ್ಳುತ್ತದೆ.

ವೈರತ್ವವನ್ನು ಸಾಧಿಸುವ ಬದಲು ಅದನ್ನು ಶಮನ ಮಾಡುವ ಉಪಾಯಗಳನ್ನು ಹುಡುಕುವುದು ಸಹಬಾಳ್ವೆಗೆ ಅತ್ಯಗತ್ಯವಾದ ಒಂದು ಗುಣ. ನಮ್ಮ ಮತಸಂಪ್ರದಾಯಗಳು ಈ ಗುಣವನ್ನು ಮೈಗೂಡಿಸಿಕೊಂಡಿವೆ. ಹಾಗಾಗಿಯೇ ಭಾರತವು ವೈವಿಧ್ಯಪೂರ್ಣವಾದ ಸಮಾಜವಾಗಿ ಮುಂದುವರೆದುಕೊಂಡು ಬಂದಿದೆ.

ಇಂಥ ಮತೀಯ ಸಮುದಾಯಗಳ ವಾಸ್ತವಿಕ ಬದುಕಿನಲ್ಲಿ ವಿಭಿನ್ನ ಐತಿಹಾಸಿಕ ಸನ್ನಿವೇಶಗಳಿಂದಾಗಿ ಸಂಘರ್ಷಗಳು ಉದಿಸಿವೆ. ಆದರೆ ಅವು ವೈರಿಮತಗಳಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸುವ ಬದಲು ಸಹಬಾಳ್ವೆಗೆ ಒತ್ತುಕೊಟ್ಟಿವೆ ಹಾಗೂ ಈ ಧೋರಣೆಯೇ ಶ್ರೇಯಸ್ಕರ ಎಂಬುದನ್ನು ತಮ್ಮ ವಿಪುಲ ಆಚರಣೆ ಹಾಗೂ ಸಾಹಿತ್ಯ ಸೃಷ್ಟಿಯ ಮೂಲಕ ಅನುಯಾಯಿಗಳಲ್ಲಿ ರೂಢಿಸಿವೆ. ಹಾಗಾಗಿ ಹಿಂದೂಗಳಲ್ಲಿ ಯಾವುದೇ ಸಂಪ್ರದಾಯಕ್ಕೆ ಸೇರಿದವರಿರಬಹುದು, ಅವರೊಳಗೆ ಪರಮತಗಳೊಂದಿಗೆ ಸಹಬಾಳ್ವೆಯೇ ಶ್ರೇಯಸ್ಕರ ಎಂಬ ಧೋರಣೆ ಸಹಜವಾಗಿರುತ್ತದೆ.

ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಅಬ್ಬಲೂರಿನಲ್ಲಿ ನಡೆದ ಶೈವರು–ಜೈನರ ಸಂಘರ್ಷ ಮತ್ತು ಹೊಂದಾಣಿಕೆಯನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಒಟ್ಟಾಗಿ ಬಾಳಿಕೊಂಡು ಬಂದಿದ್ದ ಶೈವ– ಜೈನ ಸಮುದಾಯಗಳು ಪರಸ್ಪರ ಸಂಘರ್ಷಕ್ಕಿಳಿದು ಜಿನದೇವಾಲಯಗಳ ನಾಶವಾದದ್ದು ಒಂದು ಸತ್ಯವಾದರೆ, ಈ ಹೊಸ ಐತಿಹಾಸಿಕ ಸನ್ನಿವೇಶದಿಂದ ಎಚ್ಚೆತ್ತು, ಬಿಗಡಾಯಿಸುತ್ತಿದ್ದ ತಮ್ಮ ಸಂಬಂಧವನ್ನು ಸರಿಪಡಿಸುವ ಪ್ರಯತ್ನ ಕೂಡ ಅವೇ ಸಮುದಾಯಗಳಿಂದ ಯಶಸ್ವಿಯಾಗಿ ನಡೆಯಿತು ಎಂಬುದು ಮತ್ತೊಂದು ಸತ್ಯ.
ಶೈವ ಸಂಪ್ರದಾಯಗಳು ತಮ್ಮ ಅನುಯಾಯಿಗಳಲ್ಲಿ ಶಿವಪ್ರಾಧಾನ್ಯಕ್ಕೆ ಧಕ್ಕೆ ಬರದಂತೆ ಪಾಪಭೀತಿ ಹಾಗೂ ಜಿನ ಭಕ್ತಿಯನ್ನು ಪ್ರೇರೇಪಿಸುವ ಮೂಲಕ ತಮ್ಮ ಮುಂದೆ ಅವತರಿಸಿದ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಿದ್ದು ಸ್ಪಷ್ಟ ಹಾಗೂ ಅಂದಿನ ದಿನಗಳಲ್ಲಿ ಹಳ್ಳಿ ಮತ್ತು ಪಟ್ಟಣಗಳ ಜನರ ಬದುಕಿನಲ್ಲಿ ಶೈವ– ಜೈನ ಸಮುದಾಯಗಳ ವೃತ್ತಿಗಳು ಪರಸ್ಪರ ಅವಲಂಬನೆಯಲ್ಲಿ ಹೆಣೆದುಕೊಂಡಿದ್ದವು ಎಂಬುದು ನಮಗೆ ಶಾಸನಗಳನ್ನು ಅಧ್ಯಯನ ಮಾಡಿದರೆ ವಿದಿತವಾಗುತ್ತದೆ.
ಶೈವರು ತಾವು ಗೆದ್ದೆವೆಂಬ ಹುಮ್ಮಸ್ಸಿನಲ್ಲಿ ಅಳಿದುಳಿದ ಜಿನಾಲಯಗಳನ್ನು ಹಾಳುಮಾಡುವ ಗೋಜಿಗೆ ಹೋಗದೇ, ವಾಸ್ತವವನ್ನರಿತು ತಮ್ಮ ನಡುವಿನ ಬಿಕ್ಕಟ್ಟನ್ನು ಶಮನ ಮಾಡಿಕೊಳ್ಳುವ ತಂತ್ರವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಮುಖ್ಯವಾಗಬೇಕು. ಈ ಕೆಲಸವೇ ಇಂದು ನಡೆದರೆ ನಮಗೆ ನೂರಕ್ಕೆ ನೂರರಷ್ಟು ಸೆಕ್ಯುಲರ್ ತಂತ್ರವಾಗಿ ಕಾಣಿಸಿದರೆ ಆಶ್ಚರ್ಯವಿಲ್ಲ. ಆದರೆ 12ನೆಯ ಶತಮಾನದಲ್ಲಿ ಶೈವ ಮುನಿಗಳು ನಡೆಸಿದ ಈ ಕೆಲಸ ನಮ್ಮ ಸಂಪ್ರದಾಯಗಳ ಸಹಬಾಳ್ವೆಯ ಆಯಾಮಗಳ ಕುರಿತು ಸಾಕಷ್ಟು ತಿಳಿಸಬಲ್ಲದು. ಆದರೆ ಇದೇ ಸೆಕ್ಯುಲರ್‌ವಾದಿಗಳೇ ಅದು ಕೇವಲ ಒಂದು ರಿಲಿಜಿಯಸ್ ಯುದ್ಧವೆಂದು ಬಣ್ಣಿಸಿ ಆ ತಿಳಿವಳಿಕೆಯ ಬಾಗಿಲನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.
ಪೇಜಾವರರ ಇಫ್ತಾರ್ ಕೂಟವನ್ನು ಸೆಕ್ಯುಲರ್ ತಂತ್ರವಾಗಿ ನೋಡದೇ ಈ ತರಹದ ಸಾಂಪ್ರದಾಯಿಕ ತಂತ್ರದ ಮುಂದುವರಿಕೆಯಾಗಿ ಕೂಡ ನೋಡಬಹುದು. ಹಿಂದೂ ಸಂಪ್ರದಾಯಗಳನ್ನು ಬದುಕುತ್ತಿರುವ ಯತಿಗಳೊಬ್ಬರಿಗೆ ಅವರ ಪರಂಪರೆ ಬೇರೆ ಯಾವುದೋ ಪ್ರೇರಣೆಯನ್ನು ನೀಡುತ್ತಿರುವಂತಿದೆ. ಹಾಗಾಗಿಯೇ ಅವರಿಗೆ ತಮ್ಮ ಕ್ರಿಯೆಯಲ್ಲಿ ಅಸಹಜವಾದುದೇನೂ ಕಾಣುವುದಿಲ್ಲ.
ಆ ಪ್ರೇರಣೆ ಮುತಾಲಿಕ್ ಬಣದ ಹಿಂದುತ್ವವಾದಿಗಳಲ್ಲಿ ನಶಿಸಿಹೋಗಿದ್ದರೆ ಆಶ್ಚರ್ಯವೂ ಇಲ್ಲ. ಅವರು ಹೋರಾಡುತ್ತಿರುವುದು ನಮ್ಮ ಸಂಪ್ರದಾಯಗಳನ್ನು ರಿಲಿಜನ್ನಾಗಿ ಪರಿವರ್ತಿಸುವುದಕ್ಕೆ! ಹಾಗಾಗಿ ಅವರ ಹೋರಾಟದ ಪ್ರೇರಣೆಗಳು ನಮ್ಮ ಸಂಪ್ರದಾಯದೊಳಗಿನಿಂದ ಹುಟ್ಟಿದಂಥವಲ್ಲ ಹಾಗೂ ಅವರಿಗೆ ಈ ಕ್ರಿಯೆಯ ಕುರಿತು ವಿರೋಧ ಹುಟ್ಟಿದರೂ ಆಶ್ಚರ್ಯವಿಲ್ಲ.
____________________________________________________________

ಇಫ್ತಾರ್‌: ಕಣ್ಣು ತೆರೆಸುವ ಕೆಲಸ
ಡಾ. ಆರ್. ಲಕ್ಷ್ಮೀನಾರಾಯಣ
3 Jul, 2017

ಪೇಜಾವರ ಶ್ರೀಗಳ ಈಗಿನ ನಡೆ ಒಂದು ಹನುಮ ನೆಗೆತವೇ ಸರಿ! ಅವರ ಈ ಕಾರ್ಯವನ್ನು ಮುಕ್ತವಾಗಿ ಸ್ವಾಗತಿಸುವ ಔದಾರ್ಯ ತೋರಬೇಕಿದೆ

ಮುಸ್ಲಿಮರಿಗೆ ಪೇಜಾವರ ಮಠದ ವಿಶ್ವೇಶ ತೀರ್ಥರು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದುದರ ಪರ-ವಿರೋಧ ಚರ್ಚೆಗಳಾಗುತ್ತಿವೆ. ಇಫ್ತಾರ್ ಕೂಟದಲ್ಲಿ ಯತಿಯೊಬ್ಬರು ಮಠದ ಆವರಣದಲ್ಲಿ ಮುಸ್ಲಿಮರಿಗೆ ತಾವೇ ನೇತೃತ್ವ ವಹಿಸಿ ಉಣಬಡಿಸಿರುವುದಕ್ಕೇ ಕೆಲವು ಕಟ್ಟರ್ ಪಂಥೀಯ ಹಿಂದೂ ಮಿತ್ರರು ಇಷ್ಟು ಬಲವಾದ ವಿರೋಧ ವ್ಯಕ್ತಪಡಿಸುತ್ತಿರಬೇಕಾದರೆ ಇನ್ನು ಮುಸ್ಲಿಮರೊಬ್ಬರು ಹಿಂದೂ ಯತಿಯೊಬ್ಬರನ್ನು ತನ್ನ ಮನೆಗೆ ಆಹ್ವಾನಿಸಿ ಭೋಜನ ನೀಡಿದರೆಂಬ ವಿಷಯ ತಿಳಿದರೆ ಆ ಯತಿಯ ಬಗ್ಗೆ ಈ ಕಟ್ಟರ್ ಪಂಥೀಯರು ಏನು ಹೇಳುತ್ತಾರೋ ತಿಳಿಯದು!

ಆ ಯತಿ ಬೇರಾರೂ ಅಲ್ಲ. ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಧ್ವಜವನ್ನು ಎತ್ತಿಹಿಡಿದ ಅಪ್ರತಿಮ ದೇಶಭಕ್ತ, ಸನ್ಯಾಸಿ ಸ್ವಾಮಿ ವಿವೇಕಾನಂದರು. ಅವರು ಷಿಕಾಗೊಕ್ಕೆ ಹೋಗುವ ಮುನ್ನ ಇಡೀ ದೇಶದ ಪರಿಚಯ ಮಾಡಿಕೊಳ್ಳಬೇಕೆಂದು ಸಂಚರಿಸುತ್ತಿದ್ದಾಗ ಖೇತ್ರಿ ಮಹಾರಾಜರ ಅತಿಥಿಯಾಗಿದ್ದಾಗಲೋ ಏನೋ ಅವರು ದಿನವೂ ನೀಡುತ್ತಿದ್ದ ಉಪನ್ಯಾಸಗಳಿಗೆ ತಪ್ಪದೆ ಹಾಜರಾಗುತ್ತಿದ್ದ ಒಬ್ಬ ಬಡ ಮುಸ್ಲಿಂ ವೃದ್ಧರಿಗೆ ವಿವೇಕಾನಂದರನ್ನು ಮನೆಗೆ ಆಹ್ವಾನಿಸಿ ಭೋಜನ ನೀಡಬೇಕೆಂಬ ಪ್ರಬಲವಾದ ಬಯಕೆ ಉಂಟಾಗುತ್ತದೆ.

ಆದರೆ ತನ್ನಂಥ ಅನ್ಯ ಧರ್ಮೀಯ ನೀಡುವ ಆಹಾರವನ್ನು ಸ್ವಾಮೀಜಿ ಸ್ವೀಕರಿಸುತ್ತಾರೋ ಇಲ್ಲವೋ ಎಂಬ ಅನುಮಾನವೂ ಇರುತ್ತದೆ. ಇದನ್ನು ಸುಳ್ಳು ಮಾಡಿದ ವಿವೇಕಾನಂದರು, ಅವರು ನೀಡಿದ ಭೋಜನವನ್ನು ಸಂತೋಷದಿಂದ ಸ್ವೀಕರಿಸಿ, ಅವರ ಆಸೆ ಈಡೇರಿಸುತ್ತಾರೆ (ಸ್ವಾಮಿ ವಿವೇಕಾನಂದ- ಕುವೆಂಪು).

ಮಠಾಧೀಶರೂ ಸೇರಿದಂತೆ ಎಲ್ಲ ಬ್ರಾಹ್ಮಣರೂ ಸನ್ಯಾಸ ಸ್ವೀಕರಿಸುವ ಮುಂಚೆ ಶಿಖೆ ಮತ್ತು ಯಜ್ಞೋಪವೀತಗಳನ್ನು ತ್ಯಜಿಸುತ್ತಾರೆ. ಅದರ ಅರ್ಥ ಸ್ಪಷ್ಟವಿದೆ. ಸನ್ಯಾಸಿಗೆ ಜಾತಿ– ಮತ– ಪಂಥಗಳ ಭೇದವಿಲ್ಲ. ಯಾರ ಮನೆಯಲ್ಲಾದರೂ ಭಿಕ್ಷೆ ಬೇಡಿ ಭುಂಜಿಸಬೇಕೆಂಬುದು ಪರಿವ್ರಾಜಕ ಸನ್ಯಾಸಿಯಾದವರ ಒಂದು ಧರ್ಮ.




ಆದರೆ ಮಠ ಪರಂಪರೆಯಲ್ಲಿ ಬಂದ ಮಠಾಧೀಶರು ಜುಟ್ಟು- ಜನಿವಾರ ತ್ಯಜಿಸುವುದು ಕೇವಲ ಸಾಂಕೇತಿಕವಾಗಿದೆ. ಜಾತಿಭೇದ ಪೂರ್ತಿ ತೊರೆದ ಮಠಾಧೀಶರು ಯಾವ ಕಾಲದಲ್ಲೂ ಇರಲಿಲ್ಲ (ಬಸವಣ್ಣನವರು ಮತ್ತು ರಾಮಾನುಜರು ಅಪವಾದವೆನಿಸುತ್ತದೆ). ಬಹುತೇಕರು ಭಿಕ್ಷೆ (ಭೋಜನ) ಸ್ವೀಕರಿಸುವುದು ಏನಿದ್ದರೂ ತಮ್ಮ ಪಂಗಡದ ಭಕ್ತರ ಮನೆಗಳಲ್ಲಿಯೇ. ಅದಕ್ಕೆ ಕೊಡುವ ಕಾರಣ ಬಹುಶಃ ಸ್ಪಷ್ಟವಿದೆ. ಅವರು ಕೇವಲ ಸನ್ಯಾಸಿಗಳಲ್ಲ; ಮಠದ ಸಂಪ್ರದಾಯ, ನಡವಳಿಕೆಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುವ ಹೊಣೆಗಾರಿಕೆ ಹೊತ್ತವರು. ಅಂಥದ್ದರಲ್ಲಿ ಈ ಕರ್ಮಠ ಪರಂಪರೆಯಲ್ಲೇ ಬಂದ ಪೇಜಾವರರ ಈಗಿನ ನಡೆ ಒಂದು ಹನುಮ ನೆಗೆತವೇ ಸರಿ!

ಪೇಜಾವರರು ದಲಿತರ ಕೇರಿಗೆ ಹೋದಾಗಲೆಲ್ಲ ಅವರನ್ನು ‘ಡೋಂಗಿ ಸ್ವಾಮಿ’ ಎಂದೇ ಟೀಕಿಸುತ್ತಿದ್ದ ಕೆಲವರೂ ಅವರನ್ನು ಮನಸಾರೆ ಮೆಚ್ಚುವಷ್ಟು ಔದಾರ್ಯ ತೋರಿರುವುದೇ ಅವರದು ಸರಿಯಾದ ನಡೆ ಎನ್ನುವುದಕ್ಕೆ ಒಂದು ಪ್ರಬಲವಾದ ಸಾಕ್ಷಿಯೆನ್ನೋಣವೇ?
ಹಿಂದೂ ಧರ್ಮ ಮೊದಲಿನಿಂದಲೂ ಸಾಗುತ್ತ ಬಂದಿರುವ ಹಾದಿಯನ್ನು ಗಮನಿಸಿದವರಿಗೆ ಇದೇನೂ ಅಂಥ ವಿಶೇಷವೆನಿಸಲಾರದು. ಅಲ್ಲಾಹುವಿನ ಹೊರತು ಅನ್ಯ ದೈವಕ್ಕೆ ನಮಿಸದಿರುವುದು, ಅವರ ಮಸೀದಿಗಳೊಳಕ್ಕೆ ಇತರೆ ಧರ್ಮೀಯರನ್ನು ಸೇರಿಸಿಕೊಳ್ಳದಿರುವುದು ಇಸ್ಲಾಂ ಧರ್ಮ ಹುಟ್ಟಿದಾಗಿನಿಂದಲೂ ಅನುಸರಿಸಿಕೊಂಡು ಬಂದಿರುವ ಮುಸ್ಲಿಮರ ನಂಬಿಕೆ ಮತ್ತು ಪದ್ಧತಿಯೇ ಆಗಿದೆ. ಅದನ್ನು ಹಿಂದೂಗಳು ಮೊದಲುಗೊಂಡು ಉಳಿದವರೆಲ್ಲರೂ ಗೌರವಿಸಬೇಕು.
ಆದರೆ ಪರದೈವವೊಲ್ಲೆನೆಂಬ ಛಲ ಹಿಂದೂ ಧರ್ಮಕ್ಕೆ ಯಾವ ಕಾಲಕ್ಕೂ ಇರಲಿಲ್ಲ. ಅದಕ್ಕೆ ನಮ್ಮಲ್ಲಿರುವ ಬಹುದೇವತಾ ಆರಾಧನೆಯೇ ಸಾಕ್ಷಿ. ಅಲ್ಲಾಹು ಅಥವಾ ಏಸುಕ್ರಿಸ್ತನನ್ನೂ ದೈವವೆಂದು ಒಪ್ಪಿಕೊಳ್ಳಲು ಮತ್ತು ನಮಿಸಲು ನಮ್ಮ ಧರ್ಮ ಅಡ್ಡ ಬರುವುದಿಲ್ಲ. ನಮ್ಮ ದೇವಸ್ಥಾನಗಳಿಗೆ ಯಾರು ಬೇಕಾದರೂ ಬರಬಹುದು. ದಲಿತರನ್ನು ಗಾಂಧೀಜಿ ಬರುವವರೆಗೂ ದೇವಸ್ಥಾನದೊಳಕ್ಕೆ ಬಿಡದಿದ್ದರೆ ಅದಕ್ಕೆ ನಮ್ಮವರ ಮೌಢ್ಯ ಕಾರಣವೇ ಹೊರತು ಇನ್ನೇನಲ್ಲ.

ಅನ್ಯ ಧರ್ಮೀಯರಿಗೆ ಹಿಂದೂ ರಾಜರು ಎಲ್ಲ ಕಾಲದಲ್ಲೂ ಉದಾರವಾದ ಆಶ್ರಯ ನೀಡಿರುವುದಕ್ಕೆ ಇತಿಹಾಸ ಜ್ವಲಂತ ಸಾಕ್ಷಿಯಾಗಿದೆ.
ಹೀಗಿರುವಾಗ ನಾವು ಅನ್ಯ ಧರ್ಮೀಯರನ್ನು ನಮ್ಮ ಮಠ– ದೇವಸ್ಥಾನದೊಳಕ್ಕೆ ಆಹ್ವಾನಿಸಿದರೆ ಅದು ನಮ್ಮ ಧರ್ಮಕ್ಕೆ ಹೇಗೆ ವಿರೋಧವಾಗುತ್ತದೆ? ಬದಲಿಗೆ ನಮ್ಮ ಎಂದಿನ ಧಾರ್ಮಿಕ ಔದಾರ್ಯಕ್ಕೆ ಮತ್ತೊಂದು ನಿದರ್ಶನವಾಗುತ್ತದೆ ಅಷ್ಟೆ. ‘ಮಸೀದಿಯಲ್ಲಿ ಗಣೇಶೋತ್ಸವ ಆಚರಿಸುತ್ತಾರೆಯೇ, ಅವರು ಗೋಮಾಂಸ ಭಕ್ಷಕರಲ್ಲವೇ’ ಎಂದೆಲ್ಲ ಅವರ ಧಾರ್ಮಿಕ ನಂಬಿಕೆ ಮತ್ತು ಆಹಾರ ಪದ್ಧತಿಯನ್ನು ಪ್ರಶ್ನಿಸುತ್ತ ಹೋದರೆ ನಾವು ಒಂದು ಇಂಚೂ ಮುಂದೆ ಹೋಗಲಾಗುವುದಿಲ್ಲ. ಅದು ಅಲ್ಲಿಗೇ ನಿಲ್ಲುತ್ತದೆ.

ನಮ್ಮದು ವ್ಯವಸಾಯ ಪ್ರಧಾನವಾದ ದೇಶವಾದ ಕಾರಣ ಹಸು, ಎತ್ತುಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದವು, ಈಗಲೂ ಆಗಿವೆ. ರೈತನ ಜೀವನಾಡಿಯೇ ಅವು. ಅಲ್ಲದೆ ನಮ್ಮ ಮಕ್ಕಳು, ಮೊಮ್ಮಕ್ಕಳು ಅದರ ಹಾಲು, ಮೊಸರು, ತುಪ್ಪಗಳನ್ನು ತಿಂದು ಬೆಳೆಯುತ್ತಾರೆ. ಪೋಷಣೆ ಹೊಂದುತ್ತಾರೆ. ಈ ಕಾರಣಕ್ಕಾಗಿ ನಮಗೆ ಅದರ ಬಗ್ಗೆ ಮೊದಲಿಗೆ ಇರುವುದು ಎಲ್ಲಿಲ್ಲದ ಕೃತಜ್ಞತೆಯ ಭಾವನೆ.

‘ಬಸವಣ್ಣ ನಿನ್ನ ಕಸವ ಹೊಡೆದ ಕೈ ಕಸ್ತೂರಿ ಗೊನಿನಾತ, ಎಸಳ ಯಾಲಕ್ಕಿ ಗೊನಿನಾತ’ ಎಂಬ ಕನ್ನಡ ಜನಪದ ಗೀತೆಯಲ್ಲಿ ನಮ್ಮ ನಾಡಿನವರ ಕೃತಜ್ಞತೆಯ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಆ ಕಾರಣಕ್ಕಾಗಿಯೇ ಗೋವಧೆ ಮಹಾ ಪಾಪವೆಂದು ಹೇಳಿರಬೇಕು. ಗೋವಿನ ಬಗ್ಗೆ ಪಾವಿತ್ರ್ಯದ ಭಾವನೆ ಆನಂತರ ಬಂದದ್ದಿರಬೇಕು. ಕಾರಣ ವೈದಿಕ ಋಷಿಗಳು ಗೋಮಾಂಸ ಭಕ್ಷಿಸುತ್ತಿದ್ದುದಕ್ಕೆ ಬೇಕಾದಷ್ಟು ಪುರಾವೆಗಳಿವೆ. ಬಹುಶಃ ಹೀಗೆ ಪವಿತ್ರವೆಂದು ಧಾರ್ಮಿಕತೆಯನ್ನು ಆರೋಪಿಸಿದರಾದರೂ ಅದರ ವಧೆ ಮಾಡದೆ ಇರಲಿ ಎಂಬುದು ಅದರ ಹಿಂದಿನ ಉದ್ದೇಶವಾಗಿರಬೇಕು.

ಆದರೆ ಅಲ್ಲಿಂದ ನಾವು ಬಹಳ ಮುಂದೆ ಬಂದಿದ್ದೇವೆ. ವೈದಿಕರೂ ಸೇರಿದಂತೆ ಯಾವುದೇ ಮಠಾಧೀಶರು ಗೋಮಾಂಸವಿರಲಿ, ಮಾಂಸವನ್ನೇ ತ್ಯಜಿಸಿ ಸಹಸ್ರಾರು ವರ್ಷಗಳೇ ಸಂದುಹೋಗಿವೆ. ಹಸು–ಎತ್ತುಗಳು ಮುದಿಯಾದಾಗ ಸಂಕಟದಿಂದಲಾದರೂ ಅವನ್ನು ಕಟುಕರಿಗೆ ಕೊಡುವುದು ನಮ್ಮಲ್ಲಿ ಇದ್ದೇ ಇದೆ. ಆರ್ಥಿಕತೆ, ವ್ಯಾವಹಾರಿಕತೆ ಅದರೊಂದಿಗೆ ತಳಕು ಹಾಕಿಕೊಂಡಿರುವುದೇನೂ ಸುಳ್ಳಲ್ಲ. ಗೋವು ನಮಗೆ ಮುಖ್ಯ. ಆದರೆ ಅದಕ್ಕಿಂತಲೂ ಜನರು ಮುಖ್ಯ.
ಒಮ್ಮೆ ಬಂಗಾಳದಲ್ಲಿ ಭೀಕರ ಕ್ಷಾಮವಾಗಿದ್ದಾಗ ಎಲ್ಲೆಲ್ಲೂ ಪರಿಹಾರ ಕೇಂದ್ರಗಳು ನಡೆದಿದ್ದಾಗ ಕೆಲವರು ಗೋರಕ್ಷಕರೆನ್ನುವವರು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಅವರೊಂದಿಗೆ ಮಾತಾಡುತ್ತ ವಿವೇಕಾನಂದರು- ‘ಗೋ ರಕ್ಷಣೆಯ ನಿಮ್ಮ ಧ್ಯೇಯ ಶ್ಲಾಘನೀಯ. ಆದರೆ ಸುತ್ತ ಆನ್ನಾಹಾರವಿಲ್ಲದೆ ಜನ ಸಾಯುತ್ತಿದ್ದಾರಲ್ಲ ಅವರ ಬಗ್ಗೆ ಏನು ಕಾರ್ಯಕ್ರಮ ಕೈಗೊಂಡಿದ್ದೀರಿ’ ಎಂದು ಪ್ರಶ್ನಿಸುತ್ತಾರೆ.
ಅದಕ್ಕೆ ಅವರು ‘ಅದರ ಗೊಡವೆ ನಮಗಿಲ್ಲ. ನಮ್ಮದೇನಿದ್ದರೂ ಗೋರಕ್ಷಣೆ. ಗೋವು ನಮಗೆ ಮಾತೆಯಲ್ಲವೇ? ಅದಕ್ಕೆ ಮೇವು ಆಹಾರ ಒದಗಿಸಿ ರಕ್ಷಿಸುವುದೇ ನಮ್ಮ ಧ್ಯೇಯ’ ಎಂದಾಗ ಸ್ವಾಮೀಜಿ ಕನಲಿ ಕೆಂಡವಾಗಿ- ‘ಆಹಾ! ಎಂಥ ಮೇಧಾವಿಗಳು ನೀವು. ಅತ್ತ ಹಸಿವಿನಿಂದ ಕಂಗಾಲಾಗಿರುವ ಜನರ ಸಂಕಷ್ಟಕ್ಕೆ ಕರಗದೆ ಗೋವಿನ ರಕ್ಷಣೆಗೆ ಮುಂದಾಗುವ ನೀವೆಂಥ ಜನ? ಗೋವೇ ನಿಮ್ಮ ಮಾತೆ! ಆಕೆ ನಿಮ್ಮಂಥ ಅವಿವೇಕಿಗಳನ್ನಲ್ಲದೆ ಇನ್ನೆಂಥವರನ್ನು ಹೆತ್ತಾಳು!’ ಎಂದು ವ್ಯಂಗ್ಯವಾಡುತ್ತಾರೆ(ಸ್ವಾಮಿ ವಿವೇಕಾನಂದ-ಕುವೆಂಪು).

ಸ್ವಾಮಿ ವಿವೇಕಾನಂದರನ್ನು ಮೀರಿಸಿದ ಹಿಂದೂ ಧರ್ಮದ ಭಕ್ತರು ಇದ್ದಾರೆಂದು ಅನಿಸುತ್ತಿಲ್ಲ. ಅದರೆ ಸದಾ ತಮ್ಮ ವಿಚಾರವಂತಿಕೆ ಮತ್ತು ವಿವೇಕವನ್ನು ಜಾಗೃತವನ್ನಾಗಿಟ್ಟುಕೊಂಡ ಆ ದೇಶಭಕ್ತ ಸ್ವಾಮೀಜಿ ನಡೆ ಎಲ್ಲ ಕಾಲಕ್ಕೂ ನಮಗೆ ನಮ್ಮ ಬೆನ್ನ ಹಿಂದಿನ ಬೆಳಕಾಗಬೇಕಲ್ಲವೇ?

ಪೇಜಾವರರ ನಡೆಯನ್ನು ಟೀಕಿಸುವುದು, ಲೇವಡಿ ಮಾಡುವುದು ಸುಲಭ. ಆದರೆ ಅವರ ನಡೆ ಸಮಾಜದ ಕಣ್ಣನ್ನು ಕಿಂಚಿತ್ತಾದರೂ ತೆರೆಸುವಂಥದ್ದು. ಅದನ್ನು ಮುಕ್ತವಾಗಿ ಸ್ವಾಗತಿಸುವ ಔದಾರ್ಯ ತೋರಬೇಕಿದೆ.

ತಮ್ಮ ಮೂಗಿನ ನೇರದ ಅಂಕು-ಡೊಂಕಿನ ನೈತಿಕತೆಯನ್ನೇ ಒಪ್ಪಿಕೊಳ್ಳಬೇಕೆಂಬ ಆಗ್ರಹ ಸರಿಯಲ್ಲ

_____________________________________________________


ಪ್ರಜಾತಾಂತ್ರಿಕ ಮೌಲ್ಯಗಳ ಸಂಕೇತ
5 Jul, 2017

ಭಾರತ ಒಂದು ಪ್ರಜಾತಾಂತ್ರಿಕ ಸಮಾಜವಾಗಿ ಉಳಿದು ಬರಬೇಕೆಂಬುದು ಅನೇಕರ ಬಯಕೆ. ಪ್ರಜಾತಂತ್ರದಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದರ ಕುರಿತು ವೈಚಾರಿಕತೆಯ ವಿವೇಕದಲ್ಲಿ ನಿಷ್ಕರ್ಷಿಸುವ ಅಧಿಕಾರ ನಮಗಿದೆ.

ಪ್ರೊ. ರಾಜಾರಾಮ ತೋಳ್ಪಾಡಿ

ಪ್ರೊ. ನಿತ್ಯಾನಂದ ಬಿ. ಶೆಟ್ಟಿ


ಉಡುಪಿಯ ಕೃಷ್ಣ ಮಠದಲ್ಲಿ ನಡೆದ ಇಫ್ತಾರ್ ಕೂಟ ದೊಡ್ಡ ವಿವಾದವಾಗಿರುವುದನ್ನು ಗಮನಿಸಿ ಈ ಬರಹಬರೆಯಲಾಗಿದೆ. ಹೊರನೋಟಕ್ಕೆ ಪರ–ವಿರೋಧಗಳ ಒಂದು ಸ್ಥಳೀಯವಾದ ಆಗು-ಹೋಗು ಎಂದು ಇದು ಕಾಣಿಸಿದರೂ ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಪ್ರಕ್ಷುಬ್ಧತೆಯ ಕಿಡಿಗಳು ಈ ವಿದ್ಯಮಾನದಲ್ಲಿವೆ. ಇದನ್ನೊಂದು ಸ್ಥಳೀಯ ಘಟನೆಯಾಗಿ ನೋಡದೆ ಜಾಗತಿಕ ವಿದ್ಯಮಾನದ ಭಾಗವಾಗಿ ಗ್ರಹಿಸುವ ಪ್ರಯತ್ನ ಈ ಬರಹದ ಉದ್ದೇಶ.

ಭಾರತ ಒಂದು ಪ್ರಜಾತಾಂತ್ರಿಕ ಸಮಾಜವಾಗಿ ಉಳಿದು ಬರಬೇಕೆಂಬುದು ಅನೇಕರ ಬಯಕೆ. ಪ್ರಜಾತಂತ್ರದಲ್ಲಿ ಯಾವುದು ಸರಿ? ಯಾವುದು ತಪ್ಪು? ಎನ್ನುವುದರ ಕುರಿತು ವೈಚಾರಿಕತೆಯ ವಿವೇಕದಲ್ಲಿ ನಿಷ್ಕರ್ಷಿಸುವ ಅಧಿಕಾರ ನಮಗಿದೆ. ಈ ನಿಷ್ಕರ್ಷೆಯಲ್ಲಿ ಮೂಡಿಬಂದ ನಿಲುವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಅಧಿಕಾರವೂ ನಮಗಿದೆ.

ಪ್ರಜಾತಂತ್ರದ ಜೀವಂತಿಕೆಗೆ ಅತ್ಯವಶ್ಯವಾದ ಈ ವೈಚಾರಿಕ ಸ್ವಾತಂತ್ರ್ಯವನ್ನು ವ್ಯಕ್ತಿ ಮತ್ತು ಸಮುದಾಯಗಳು ಕಾನೂನಿನ ಚೌಕಟ್ಟು ಮತ್ತು ಸಾರ್ವಜನಿಕ ಸಭ್ಯತೆಯ ಇತಿಮಿತಿಗಳಲ್ಲಿ ನಿರ್ವಹಿಸಬೇಕು. ಈ ಅರ್ಥದಲ್ಲಿ ಪೇಜಾವರ ಶ್ರೀಗಳು ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂದು ವಿಮರ್ಶಿಸುವ ಹಾಗೂ ವಿವೇಕಯುಕ್ತವಾದ ಸಂಯಮದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಜಾತಾಂತ್ರಿಕ ಅಧಿಕಾರ ನಮಗಿದೆ.

ಆದರೆ, ಉಡುಪಿಯ ಈ ವಿವಾದವನ್ನು ಕೇವಲ ಪ್ರಜಾತಾಂತ್ರಿಕ ಚೌಕಟ್ಟಿನಲ್ಲಷ್ಟೇ ಗ್ರಹಿಸಲು ಸಾಧ್ಯವಿಲ್ಲ. ಇದನ್ನು ಜಗತ್ತಿನ ಉದ್ದಗಲಕ್ಕೂ ಹಬ್ಬಿರುವ, ಕಳೆದ ಮೂರು ದಶಕಗಳಿಂದ ಆಕ್ರಮಣಶೀಲವಾಗಿ ಪ್ರಕಟಗೊಳ್ಳುತ್ತಿರುವ ಸಾಂಸ್ಕೃತಿಕ ವಿದ್ಯಮಾನದ ಪರಿಪ್ರೇಕ್ಷ್ಯದಲ್ಲಿ ಅರ್ಥ ಮಾಡಿಕೊಳ್ಳಬೇಕು. ಈ ಘಟನೆಯಿಂದ ವ್ಯಕ್ತಿ-ಸಮುದಾಯ-ಧಾರ್ಮಿಕ ಪರಂಪರೆಗಳ ಸ್ವಾಯತ್ತತೆ, ಸ್ವಾತಂತ್ರ್ಯಕ್ಕೆ ಮಾನ್ಯತೆ ಇಲ್ಲ ಎಂಬ ಸಂದೇಶ ರವಾನೆಯಾಗಿದೆ.
ಪೇಜಾವರ ಶ್ರೀಗಳ ವಿರುದ್ಧ ಹೂಂಕರಿಸುತ್ತಿರುವ ನಾಯಕರು, ಶ್ರೀಗಳನ್ನು ಒಂದು ಧಾರ್ಮಿಕ ಪರಂಪರೆಯ ಪ್ರತಿನಿಧಿಯೆಂದೂ ಭಾವಿಸಿಲ್ಲ. ಶ್ರೀಗಳು ಸಮುದಾಯಗಳ ಹಿತದೃಷ್ಟಿಯಿಂದ ತಮ್ಮ ಪರಂಪರೆಯ ಆಚಾರ ವಿಚಾರಗಳಿಗೆ ಕುಂದು ಬರದ ರೀತಿಯಲ್ಲಿ ಯಥೋಚಿತವಾದ ತೀರ್ಮಾನಗಳನ್ನು ತೆಗೆದುಕೊಳ್ಳಬಲ್ಲರು ಹಾಗೂ ತಮ್ಮ ಧಾರ್ಮಿಕ ವಿವೇಚನೆಯಲ್ಲಿ ಸೂಕ್ತವಾದ ಹೆಜ್ಜೆಗಳನ್ನು ಇಡಬಲ್ಲರು ಎಂಬುದನ್ನೂ ತಿಳಿದುಕೊಳ್ಳುವುದಿಲ್ಲ.
ಜನಾಂಗೀಯ ರಾಷ್ಟ್ರೀಯವಾದದಿಂದ ಉನ್ಮತ್ತಗೊಂಡ ರಾಜಕೀಯ ಹಿಂದುತ್ವದ ನಶೆ ಏರಿಸಿಕೊಂಡ ಈ ಸಂಘಟನೆಗಳಿಗೆ ಈ ದೇಶದಲ್ಲಿ ಶತಮಾನಗಳಿಂದ ಜೀವಂತವಾಗಿರುವ ಧಾರ್ಮಿಕ ಸಮುದಾಯಗಳ ಮತ್ತು ಪರಂಪರೆಗಳ ಬಗ್ಗೆ ಲವಲೇಶ ಪರಿಚಯವೂ ಇದ್ದಂತೆ ಕಾಣುವುದಿಲ್ಲ.
20ನೆಯ ಶತಮಾನದ ಉತ್ತರಾರ್ಧದಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆಗಳು; ಹಿಂದೂ ಧರ್ಮವೆಂದರೆ ತಾವು ವ್ಯಾಖ್ಯಾನಿಸಿದಂತೆ ಮತ್ತು ತಾವು ಯಾವುದನ್ನು ಭಾರತೀಯ ಸಂಸ್ಕೃತಿ ಎಂದು ನಿರ್ವಚಿಸುತ್ತೇವೆಯೋ ಅದಕ್ಕನುಗುಣವಾಗುವ ರೀತಿಯಲ್ಲಿ ಭಾರತದ ಅಸಂಖ್ಯಾತ ಧಾರ್ಮಿಕ ಪರಂಪರೆ ಹಾಗೂ ಮಠ ಮಾನ್ಯಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಬರುವ ವ್ಯಕ್ತಿಗಳೂ ತಾವು ಕೊಡುವ ತುತ್ತೂರಿಗಳನ್ನೇ ಊದಬೇಕೆಂದು ತಿಳಿದುಕೊಂಡಿರುವಂತೆ ಕಾಣುತ್ತದೆ.
ಪೇಜಾವರ ಶ್ರೀಗಳು ವಿಶ್ವ ಹಿಂದೂ ಪರಿಷತ್ತಿನ ನಾಯಕರಲ್ಲಿ ಒಬ್ಬರು ಅನ್ನುವುದು ನಿಜ. ಅವರಿಗೆ ಆರ್‌ಎಸ್‌ಎಸ್ ಕುರಿತು ಒಲವು ಇದೆ ಎನ್ನುವುದೂ ನಿಜ. ಅವರ ನೀತಿ-ನಿಲುವುಗಳ ಕುರಿತು ನಮ್ಮ ವಿಚಾರ-ವಿಮರ್ಶೆಗಳನ್ನು, ಸಹಮತ-ಭಿನ್ನಮತಗಳನ್ನು ನಾವು ನಿರಂತರವಾಗಿ ಪ್ರಜಾತಾಂತ್ರಿಕ ಸಂಯಮದಲ್ಲಿ ವ್ಯಕ್ತಪಡಿಸುತ್ತಲೂ ಇರಬೇಕು. ಆದರೆ ಇಂದು ಪ್ರಶ್ನೆ ಅದಲ್ಲ.
ಸುದೀರ್ಘವಾದ ಒಂದು ಪರಂಪರೆಯ ಧರ್ಮಗುರುಗಳಾದ, ವ್ಯಾಪಕವಾದ ಜನ ನಂಬುಗೆಯ ಮಠದ ಪೀಠಾಧಿಪತಿಗಳಾದ ಅವರ ಮುಂದೆ ತೋರುಬೆರಳ ಸನ್ನೆ ಮಾಡಿ ‘ನೀವು ಇದನ್ನು ಮಾಡಬೇಡಿ, ನೀವು ಮಾಡುವುದೇ ಆದಲ್ಲಿ ನಮ್ಮನ್ನು ಕೇಳಿ ಮಾಡಿ. ನೀವು ಹೀಗೆ ಮಾಡಿರುವುದು ಹಿಂದೂ ಧರ್ಮಕ್ಕೆ ಆದ ಅವಮಾನ. ನೀವು ಪೀಠತ್ಯಾಗ ಮಾಡಿ ಪೀಠವನ್ನು ಕಿರಿಯ ಸ್ವಾಮಿಗಳಿಗೆ ವಹಿಸಿ’ ಎಂದೆಲ್ಲ ತಾಕೀತು ಮಾಡುವ ಅಧಿಕಾರ ಯಾರಿಗೂ ಇಲ್ಲ.

ಧಾರ್ಮಿಕ ಪರಂಪರೆಯ ಕುರಿತು ಆಳವಾದ ಜ್ಞಾನ ಮತ್ತು ಮಠಾಧಿಪತಿಗಳಾಗಿ ಸುದೀರ್ಘವಾದ ಅನುಭವ ಪೇಜಾವರ ಶ್ರೀಗಳಿಗಿದೆ. ಧರ್ಮ ಸೂಕ್ಷ್ಮಗಳನ್ನು ಅವರಿಗೆ ಹೇಳಿಕೊಡಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಪ್ರಶ್ನಾತೀತರು ಎಂದೂ ನಾವು ಹೇಳುತ್ತಿಲ್ಲ. ಅವರ ನಡೆ-ನುಡಿ ಕುರಿತು ನಾಗರಿಕ ಸಮಾಜದಲ್ಲಿ ವಿಚಾರ ವಿಮರ್ಶೆ ನಡೆಯುತ್ತಲೇ ಇರಬೇಕು. ಆದರೆ ಈ ಅನೈತಿಕ ಪೊಲೀಸರಿಗೆ ನಾಗರಿಕ ಪ್ರಜಾತಾಂತ್ರಿಕ ಕ್ರಿಯಾಚರಣೆಯಲ್ಲಿ ಯಾವತ್ತೂ ನಂಬಿಕೆ ಇಲ್ಲ. ಅವರು ತಾವು ನಂಬಿದ ಅಥವಾ ತಮ್ಮ ಮೂಗಿನ ನೇರದ ಅಂಕು-ಡೊಂಕಿನ ನೈತಿಕತೆಯನ್ನೇ ಪೇಜಾವರರೂ ಒಪ್ಪಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದು ಅಪ್ರಜಾತಾಂತ್ರಿಕವಾದ ಕೃತ್ಯ.

ನಮ್ಮ ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಮೂಡಿಬಂದ ಹಲವು ಮತಗಳು ತೀವ್ರವಾದ ಮತಭೇದವನ್ನು ತಮ್ಮೊಳಗೆ ಹೊಂದಿವೆ. ಭಾರತೀಯ ಸಂತ ಪರಂಪರೆ ಟೀಕಿಸದೆ ಇರುವ ಯಾವ ಮತವೂ ಭಾರತೀಯ ಸಂದರ್ಭದಲ್ಲಿ ಇಲ್ಲ. ಹಾಗೆಯೇ ಯಾವ ಭಾರತೀಯ ಸಂತನನ್ನೂ ವಿಮರ್ಶಿಸದೆ ಒಪ್ಪಿಕೊಂಡ ಯಾವ ಮತಸಂಪ್ರದಾಯವೂ ನಮ್ಮಲ್ಲಿಲ್ಲ.
ಭಾರತದ ಸಂದರ್ಭದಲ್ಲಿ ನಡೆದಷ್ಟು ತೀಕ್ಷ್ಣವಾದ ಆಧ್ಯಾತ್ಮಿಕ ವಾಗ್ವಾದಗಳನ್ನು ಜಗತ್ತಿನ ಬೇರೆಡೆ ನಾವು ಕಾಣಲಾರೆವು. ಇದು ನಮ್ಮ ಹೆಮ್ಮೆಗೆ ಕಾರಣವಾಗಬೇಕು. ಆದರೆ ಆಧುನಿಕ ರಾಜಕೀಯದ ಪೋಷಾಕನ್ನು ಒಳಗೆ ಧರಿಸಿ ಹೊರಗೆ ಹುಸಿ ಧಾರ್ಮಿಕತೆಯ ಮುಖವಾಡ ಹಾಕಿರುವ ಮತೀಯ ಸಂಘಟನೆಗಳಿಗೆ ನೈಜ ಧಾರ್ಮಿಕರು–ಅನುಭಾವಿಗಳು ಯಾವುದನ್ನು ಹೆಮ್ಮೆಯಾಗಿ ಸಂಭ್ರಮದಿಂದ ಕಾಣುತ್ತಾರೋ ಅದೊಂದು ಸಂಕೋಚದ ಮತ್ತು ನಾಚಿಕೆಯ ವಿಷಯ.

ಜೈನ- ಬೌದ್ಧ- ಪಾರ್ಸಿ- ಇಸ್ಲಾಂ-ಕ್ರಿಶ್ಚಿಯನ್- ಸೂಫಿ ಇತ್ಯಾದಿ ಮತಸಂಪ್ರದಾಯಗಳು- ಅನುಭಾವಿ ಪಂಥಗಳು ಭಾರತವನ್ನು ಶ್ರೀಮಂತಗೊಳಿಸಿದಷ್ಟು ಬೇರಾವ ದೇಶವನ್ನೂ ಶ್ರೀಮಂತಗೊಳಿಸಿಲ್ಲ. ಆದರೆ ಈ ಶ್ರೀಮಂತಿಕೆ ನಮ್ಮ ಮಾನವೀಯ ಅನುಕಂಪವನ್ನು ವಿಶಾಲಗೊಳಿಸಿವೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭವಾಗಿಲ್ಲ ಎಂಬುದನ್ನು ಉಡುಪಿಯ ಈ ಘಟನೆಗಳು ಹೇಳುತ್ತಿವೆ

ಪೇಜಾವರರು ತಾವು ಪ್ರತಿಪಾದಿಸುವ ಹಿಂದೂ ಮತದ ಅಂಕು-ಡೊಂಕುಗಳನ್ನು ಕಾಣಬಲ್ಲವರಾಗಿದ್ದಾರೆ. ಪ್ರಕ್ಷುಬ್ಧತೆಯನ್ನು ಒಳಗೊಂಡ ಈ ಸಮಾಜದಲ್ಲಿ ಸಣ್ಣಪುಟ್ಟ ಹೊಂದಾಣಿಕೆಯಾದರೂ ಸಾಧ್ಯವೇ ಎಂಬುದನ್ನು ಅವರು ಅಲ್ಲಿ-ಇಲ್ಲಿ ಪರಿಶೀಲಿಸುತ್ತಿದ್ದಾರೆ. ಅವರು ಮೂಲತಃ ಓರ್ವ ಮಠಾಧೀಶರು. ಅವರು ಈ ಲೋಕದ ನಿಗೂಢಗಳಿಗೆ ಸ್ಪಂದಿಸುವ ಸಂತರಲ್ಲ. ಬದಲಿಗೆ ಈ ಲೋಕದ ಆತಂಕಕ್ಕೆ ಸ್ಪಂದಿಸುವ ಧಾರ್ಮಿಕ ಗುರು. ಅವರು ಧಾರ್ಮಿಕ ಗುರುವಾಗಿರುವುದರಿಂದಲೇ ಭಿನ್ನ-ಭಿನ್ನ ಸಮುದಾಯಗಳ ನಡುವೆ ಸಾಮರಸ್ಯದ ಮತ್ತು ಸಹಜೀವನದ ರಾಜಕೀಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನು ಸಹಾನುಭೂತಿಯಿಂದ ನೋಡಬೇಕಾಗಿದೆ.
‘ಯಾವ ದೇವರನ್ನು ಪೂಜಿಸಿದರೂ ಅದು ಕೇಶವನನ್ನು ತಲುಪುತ್ತದೆ’ ಎಂಬ ಶ್ರದ್ಧೆಯನ್ನು ಹೊಂದಿರುವ ನೈಜ ಹಿಂದೂವಿನ ನಂಬಿಕೆಗೆ ಈ ವಿವಾದ ಮರ್ಮಾಘಾತ ನೀಡಿದೆ. ನಾರಾಯಣ ಗುರುವಿನಂತಹ ಅದ್ವೈತವಾದಿ ನಾಲ್ಕು ವೇದಗಳನ್ನು ಒಗ್ಗೂಡಿಸಿ ಒಂದು ವೇದವನ್ನಾಗಿಯೂ ಬೈಬಲ್, ಕುರ್‌ಆನ್ ಮತ್ತು ಬೌದ್ಧಗ್ರಂಥಗಳನ್ನು ಇನ್ನುಳಿದ ಮೂರು ವೇದಗಳಾಗಿಯೂ ಪರಿಗಣಿಸಬೇಕು ಎಂಬ ಸಲಹೆಯನ್ನು ನೀಡಿದ್ದರಂತೆ. ಆಧುನಿಕ ಹಿಂದುತ್ವವಾದಿಗಳಲ್ಲಿ ನಾರಾಯಣ ಗುರು; ಶಿಶುನಾಳ ಷರೀಫರಂತಹವರಿಗೆ ದೀಕ್ಷೆ ನೀಡಿದ ಗುರು ಗೋವಿಂದ ಭಟ್ಟರ ತತ್ವಗಳಿಗೆ ಬೆಲೆ ಇಲ್ಲ.

ಪೇಜಾವರ ಶ್ರೀಗಳು ಕರಾವಳಿ ಪ್ರದೇಶದ ಸಾಮಾಜಿಕ ಸಹಜೀವನದ ನೆನಪುಗಳನ್ನು ಇಟ್ಟುಕೊಂಡವರು. ಈ ವಿವಾದದ ಸಂದರ್ಭದಲ್ಲೂ ಹಿಂದೂ-ಮುಸ್ಲಿಂ ಸಮುದಾಯಗಳ ನಡುವಿನ ಆತ್ಮೀಯವಾದ ಅನೇಕ ಚಾರಿತ್ರಿಕ ನೆನಪುಗಳನ್ನು ಅವರು ಮೆಲುಕು ಹಾಕಿದ್ದಾರೆ. ಅವರ ವ್ಯಕ್ತಿತ್ವದಲ್ಲಿರುವ ಮಾನವೀಯ ಕಳಕಳಿ ಈ ಬಗೆಯ ಸೌಹಾರ್ದ ಕೂಟವನ್ನು ಏರ್ಪಡಿಸುವಂತೆ ಪ್ರಚೋದಿಸಿದೆ.
ನಮ್ಮ ದೃಷ್ಟಿಯಲ್ಲಿ ಈ ಸೌಹಾರ್ದ ಕೂಟ ಒಂದು ಪ್ರಜಾತಾಂತ್ರಿಕ ಸಂಕೇತ. ಈ ಸಂಕೇತವನ್ನು ಗೌರವಿಸಿ ಅದರ ಕಳಕಳಿಗೆ ಮಣಿಯಬೇಕೇ ಹೊರತು ಕ್ಷುಲ್ಲಕರಂತೆ ವರ್ತಿಸಬಾರದು. ಈ ವಿದ್ಯಮಾನವು ಬಿಗಡಾಯಿಸುತ್ತಿರುವ ನಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ನಾವು ಕಳೆದುಕೊಳ್ಳುತ್ತಿರುವ ಪ್ರಜಾತಾಂತ್ರಿಕ ಮೌಲ್ಯಗಳ ಕುರಿತು ನಮ್ಮನ್ನು ಎಬ್ಬಿಸುವ ಮುನ್ನೆಚ್ಚರಿಕೆಯ ಕರೆಗಂಟೆಯೂ ಹೌದು.

_________________________________________________________________

ಚರ್ಚೆ

ಅಪ್ರಾಮಾಣಿಕತೆ ಪ್ರಜಾತಾಂತ್ರಿಕ ಮೌಲ್ಯ ಅಲ್ಲ

7 Jul, 2017


ಸಂಘ ಪರಿವಾರ ಹುಸಿ ವಾಗ್ವಾದವೊಂದನ್ನು ಹುಟ್ಟುಹಾಕುವ ಮೂಲಕ ಒಡ್ಡಿರುವ ಖೆಡ್ಡಾಕ್ಕೆ ಒಬ್ಬೊಬ್ಬರೇ ಬೀಳುತ್ತಿರುವುದು ಕಳವಳಕಾರಿ...

* ದಿನೇಶ್‌ ಅಮಿನ್‌ ಮಟ್ಟು

ಪೇಜಾವರ ಸ್ವಾಮಿಗಳ ‘ಇಫ್ತಾರ್ ಕೂಟ’ದ ನಡೆಯನ್ನು ‘ಅವರೊಳಗಿನ ಮಾನವೀಯ ಕಳಕಳಿಯ ಪ್ರಚೋದನೆ’ ಎಂದು ಸಾರಿದ ಪ್ರೊ. ರಾಜಾರಾಮ ತೋಳ್ಪಾಡಿ ಮತ್ತು ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಅಭಿಪ್ರಾಯ (ಪ್ರ.ವಾ., ಚರ್ಚೆ, ಜುಲೈ 5) ಅಚ್ಚರಿ ಉಂಟುಮಾಡಿದೆ.
ಪೇಜಾವರ ಶ್ರೀಗಳ ನಡೆಯಿಂದ ಭಾವೋದ್ವೇಗಕ್ಕೆ ಒಳಗಾದಂತೆ ಕಾಣುತ್ತಿರುವ ಲೇಖಕರು, ಸಂಘ ಪರಿವಾರದೊಳಗಿನ ಬಂಡುಕೋರ ಪ್ರಮೋದ ಮುತಾಲಿಕ್ ಅವರ ವಿರೋಧಕ್ಕೆ ಪ್ರತಿಕ್ರಿಯೆ ನೀಡುವ ಆವೇಶದಲ್ಲಿ ಶ್ರೀಗಳನ್ನು ನಾರಾಯಣ ಗುರುಗಳಿಗೆ ಹೋಲಿಸುವ ಮಟ್ಟಕ್ಕೆ ಮುನ್ನುಗ್ಗಿರುವುದು ವಿಷಾದನೀಯ.
ಹಾಗಿದ್ದರೆ ಸ್ವಾಮೀಜಿ ನಿಗೂಢ ನಡೆಯ ಉದ್ದೇಶಗಳಾದರೂ ಏನು? ಮೊದಲನೆಯದಾಗಿ, ಇದೊಂದು ಸಂಘ ಪರಿವಾರದ ಹಳೆಯ ಕಾರ್ಯತಂತ್ರ. ಸೌಮ್ಯವಾದಿ- ಉಗ್ರವಾದಿ ನಾಯಕರನ್ನು ಹಾಗೂ ಅಂತಹವರನ್ನು ಪೋಷಿಸುವ ಸಂಘಟನೆಗಳನ್ನು ತಮ್ಮೊಳಗೆ ಹುಟ್ಟುಹಾಕಿ ಪರ-ವಿರೋಧದ ಲಾಭಗಳೆರಡೂ ತಮ್ಮ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳುವುದು ಇದರ ಹಿಂದಿನ ಉದ್ದೇಶ.
ಇಲ್ಲಿಯೂ ಮುತಾಲಿಕ್ ಬೆಂಬಲಿಗರು ಮತ್ತು ಪೇಜಾವರರ ಭಕ್ತರು ಚುನಾವಣೆ ಎದುರಾದಾಗ ಯಾರಿಗೆ ಮತ ಹಾಕುತ್ತಾರೆಂದು ತಿಳಿದುಕೊಳ್ಳಲು ಮತಪೆಟ್ಟಿಗೆ ಒಡೆದು ನೋಡಬೇಕಾಗಿಲ್ಲ. ಆದರೆ ಸಂಘ ಪರಿವಾರ ಇಂತಹದ್ದೊಂದು ಹುಸಿ ವಾಗ್ವಾದವನ್ನು ಹುಟ್ಟುಹಾಕುವ ಮೂಲಕ ಒಡ್ಡಿರುವ ಖೆಡ್ಡಾಕ್ಕೆ ಒಬ್ಬೊಬ್ಬರೇ ಬೀಳುತ್ತಿರುವುದು ಮಾತ್ರ ಕಳವಳಕಾರಿಯಾದುದು.
ಎರಡನೆಯದಾಗಿ, ಇದು ಪೇಜಾವರ ಸ್ವಾಮಿಗಳ ‘Image building’ ಕಸರತ್ತು ಇರಬಹುದೇನೋ ಎಂಬ ಸಂಶಯವೂ ಇದೆ. ಹೋಲಿಕೆಗಾಗಿ ಪ್ರಮೋದ ಮುತಾಲಿಕ್ ಎಂಬ ಪ್ರತಿನಾಯಕನನ್ನು ಎದುರು ನಿಲ್ಲಿಸಿದರೆ ವಿರೋಧಿಗಳ ದೃಷ್ಟಿಯಲ್ಲಿಯೂ ಪೇಜಾವರರು ಇನ್ನಷ್ಟು ಎತ್ತರಕ್ಕೆ ಹೋಗಿಯೇ ಹೋಗುತ್ತಾರೆ. ‘ಸ್ವಾಮಿ ವಿವೇಕಾನಂದರ ನಂತರ ನಮಗೊಬ್ಬ ಹಿಂದೂ ಸ್ವಾಮಿ ಇಲ್ಲ. ಪೇಜಾವರರು ಮಠದಿಂದ ಹೊರಬಂದು ಹಿಂದೂ ಸ್ವಾಮಿಯಾಗಿ ಧರ್ಮಜಾಗೃತಿ ಮಾಡುವಂತೆ ಕೇಳಿಕೊಳ್ಳುತ್ತಿದ್ದೇವೆ’ ಎಂದು Image building ಕಸರತ್ತಿನಲ್ಲಿ ಸಕ್ರಿಯರಾಗಿದ್ದ ಆರ್‌ಎಸ್‌ಎಸ್‌ನ ಪ್ರಮುಖ ಕಾರ್ಯಕರ್ತರೊಬ್ಬರು ಹಿಂದೊಮ್ಮೆ ನನ್ನೊಡನೆ ಹೇಳಿದ್ದು ನೆನಪಾಗುತ್ತಿದೆ.
ಮೂರನೆಯದಾಗಿ, ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರು ಸಹಮತದಿಂದ ಸಹಕರಿಸುವಂತೆ ಮಾಡುವ ಪ್ರಯತ್ನವನ್ನು ಸಂಘ ಪರಿವಾರ ದೇಶದಾದ್ಯಂತ ಬೇರೆಬೇರೆ ಕಾರ್ಯತಂತ್ರಗಳ ಮೂಲಕ ಪ್ರಾರಂಭಿಸಿದೆ. ಬಿಜೆಪಿ ಇಫ್ತಾರ್ ಕೂಟ ಕೂಡಾ ಆ ಕಾರ್ಯತಂತ್ರಗಳಲ್ಲೊಂದು ಎಂದು ಹೇಳಲಾಗುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳ ನಡೆಯ ಹಿಂದಿನ ಪ್ರಾಮಾಣಿಕತೆಯನ್ನು ನೋಡಬೇಕಾಗಿದೆ. ‘ಜನಾಂಗೀಯ ರಾಷ್ಟ್ರೀಯವಾದದಿಂದ ಉನ್ಮತ್ತಗೊಂಡ ರಾಜಕೀಯದ ಹಿಂದುತ್ವದ ನಶೆ ಏರಿಸಿಕೊಂಡ ಸಂಘಟನೆಗಳು’ ಎಂದು ಪೇಜಾವರರ ವಿರೋಧಿ ಹಿಂದೂ ಸಂಘಟನೆಗಳನ್ನು ಟೀಕಿಸಿರುವ ಲೇಖಕರು, ಪೇಜಾವರರು ಅವುಗಳಿಂದ ಹೊರಗೆ ಬಂದಿದ್ದಾರೆ ಎನ್ನುವ ಅರ್ಥದಲ್ಲಿ ವಿಶ್ಲೇಷಿಸಿದ್ದಾರೆ.
‘ಹಿಂದುತ್ವದ ನಶೆಯೇರಿಸಿಕೊಂಡ ಸಂಘಟನೆ’ಗಳಲ್ಲಿ ಮುಂಚೂಣಿಯಲ್ಲಿರುವ ಆರ್‌ಎಸ್‌ಎಸ್ ಬಗ್ಗೆ ಪೇಜಾವರರು ಒಂದು ಸಣ್ಣ ಭಿನ್ನಾಭಿಪ್ರಾಯವನ್ನೂ ಇಲ್ಲಿಯವರೆಗೆ ಹೊರಹಾಕಿಲ್ಲ. ಈಗಲೂ ಸ್ವಾಮೀಜಿ ಬೆಂಬಲಕ್ಕೆ ನಿಂತಿರುವುದು ಆರ್‌ಎಸ್‌ಎಸ್, ವಿಎಚ್‌ಪಿ ಮೊದಲಾದ ಸಂಘಟನೆಗಳಲ್ಲವೇ?

ಪ್ರತಿಯೊಬ್ಬ ವ್ಯಕ್ತಿಯೂ ತಾನು ಮಾಡುತ್ತಿರುವ ವೃತ್ತಿಯನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಸಮಾಜಸೇವೆ ಬೇರೆ ಇಲ್ಲ. ಶಿಕ್ಷಕನೊಬ್ಬ ಊರಿನ ರಸ್ತೆ-ನೀರಿಗಾಗಿ ಹೋರಾಟ ನಡೆಸಿದರೆ ತಪ್ಪಲ್ಲ, ಆದರೆ ಆ ಶಿಕ್ಷಕ ತರಗತಿಯಲ್ಲಿ ಪಾಠ ಮಾಡದೆ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗಿ ಹೊರಗೆ ಬಂದು ಸಮಾಜಸೇವೆ ನಡೆಸುವುದು ಜನದ್ರೋಹದ ಕೆಲಸ.

ಅದೇ ರೀತಿ ಹಿಂದೂ ಧರ್ಮದ ಸ್ವಾಮೀಜಿಗಳ ಮೊದಲ ಆದ್ಯತೆ ಹಿಂದೂ ಧರ್ಮದ ಸುಧಾರಣೆ. ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು ಕೋಮು ಸೌಹಾರ್ದಕ್ಕಾಗಿ ಹೋರಾಟ ನಡೆಸಲಿಲ್ಲ. ಅವರು ಮೊದಲು ತಮ್ಮ ಮನೆಯೊಳಗಿನ ಹೊಲಸು ತೊಳೆಯುವ ಕೆಲಸ ನಡೆಸಿದರು. ಹಿಂದೂ ಧರ್ಮ ಈಗಲೂ ದೇಶದ ಬಹುಜನರ ನಂಬಿಕೆಯಾಗಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ಧಾರ್ಮಿಕ ಚಳವಳಿಗೆ ಇದಿರಾಗಿ ಅದರೊಳಗೆಯೇ ಹುಟ್ಟಿಕೊಂಡ ಪ್ರತಿಭಟನಾ ಚಳವಳಿಗಳು ಕಾರಣ ಎನ್ನುವುದನ್ನು ನಿರಾಕರಿಸಲಾದೀತೇ?
ಹಿಂದೂ ಧರ್ಮ ಎಷ್ಟೊಂದು ಜಡ್ಡುಗಟ್ಟಿ ಹೋಗಿದೆಯೆಂದರೆ ಅದನ್ನು ‘ದಲಿತರ ಕೇರಿಗೆ ಭೇಟಿ’, ‘ದಲಿತರಿಗೊಬ್ಬರು ಸ್ವಾಮೀಜಿ ನೇಮಕ’ ಮೊದಲಾದ ‘ಮೈ ಚಿವುಟುವಂತಹ’ ಕ್ರಮಗಳಿಂದ ಸುಧಾರಿಸಲಾಗದು. ಬದಲಾವಣೆಯಾಗಬೇಕಾದರೆ ಅದಕ್ಕೆ ‘ಶಾಕ್ ಟ್ರೀಟ್‌ಮೆಂಟ್’ ಬೇಕು. ಬಸವಣ್ಣನವರು ಸಮಗಾರ ಹರಳಯ್ಯನ ಮಗನಿಗೆ, ಬ್ರಾಹ್ಮಣ ಸಮುದಾಯದ ಮಧುವರಸನ ಮಗಳನ್ನು ಮದುವೆ ಮಾಡಿದಾಗ, ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದೊಳಗಿನ ಪುರೋಹಿತಶಾಹಿಯನ್ನು ಪ್ರಶ್ನಿಸಿದಾಗ, ನಾರಾಯಣ ಗುರುಗಳು ಲಿಂಗ ಸ್ಥಾಪನೆ ಮಾಡಿ ಇದು ‘ಈಳವರ ಶಿವ’ ಎಂದು ವಿರೋಧಿಗಳ ಬಾಯಿ ಮುಚ್ಚಿಸಿದಾಗ, ಹಿಂದೂ ಧರ್ಮ ಅಂತಹದ್ದೊಂದು ಶಾಕ್ ಟ್ರೀಟ್‌ಮೆಂಟ್‌ಗೆ ಬೆಚ್ಚಿಬಿದ್ದಿತ್ತು.ಅಂತಹ ಧೈರ್ಯ ಪೇಜಾವರ ಶ್ರೀಗಳಿಗೆ ಇದೆಯೇ?
ಎಂಟನೇ ವರ್ಷಕ್ಕೆ ಸನ್ಯಾಸ ಸ್ವೀಕರಿಸಿದ್ದ ಸ್ವಾಮೀಜಿ ತಮ್ಮ 80 ವರ್ಷದ ಸನ್ಯಾಸಿ ಜೀವನದಲ್ಲಿ ಇಲ್ಲಿಯವರೆಗೆ ಜಾತೀಯತೆ, ಅಸ್ಪೃಶ್ಯತೆ, ಕೋಮುವಾದ ಇತ್ಯಾದಿ ವಿಷಯಗಳ ಬಗ್ಗೆ ಸಾಮಾನ್ಯ ವೈದಿಕ ಸ್ವಾಮಿಯವರಂತೆ ನಡೆದುಕೊಂಡಿದ್ದಾರೆಯೇ ಹೊರತು ಎಂದೂ ಸಂಪ್ರದಾಯದ ಗೆರೆಯನ್ನು ದಾಟಿರಲಿಲ್ಲ. ವಿದೇಶಕ್ಕೆ ಹೋಗಿಬಂದರೆಂಬ ಕಾರಣಕ್ಕೆ ತನ್ನ ಉತ್ತರಾಧಿಕಾರಿಯನ್ನು ಮನೆಗೆ ಕಳುಹಿಸಿದ ನಿಲುವಿನಿಂದ ಹಿಡಿದು ‘ಉಡುಪಿ ಚಲೋ’ ಕಾರ್ಯಕ್ರಮದಲ್ಲಿ ದಲಿತ-ದಮನಿತರು ಬಂದು ಬೀದಿಯಲ್ಲಿ ಅಡ್ಡಾಡಿದರೆಂಬ ಕಾರಣಕ್ಕೆ ಮಠ ಶುದ್ಧೀಕರಿಸುವವರೆಗೆ ಎಲ್ಲವೂ ಒಬ್ಬ ಕಟ್ಟಾ ಸಂಪ್ರದಾಯವಾದಿ ಸ್ವಾಮಿಗಳ ರೀತಿಯಲ್ಲಿಯೇ ಅವರು ವರ್ತಿಸುತ್ತಾ ಬಂದಿದ್ದಾರೆ.

ಈ ನಡುವೆ ಆಗಾಗ ದಲಿತರ ಕೇರಿಗೆ ಭೇಟಿ ನೀಡಿ ಸುದ್ದಿ ಮಾಡುವುದನ್ನು ಹೊರತುಪಡಿಸಿದರೆ ಅವರೆಂದೂ ಹಿಂದೂ ಧರ್ಮದ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಎನ್ನುವುದಕ್ಕೆ ನಂಬಲರ್ಹ ಪುರಾವೆಗಳು ಸಿಗುವುದಿಲ್ಲ.
ರಾಮಜನ್ಮ ಚಳವಳಿಯ ಮುಂಚೂಣಿಯಲ್ಲಿದ್ದದ್ದು ವಿಶ್ವ ಹಿಂದೂ ಪರಿಷತ್. ಆ ಚಳವಳಿಯು ಬಾಬರಿ ಮಸೀದಿ ಧ್ವಂಸದಲ್ಲಿ ಕೊನೆಗೊಂಡಾಗ ವಿಎಚ್‌ಪಿ ಉಪಾಧ್ಯಕ್ಷರಾಗಿದ್ದವರು ಪೇಜಾವರ ಸ್ವಾಮೀಜಿ. ದೇಶದಲ್ಲಿ ಕೋಮುವಾದದ ಕರಾಳ ಯುಗಕ್ಕೆ ನಾಂದಿ ಹಾಡಿದ ಆ ಘಟನೆ ನಡೆದಾಗ ಮೌನವಾಗಿದ್ದ ಸ್ವಾಮಿಗಳು ಈಗ ‘ಅದನ್ನು ತಡೆಯಲು ಪ್ರಯತ್ನಿಸಿದ್ದೆ’ ಎಂಬ ಹೇಳಿಕೆ ನೀಡಿ ಜಾರಿಕೊಳ್ಳುತ್ತಾರೆ. ‘ಹಿಂದೂ-ಮುಸ್ಲಿಂ ಘರ್ಷಣೆಯ ಕಾಲದಲ್ಲಿ ಸ್ವಾಮೀಜಿ ನಮ್ಮೊಳಗೆ ಕೋಮುದ್ವೇಷದ ವಿಷಬೀಜ ಬಿತ್ತುವ ಬದಲಿಗೆ ಸೌಹಾರ್ದದ ಬಗ್ಗೆ ಯಾಕೆ ಮಾತನಾಡಿಲ್ಲ?’ ಎಂಬ ಶ್ರೀರಾಮ ಸೇನೆಯ ನಾಯಕನ ಪ್ರಶ್ನೆಗೆ ಸ್ವಾಮೀಜಿ ಇನ್ನೂ ಉತ್ತರಿಸಿಲ್ಲ.
ಪೇಜಾವರ ಶ್ರೀಗಳನ್ನು ನಾರಾಯಣ ಗುರುಗಳ ಜತೆ ಹೋಲಿಸಲು ಹೊರಟವರಿಗೆ ವಿನಮ್ರದಿಂದ ಸಣ್ಣದೊಂದು ಸವಾಲು. ‘ನಾರಾಯಣ ಗುರುಗಳ ತತ್ವವನ್ನು ಒಪ್ಪುತ್ತೇನೆ’ ಎಂದು ಪೇಜಾವರ ಸ್ವಾಮೀಜಿ ಬಾಯಿಯಿಂದ ಒಮ್ಮೆ ಹೇಳಿಸಿಬಿಡಿ. ಸವಾಲು ಸರಳವಾದುದು ನಿಜ, ಆದರೆ ನಾರಾಯಣ ಗುರುಗಳನ್ನು ಒಪ್ಪುವುದೆಂದರೆ ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವುದು. ವರ್ಣಾಶ್ರಮ ವ್ಯವಸ್ಥೆಯನ್ನು ಧಿಕ್ಕರಿಸುವುದೆಂದರೆ ಪೂಜೆ ಮಾಡುವ ಹಕ್ಕನ್ನು ಶೂದ್ರರು-ದಲಿತರು ಸೇರಿದಂತೆ ಎಲ್ಲರಿಗೂ ನೀಡುವುದು ಎನ್ನುವುದನ್ನು ಮೊದಲೇ ಅವರಿಗೆ ತಿಳಿಸಿಬಿಡಿ.

ಮಠದೊಳಗೆ ಸಹಪಂಕ್ತಿ ಭೋಜನದಂತಹ ಸಣ್ಣ ಸುಧಾರಣೆಯನ್ನು ತರಲು ನಿರಾಕರಿಸುವ, ಸಂಪ್ರದಾಯ ಮುರಿದು ಬ್ರಾಹ್ಮಣರ ಜತೆಯಲ್ಲಿ ಊಟಕ್ಕೆ ಕೂತಿದ್ದ ಬಂಟ ಮಹಿಳೆಯನ್ನು ಎಬ್ಬಿಸಿ ಹೊರಗೆ ಕಳುಹಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಸ್ವಾಮಿಗಳು ಬಿಜೆಪಿಯ ಮುಸ್ಲಿಂ ಘಟಕದ ಪದಾಧಿಕಾರಿಗಳ ಜತೆಗೂಡಿ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ ಕೂಡಲೇ ಅವರು ‘ಲೋಕದ ಆತಂಕಕ್ಕೆ ಸ್ಪಂದಿಸಲು ಹೊರಟಿದ್ದಾರೆ’ ಎಂದೆಲ್ಲಾ ವ್ಯಾಖ್ಯಾನಿಸುವುದು ಅವಸರದ್ದು ಮಾತ್ರವಲ್ಲ ಅಪಾಯಕಾರಿ ನಿಲುವು ಕೂಡಾ ಆಗಿದೆ.
___________________________________________________________

ಚರಿತ್ರೆಯ ಭಾರ ಹೊರಬೇಕಿಲ್ಲ

10 Jul, 2017
ಪೇಜಾವರ ಶ್ರೀಗಳ ಸೌಹಾರ್ದ ಕೂಟಕ್ಕೆ ಸಂಬಂಧಿಸಿದ ನಮ್ಮ ಲೇಖನಕ್ಕೆ (ಪ್ರ.ವಾ., ಚರ್ಚೆ, ಜುಲೈ 5) ದಿನೇಶ್ ಅಮಿನ್‌ ಮಟ್ಟು ಅವರ ಪ್ರತಿಕ್ರಿಯೆಯನ್ನು (ಪ್ರ.ವಾ., ಚರ್ಚೆ, ಜುಲೈ 7) ಗಮನಿಸಿ ಈ ಲೇಖನ ಬರೆಯಲಾಗಿದೆ.

-ಪ್ರೊ. ರಾಜಾರಾಮ ತೋಳ್ಪಾಡಿ

-ಪ್ರೊ. ನಿತ್ಯಾನಂದ ಬಿ. ಶೆಟ್ಟಿ

ಪೇಜಾವರ ಶ್ರೀಗಳ ಸೌಹಾರ್ದ ಕೂಟಕ್ಕೆ ಸಂಬಂಧಿಸಿದ ನಮ್ಮ ಲೇಖನಕ್ಕೆ (ಪ್ರ.ವಾ., ಚರ್ಚೆ, ಜುಲೈ 5) ದಿನೇಶ್ ಅಮಿನ್‌ ಮಟ್ಟು ಅವರ ಪ್ರತಿಕ್ರಿಯೆಯನ್ನು (ಪ್ರ.ವಾ., ಚರ್ಚೆ, ಜುಲೈ 7) ಗಮನಿಸಿ ಈ ಲೇಖನ ಬರೆಯಲಾಗಿದೆ.
ನಾವು ನಮ್ಮ ಬರಹದಲ್ಲಿ ಹೇಳಿದ್ದಿಷ್ಟು: ಶ್ರೀಗಳು ಇಫ್ತಾರ್ ನೆಪದಲ್ಲಿ ಸೌಹಾರ್ದಕೂಟ ಮಾಡಿದ್ದು ಸರಿಯೋ ತಪ್ಪೋ ಎಂಬ ವಿಮರ್ಶೆ ನಮ್ಮದಲ್ಲ. ಸೌಹಾರ್ದಕೂಟ ಏರ್ಪಡಿಸುವ ನೈತಿಕ ಅರ್ಹತೆ ಅವರಿಗಿದೆಯೋ ಇಲ್ಲವೋ ಎಂಬ ಪರಿಶೀಲನೆಯೂ ನಮ್ಮದಲ್ಲ. ಭಾರತೀಯ ಧಾರ್ಮಿಕ ಪರಂಪರೆಗಳಲ್ಲಿ ಒಂದು ಧಾರೆಯ ಗುರುವಾಗಿರುವ ಅವರಿಗೆ ಇಂತಹ ಸಮಾರಂಭ ಹಮ್ಮಿಕೊಳ್ಳುವುದಕ್ಕಿದ್ದ ಸ್ವಾಯತ್ತತೆಯನ್ನು ಪ್ರಶ್ನಿಸಿದ ಹಿಂದೂ ಸಂಘಟನೆಗಳಿಗೆ ಧರ್ಮವೂ ಗೊತ್ತಿಲ್ಲ; ಪ್ರಜಾಪ್ರಭುತ್ವವೂ ಗೊತ್ತಿಲ್ಲ. ವ್ಯಕ್ತಿ ಮತ್ತು ಸಂಸ್ಥೆಗಳಿಗಿರುವ ಪ್ರಜಾಸತ್ತಾತ್ಮಕವಾದ ಹಕ್ಕನ್ನು ನಿರಾಕರಿಸುವ ಈ ಬಗೆಯ ದುಂಡಾವರ್ತಿಗಳು ಪ್ರಪಂಚದೆಲ್ಲೆಡೆ ಕಂಡು ಬರುತ್ತಿರುವುದರಿಂದ, ನಮ್ಮ ಲೇಖನದ ಕಟುಟೀಕೆ ಒಬ್ಬನ ನೀತಿ-ನಡವಳಿಕೆಯನ್ನು ಇನ್ನೊಬ್ಬ ನಿಯಂತ್ರಿಸುವ ಮತ್ತು ನಿರ್ದೇಶಿಸುವ ಈ ಜಾಗತಿಕ ವಿದ್ಯಮಾನದ ವಿರುದ್ಧ ಇದೆ.
ಪೇಜಾವರ ಶ್ರೀಗಳು ಹಿಂದುತ್ವದ ಪ್ರತಿಪಾದಕರು ಎನ್ನುವುದರ ಕುರಿತು ನಮಗೆ ಯಾವ ಅನುಮಾನವೂ ಇಲ್ಲ. ಇದಕ್ಕಾಗಿ ಅವರ ಜೊತೆ ನಮಗೆ ಆಳವಾದ ತಾತ್ವಿಕ ಭಿನ್ನಾಭಿಪ್ರಾಯವಿದೆ. ಅವರು ನಡೆಸುವ ಅನೇಕ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಂಜಸತೆಯ ಬಗೆಗೆ ಅನುಮಾನ ಮತ್ತು ಅಸಮಾಧಾನ ನಮಗೂ ಇದೆ. 1992ರ ಬಾಬರಿ ಮಸೀದಿ ಧ್ವಂಸದ ಕೃತ್ಯವನ್ನು ಮತ್ತು ಅದರಲ್ಲಿ ಅವರ ಭಾಗವಹಿಸುವಿಕೆಯನ್ನು ಖಂಡಿಸಿ ಅವರಿಗೆ ಬಹಿರಂಗ ಪತ್ರವನ್ನೂ ಬರೆದಿದ್ದೆವು. ಆದ್ದರಿಂದ ನಾವು ಪೇಜಾವರರನ್ನು ಸಮರ್ಥಿಸುತ್ತಿದ್ದೇವೆ ಎಂಬ ಮಾತಿನಲ್ಲಿ ಹುರುಳಿಲ್ಲ.

ಶ್ರೀಗಳ ನಡೆ-ನುಡಿಗಳ ಕುರಿತು ಚಾರಿತ್ರಿಕ ಎಚ್ಚರ ನಮಗಿರಬೇಕೇ ಹೊರತು ಆ ಚರಿತ್ರೆಯ ಭಾರವನ್ನು ನಾವೀಗ ಹೊರಬೇಕಾಗಿಲ್ಲ. ಚಾರಿತ್ರಿಕ ವಿದ್ಯಮಾನಗಳು ಒಂದು ಹಿನ್ನೆಲೆಯಾಗಿ, ನೆನಪಾಗಿ ನಮ್ಮ ದೃಷ್ಟಿಕೋನಗಳನ್ನು ರೂಪಿಸಬೇಕು. ಆದರೆ ಅದೇ ಭೂತಾಕಾರವಾಗಿ ಆವರಿಸಿಕೊಂಡು ನಮ್ಮ ದೃಷ್ಟಿಯನ್ನು ಮಂದಗೊಳಿಸಬಾರದು. ಚರಿತ್ರೆಯ ಭಾರದಿಂದ ಉಂಟಾಗುವ ದೃಷ್ಟಿದೋಷ ವರ್ತಮಾನದ ಪ್ರಸ್ತುತವನ್ನು ಸ್ಪಷ್ಟವಾಗಿ ಕಾಣದಂತೆ ಮಾಡೀತು. ಅಲ್ಪಸಂಖ್ಯಾತರ ಬಗ್ಗೆ ಹಿಂದುತ್ವವಾದಿಗಳ ದೃಷ್ಟಿಯನ್ನು ಮಸುಕುಗೊಳಿಸಿರುವುದೂ ಇದೇ ಬಗೆಯ ಚರಿತ್ರೆಯ ಭಾರ ಎನ್ನುವುದನ್ನು ನಾವಿಲ್ಲಿ ನೆನಪು ಮಾಡಿಕೊಳ್ಳಬೇಕು.

ಹಿಂದುತ್ವದ ಪ್ರತಿಪಾದಕರಾಗಿರುವ ಶ್ರೀಗಳ ಕೆಲಸಗಳನ್ನು ವಿಮರ್ಶಿಸುವ ಜೊತೆಜೊತೆಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದದ ಕುರಿತು ಅವರು ನಡೆಸುತ್ತಿರುವ ಪ್ರಯತ್ನಗಳನ್ನು ಗುರುತಿಸಬೇಕು ಎಂಬುದಷ್ಟೇ ನಮ್ಮ ಕಾಳಜಿ. ಹಾಗೆ ಮಾಡದಿದ್ದಲ್ಲಿ ಮನುಷ್ಯ ಕಾಲ-ಸಂದರ್ಭಗಳಲ್ಲಿ ಬದಲಾಗುತ್ತಾನೆ ಮತ್ತು ಆತನ ಚಿಂತನೆ-ಧೋರಣೆಗಳು ಸ್ಥಿರವಾಗಿರದೆ ಚಲನಶೀಲವಾಗಿರುತ್ತವೆ ಎನ್ನುವ ಮಾನವ ಜೀವಂತಿಕೆಯನ್ನು ನಾವು ನಿರಾಕರಿಸಿದಂತೆ ಆಗುತ್ತದೆ. ನಮ್ಮ ಎಲ್ಲ ಸಾಂಸ್ಕೃತಿಕ ನಾಯಕರು, ಸಾಧುಸಂತರು, ರಾಜಕಾರಣಿಗಳು ಏಕರೂಪದ ಘನವಸ್ತುಗಳಲ್ಲ. ಮಾನವಪರವಾದ ಹೆಜ್ಜೆಗಳನ್ನು ಯಾರು ಯಾವ ಹೊತ್ತಿನಲ್ಲಿಡುತ್ತಾರೋ ಅದನ್ನು ಗುರುತಿಸುವ ಸಂವೇದನಾಶೀಲತೆಯನ್ನು ನಾವು ಹೊಂದಿರಬೇಕಾಗುತ್ತದೆ.

ಒಂದು ಕಾಲಕ್ಕೆ ಉಗ್ರ ಹಿಂದುತ್ವವಾದಿಯಂತೆ ಕಾಣಿಸುತ್ತಿದ್ದ ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಲ್.ಕೆ. ಅಡ್ವಾಣಿಯವರು ಇಂದು ಮೆದುವಾಗಿರುವುದನ್ನು, ಭಾರತೀಯ ಪ್ರಜಾಪ್ರಭುತ್ವದ ಕುರಿತು ತೀವ್ರವಾದ ಕಳಕಳಿ ಮತ್ತು ಕಳವಳವನ್ನು ವ್ಯಕ್ತಪಡಿಸಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಈ ಅರ್ಥದಲ್ಲಿ ಪೇಜಾವರರ ಪೂರ್ವಚರಿತ್ರೆ ಏನೇ ಇದ್ದರೂ ಅವರಿಟ್ಟ ವರ್ತಮಾನದ ಈ ಕಿರುಹೆಜ್ಜೆಯನ್ನು ನಾವು ಗುರುತಿಸಬೇಕಾಗಿದೆ.

ನಮ್ಮ ಲೇಖನದಲ್ಲಿ ಪೇಜಾವರರನ್ನು ನಾರಾಯಣ ಗುರುಗಳಿಗೆ ಹೋಲಿಸಿಲ್ಲ. ದಿನೇಶ್ ಅವರು ನಮ್ಮ ಲೇಖನದ ಆಶಯವನ್ನು ಸರಿಯಾಗಿ ಗ್ರಹಿಸಿಲ್ಲ. ಇದು ‘ಪಠ್ಯ’ವನ್ನು ಗ್ರಹಿಸುವ ನಮ್ಮ ಸಮಕಾಲೀನ ಓದಿನಲ್ಲಿರುವ ತೊಡಕು ಎಂದು ನಾವು ಭಾವಿಸುತ್ತೇವೆ. ಪೇಜಾವರ ಶ್ರೀಗಳಿಗೆ ಹಿಂದೂ ಧರ್ಮದ ಪಾಠ ಮಾಡಲು ಹೊರಟಿರುವ ಹಿಂದುತ್ವವಾದಿಗಳು ನಾರಾಯಣ ಗುರುಗಳಂಥವರ ಉದಾಹರಣೆಗಳನ್ನು ಮರೆಯಬಾರದು. ಹಿಂದೂ ಎಂದು ನಾವಿಂದು ಕರೆಯುವ ಧಾರ್ಮಿಕ ಸಂಪ್ರದಾಯಗಳ ಕೂಡುಕಟ್ಟಿನ ಬಹುತ್ವವನ್ನು ಹಾಗೂ ಪ್ರಾಚೀನ ಹಿಂದೂ ಪರಂಪರೆಗಳ ಔದಾರ್ಯದ ಚರಿತ್ರೆಯನ್ನು ಮರುನೆನಪಿಸುವ ಉದ್ದೇಶದಿಂದ ನಾರಾಯಣ ಗುರುಗಳ, ಗೋವಿಂದ ಭಟ್ಟರ ನಿದರ್ಶನವನ್ನು ನಾವು ಕೊಟ್ಟಿದ್ದೇವೆ. ಆದ್ದರಿಂದ, ನಾವು ಪೇಜಾವರರನ್ನು ನಾರಾಯಣ ಗುರುಗಳಿಗೆ ಹೋಲಿಸಿದ್ದೇವೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು

ಇನ್ನು, ‘ನಾರಾಯಣ ಗುರುಗಳ ತತ್ವಗಳನ್ನು ಒಪ್ಪಿದ್ದೇನೆಂದು ಪೇಜಾವರರ ಬಾಯಲ್ಲಿ ಹೇಳಿಸಿ’ ಎನ್ನುವ ಸವಾಲು. ಇಂತಹ ಪ್ರಕ್ಷುಬ್ಧ ಕಾಲದಲ್ಲೂ ಪಂಥಾಹ್ವಾನಗಳ ಮೂಲಕ ನಾವು ತಲುಪುವ ಗಮ್ಯ ಸ್ಥಾನವಾದರೂ ಯಾವುದು? ಅದ್ವೈತ ಸಿದ್ಧಾಂತಗಳನ್ನು ತಾತ್ವಿಕವಾಗಿ ಪ್ರತಿನಿಧಿಸುವ ಮತ್ತು ಭಾರತೀಯ ಸಂತ ಪರಂಪರೆಯಲ್ಲೇ ಕೊನೆಯವರಾದ ನಾರಾಯಣ ಗುರುಗಳ ಚಿಂತನೆಗಳಿಗೆ, ತಾತ್ವಿಕವಾಗಿ ದ್ವೈತ ಸಂಪ್ರದಾಯಕ್ಕೆ ಸೇರಿದ ಓರ್ವ ಮಠಾಧೀಶರನ್ನು ಒಪ್ಪಿಸುವ ಸವಾಲಿಗೂ; ಪ್ರಮೋದ ಮುತಾಲಿಕ್, ‘ಮಸೀದಿಯಲ್ಲಿ ಗಣೇಶ ಹಬ್ಬ ಮಾಡಿಸಿ, ಹನುಮಾನ್ ಚಾಲೀಸ ಓದಿಸಿ’ ಎಂದು ಪೇಜಾವರ ಶ್ರೀಗಳಿಗೆ ಒಡ್ಡಿದ ಸವಾಲಿಗೂ ಯಾವ ವ್ಯತ್ಯಾಸವಾದರೂ ಇದೆಯೇ? ಅಷ್ಟಾಗಿ ಪೇಜಾವರರ ಬಾಯಿಯಲ್ಲಿ ನಮಗೆ ಬೇಕಾದುದನ್ನು ಅಥವಾ ಇನ್ನೊಬ್ಬರಿಗೆ ಬೇಕಾದುದನ್ನು ಹೊರಡಿಸಲು ನಾವು ಅವರ ಗಿಂಡಿಮಾಣಿಗಳೂ ಅಲ್ಲ ಅಥವಾ ಪರ್ಯಾಯ ಪೇಜಾವರ ಮಠದ ಸಾರ್ವಜನಿಕ ವಕ್ತಾರರೂ ಅಲ್ಲ.

ಪೇಜಾವರರು ಆಯೋಜಿಸಿದ ಸೌಹಾರ್ದ ಕೂಟವನ್ನು ಹಿಂದುತ್ವ ಪುರೋಭಿವೃದ್ಧಿಗಾಗಿ ಹೆಣೆದ ರಾಜಕೀಯ ತಂತ್ರ ಎಂದಾಗಲೀ ಅಥವಾ ಪೇಜಾವರರು ತಮ್ಮ ಜನಪ್ರಿಯತೆಗಾಗಿ ನಡೆಸಿದ ಮಸಲತ್ತು ಎಂದಾಗಲೀ ನಾವು ಭಾವಿಸಿಲ್ಲ. ದೇಶ-ರಾಜ್ಯ, ದೇವರು-ಧರ್ಮ ಇತ್ಯಾದಿಗಳಿಗಿಂತ ನನ್ನ ಕುಟುಂಬ-ಸಂಸಾರ ದೊಡ್ಡದು ಎಂದು ನಂಬಿರುವ ಸಾಮಾನ್ಯ ಸಂಸಾರಸ್ಥರಾದ ನಮ್ಮೆಲ್ಲರ ಜನಜೀವನದಲ್ಲಿ, ಕ್ಷೀಣಿಸುತ್ತಿರುವ ಪರಸ್ಪರ ನಂಬಿಕೆ-ವಿಶ್ವಾಸಗಳನ್ನು ಮರಳಿ ತರುವ ಪ್ರಯತ್ನವನ್ನು ಯಾರು ಮಾಡುತ್ತಾರೋ ಅವರನ್ನು ತತ್ಕಾಲದ ಸನ್ನಿವೇಶದಲ್ಲಿ ಮೆಚ್ಚುವ ಒಂದು ಸಂಕೇತವನ್ನಾದರೂ ತೋರಿಸದೇ ಇದ್ದರೆ ಸಾಮಾನ್ಯ ಜನರ ಬದುಕು ದುರ್ಭರವಾಗುತ್ತದೆ.

ಸಮುದಾಯಗಳ ನಡುವೆ ಬಂಧುತ್ವ ವೃದ್ಧಿಸುವ ಕೆಲಸವನ್ನು ಮಾಡಹೊರಟವರು ಅದನ್ನು ಪ್ರಾಮಾಣಿಕವಾಗಿ ಮಾಡದಿದ್ದರೆ ಅದು ಅವರ ಸಮಸ್ಯೆಯೇ ಹೊರತು ನಮ್ಮದಲ್ಲ. ಕರಾವಳಿಯಲ್ಲಿ ಈಗ ನಡೆಯುತ್ತಿರುವ ಸಂಘರ್ಷದಿಂದ ನಿಜಕ್ಕೂ ಅನಾಥರಾಗಿರುವವರು ಮಡಿವಾಳ, ಕುಂಬಾರ, ಕೊಟ್ಟಾರಿ, ಮೊಗವೀರ, ಬಿಲ್ಲವ ಇತ್ಯಾದಿ ಹಿಂದುಳಿದ ಸಮುದಾಯಗಳಿಗೆ ಸೇರಿದ ಜನರು. ದುಡಿಯುವ ಎರಡೂ ಕೈಗಳನ್ನು ನಂಬಿ ಜೀವ ಹಿಡಿದು ನಿಂತಿರುವ ಅಮ್ಮ, ಅಪ್ಪ, ಅಕ್ಕ, ತಮ್ಮ, ತಂಗಿಗಳೆಂಬ ಐದಾರು ಬಾಯಿಗಳು. ಮುಸ್ಲಿಮರಲ್ಲಿ ಮೀನುಮಾರುವ, ರಿಕ್ಷಾ ಓಡಿಸುವ ಮತ್ತು ಗುಜರಿ ಹೆಕ್ಕುವ ಕುಟುಂಬದವರು. ಸೌಹಾರ್ದಕೂಟವನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬಯಸುತ್ತೇವೆ. ಸ್ನಾನದ ನೀರಿನ ಜೊತೆ ಶಿಶುವನ್ನೂ ಎಸೆಯುವವರು ನಾವು ಆಗಬಾರದು ಎಂಬುದಷ್ಟೇ ನಮ್ಮ ಕಾಳಜಿ.

ವ್ಯಕ್ತಿಗಳ, ಸಮುದಾಯಗಳ ಚಿಂತನೆಗಳು ಮತ್ತು ಕ್ರಿಯಾಚರಣೆಗಳು ನಿರಂತರವಾದ ವಿಮರ್ಶೆಗೆ ಒಳಗಾಗಿ ಎಲ್ಲರ ಒಳಿತನ್ನು ಸಾಧಿಸಬೇಕು. ಪ್ರಗತಿಶೀಲತೆ, ಎಡಪಂಥೀಯತೆ, ಸೆಕ್ಯುಲರ್‌ವಾದಗಳು ನಾವು ಹಾಕಿಕೊಳ್ಳುವ ಬಣ್ಣದ ಗಾಜುಗಳಾಗದೆ, ನಮ್ಮ ಚಿಂತನೆ- ಕ್ರಿಯಾಚರಣೆಗಳಿಗೆ ತಡೆಗೋಡೆಗಳಾಗದೆ ತಾತ್ವಿಕ ನಿಷ್ಕರ್ಷೆಯ ದಾರಿದೀಪಗಳಾಗಬೇಕು ಎಂದು ನಾವು ವಿನಮ್ರವಾಗಿ ತಿಳಿಯುತ್ತೇವೆ.